ಹೈದರಾಬಾದ್‌ನಲ್ಲಿ ಓದುತ್ತಿರುವ ಆಫ್ಘಾನ್‌ ಯುವತಿಗೆ ತವರಿನಲ್ಲಿರುವ ತಂದೆ-ತಾಯಿಯದೇ ಚಿಂತೆ!

ಅಪಾಯದ ಬಗ್ಗೆ ಈಗಿನಿಂದಲೇ ಮುನ್ನೆಚ್ಚರ ವಹಿಸಿ. ಮೊದಲು ಮನೆಯಲ್ಲಿರುವ ಎಲ್ಲಾ ಫೋಟೊಗಳನ್ನು ಸುಟ್ಟು ಹಾಕಿ. ಹಿಜಬ್‌ ಧರಿಸದೇ ನಾನು ನನ್ನ ಸ್ನೇಹಿತೆಯರ ಜತೆ ತೆಗೆಸಿಕೊಂಡ ಫೋಟೊಗಳನ್ನು ಕೂಡಲೇ ನಾಶ ಮಾಡಿ. ರಾಯಭಾರ ಕಚೇರಿಗೆ ಸಂಬಂಧಿಸಿದ ಎಲ್ಲ ದಾಖಲೆಗಳು, ಡಿಗ್ರಿ ಸರ್ಟಿಫಿಕೇಟ್‌ಗಳನ್ನೂ ಸುಟ್ಟುಬಿಡಿ’ ಎಂದು ನಿಜ್‌ರಾಬಿ ಆಫ್ಘನ್‌ನಲ್ಲಿರುವ ತಮ್ಮ ಪೋಷಕರಿಗೆ ಕರೆ ಮಾಡಿ ತಿಳಿಸಿದ್ದಾರೆ.

ಹೈದರಾಬಾದ್‌ನಲ್ಲಿ ಓದುತ್ತಿರುವ ಆಫ್ಘಾನ್‌ ಯುವತಿಗೆ ತವರಿನಲ್ಲಿರುವ ತಂದೆ-ತಾಯಿಯದೇ ಚಿಂತೆ!
Linkup
ಹೈದಾರಾಬಾದ್‌: ತಾಲಿಬಾನಿಗಳ ಕ್ರೌರ್ಯ ದಿನದಿಂದ ದಿನಕ್ಕೆ ಹೆಚ್ಚತೊಡಗಿದೆ. ದೂರದ ಕಾಬೂಲ್‌ನಿಂದ ಬಂದು ಹೈದರಾಬಾದಿನಲ್ಲಿ ಕಂಪ್ಯೂಟರ್‌ ಸೈನ್ಸ್‌ ಕಲಿಯುತ್ತಿರುವ ತಮನಾ ನಿಜ್‌ರಾಬಿ (27) ಅವರಿಗೆ ಎದೆಬಡಿತ ಹೆಚ್ಚಿದೆ. ಅವರು ತಮ್ಮ ದೇಶದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಕಂಡು ಕಂಗೆಟ್ಟಿದ್ದಾರೆ. ‘ನನಗೆ ಕಳೆದ ನಾಲ್ಕು ದಿನಗಳಿಂದ ನಿದ್ದೆಯೇ ಬಾರದಾಗಿದೆ. ಊರಲ್ಲಿರುವ ಅಪ್ಪ-ಅಮ್ಮನ ಗತಿ ಏನು ಎನ್ನುವ ಚಿಂತೆ ಕಾಡುತ್ತಿದೆ. ಮಿಗಿಲಾಗಿ ನಾನಿಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದು ತಾಲಿಬಾನಿಗಳಿಗೆ ಗೊತ್ತಾದರೆ ನಮ್ಮ ಕುಟುಂಬದ ಕಥೆ ಮುಗಿದಂತೆಯೇ ಸರಿ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ವಿದೇಶಕ್ಕೆ ತೆರಳಿ ಶಿಕ್ಷಣ ಪಡೆಯುವುದಕ್ಕೆ ತಾಲಿಬಾನಿಗಳ ಕಡು ವಿರೋಧವಿದೆ. ಅದರಲ್ಲೂ ಅವಿವಾಹಿತೆ ವಿದೇಶದಲ್ಲಿ ಓದಲು ಹೋಗುವುದೆಂದರೆ ಅದನ್ನು ಸುತಾರಾಂ ಉಗ್ರರು ಸಹಿಸುವುದಿಲ್ಲ. ಇದರಿಂದಾಗಿ ಹೈದರಾಬಾದಿನಲ್ಲಿರುವ ನಿಜ್‌ರಾಬಿ ಭೀತಿ ನೂರ್ಮಡಿಸಿದೆ. ‘ಅವರಿಂದ ನಿಮಗೆ ಬಚ್ಚಿಟ್ಟುಕೊಳ್ಳಲು ಸಾಧ್ಯವಾಗದೇ ಹೋಗಬಹುದು. ಆ ಅಪಾಯದ ಬಗ್ಗೆ ಈಗಿನಿಂದಲೇ ಮುನ್ನೆಚ್ಚರ ವಹಿಸಿ. ಮೊದಲು ಮನೆಯಲ್ಲಿರುವ ಎಲ್ಲಾ ಫೋಟೊಗಳನ್ನು ಸುಟ್ಟು ಹಾಕಿ. ಹಿಜಬ್‌ ಧರಿಸದೇ ನಾನು ನನ್ನ ಸ್ನೇಹಿತೆಯರ ಜತೆ ತೆಗೆಸಿಕೊಂಡ ಫೋಟೊಗಳನ್ನು ಕೂಡಲೇ ನಾಶ ಮಾಡಿ. ರಾಯಭಾರ ಕಚೇರಿಗೆ ಸಂಬಂಧಿಸಿದ ಎಲ್ಲ ದಾಖಲೆಗಳು, ಡಿಗ್ರಿ ಸರ್ಟಿಫಿಕೇಟ್‌ಗಳನ್ನೂ ಸುಟ್ಟುಬಿಡಿ’ ಎಂದು ನಿಜ್‌ರಾಬಿ ಆಫ್ಘನ್‌ನಲ್ಲಿರುವ ತಮ್ಮ ಪೋಷಕರಿಗೆ ಕರೆ ಮಾಡಿ ತಿಳಿಸಿದ್ದಾರೆ. ‘ತಾಲಿಬಾನಿಗಳು ಮನೆ ಮನೆಗೆ ತೆರಳಿ ತಪಾಸಣೆ ಆರಂಭಿಸಿದ್ದಾರೆ ಎಂದು ನನ್ನ ಪೋಷಕರು ತಿಳಿಸಿದ ಮೇಲೆ ನನ್ನ ಭೀತಿ ಇನ್ನಷ್ಟು ಹೆಚ್ಚಿದೆ. ಅವರು ಯಾವುದಕ್ಕೂ ಹೇಸುವುದಿಲ್ಲ. ಆಧುನಿಕ ಜೀವನ ಶೈಲಿಯ ಸಣ್ಣ ಕುರುಹು ಪತ್ತೆಯಾದರೂ ಜೀವಂತ ಸುಟ್ಟು ಹಾಕುತ್ತಾರೆ. ಸರಕಾರಿ ಅಧಿಕಾರಿಗಳನ್ನು ಉಳಿಸುವುದಿಲ್ಲ’ ಎಂದು ಆತಂಕ ತೋಡಿಕೊಳ್ಳುತ್ತಾರೆ ನಿಜ್‌ರಾಬಿ. ಐಸಿಸಿಆರ್‌ ಸ್ಕಾಲರ್‌ಶಿಪ್‌ ಪಡೆದು ಇಲ್ಲಿಗೆ ಕಲಿಯಲು ಬಂದಿರುವ ಅವರು, ಓದು ಮುಗಿದ ನಂತರ ತಾಯ್ನಾಡಿಗೆ ವಾಪಸಾಗುವುದು ಹೇಗೆ ಎನ್ನುವ ಕಳವಳಕ್ಕೆ ಸಿಲುಕಿದ್ದಾರೆ. 250 ಆಫ್ಘನ್‌ ವಿದ್ಯಾರ್ಥಿಗಳು ಸದ್ಯ ಹೈದರಾಬಾದಿನ ವಿವಿಧ ಕಾಲೇಜುಗಳಲ್ಲಿ ಕಲಿಯುತ್ತಿದ್ದಾರೆ. ಅವರೆಲ್ಲರೂ ಈಗ ಭವಿಷ್ಯತ್ತಿನ ಗೊಂದಲಕ್ಕೆ ಸಿಲುಕಿದ್ದಾರೆ.