ಸೋಮವಾರದಿಂದ ಸಂಸತ್‌ ಬಜೆಟ್‌ ಅಧಿವೇಶನ: ಪೆಗಾಸಸ್‌, ರೈತ ಸಮಸ್ಯೆಗಳೇ ಪ್ರತಿಪಕ್ಷಗಳ ಅಸ್ತ್ರ..!

ಕೊರೊನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ದೈಹಿಕ ಅಂತರ ಕಾಯ್ದುಕೊಂಡು ಕೂರಬೇಕಾದ ಕಾರಣ, ಲೋಕ ಸಭೆ ಮತ್ತು ರಾಜ್ಯ ಸಭೆ ಕಲಾಪಗಳನ್ನು ಪಾಳಿಗಳಲ್ಲಿ ನಡೆಸಲಾಗುತ್ತದೆ. ಅಲ್ಲದೆ ಎರಡು ಹಂತಗಳಲ್ಲಿ ಅಧಿವೇಶನ ನಡೆಯಲಿದೆ.

ಸೋಮವಾರದಿಂದ ಸಂಸತ್‌ ಬಜೆಟ್‌ ಅಧಿವೇಶನ: ಪೆಗಾಸಸ್‌, ರೈತ ಸಮಸ್ಯೆಗಳೇ ಪ್ರತಿಪಕ್ಷಗಳ ಅಸ್ತ್ರ..!
Linkup
: ಸೋಮವಾರದಿಂದ ಸಂಸತ್‌ ಬಜೆಟ್‌ ಅಧಿವೇಶನ ಆರಂಭವಾಗಲಿದ್ದು, ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ವಾಕ್ಸಮರಕ್ಕೆ ಮತ್ತೊಮ್ಮೆ ವೇದಿಕೆ ಸಜ್ಜಾಗಿದೆ. ಪೆಗಾಸಸ್‌ ವಿವಾದ, ಮತ್ತು ಪೂರ್ವ ಲಡಾಕ್‌ನಲ್ಲಿ ಚೀನಾದ ಆಕ್ರಮಣಗಳಂತಹ ವಿಷಯಗಳನ್ನು ಸರ್ಕಾರದ ವಿರುದ್ಧ ಅಸ್ತ್ರಗಳಾಗಿ ಪ್ರಯೋಗಿಸಲು ಸಜ್ಜಾಗಿವೆ. ಜಂಟಿ ಸದನವನ್ನು ಉದ್ದೇಶಿಸಿ ಸೋಮವಾರ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರ ಭಾಷಣದೊಂದಿಗೆ ಅಧಿವೇಶನ ಆರಂಭವಾಗಲಿದೆ. ಕೋವಿಡ್‌-19 ಸಾಂಕ್ರಾಮಿಕದ ಪರಿಸ್ಥಿತಿ ಹಿನ್ನೆಲೆಯಲ್ಲಿ ಸೆಂಟ್ರಲ್‌ ಹಾಲ್‌ ಹಾಗೂ ಉಭಯ ಸದನಗಳ ಚೇಂಬರ್‌ಗಳಲ್ಲಿ ಸಂಸದ ಆಸನಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾಷ್ಟ್ರಪತಿ ಭಾಷಣದ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೋಮವಾರ 'ಆರ್ಥಿಕ ಸಮೀಕ್ಷೆ 2021-22' ಮಂಡಿಸಲಿದ್ದಾರೆ. ಅವರು ಮಂಗಳವಾರ 2022 - 23ನೇ ಸಾಲಿನ ಕೇಂದ್ರ ಬಜೆಟ್‌ ಮಂಡಿಸಲಿದ್ದಾರೆ. ಕೊರೊನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ದೈಹಿಕ ಅಂತರ ಕಾಯ್ದುಕೊಂಡು ಕೂರಬೇಕಾದ ಕಾರಣ, ಲೋಕ ಸಭೆ ಮತ್ತು ರಾಜ್ಯ ಸಭೆ ಕಲಾಪಗಳನ್ನು ಪಾಳಿಗಳಲ್ಲಿ ನಡೆಸಲಾಗುತ್ತದೆ. ಅಲ್ಲದೆ ಎರಡು ಹಂತಗಳಲ್ಲಿ ಅಧಿವೇಶನ ನಡೆಯಲಿದೆ. ಅಧಿವೇಶನದ ಮೊದಲ ಭಾಗವು ಜನವರಿ 31 ರಿಂದ ಫೆಬ್ರುವರಿ 11ರವರೆಗೆ ನಡೆಯಲಿದ್ದು, ನಂತರ ವಿವಿಧ ಇಲಾಖೆಗಳಿಗೆ ಬಜೆಟ್‌ ಹಂಚಿಕೆಗಳನ್ನು ಪರಿಶೀಲಿಸಲು ಬಿಡುವು ನೀಡಲಾಗುತ್ತದೆ. ಮಾರ್ಚ್ 14ರಂದು ಅಧಿವೇಶನ ಪುನಾರಂಭವಾಗಲಿದ್ದು, ಏಪ್ರಿಲ್‌ 8 ರಂದು ಅಂತ್ಯಗೊಳ್ಳಲಿದೆ. ಲೋಕ ಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯನ್ನು ಬುಧವಾರದಿಂದ ಕೈಗೆತ್ತಿಕೊಳ್ಳಲಾಗುತ್ತದೆ. ಫೆಬ್ರುವರಿ 7 ರಂದು ಪ್ರಧಾನಿ ನರೇಂದ್ರ ಮೋದಿ ಚರ್ಚೆಗೆ ಉತ್ತರಿಸುವ ನಿರೀಕ್ಷೆಯಿದೆ. ಸುಗಮ ಕಲಾಪಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ಮತ್ತು ರಾಜ್ಯ ಸಭಾ ಸಭಾಪತಿ ಎಂ ವೆಂಕಯ್ಯ ನಾಯ್ಡು ಅವರು ಎಲ್ಲಾ ಪಕ್ಷಗಳ ಸದನ ನಾಯಕರೊಂದಿಗೆ ಸೋಮವಾರ ಪ್ರತ್ಯೇಕ ಸಭೆಗಳನ್ನು ನಡೆಸಲಿದ್ದಾರೆ. ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಏಳು ಹಂತಗಳಲ್ಲಿ ಉತ್ತರ ಪ್ರದೇಶ, ಉತ್ತರಾ ಖಂಡ, ಪಂಜಾಬ್‌, ಗೋವಾ ಮತ್ತು ಮಣಿಪುರ - ಐದು ರಾಜ್ಯಗಳಲ್ಲಿ ಚುನಾವಣಾ ಪ್ರಚಾರದ ನಡುವೆ ಬಜೆಟ್‌ ಅಧಿವೇಶನ ನಡೆಯಲಿದೆ. ರೈತರ ಸಮಸ್ಯೆಗಳು, ಚೀನಾದ ಆಕ್ರಮಣ, ಕೋವಿಡ್‌ - 19 ಸಂತ್ರಸ್ತರಿಗೆ ಪರಿಹಾರ ಪ್ಯಾಕೇಜ್, ಏರ್‌ ಇಂಡಿಯಾ ಮಾರಾಟ ಮತ್ತು ಪೆಗಾಸಸ್‌ ವಿವಾದದಂತಹ ಸಮಸ್ಯೆಗಳನ್ನು ಸಮಾನ ಮನಸ್ಕ ಪಕ್ಷಗಳೊಂದಿಗೆ ಪ್ರಸ್ತಾಪಿಸುವುದಾಗಿ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್‌ ಈಗಾಗಲೇ ಘೋಷಿಸಿದೆ.