ಸೋಮವಾರದಿಂದ ಎಲ್ಲ ಅಂಗಡಿ, ರೆಸ್ಟೋರೆಂಟ್‌ಗಳು ಓಪನ್: ವ್ಯಾಪಕ ಅನ್‌ಲಾಕ್ ಘೋಷಿಸಿದ ದಿಲ್ಲಿ ಸರ್ಕಾರ

ದಿಲ್ಲಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಅಂಗಡಿ, ರೆಸ್ಟೋರೆಂಟ್‌ಗಳನ್ನು ವಾರದ ಏಳು ದಿನವೂ ತೆರೆಯಲು ಅವಕಾಶ ನೀಡಲಾಗಿದೆ.

ಸೋಮವಾರದಿಂದ ಎಲ್ಲ ಅಂಗಡಿ, ರೆಸ್ಟೋರೆಂಟ್‌ಗಳು ಓಪನ್: ವ್ಯಾಪಕ ಅನ್‌ಲಾಕ್ ಘೋಷಿಸಿದ ದಿಲ್ಲಿ ಸರ್ಕಾರ
Linkup
ಹೊಸದಿಲ್ಲಿ: ಕಳೆದ ಮೂರು ತಿಂಗಳಲ್ಲಿಯೇ ಕೋವಿಡ್ ಪ್ರಕರಣಗಳಲ್ಲಿ ಗಮನಾರ್ಹ ಇಳಿಕೆ ಕಂಡಿರುವ ದಿಲ್ಲಿಯಲ್ಲಿ ವ್ಯಾಪಕ ಪ್ರಕ್ರಿಯೆ ಘೋಷಣೆಯಾಗಿದೆ. ಸುಮಾರು ಒಂದು ತಿಂಗಳ ಲಾಕ್‌ಡೌನ್ ಬಳಿಕ ರಾಜಧಾನಿಯಲ್ಲಿ ಪ್ರಕರಣಗಳ ಸಂಖ್ಯೆ ನಿಯಂತ್ರಣಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಅರವಿಂದ್ ಕೇಜ್ರವಾಲ್ ಅನ್‌ಲಾಕ್ ಪ್ರಕ್ರಿಯೆಯ ಮೊದಲ ಹಂತ ಪ್ರಕಟಿಸಿದ್ದರು. ಸಮ-ಬೆಸದ ದಿನಗಳಲ್ಲಿ ಶಾಪಿಂಗ್ ಮಾಲ್, ಮಾರುಕಟ್ಟೆಗಳನ್ನು ತೆರೆಯಲು ಅವಕಾಶ ನೀಡಿದ್ದರು. ಆದರೆ ಈಗ ಈ ನಿಯಮದಲ್ಲಿಯೂ ಮಾರ್ಪಾಡು ಮಾಡಲಾಗಿದೆ. ದಿಲ್ಲಿಯಲ್ಲಿ ಸೋಮವಾರದಿಂದ ಎಲ್ಲ ಅಂಗಡಿಗಳು, ಮಾಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ವಾರದ ಏಳು ದಿನವೂ ತೆರೆಯಲು ಅವಕಾಶ ನೀಡಲಾಗಿದೆ. ಸಮ-ಬೆಸ ದಿನಗಳ ನಿಯಮವನ್ನು ತೆರವುಗೊಳಿಸಲಾಗಿದೆ. ಆದರೆ, ಈ ಸಡಿಲಿಕೆ ವಾರದ ಮಟ್ಟಿಗೆ ಪ್ರಯೋಗಾತ್ಮಕವಾಗಿರಲಿದೆ. ಒಂದು ವೇಳೆ ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಕಂಡುಬಂದರೆ ಪುನಃ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ಸಮ-ಬೆಸದ ದಿನಗಳಲ್ಲಿ ಬೆಳಿಗ್ಗೆ 10 ರಿಂದ ರಾತ್ರಿ 8 ಗಂಟೆಯವರೆಗೆ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿತ್ತು. ಇದೇ ಅವಧಿ ಸೋಮವಾರದಿಂದ ಕೂಡ ಮುಂದುವರಿಯಲಿದೆ. ಪಾರ್ಸೆಲ್ ಹಾಗೂ ಹೋಮ್ ಡೆಲಿವರಿಗಳಿಗೆ ಮಾತ್ರವೇ ತೆರಯಲಾಗುತ್ತಿದ್ದ ರೆಸ್ಟೋರೆಂಟ್‌ಗಳಲ್ಲಿ ಇನ್ನು ಮುಂದೆ ಕುಳಿತು ಊಟ ಮಾಡಬಹುದು. ಆದರೆ ಶೇ 50ರಷ್ಟು ಆಸನ ಸಾಮರ್ಥ್ಯಕ್ಕೆ ಮಾತ್ರ ಅನುಮತಿ ಇದೆ. ವಾರದ ಮಾರುಕಟ್ಟೆಗಳನ್ನು ಶೇ 50ರ ಸಾಮರ್ಥ್ಯದೊಂದಿಗೆ ತೆರೆಯಬಹುದು. ಪ್ರತಿ ಪಾಲಿಕೆ ವಲಯದಲ್ಲಿ ದಿನಕ್ಕೆ ಒಂದು ಮಾರುಕಟ್ಟೆ ಮಾತ್ರ ತೆರೆಯಲು ಅವಕಾಶವಿದೆ. ಸಲೂನ್‌ಗಳನ್ನು ತೆರೆಯಲು ಅನುಮತಿಕೊಡಲಾಗಿದೆ. ಆದರೆ ಸ್ಪಾಗಳ ಮೇಲಿನ ನಿರ್ಬಂಧ ಮುಂದುವರಿಯಲಿದೆ. ಸರ್ಕಾರಿ ಕಚೇರಿಗಳು ಪೂರ್ಣ ಸಾಮರ್ಥ್ಯದೊಂದಿಗೆ ಹಾಗೂ ಖಾಸಗಿ ಕಚೇರಿಗಳು ಶೇ 50ರಷ್ಟು ಸಾಮರ್ಥ್ಯದೊಂದಿಗೆ ತೆರೆಯಬಹುದು. ಮೆಟ್ರೋ ಮತ್ತು ಬಸ್‌ಗಳು ಶೇ 50ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಬಹುದು. ಶಾಲೆ, ಕಾಲೇಜು ಹಾಗೂ ಶೈಕ್ಷಣಿಕ ಸಂಸ್ಥೆಗಳು ಮುಚ್ಚಿರಲಿವೆ. ಈಜುಕೊಳ, ಮನರಂಜನಾ ಪಾರ್ಕ್‌ಗಳು, ಜಲ ಉದ್ಯಾನಗಳು ಮುಚ್ಚಿರಲಿದ್ದು, ಸಾರ್ವಜನಿಕ ಗುಂಪುಗೂಡುವಿಕೆಗೆ ಅವಕಾಶವಿಲ್ಲ. ಧಾರ್ಮಿಕ ಕೇಂದ್ರಗಳನ್ನು ತೆರೆಯಬಹುದು. ಆದರೆ ಭಕ್ತರ ಪ್ರವೇಶಕ್ಕೆ ಅನುಮತಿ ಇಲ್ಲ.