ಲವರ್‌ಗಾಗಿ ಗ್ಯಾಂಗ್‌ ರೇಪ್‌ ಕತೆ ಕಟ್ಟಿದ ಯುವತಿ! ಸುಳ್ಳು ದೂರಿನಿಂದ ಪೊಲೀಸರು ಹೈರಾಣು

ಪ್ರಿಯತಮನನ್ನು ಮದುವೆಯಾಗಲು ಯುವತಿಯರು ಏನೆಲ್ಲಾ ಮಾಡಿದ್ದು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಯುವತಿ ಸಾಮೂಹಿಕ ಅತ್ಯಾಚಾರದ ಕತೆ ಕಟ್ಟಿ ಪೊಲೀಸರನ್ನೇ ಯಾಮಾರಿಸಿದ್ದಾಳೆ. ಹೌದು, ನಾಗ್ಪುರದಲ್ಲಿ ಘಟನೆ ನಡೆದಿದ್ದು, ಸುಳ್ಳು ದೂರು ನಂಬಿ ದೊಡ್ಡ ಕಾರ್ಯಾಚರಣೆ ನಡೆಸಿ ಪೊಲೀಸರು ಹೈರಾಣಾಗಿದ್ದಾರೆ.

ಲವರ್‌ಗಾಗಿ ಗ್ಯಾಂಗ್‌ ರೇಪ್‌ ಕತೆ ಕಟ್ಟಿದ ಯುವತಿ! ಸುಳ್ಳು ದೂರಿನಿಂದ ಪೊಲೀಸರು ಹೈರಾಣು
Linkup
ನಾಗ್ಪುರ: ತನ್ನ ಗೆಳೆಯನನ್ನು ಮದುವೆಯಾಗುವ ಪ್ರಯತ್ನದಲ್ಲಿ 19 ವರ್ಷದ ಯುವತಿ ನೀಡಿದ ಸುಳ್ಳು ಪ್ರಕರಣ ಪೊಲೀಸರನ್ನು ಹೈರಾಣಾಗಿಸಿದ ಘಟನೆ ನಾಗ್ಪುರದಲ್ಲಿ ಸೋಮವಾರ ನಡೆದಿದೆ. ಯುವತಿಯ ದೂರನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲು ಸೋಮವಾರ ಇಡೀ ದಿನ 1000ಕ್ಕೂ ಹೆಚ್ಚು ಪೊಲೀಸರು ಕಾರ್ಯನಿರ್ವಹಿಸಿದ್ದು, ಯುವತಿಯ ಆಟಕ್ಕೆ ಖಾಕಿ ಪಡೆ ಹೈರಾಣಾಗಿದೆ. ಹೌದು, ಸೋಮವಾರ ಬೆಳಗ್ಗೆ 11ಕ್ಕೆ ಯುವತಿ ಮಹಾರಾಷ್ಟ್ರದ ನಾಗ್ಪುರದ ಕಲಮ್ನಾ ಠಾಣೆಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್‌ ಆಯುಕ್ತ ಅಮಿತೇಶ್‌ ಕುಮಾರ್‌, ಹಿರಿಯ ಅಧಿಕಾರಿಗಳು ಸೇರಿ 1000ಕ್ಕೂ ಹೆಚ್ಚು ಪೊಲೀಸರು ಪ್ರಕರಣದ ತನಿಖೆಯಲ್ಲಿ ಭಾಗಿಯಾಗಿ ಇಡೀ ದಿನ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದರು. ಆದರೆ, ನಾಗ್ಪುರ ನಗರದಾದ್ಯಂತ 250ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ ಪೊಲೀಸರಿಗೆ ಯುವತಿಯೇ ಸಾಮೂಹಿಕ ಅತ್ಯಾಚಾರದ ಕಥೆ ಕಟ್ಟಿದ್ದಾಳೆ ಎಂಬುದು ಗೊತ್ತಾಗಿದೆ. ಬಳಿಕ ಯುವತಿ ತನ್ನ ಗೆಳೆಯನನ್ನು ಮದುವೆಯಾಗಲು ಹೀಗೆ ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದಕ್ಕೂ ಮೊದಲು, ನಾಗ್ಪುರದ ಚಿಖಾಲಿ ಪ್ರದೇಶದ ಸಮೀಪವಿರುವ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳು ತನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಯುವತಿ ತನ್ನ ದೂರಿನಲ್ಲಿ ಆರೋಪಿಸಿದ್ದಳು. ಸೋಮವಾರ ಬೆಳಗ್ಗೆ ಮ್ಯೂಸಿಕ್‌ ಕ್ಲಾಸ್‌ಗೆ ಹೋಗುತ್ತಿದ್ದಾಗ ಬಿಳಿ ಬಣ್ಣದ ವ್ಯಾನ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ದಾರಿ ಕೇಳಿದಂತೆ ಮಾಡಿ, ಆಕೆಯನ್ನು ಬಲವಂತವಾಗಿ ವ್ಯಾನ್‌ನಲ್ಲಿ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ ಎಂದು ಯುವತಿ ಪೊಲೀಸರಿಗೆ ದೂರು ನೀಡಿದ್ದಳು ಎಂದು ಅಧಿಕಾರಿ ತಿಳಿಸಿದ್ದಾರೆ. ಸಾಮೂಹಿಕ ಅತ್ಯಾಚಾರ ಪ್ರಕರಣವಾಗಿದ್ದರಿಂದ ವಿಷಯದ ಗಂಭೀರತೆಯನ್ನು ಗ್ರಹಿಸಿದ ನಗರ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ತನಿಖೆ ಆರಂಭಿಸಿದ್ದಾರೆ. ಕಳಮ್ನಾ ಠಾಣೆ ಪೊಲೀಸರು ಸಂಬಂಧಿತ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ನಗರ ಪೊಲೀಸ್‌ ಆಯುಕ್ತ ಅಮಿತೇಶ್ ಕುಮಾರ್, ಹೆಚ್ಚುವರಿ ಸಿಪಿ ಸುನೀಲ್ ಫುಲಾರಿ ಮತ್ತು ಇತರ ಹಿರಿಯ ಅಧಿಕಾರಿಗಳು ಸೀತಾಬುಲ್ಡಿ ಪೊಲೀಸ್ ಠಾಣೆಗೆ ಧಾವಿಸಿದ್ದರು. ನಗರದಲ್ಲಿನ ಸಿಸಿಟಿವಿ, ವ್ಯಾನ್‌ಗಳ ದೃಶ್ಯಾವಳಿಗಳನ್ನು ಪರಿಶೀಲಿಸಲು ಮತ್ತು ಯುವತಿಯ ಸ್ನೇಹಿತರನ್ನು ಪ್ರಶ್ನಿಸಲು 1,000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ಒಳಗೊಂಡ 40 ವಿಶೇಷ ತಂಡಗಳನ್ನು ರಚಿಸಲು ಅಮಿತೇಶ್‌ ಕುಮಾರ್ ಆದೇಶಿಸಿದ್ದರು. ಆರು ಗಂಟೆಗೂ ಹೆಚ್ಚು ಕಾಲ ಸತತ ತನಿಖೆ, 50ಕ್ಕೂ ಅಧಿಕ ಜನರ ವಿಚಾರಣೆ ಬಳಿಕ ಯವತಿ ಸಾಮೂಹಿಕ ಅತ್ಯಾಚಾರದ ಕಥೆ ಹೆಣೆದಿದ್ದಾಳೆ ಎಂಬುದು ಪೊಲೀಸರಿಗೆ ಗೊತ್ತಾಗಿದೆ.