ಯಶೋಮಾರ್ಗದ ಮೂಲಕ ಮತ್ತೊಂದು ಜನಪರ ಕಾರ್ಯಕ್ಕೆ ಮುಂದಾದ ನಟ ಯಶ್

'ರಾಕಿಂಗ್ ಸ್ಟಾರ್‌' ಯಶ್ ಅವರು ಈ ಹಿಂದೆ 'ಯಶೋಮಾರ್ಗ'ದ ಮೂಲಕ ಕೊಪ್ಪಳದ ಕೆರೆಯೊಂದರ ಅಭಿವೃದ್ಧಿ ಮಾಡಿ, ಅಂತರ್ಜಲ ಹೆಚ್ಚಳಕ್ಕೆ ಕಾರಣವಾಗಿದ್ದರು ಕೂಡ. ಇದೀಗ ಅವರು ಮತ್ತೊಂದು ಉತ್ತಮ ಕಾರ್ಯಕ್ಕೆ ಕೈ ಹಾಕಿದ್ದಾರೆ.

ಯಶೋಮಾರ್ಗದ ಮೂಲಕ ಮತ್ತೊಂದು ಜನಪರ ಕಾರ್ಯಕ್ಕೆ ಮುಂದಾದ ನಟ ಯಶ್
Linkup
ಶಿವಮೊಗ್ಗ: ನಟ ಯಶ್‌ ತಮ್ಮ ಚಾರಿಟಿ ಟ್ರಸ್ಟ್‌ ಮೂಲಕ ಜಿಲ್ಲೆ ಸಾಗರ ತಾಲೂಕಿನ ಆನಂದಪುರದ ಬಳಿ ಇರುವ ಐತಿಹಾಸಿಕ ಪುಷ್ಕರಣಿಯ ಪುನಶ್ಚೇತನದ ಹೊಣೆಯನ್ನ ಹೊತ್ತಿದ್ದಾರೆ. ಈ ಮೂಲಕ ಮಲೆನಾಡಿನ ಭಾಗದಲ್ಲೂ ಸಹ ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ತೊಡಗಿಕೊಳ್ಳಲು ಅಡಿ ಇಟ್ಟಿದ್ದಾರೆ. 16ನೇ ಶತಮಾನದ ಐತಿಹಾಸಿಕ ಪುಷ್ಕರಣಿ ಕೆಳದಿ ಅರಸರ ಕಾಲದ್ದು ಎಂದು ಇತಿಹಾಸಕಾರರು ದಾಖಲಿಸಿದ್ದು ಈ ಪುಷ್ಕರಣಿಯ ಹಿಂದೆ ಅನೇಕ ವಿವಿಧ ಆಯಾಮಗಳ ಕಥೆಗಳಿವೆ. ಸದ್ಯ ಈ ಕಲ್ಯಾಣಿ ಅಥವಾ ಪುಷ್ಕರಣಿಗೆ ಚಂಪಕ ಸರಸು ಎಂದು ಕರೆಯಲಾಗುತ್ತಿದೆ. ಗತ ಕಾಲದ ಪ್ರೇಮಕಾವ್ಯ ಸಾರುವ ಈ ಅದ್ಭುತ ಸ್ಥಳ ಕಾಲಾನಂತರ ಹುದುಗಿಹೋಗಿತ್ತು. ಇಲ್ಲಿನ ಸ್ಥಳೀಯರು ಇದನ್ನ ಶುಚಿ ಮಾಡಿ ಕಾಪಾಡಿಕೊಂಡು ಬಂದಿದ್ದಾರೆ. ಜಿಲ್ಲಾಡಳಿತ, ಪ್ರಾಚ್ಯ ವಸ್ತು ಇಲಾಖೆಯಿಂದ ನಿರ್ಲಕ್ಷ್ಯಕ್ಕೊಳಗಾಗಿರುವ ಈ ಸ್ಥಳದ ಬಗ್ಗೆ ಖ್ಯಾತ ಲೇಖಕ ಹಾಗೂ ಪರಿಸರಾಸಕ್ತ ಶಿವಾನಂದ ಕಳವೆ ಅವರು ನಟ ಗಮನಕ್ಕೆ ತಂದಿದ್ದರು. ಈ ಕಲ್ಯಾಣಿ ಪುನಶ್ಚೇತನಕ್ಕೆ ಯಶ್‌ ಒಪ್ಪಿಗೆ ನೀಡಿದ್ದರ ಅಂಗವಾಗಿ ಭಾನುವಾರ ಚೊಕ್ಕದಾದ ಕಾರ್ಯಕ್ರಮ ನಡೆದಿದೆ. ಯಶೋಮಾರ್ಗದಡಿಯಲ್ಲಿ ಶಿವಾನಂದ ಕಳವೆ ಹಾಗೂ ಯಶ್‌ ಅಭಿಮಾನಿ ಸಂಘದ ಕಾರ್ಯಕರ್ತರು ಈ ಪ್ರದೇಶದಲ್ಲಿ ಹಲವು ಕಾರ್ಯಕ್ರಮಗಳನ್ನ ಹಾಕಿಕೊಂಡಿದ್ದಾರೆ. ಕೊಳದ ಜಾಗ ಸ್ಚಚ್ಛತೆ, ಕಟ್ಟೆ ದುರಸ್ತಿ, ಹಿಂಬಾಗಿಲು ರಿಪೇರಿ, ದೇಗುಲ ಪುನಶ್ಚೇತನ, ಹೊರ ಆವರಣವನ್ನು ಪ್ರವಾಸಿ ಯೋಗ್ಯ ಸ್ಥಳವನ್ನಾಗಿಸಿ, ಗೇಟ್‌ ಮೂಲಕ ಭದ್ರತೆ ನೀಡುವುದಕ್ಕೆ ಯಶೋಮಾರ್ಗ ಸಂಸ್ಥೆ ಮುಂದಾಗಿದೆ. ಇನ್ನೆರಡು ವರ್ಷಗಳಲ್ಲಿ ಈ ಕಲ್ಯಾಣಿಗೆ 400 ವರ್ಷಗಳು ತುಂಬಲಿವೆ ಎಂದು ಇತಿಹಾಸಕಾರರು ಹೇಳುತ್ತಾರೆ. ಲೇಖಕ ಅರುಣ್‌ ಪ್ರಸಾದ್‌ ಅವರ ಬೆಸ್ತರ ರಾಣಿ ಚಂಪಕ ಕೃತಿಯಲ್ಲಿ ಈ ಚಂಪಕ ಸರಸಿಯನ್ನ ಕೆಳದಿ ಅರಸ ರಾಜ ವೆಂಕಟಪ್ಪ ನಾಯಕ ಕಟ್ಟಿಸಿದ್ದು ಎಂದು ಹೇಳಲಾಗಿದೆ. ಇದಕ್ಕೆ ಸುಮಾರು 400 ವರ್ಷಗಳ ಇತಿಹಾಸವಿದೆ. ಮಹಾರಾಜನಿಗೆ ಚಂಪಕ ಎಂಬ ಯುವತಿ ಮೇಲೆ ಮೋಹವಿತ್ತು, ಆಕೆಯನ್ನು ವರಿಸಿದ್ದ. ಇದು ಪ್ರಜೆಗಳು ಹಾಗೂ ಮಹಾರಾಣಿಯ ಗಮನಕ್ಕೆ ಬಂದ ನಂತರ, ಎಲ್ಲರೂ ಈಕೆಯನ್ನು ಮೂದಲಿಸುತ್ತಿದ್ದರು. ಹಾಗಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಳು. ಈ ನೆನಪಿಗಾಗಿ ಈ ಕಲ್ಯಾಣಿ ರೂಪುಗೊಂಡಿತು ಎಂಬುದು ಲೇಖಕರ ಅಭಿಪ್ರಾಯ. ಕೆಲವು ಇತಿಹಾಸಕಾರರು ಇದನ್ನ ಒಪ್ಪುವುದಿಲ್ಲ. ಚಂಪಕಸರಸಿ ಕಲ್ಯಾಣಿ ಬಗ್ಗೆ ಇಲ್ಲಿ ತನಕ ನಾಲ್ಕು ಕಥೆಗಳು ಬಂದಿವೆ. ಮೊದಲು ಚಂಪಕ ಎಂಬ ಯುವತಿ ಮೀರ್ಜಾನ್ ಕೋಟೆಯ ಕಿಲ್ಲೇದಾರನ ತಂಗಿ ಎಂದಿದ್ದರು. ನಂತರ ಮತ್ತೊಬ್ಬ ಇತಿಹಾಸಕಾರ ಆಕೆ ಮುಸ್ಲಿಂ ಎಂದರು. ಯೂರೋಪ್‌ ಇತಿಹಾಸಜ್ಞ, ವೆಂಕಟಪ್ಪ ನಾಯಕರಿಗೆ ಯಾವುದೋ ಅನ್ಯಜಾತಿಯ ಮಹಿಳೆಯೊಂದಿಗೆ ಪ್ರೇಮವಿರುವುದರಿಂದ ರಾಣಿಗೆ ಬೇಜಾರಾಗಿತ್ತು ಎಂಬುದು ಮೂರನೆಯ ವ್ಯಕ್ತಿಯಿಂದ ತಿಳಿದಿತ್ತು ಎಂದು ದಾಖಲಿಸಿದ್ದಾರೆ. ಇದೆಲ್ಲದರ ನಂತರ ವಾಸ್ತವದಲ್ಲಿ ಇತಿಹಾಸದ ದಾಖಲೆಗಳನ್ನು ನೋಡಿದರೆ ಸದಾಶಿವ ಶಿವತತ್ವರತ್ನಾಕರ ಪ್ರಕಾರವಾಗಿ ಅನಂತಪುರದಲ್ಲಿ ಸದಾಶಿವ ನಾಯಕರ ಕಾಲದಲ್ಲಿಯೇ ಇದರ ನಿರ್ಮಾಣದ ಉಲ್ಲೇಖವಿದೆ. ಹಿಂದೆ ಇದು ಮಹಾಮತ್ತಿನ ಭೂ ರುದ್ರ ಮಠವು ಎಂಬ ಪ್ರತೀತಿ ಇದೆ ಎನ್ನುತ್ತಾರೆ. ಒಟ್ಟಿನಲ್ಲಿ ನಟ ಯಶ್‌ರ ಯಶೋಮಾರ್ಗದಿಂದ ಈ ಕಲ್ಯಾಣಿಗೊಂದು ಕಳೆ ಬಂದರೆ ಸಾಕು ಎನ್ನುತ್ತಾರೆ ಸ್ಥಳೀಯರು.