ಪ್ರೀತಿಗೊಂದು ಮಾದರಿಯಾಗಲಿದೆ ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ ‘ಪ್ರೇಮಂ ಪೂಜ್ಯಂ’ ಸಿನಿಮಾ

ಪ್ರೇಮ್ ಅಭಿನಯದ ‘ಪ್ರೇಮಂ ಪೂಜ್ಯಂ’ ಚಿತ್ರದ ಹಾಡುಗಳು ರಿಲೀಸ್‌ ಆಗಿದ್ದು ನಿರೀಕ್ಷೆ ಹುಟ್ಟಿಸಿವೆ. ಚಿತ್ರಕ್ಕೆ ಈಗ ಸೆನ್ಸಾರ್‌ ಆಗಿದ್ದು, ನವೆಂಬರ್‌ 12ರಂದು ಕರ್ನಾಟಕದಲ್ಲಿ ಮಾತ್ರವಲ್ಲದೆ, ಬೇರೆ ರಾಜ್ಯಗಳು ಮತ್ತು ವಿದೇಶಗಳಲ್ಲೂ ರಿಲೀಸ್‌ ಮಾಡಲು ನಿರ್ಧರಿಸಲಾಗಿದೆ.

ಪ್ರೀತಿಗೊಂದು ಮಾದರಿಯಾಗಲಿದೆ ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ ‘ಪ್ರೇಮಂ ಪೂಜ್ಯಂ’ ಸಿನಿಮಾ
Linkup
ಪದ್ಮಾ ಶಿವಮೊಗ್ಗ ಪ್ರೀತಿ, ಪ್ರೇಮದ ಕಥೆ ಹೇಳುವ ಸಿನಿಮಾಗಳಲ್ಲಿ ತಮ್ಮ ನಟನೆಯಿಂದ ಲವ್ಲಿ ಸ್ಟಾರ್‌ ಎಂದೇ ಹೆಸರಾಗಿರುವ ನಟ ನೆನಪಿರಲಿ ಪ್ರೇಮ್‌ ಈಗ ಹೊಸ ಲವ್‌ ಸ್ಟೋರಿ ಹೇಳಲು ಬರುತ್ತಿದ್ದಾರೆ. ಅವರ ನಟನೆಯ ‘ಪ್ರೇಮಂ ಪೂಜ್ಯಂ’ ಚಿತ್ರದ ಹಾಡುಗಳು ರಿಲೀಸ್‌ ಆಗಿದ್ದು ನಿರೀಕ್ಷೆ ಹುಟ್ಟಿಸಿವೆ. ಚಿತ್ರಕ್ಕೆ ಈಗ ಸೆನ್ಸಾರ್‌ ಆಗಿದ್ದು, ನವೆಂಬರ್‌ 12ರಂದು ಕರ್ನಾಟಕದಲ್ಲಿ ಮಾತ್ರವಲ್ಲದೆ, ಬೇರೆ ರಾಜ್ಯಗಳು ಮತ್ತು ವಿದೇಶಗಳಲ್ಲೂ ರಿಲೀಸ್‌ ಮಾಡಲು ನಿರ್ಧರಿಸಲಾಗಿದೆ. ಚಿತ್ರವನ್ನು ಡಾ. ರಾಘವೇಂದ್ರ ಅವರು ನಿರ್ದೇಶನ ಮಾಡಿದ್ದು, ಚಿತ್ರದ ಪ್ರಚಾರ ಕಾರ್ಯಕ್ಕಾಗಿ ರಾಜ್ಯದ ಕಾಲೇಜುಗಳಿಗೆ ಭೇಟಿ ನೀಡಲು ಸಜ್ಜಾಗಿದ್ದಾರೆ. ‘ಪ್ರೇಮಂ ಪೂಜ್ಯಂ ಚಿತ್ರವನ್ನು ವಿದೇಶಗಳಲ್ಲೂ ರಿಲೀಸ್‌ ಮಾಡಲು ಸಿದ್ಧತೆ ನಡೆದಿದೆ. ಈಗ ಕರ್ನಾಟಕದಲ್ಲಿ ಪ್ರಚಾರಕ್ಕಾಗಿ ಮೊದಲು ಉತ್ತರ ಕರ್ನಾಟಕದ ಕಡೆ ಹೋಗುತ್ತಿದ್ದೇವೆ. ಹುಬ್ಬಳ್ಳಿ, ಗದಗ್‌, ಧಾರವಾಡ, ಬೆಳಗಾವಿ ಮತ್ತಿತರ ಊರುಗಳ ಕಾಲೇಜುಗಳಿಗೆ ನಾನು, ಪ್ರೇಮ್‌ ಸೇರಿ ಇಡೀ ಚಿತ್ರತಂಡ ಭೇಟಿ ನೀಡಲಿದ್ದೇವೆ. ನಂತರ ಮೈಸೂರು, ಹಾಸನ, ಮಂಡ್ಯ ಮತ್ತಿತರ ಕಡೆ ಹೋಗುತ್ತೇವೆ’ ಎಂದಿದ್ದಾರೆ ಡಾ.ರಾಘವೇಂದ್ರ. ವೃತ್ತಿಯಲ್ಲಿ ನರರೋಗ ತಜ್ಞರಾಗಿರುವ ಡಾ. ರಾಘವೇಂದ್ರ ತಮ್ಮ ಮೊದಲ ನಿರ್ದೇಶನದ ಚಿತ್ರದಲ್ಲಿ ಹೊಸ ರೀತಿಯಲ್ಲಿ ಲವ್‌ ಸ್ಟೋರಿ ಹೇಳಲಿದ್ದಾರಂತೆ. ‘ಎಲ್ಲರೂ ನಮ್ಮದು ವಿಭಿನ್ನ ಚಿತ್ರ ಅಂತ ಹೇಳುತ್ತಾರೆ. ನಾನು ಹಾಗೆ ಹೇಳಲು ಇಷ್ಟಪಡುವುದಿಲ್ಲ. ಲವ್‌ ಸ್ಟೋರಿ ಇರುವ ಸಿನಿಮಾಗಳು ಬಹಳ ಬಂದಿವೆ. ಆದರೆ, ಪ್ರೇಮಕಥೆಗಳೆಲ್ಲಾ ಒಂದೇ ರೀತಿ ಇರುವುದಿಲ್ಲ. ಪ್ರೇಮಂ ಪೂಜ್ಯಂ ಚಿತ್ರದಲ್ಲಿ ಮತ್ತೊಂದು ವಿಶೇಷ ಲವ್‌ ಸ್ಟೋರಿ ಇದೆ. ಲವ್‌ ಸ್ಟೋರಿಯಲ್ಲಿ ಹಿಂಸೆ, ದ್ವೇಷ ಇರೋದನ್ನೂ ನೋಡಿದ್ದೇವೆ. ಆದರೆ, ನಮ್ಮ ಸಿನಿಮಾದಲ್ಲಿ ಹಾಗಿಲ್ಲ. ನಾಯಕ ತನ್ನ ಪ್ರೀತಿಯನ್ನು ಹೇಗೆ ಕಾಪಾಡಿಕೊಂಡು ಹೋಗ್ತಾನೆ ಅಂತ ಇದೆ. ಹೀಗೂ ಪ್ರೀತಿಸಬಹುದಾ ಎನ್ನಿಸುವಂತೆ ಇದೆ. ಇದು ಒಂದು ಸಂಗತಿಯಾದರೆ ಹೀಗೆ ಪ್ರೀತಿಸಬೇಕು ಎಂದೂ ಅನ್ನಿಸುತ್ತದೆ. ಇಷ್ಟು ಪ್ರೀತಿಯಲ್ಲಿ ಶೇ.1ರಷ್ಟು ಪ್ರೀತಿಸಿದರೂ ಸಾಕು, ಸಾಂಸಾರಿಕ, ವೈವಾಹಿಕ, ಪ್ರೇಮದ ಜೀವನ ಚೆನ್ನಾಗಿರುತ್ತೆ. ನಿಷ್ಕಲ್ಮಶವಾಗಿ, ಏನನ್ನೂ ನಿರೀಕ್ಷಿಸದೆ ಪ್ರೀತಿಸಿದರೆ ಜೀವನ ತುಂಬಾ ಚೆನ್ನಾಗಿರುತ್ತದೆ ಎಂಬುದು ಚಿತ್ರದಲ್ಲಿದೆ. ಈ ಪ್ರೀತಿ ಸ್ನೇಹಿತರ ನಡುವೆ ಇರಬಹುದು, ಅಪ್ಪ, ಅಮ್ಮನ ಜತೆ ಇರಬಹುದು, ಹೆಂಡತಿಯಾಗಿರಬಹುದು. ಹೀಗೆ ಯಾವ ಬಂಧದಲ್ಲಿಎಂಥ ಪ್ರೀತಿ ಇರಬೇಕು ಎಂಬ ಅರಿವನ್ನು ಈ ಚಿತ್ರ ಮೂಡಿಸುತ್ತದೆ’ ಎಂದಿದ್ದಾರೆ ರಾಘವೇಂದ್ರ. ಸಿನಿಮಾದಲ್ಲಿ ನವನಟಿ ಬೃಂದಾ ಆಚಾರ್ಯ, ಐಂದ್ರಿತಾ ರೇ ಮುಖ್ಯಪಾತ್ರಗಳಲ್ಲಿದ್ದಾರೆ. ತ್ರಿಕೋನ ಪ್ರೇಮಕಥೆ ಸಿನಿಮಾದಲ್ಲಿದೆ. ‘ಗೆದ್ದರೆ, ಆಡೋಕೆ ಬಂದಿದ್ದೆ, ಸೋತರೆ, ನೋಡೋಕೆ ಬಂದಿದ್ದೆ ಎನ್ನುವ ಜನ ಬಹಳ ಇದ್ದಾರೆ. ನಿರೀಕ್ಷೆಗಳಿಲ್ಲದ ಯಾವುದೇ ಸಂಬಂಧದಲ್ಲಿ ನೆಮ್ಮದಿ, ಸಂತೋಷಗಳಿರುತ್ತವೆ ಎನ್ನುವುದನ್ನು ಹೇಳಿದ್ದೇವೆ. ಫ್ರೆಂಡ್‌ ಇನ್‌ ನೀಡ್‌ ಈಸ್‌ ಅ ಫ್ರೆಂಡ್‌ ಇನ್‌ ಡೀಡ್‌ ಅಂತಾರೆ. ನೀಡ್‌ ಗೀಡ್‌ ಏನೂ ಇಲ್ಲ. ಕೇವಲ ಡೀಡ್‌ ಅಷ್ಟೆ ಇರಬೇಕು. ಬಿಸ್ನೆಸ್‌ ಅಲ್ಲ. ಲೆಕ್ಕಾಚಾರ ಇಲ್ಲದೆ ಸಾಸಿವೆಯಷ್ಟು ಪ್ರೀತಿಸಿದರೂ ಪ್ರೇಮ ಪೂಜ್ಯಮಯ ಆಗುತ್ತೆ ಎನ್ನುತ್ತಿದ್ದೇವೆ’ ಎನ್ನುತ್ತಾರೆ ರಾಘವೇಂದ್ರ. ತಾವೇ ಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ12 ಹಾಡುಗಳಿದ್ದು, ಈಗಾಗಲೇ 10 ಸಾಂಗ್ಸ್‌ ರಿಲೀಸ್‌ ಆಗಿವೆ.