ಪ್ರತಿ ಟನ್‌ ಕಬ್ಬಿಗೆ ₹3500 ಬೆಲೆ ನಿಗದಿ ಮಾಡಿ: ಜೆ.ಎಂ. ಕೊರಬು ಆಗ್ರಹ

ತಾಲೂಕಿನ ಸಕ್ಕರೆ ಕಾರಖಾನೆಗೆ ಪ್ರಸಕ್ತ ಹಂಗಾಮಿಗಾಗಿ ಕಬ್ಬು ಪೂರೈಸುವ ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ ಕಬ್ಬಿಗೆ 3500 ರೂ. ಬೆಲೆ ನಿಗದಿ ಮಾಡಬೇಕು ಎಂದು ಸಮಾಜ ಸೇವಕ ಜೆ.ಎಂ.ಕೊರಬು ಒತ್ತಾಯಿಸಿದ್ದಾರೆ.

ಪ್ರತಿ ಟನ್‌ ಕಬ್ಬಿಗೆ ₹3500 ಬೆಲೆ ನಿಗದಿ ಮಾಡಿ: ಜೆ.ಎಂ. ಕೊರಬು ಆಗ್ರಹ
Linkup
ಅಫಜಲಪುರ: ತಾಲೂಕಿನ ಸಕ್ಕರೆ ಕಾರ್ಖಾನೆಗೆ ಪ್ರಸಕ್ತ ಹಂಗಾಮಿಗಾಗಿ ಪೂರೈಸುವ ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ ಕಬ್ಬಿಗೆ 3500 ರೂ. ಬೆಲೆ ನಿಗದಿ ಮಾಡಬೇಕು ಎಂದು ಸಮಾಜ ಸೇವಕ ಜೆ.ಎಂ.ಕೊರಬು ಒತ್ತಾಯಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೀಮಾ ನದಿಯಿಂದ ಬೆಳೆದ ಫಲವತ್ತಾದ ಕಬ್ಬಿಗೆ ಹೆಚ್ಚಿನ ಇಳುವರಿ ಬಂದರೂ ಸಹ ಕಾರ್ಖಾನೆಯವರು ಸಕ್ಕರೆ ಇಳುವರಿ ಕಡಿಮೆ ಬಂದಿದೆಂದು ರೈತರಿಗೆ ಸುಳ್ಳು ಹೇಳಿ ಕಡಿಮೆ ಬೆಲೆ ನೀಡುತ್ತಿದ್ದಾರೆ. ಸರಕಾರ ಎಚ್ಚೆತ್ತುಕೊಂಡು ಕಾರಖಾನೆಯಿಂದ ರೈತರಿಗೆ ಆಗುತ್ತಿರುವ ಅನ್ಯಾಯ ತಡೆಗಟ್ಟಲು ಮುಂದಾಗಬೇಕು. ಸೊನ್ನ ಭೀಮಾ ಏತ ನೀರಾವರಿ ಯೋಜನೆಗೆ ಸರಕಾರ ಸುಮಾರು ಮೂವತ್ತು ವರ್ಷಗಳಲ್ಲಿ 950 ಕೋಟಿ ರೂ. ಖರ್ಚು ಮಾಡಿದರೂ ಇದುವರೆಗೂ ಉಪಕಾಲುವೆ, ಹೊಲ ಕಾಲುವೆಗಳಿಗೆ ನೀರು ಹರಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಯೋಜನೆಗಾಗಿ 1992ರಲ್ಲಿ 94 ಕೋಟಿ ರೂ. ಕ್ರಿಯಾಯೋಜನೆ ತಯಾರಿಸಲಾಗಿತ್ತು. ಅಲ್ಲಿಂದ ಇಲ್ಲಿವರೆಗೆ 905 ಕೋಟಿ ರೂ. ಖರ್ಚಾಗಿದೆ ಎಂದರು. ಈ ಯೋಜನೆಯಿಂದ 60 ಸಾವಿರ ಎಕರೆ ನೀರಾವರಿಯಾಗಬೇಕು. ಆದರೆ , ಇದುವರೆಗೂ ಕಾಲುವೆ ನೀರನ್ನು ರೈತರು ಉಪಯೋಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಕೇಂದ್ರ ಜಲ ಆಯೋಗದ ಪ್ರಕಾರ ಅಫಜಲಪುರ ತಾಲೂಕಿನಲ್ಲಿ ಭೀಮಾ ನದಿಯಿಂದ 15 ಟಿಎಂಸಿ ನೀರು ಬಳಸಿಕೊಳ್ಳಬೇಕು. ಆದರೆ, ಈ ಭಾಗದ ಜನಪ್ರತಿನಿಗಳ ಬೇಜವಾಬ್ದಾರಿಯಿಂದ ನೀರು ಬಳಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಜಲಾಯನದಲ್ಲಿ ನೀರು ಸಂಗ್ರಹವಾದರೂ ಅದರ ಬಳಕೆಯಾಗುತ್ತಿಲ್ಲ. ಇದುವರೆಗೂ ಅತಿವೃಷ್ಟಿ ಹಾನಿಯ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು. ಈ ವರ್ಷ ಅತಿವೃಷ್ಟಿಯಿಂದ ಬೆಳೆಗಳು ಹಾಳಾದರೂ ಪರಿಹಾರ ನೀಡಿಲ್ಲ. ಭೀಮಾ ಪ್ರವಾಹದಿಂದ ನೀರು ಪಾಲಾದ ಬೆಳೆಗೆ ನ್ಯಾಯಯುತ ಪರಿಹಾರ ನೀಡಿಲ್ಲ. ಶೀಘ್ರದಲ್ಲಿ ಎಲ್ಲ ರೈತರ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು. -ಜೆ.ಎಂ.ಕೊರಬು, ಸಮಾಜ ಸೇವಕ, ಅಫಜಲಪುರ.