ಮಹಾರಾಷ್ಟ್ರದಲ್ಲಿ ನಕ್ಸಲ್ ನಿಗ್ರಹ ಪಡೆ ಆಪರೇಷನ್: ಬೆಳ್ಳಂಬೆಳಗ್ಗೆ 13 ಕೆಂಪು ಉಗ್ರರ ಹತ್ಯೆ

'​​ಸುಮಾರು ಒಂದು ಗಂಟೆ ನಡೆದ ಗುಂಡಿನ ಚಕಮಕಿಯಲ್ಲಿ 13 ನಕ್ಸಲರು ಹತರಾದರು. ಇದರಲ್ಲಿ ಆರು ಪುರುಷರು ಹಾಗೂ ಏಳು ಮಹಿಳೆಯರು ಸೇರಿದ್ದಾರೆ' - ದಿಲೀಪ್‌ ವಾಸ್ಲೆ ಪಾಟೀಲ್‌, ಮಹಾರಾಷ್ಟ್ರ ಗೃಹ ಸಚಿವ

ಮಹಾರಾಷ್ಟ್ರದಲ್ಲಿ ನಕ್ಸಲ್ ನಿಗ್ರಹ ಪಡೆ ಆಪರೇಷನ್: ಬೆಳ್ಳಂಬೆಳಗ್ಗೆ 13 ಕೆಂಪು ಉಗ್ರರ ಹತ್ಯೆ
Linkup
ಗಡ್ಚಿರೋಲಿ: ಮಹಾರಾಷ್ಟ್ರದ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನಕ್ಸಲ್‌ ನಿಗ್ರಹ ಕಾರ್ಯಪಡೆ ಶುಕ್ರವಾರ ಬೆಳಗ್ಗೆ ನಡೆಸಿದ ಬಿರುಸಿನ ಕಾರ್ಯಾಚರಣೆಯಲ್ಲಿ 13 ನಕ್ಸಲರನ್ನು ಹತರಾಗಿದ್ದಾರೆ. ನಕ್ಸಲರ ಇರುವಿಕೆಯ ಜಾಡು ಹಿಡಿದು ನಸುಕಿನ 5.30ರ ಸುಮಾರಿಗೆ ನಕ್ಸಲ್‌ ನಿಗ್ರಹ ಪಡೆ ಜಿಲ್ಲೆಯ ಎಟಪಲ್ಲಿ ಸಮೀಪದ ಪೈಡಿ ಅರಣ್ಯ ಪ್ರದೇಶದಲ್ಲಿ ಎನ್‌ಕೌಂಟರ್‌ ನಡೆಸಿತು. ಏಪ್ರಿಲ್‌ನಲ್ಲಿ ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ದಾಳಿಗೆ 22 ಸಿಆರ್‌ಪಿಎಫ್‌ ಯೋಧರು ಹುತಾತ್ಮರಾಗಿದ್ದರು. ಇದಾದ ಬಳಿಕ ಇಷ್ಟು ದೊಡ್ಡ ಸಂಖ್ಯೆಯಲ್ಲಿ ನಕ್ಸಲರ ಹತ್ಯೆ ನಡೆದಿರುವುದು ಇದೇ ಮೊದಲು. ಖಚಿತ ಸುಳಿವಿನ ಮೇರೆಗೆ ಗಡಚಿರೋಲಿ ಪೊಲೀಸ್‌ ಇಲಾಖೆಯ ನಕ್ಸಲ್‌ ನಿಗ್ರಹ ಸಿ-60 ಕಮಾಂಡೊ ಪಡೆಯು, ಪೈಡಿ ಕಾಡಿನಲ್ಲಿ ಸಭೆ ನಡೆಸುತ್ತಿದ್ದ ನಕ್ಸಲರ ತಂಡದ ಶೋಧ ಕಾರ್ಯಾಚರಣೆಗೆ ಇಳಿದಿತ್ತು. ಈ ವೇಳೆ ಪೊಲೀಸ್‌ ಪಡೆ ಮೇಲೆ ಮಾವೋವಾದಿಗಳು ಗುಂಡು ಹಾರಿಸಿದಾಗ ತಕ್ಷಣವೇ ಪೊಲೀಸರು ಪ್ರತಿದಾಳಿ ನಡೆಸಿದರು. ಸುಮಾರು ಒಂದು ಗಂಟೆ ನಡೆದ ಗುಂಡಿನ ಚಕಮಕಿಯಲ್ಲಿ 13 ನಕ್ಸಲರು ಹತರಾದರು. ಇದರಲ್ಲಿ ಆರು ಪುರುಷರು ಹಾಗೂ ಏಳು ಮಹಿಳೆಯರು ಸೇರಿದ್ದಾರೆ ಎಂದು ಗೃಹ ಸಚಿವ ದಿಲೀಪ್‌ ವಾಸ್ಲೆ ಪಾಟೀಲ್‌ ತಿಳಿಸಿದ್ದಾರೆ. 'ನಕ್ಸಲರ ಉಪಟಳ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಸಮಾಜಘಾತುಕರನ್ನು ಬಗ್ಗು ಬಡಿಯುವ ಕೆಲಸ ನಡೆಯುತ್ತಿದೆ. ನಕ್ಸಲ್‌ ನಿಗ್ರಹ ವಿಚಾರದಲ್ಲಿ ಸಿಎಂ ಉದ್ಧವ್‌ ಠಾಕ್ರೆ ಅವರು, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಸರಕಾರದ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ' ಎಂದು ಪಾಟೀಲ್‌ ಹೇಳಿದ್ದಾರೆ. ಶಸ್ತ್ರಾಸ್ತ್ರ ವಶ: ಎನ್‌ಕೌಂಟರ್‌ ನಡೆದ ಸ್ಥಳದಿಂದ ಎಕೆ -47 ರೈಫಲ್‌, ಎಸ್‌ಎಲ್‌ಆರ್‌ ಗನ್‌, 303, 12 ಬೋರ್‌ ಗನ್‌ ಸೇರಿ ಹಲವು ಮದ್ದುಗುಂಡುಗಳನ್ನು ಹಾಗೂ ಕೆಲವು ಎಲೆಕ್ಟ್ರಾನಿಕ್‌ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.