ಕೋವಿಡ್-19 ಪ್ರತಿಕಾಯ ಪತ್ತೆ ಮಾಡುವ ಸ್ವದೇಶಿ ಸಾಧನ ಅಭಿವೃದ್ಧಿಪಡಿಸಿದೆ ಡಿಆರ್‌ಡಿಒ..!

ಗಾಳಿಯಲ್ಲಿ ಆಮ್ಲಜನಕ ಹೀರಿ ತೆಗೆಯುವ ಯಂತ್ರ ಹಾಗೂ ಕೋವಿಡ್ ಸೋಂಕಿತರನ್ನು ಕೃತಕ ಆಮ್ಲಜನಕ ಅವಲಂಬನೆಯಿಂದ ಹೊರತರುವ 2-ಡಿಜಿ ಔಷಧ ಸಂಶೋಧಿಸಿ ದೇಶದ ವೈದ್ಯಕೀಯ ರಂಗಕ್ಕೆ ತುರ್ತು ಪರಿಸ್ಥಿತಿ ವೇಳೆ ನೆರವಾಗಿರುವ ಡಿಆರ್‌ಡಿಒ ಇದೀಗ ಮತ್ತೊಂದು ಸಾಧನೆ ಮಾಡಿದೆ.

ಕೋವಿಡ್-19 ಪ್ರತಿಕಾಯ ಪತ್ತೆ ಮಾಡುವ ಸ್ವದೇಶಿ ಸಾಧನ ಅಭಿವೃದ್ಧಿಪಡಿಸಿದೆ ಡಿಆರ್‌ಡಿಒ..!
Linkup
ದೆಹಲಿಯಲ್ಲಿರುವ ಪ್ರಯೋಗ ಶಾಲೆ ‘ಡಿಫೆನ್ಸ್ ಇನ್‍ಸ್ಟಿಟ್ಯೂಟ್ ಆಫ್ ಫಿಸಿಯಾಲಜಿ ಅಂಡ್ ಅಲೈಡ್ ಸೈನ್ಸಸ್ (ಡೈಪಾಸ್), ಕೋವಿಡ್-19 ಪ್ರತಿಕಾಯಗಳನ್ನು (ಆಂಟಿಬಾಡಿ) ಪತ್ತೆ ಮಾಡುವ ಸ್ವದೇಶಿ ಸಾಧನವನ್ನು ಅಭಿವೃದ್ಧಿ ಮಾಡಿದೆ. ಪ್ರತಿಕಾಯಗಳ ಹಾಜರಿಯನ್ನು ಪತ್ತೆ ಮಾಡುವ ಮೂಲಕ ಕೋವಿಡ್-19 ಸೋಂಕು ಹಿಂದೆಯೇ ಬಂದು ಹೋಗಿರುವುದನ್ನು ಇದರಿಂದ ಖಚಿತಪಡಿಸಿಕೊಳ್ಳಬಹುದು. ಡೈಪಾಸ್ ಪ್ರಯೋಗಾಲಯವು ದೆಹಲಿಯ ಖಾಸಗಿ ಸಂಸ್ಥೆ ವ್ಯಾನ್‍ಗಾರ್ಡ್ ಡಯಾಗ್ನಾಸ್ಟಿಕ್ಸ್ ಜತೆಗೂಡಿ ನಿರ್ಮಿಸಿರುವ ‘ಡೈಪ್ಕೋವ್ಯಾನ್’ ಎಂಬ ತಪಾಸಣಾ ಸಾಧನವು ಮನುಷ್ಯ ದೇಹದ ರಕ್ತಸಾರವನ್ನು (ಪ್ಲಾಸ್ಮಾ) ವಿಶ್ಲೇಷಣೆ ಮಾಡಿ ಅದರಲ್ಲಿರಬಹುದಾದ ಕೋವಿಡ್-19ಕ್ಕೆ ಸಂಬಂಧಿಸಿದ ಪ್ರತಿಕಾಯಗಳನ್ನು ಗುಣಾತ್ಮಕವಾಗಿ ಗುರುತಿಸಬಲ್ಲದು. ಡಿ.ಆರ್.ಡಿ.ಒ. ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ ಇದು ದೇಹದಲ್ಲಿ ಮತ್ಯಾವುದೇ ಸೋಂಕಿದ್ದರೂ ನಿರ್ದಿಷ್ಟವಾಗಿ ಕೋವಿಡ್-19ರ ಇರುವನ್ನು ಅತ್ಯಂತ ತ್ವರಿತವಾಗಿ ಕೇವಲ 75 ನಿಮಿಷಗಳಲ್ಲಿ ಗುರುತಿಸಬಲ್ಲದು. ಈ ಹಿಂದೆ ಕೋವಿಡ್-19 ಸೋಂಕು ತಗುಲಿದ್ದಲ್ಲಿ ದೇಹದೊಳಗೆ ಎಷ್ಟು ಪ್ರಮಾಣದ ಪ್ರತಿಕಾಯಗಳು ಅಭಿವೃದ್ಧಿಯಾಗಿವೆಯೆಂದು ಇದರಿಂದ ತಿಳಿಯಬಹುದು. ಈ ತಪಾಸಣಾ ಕಿಟ್‍ನ ಆಯಸ್ಸು 18 ತಿಂಗಳುಗಳ ಕಾಲ ಇರುವುದರಿಂದ ಅಷ್ಟು ಸಮಯ ದಾಸ್ತಾನಿಟ್ಟರೂ, ಕಾರ್ಯಾಚರಣೆಯಲ್ಲಿ ಯಾವುದೇ ತೊಂದರೆಗಳಿರುವುದಿಲ್ಲ. ಈ ತಪಾಸಣಾ ಸಾಧನವನ್ನು ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರೀಸರ್ಚ್ ಏಪ್ರಿಲ್ 2021ರಲ್ಲಿ ಅನುಮೋದನೆ ಮಾಡಿದೆ. ಮೇ ತಿಂಗಳಲ್ಲಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಈ ಸಾಧನದ ಉತ್ಪಾದನೆ, ಮಾರಾಟ ಹಾಗೂ ಹಂಚಿಕೆಗೆ ಅಗತ್ಯ ಪರವಾನಗಿಗಳನ್ನು ನೀಡಿದೆ. ಜೂನ್ ಮೊದಲ ವಾರದಿಂದ ವ್ಯಾನ್‍ಗಾರ್ಡ್ ಡಯಾಗ್ನಾಸ್ಟಿಕ್ಸ್ ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈ ಸಾಧನದಿಂದ ಕೇವಲ 75 ರೂಪಾಯಿಗಳ ವೆಚ್ಚದಲ್ಲಿ ಕೋವಿಡ್-19 ಪರೀಕ್ಸೆಯನ್ನು ಮಾಡಬಹುದಾಗಿದೆ. ಕೋವಿಡ್-19ರ ನಿರ್ವಹಣೆಗೆ ಈಗಾಗಲೇ ಸ್ಥಳದಲ್ಲೇ ಆಕ್ಸಿಜನ್ ಉತ್ಪಾದನೆ ಮಾಡುವ ಘಟಕ, ಆಕ್ಸಿಜನ್ ಸಾಂದ್ರಕ, 2-ಡಿಜಿ ಔಷಧವನ್ನು ಆವಿಷ್ಕರಿಸಿರುವ ಡಿ.ಆರ್.ಡಿ.ಒ.ದ ಸಮಾಜಮುಖಿ ಕಾರ್ಯಕ್ಕೆ ಮತ್ತೊಂದು ಸೇರ್ಪಡೆ - ‘ಡೈಪ್ಕೋವ್ಯಾನ್’ ತಪಾಸಣಾ ಸಾಧನ.