ಮುಂಬಯಿ: ದೇಶದ ವಾಣಿಜ್ಯ ರಾಜಧಾನಿ ಮುಂಬಯಿಯಲ್ಲಿ ಶನಿವಾರ ತಡರಾತ್ರಿಯಿಂದ ಭಾನುವಾರ ಮುಂಜಾನೆವರೆಗೆ ಕೇವಲ ಆರು ಗಂಟೆಗಳ ಅವಧಿಯಲ್ಲಿ 200 ಮಿ.ಮೀ ಮಳೆ ಸುರಿದಿದ್ದು, ಮಳೆ ಸಂಬಂಧಿ ಅನಾಹುತಗಳಲ್ಲಿ 32 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹವಾಮಾನ ಇಲಾಖೆಯು ನಗರದಲ್ಲಿ 'ರೆಡ್ ಅಲರ್ಟ್' ಘೋಷಿಸಿದ್ದು, ಸೋಮವಾರ ಮುಂಜಾನೆವರೆಗೂ ಇದೇ ಪ್ರಮಾಣದ ಮಳೆಯಾಗುವ ಎಚ್ಚರಿಕೆ ನೀಡಿದೆ.
ಈ ಪೈಕಿ 23 ಮಂದಿ ಕಟ್ಟಡಗಳ ಕೆಳಗೆ ಸಿಲುಕಿ ಮೃತಪಟ್ಟಿದ್ದಾರೆ. ಉಳಿದವರು ವಿದ್ಯುತ್ ಶಾಕ್, ಮರ ಉರುಳಿ ಬಿದ್ದು ಅಸುನೀಗಿದ್ದಾರೆ. ಕಲ್ಯಾಣ್, ಡೊಂಬಿವಿಲಿ, ಬದ್ಲಾಪುರ, ಕಾಂಡಿವಲಿ, ಸಾಂತಾಕ್ರೂಜ್, ಬಾಂದ್ರಾ ಪ್ರದೇಶಗಳಲ್ಲಿಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಕೆಲವಡೆ ರಸ್ತೆ ಪಕ್ಕ ನಿಲ್ಲಿಸಿದ್ದ ವಾಹನಗಳು ಕೊಚ್ಚಿಕೊಂಡು ಹೋಗಿವೆ. ಭಾರತ್‌ನಗರ ಎಂಬಲ್ಲಿ ಗುಡ್ಡದ ಮೇಲಿದ್ದ ಮನೆ ಕುಸಿದು 17 ಜನ ಮೃತಪಟ್ಟರೆ, ವಿಕ್ರೋಲಿಯಲ್ಲಿ ಗುಡಿಸಲು ಕುಸಿದು ಏಳು ಮಂದಿ ಅಸುನೀಗಿದ್ದಾರೆ. ಒಟ್ಟ 11 ಕಡೆ ಗೋಡೆ, ಕಟ್ಟಡ ಕುಸಿತದ ಅನಾಹುತಗಳು ಸಂಭವಿಸಿವೆ.
ಮಳೆಯಿಂದಾಗಿ ಭಾಂಡುಪ್‌ನಲ್ಲಿನ ಕುಡಿಯುವ ನೀರು ಶುದ್ಧೀಕರಣ ಘಟಕಕ್ಕೆ ನೀರು ನುಗ್ಗಿದೆ. ಹೀಗಾಗಿ ನಗರದ ಜನತೆ ಕುದಿಸಿ , ಆರಿಸಿದ ನೀರನ್ನೇ ಕುಡಿಯಬೇಕು ಎಂದು ಬೃಹನ್ಮುಂಬಯಿ ಮಹಾನಗರ ಪಾಲಿಕೆ ಮನವಿ ಮಾಡಿದೆ.
ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ 9 ವಿಮಾನಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಜತೆಗೆ ಅನೇಕ ವಿಮಾನಗಳ ಮಾರ್ಗಗಳನ್ನು ಕೂಡ ಬದಲಾವಣೆ ಮಾಡಲಾಗಿತ್ತು. ರೈಲು ಹಳಿಗಳ ಮೇಲೆ ನೀರು ನಿಂತಿದ್ದರಿಂದ ಕೆಲಕಾಲ ಸ್ಥಳೀಯ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
ಭಾರತೀಯ ಹವಾಮಾನ ಇಲಾಖೆಯು ಮೊದಲು ಮುಂಬಯಿಯಲ್ಲಿ 'ಆರೇಂಜ್ ಅಲರ್ಟ್' (ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿರಬೇಕು) ಘೋಷಿಸಿತ್ತು. ಶನಿವಾರ ತಡರಾತ್ರಿಯಿಂದ ಮಳೆ ಜೋರಾದ ಬಳಿಕ 'ರೆಡ್ ಅಲರ್ಟ್' (ಸ್ಥಳೀಯ ಆಡಳಿತ ತ್ವರಿತ ಕ್ರಮ ಕೈಗೊಳ್ಳಬೇಕು) ಘೋಷಿಸಿತು. ''ನಗರದ ಹವಾಮಾನದಲ್ಲಿ ದಿಢೀರ್ ಬದಲಾವಣೆ ಕಾಣಿಸಿಕೊಂಡಿತು,'' ಎಂದು ಹವಾಮಾನ ಇಲಾಖೆ ತಿಳಿಸಿದೆ.
ಠಾಣೆ, ಪಾಲ್ಘರ್ ಜಲಾವೃತ
ನಗರವಲ್ಲದೆ ಸಮೀಪದ ಠಾಣೆ, ಪಾಲ್ಘರ್ ಜಿಲ್ಲೆಗಳಲ್ಲಿ ಕೂಡ ಭಾರಿ ಪ್ರಮಾಣದಲ್ಲಿ ಮಳೆ ಸುರಿದ ಕಾರಣ ಹಲವು ಪ್ರದೇಶಗಳು ಜಲಾವೃತಗೊಂಡಿದ್ದವು. ಠಾಣೆಯಲ್ಲಿ ಮಹಿಳೆಯೊಬ್ಬರು ಮಳೆ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕೂಡ ವರದಿಯಾಗಿದೆ. ಒಟ್ಟು 18 ಕಡೆಗಳಲ್ಲಿ ಮರಗಳು ರಸ್ತೆಗೆ ಉರುಳಿದ್ದು, ನಾಲ್ಕು ಕಡೆಗಳಲ್ಲಿ ಕಟ್ಟಡ ಕುಸಿದಿದೆ. ಜಾಧವ್ ಪಾಡ ಗ್ರಾಮ ಜಲಾವೃತಗೊಂಡು 80 ಸ್ಥಳೀಯರು ಸಿಲುಕಿದ್ದರು, ಅವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ್ದಾರೆ. ಭಾನುವಾರ ಬೆಳಗ್ಗೆವರೆಗೆ ಠಾಣೆಯಲ್ಲಿ 183.11 ಮಿ.ಮೀ, ಪಾಲ್ಘರ್ ಜಿಲ್ಲೆಯಲ್ಲಿ 116 ಮಿ.ಮೀ ಮತ್ತು ರಾಯಗಢದಲ್ಲಿ 118 ಮಿ.ಮೀ ಮಳೆ ಸುರಿದಿದೆ.
ಆನ್‌ಲೈನ್ ಸಭೆ, 5 ಲಕ್ಷ ಪರಿಹಾರ
ಮಳೆ ಅವಾಂತರದಿಂದ ಭೂಕುಸಿತ ಉಂಟಾದ ಪ್ರದೇಶಗಳಿಗೆ ಭಾನುವಾರ ಬೆಳಗ್ಗೆ ಸಚಿವ ಹಾಗೂ ಸಿಎಂ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಬಳಿಕ ಸಿಎಂ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆದಿದ್ದು, ಭೂಕುಸಿತದಿಂದ ಮೃತಪಟ್ಟವರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ. ಏತನ್ಮಧ್ಯೆ, ಭಾರತೀಯ ಹವಾಮಾನ ಇಲಾಖೆಯು ಸೋಮವಾರ ಸಂಜೆವರೆಗೆ ಮುಂಬಯಿ, ಪುಣೆಯಲ್ಲಿ ಭಾರಿ ಮಳೆಯಾಗುವ ಎಚ್ಚರಿಕೆ ನೀಡಿ ರೆಡ್ ಅಲರ್ಟ್ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಮೃತರ ಕಟುಂಬಗಳಿಗೆ ತಲಾ 2 ಲಕ್ಷ, ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.
204.5 ಮಿ.ಮೀ - ಶನಿವಾರ ರಾತ್ರಿಯಿಂದ ಭಾನುವಾರ ಬೆಳಗ್ಗೆವರೆಗೆ ಮುಂಬಯಿ ನಗರದಲ್ಲಿ ಬಿದ್ದ ಮಳೆ ಪ್ರಮಾಣ
ಪ್ರದೇಶ - ಮಳೆ ಪ್ರಮಾಣ
ಸಾಂತಾಕ್ರೂಜ್ - 213 ಮಿ.ಮೀ
ಬಾಂದ್ರಾ - 197.5 ಮಿ.ಮೀ
ಕೊಲಾಬ - 174 ಮಿ.ಮೀ
ಚೆಂಬೂರು - 218.45 ಮಿ.ಮೀ
ಕಾಂಡಿವಿಲಿ - 206.49 ಮಿ.ಮೀ
944 ಮಿ.ಮೀ - 2005ರ ಜು.26ರಂದು ಮುಂಬಯಿ ನಗರವನ್ನು ಮುಳುಗಿಸಿದ್ದ ಮಹಾಮಳೆಯು ಸುರಿದಿದ್ದ ಪ್ರಮಾಣ (24 ಗಂಟೆಗಳಲ್ಲಿ)