ಮತ್ತೆ 'ಕನಿಷ್ಠ ಬೆಂಬಲ ಬೆಲೆ' ಖಾತರಿಯ ಬೇಡಿಕೆ: ರೈತರಿಗೆ ಎಂಎಸ್‌ಪಿ ಏಕೆ ಅಗತ್ಯ?

ಮೂರು ಕೃಷಿ ಕಾಯಿದೆಗಳನ್ನು ರದ್ದುಪಡಿಸಲು ಕೇಂದ್ರ ಸರಕಾರ ನಿರ್ಧರಿಸಿದ ನಂತರ, ಬೆಳೆಗಳ ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಕೊಟ್ಟು ವಿಸ್ತರಿಸಬೇಕು ಎಂಬ ಬೇಡಿಕೆ ಮುನ್ನೆಲೆಗೆ ಬಂದಿದೆ. ಎಂಎಸ್‌ಪಿ ಬಗ್ಗೆ ಮಾಹಿತಿ ಇಲ್ಲಿದೆ.

ಮತ್ತೆ 'ಕನಿಷ್ಠ ಬೆಂಬಲ ಬೆಲೆ' ಖಾತರಿಯ ಬೇಡಿಕೆ: ರೈತರಿಗೆ ಎಂಎಸ್‌ಪಿ ಏಕೆ ಅಗತ್ಯ?
Linkup
ಹೊಸದಿಲ್ಲಿ: ಮೂರು ಕೃಷಿ ಕಾಯಿದೆಗಳನ್ನು ರದ್ದುಪಡಿಸಲು ಕೇಂದ್ರ ಸರಕಾರ ನಿರ್ಧರಿಸಿದ ನಂತರ, ಬೆಳೆಗಳ ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಕೊಟ್ಟು ವಿಸ್ತರಿಸಬೇಕು ಎಂಬ ಬೇಡಿಕೆ ಮುನ್ನೆಲೆಗೆ ಬಂದಿದೆ. ಎಂಎಸ್‌ಪಿ ಬಗ್ಗೆ ಮಾಹಿತಿ ಇಲ್ಲಿದೆ. ಎಂಎಸ್‌ಪಿಗೆ ಕಾನೂನು ದಿಲ್ಲಿಯ ಗಡಿಭಾಗದಲ್ಲಿ ಸಂಯುಕ್ತ ಕಿಸಾನ್‌ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್‌, ಹರಿಯಾಣದ ರೈತರು ಇದೀಗ ಎಲ್ಲ ಬೆಲೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ವಿಸ್ತರಿಸಬೇಕು ಹಾಗೂ ಕಾನೂನು ರಚಿಸಿ ಕಡ್ಡಾಯಗೊಳಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಹೀಗಿದ್ದರೂ ಬಹಳಷ್ಟು ಮಂದಿ ರೈತರಿಗೆ ಎಂಎಸ್‌ಪಿ ಬಗ್ಗೆ ಅರಿವು ಇಲ್ಲಎನ್ನುತ್ತಿವೆ ಸಮೀಕ್ಷೆಗಳು. ಈಗ ಎಷ್ಟು ಬೆಳೆಗೆ ಎಂಎಸ್‌ಪಿ ಸಿಗುತ್ತದೆ? ಭಾರತದಲ್ಲಿ ಕೃಷಿ ವೆಚ್ಚ ಮತ್ತು ದರ ಆಯೋಗದ (ಸಿಎಸಿಪಿ) ಶಿಫಾರಸಿನ ಮೇರೆಗೆ 23 ಬೆಳೆಗಳಿಗೆ ನೀಡಲಾಗುತ್ತದೆ. 1985ರಿಂದ ಈ ಆಯೋಗ ಅಸ್ತಿತ್ವದಲ್ಲಿದೆ. ಭತ್ತ, ಗೋಧಿ, ಬಾರ್ಲಿ, ಜೋಳ, ರಾಗಿ, ಹೆಸರು ಕಾಳು, ನೆಲಗಡಲೆ, ಉದ್ದು, ಸೂರ್ಯಕಾಂತಿ ಬೀಜ, ಸೋಯಾಬೀನ್‌, ಎಳ್ಳು, ಕೊಬ್ಬರಿ, ಸೆಣಬು ಇತ್ಯಾದಿ ಪ್ರಮುಖ ಬೆಳೆಗಳಿಗೆ ಎಂಎಸ್‌ಪಿ ಇದೆ. ಹೀಗಿದ್ದರೂ ಭತ್ತ ಮತ್ತು ಗೋಧಿಯ ಖರೀದಿ ಇದರಲ್ಲಿ ಹೆಚ್ಚು. ಎಂಎಸ್‌ಪಿ ಏಕೆ ಅಗತ್ಯ? ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನದ ದರ ಕುಸಿದಾಗ ಸರಕಾರ ಕನಿಷ್ಠ ಬೆಂಬಲ ಬೆಲೆಯನ್ನು ನೀಡುವ ಮೂಲಕ ಮಧ್ಯಪ್ರವೇಶಿಸುತ್ತದೆ. ಇದರಿಂದ ರೈತರಿಗೆ ಖಾತರಿಯ ಆದಾಯ ಸಿಗುತ್ತದೆ. ನಿರ್ದಿಷ್ಟ ಬೆಳೆಗಳ ಕೊಯ್ಲಿನ ಸಮಯದಲ್ಲಿ ಕನಿಷ್ಠ ಬೆಂಬಲ ಬೆಲೆಯನ್ನು ಸರಕಾರ ಪ್ರಕಟಿಸುತ್ತದೆ. ನಂತರ ಖರೀದಿ ಕೇಂದ್ರಗಳನ್ನು ಕೂಡ ತೆರೆದು ರೈತರಿಂದ ಬೆಳೆಯನ್ನು ಖರೀದಿಸುತ್ತದೆ. ಉತ್ಪಾದನೆಗೆ ತಗಲುವ ವೆಚ್ಚ, ವೆಚ್ಚದಲ್ಲಾಗುವ ಬದಲಾವಣೆ, ಮಾರುಕಟ್ಟೆ ಟ್ರೆಂಡ್‌, ಬೇಡಿಕೆ ಮತ್ತು ಪೂರೈಕೆ, ಅಂತಾರಾಷ್ಟ್ರೀಯ ದರ ಇತ್ಯಾದಿಗಳನ್ನು ಗಮನಿಸಿ ಎಂಎಸ್‌ಪಿಯನ್ನು ನಿಗದಿಪಡಿಸುತ್ತಾರೆ. ಸಾಮಾನ್ಯವಾಗಿ ಉತ್ಪಾದನಾ ವೆಚ್ಚದ 1.5 ಪಟ್ಟು ಮೊತ್ತವನ್ನು ಕನಿಷ್ಠ ಬೆಂಬಲ ಬೆಲೆಯಾಗಿ ನೀಡುತ್ತಾರೆ. ತಜ್ಞರ ಅಭಿಪ್ರಾಯವೇನು? ಎಲ್ಲ ಬೆಳೆಗಳಿಗೆ ಎಂಎಸ್‌ಪಿಯನ್ನು ಕಡ್ಡಾಯಗೊಳಿಸಿ ಕಾಯಿದೆ ಜಾರಿಗೊಳಿಸಿದರೆ, ಮಾರುಕಟ್ಟೆಯ ಪೂರೈಕೆ-ಬೇಡಿಕೆ ನೀತಿಗೆ ವಿರುದ್ಧವಾಗಲಿದೆ. ಇದರ ಪರಿಣಾಮ ಹಣದುಬ್ಬರ ಹೆಚ್ಚಲಿದೆ ಎಂದು ಬಹುತೇಕ ಅಭಿಪ್ರಾಯಪಡುತ್ತಾರೆ. ಕೆಲ ತಜ್ಞರು ಬೆಂಬಲಿಸಿದ್ದೂ ಇದೆ.