ಭಜರಂಗ ದಳ ಕಾರ್ಯಕರ್ತ ಹರ್ಷ ಹತ್ಯೆಗೆ 'ಹಿಂದುತ್ವ' ಕಾರಣ: ಪ್ರಾಥಮಿಕ ತನಿಖೆ

ಒಟ್ಟು 12 ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು. ಅದರಲ್ಲಿ ಈ ಆರು ಮಂದಿ ಮಾತ್ರ ಆರೋಪಿಗಳು ಎನ್ನುವುದು ಪ್ರಾಥಮಿಕ ಹಂತದ ತನಿಖೆಯಿಂದ ದೃಢಪಟ್ಟಿದೆ. ಖಾಸಿಫ್‌ ಮತ್ತು ಸೈಯ್ಯದ್‌ನನ್ನು ಈಗಾಗಲೇ ನ್ಯಾಯಾಲಯದ ಮುಂದೆ ಹಾಜರುಪಡಿಸಿ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.

ಭಜರಂಗ ದಳ ಕಾರ್ಯಕರ್ತ ಹರ್ಷ ಹತ್ಯೆಗೆ 'ಹಿಂದುತ್ವ' ಕಾರಣ: ಪ್ರಾಥಮಿಕ ತನಿಖೆ
Linkup
ಶಿವಮೊಗ್ಗ/ಬೆಂಗಳೂರು: ಭಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇನ್ನೂ ನಾಲ್ವರು ಆರೋಪಿಗಳನ್ನು ಮಂಗಳವಾರ ಬಂಧಿಸಿದ್ದಾರೆ. ಇದರಿಂದ ಬಂಧಿತರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಹರ್ಷನ ಪ್ರಖರ 'ಹಿಂದುತ್ವ' ಧೋರಣೆ ಸಹಿಸದ ವ್ಯಕ್ತಿಗಳು ಸಂಚು ನಡೆಸಿ ಆತನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎನ್ನುವುದು ಆರಂಭಿಕ ತನಿಖೆಯಲ್ಲಿ ಕಂಡು ಬಂದಿದೆ. ಪ್ರಮುಖ ಆರೋಪಿಗಳಾದ ಮಹಮ್ಮದ್‌ ಖಾಸಿಫ್‌ ಮತ್ತು ಸೈಯ್ಯದ್‌ ನದೀಮ್‌ನನ್ನು ಸೋಮವಾರ ಬಂಧಿಸಲಾಗಿತ್ತು. ಇವರು ನೀಡಿದ ಮಾಹಿತಿಯನ್ನಾಧರಿಸಿ ಕ್ಲಾರ್ಕ್ಪೇಟೆಯ ರಿಹಾನ್‌ ಶರೀಫ್‌ (22), ಆಸಿಫ್‌ವುಲ್ಲಾ ಖಾನ್‌ (22), ಟ್ಯಾಂಕ್‌ ಮೊಹಲ್ಲಾದ ಅಬ್ದುಲ್‌ ಅಫಾನ್‌ (21) ಮತ್ತು ಮುರಾದ್‌ ನಗರ ಶಾದಿ ಮಹಲ್‌ ಬಳಿಯ ನಿಹಾನ್‌ (21) ಎಂಬುವರನ್ನು ಸೆರೆ ಹಿಡಿಯಲಾಗಿದೆ. ಇದರಲ್ಲಿ ಮಹಮ್ಮದ್‌ ಖಾಸಿಫ್‌, ರಿಹಾನ್‌, ಆಸಿಫ್‌ವುಲ್ಲಾಖಾನ್‌ ಮತ್ತು ಅಬ್ದುಲ್‌ ಎಂಬುವರು ಹತ್ಯೆ ಪ್ರಕರಣದಲ್ಲಿ ನೇರವಾಗಿ ಪಾಲ್ಗೊಂಡಿದ್ದಾರೆ. ಸೈಯ್ಯದ್‌ ನದೀಮ್‌ ಮತ್ತು ರಿಹಾನ್‌ ಸಹಕಾರ ನೀಡಿದ್ದರೆಂಬುದು ದೃಢಪಟ್ಟಿದೆ ಎಂದು ಎಸ್ಪಿ ಲಕ್ಷ್ಮಿ ಪ್ರಸಾದ್‌ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ''ಒಟ್ಟು 12 ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು. ಅದರಲ್ಲಿ ಈ ಆರು ಮಂದಿ ಮಾತ್ರ ಆರೋಪಿಗಳು ಎನ್ನುವುದು ಪ್ರಾಥಮಿಕ ಹಂತದ ತನಿಖೆಯಿಂದ ದೃಢಪಟ್ಟಿದೆ. ಖಾಸಿಫ್‌ ಮತ್ತು ಸೈಯ್ಯದ್‌ನನ್ನು ಈಗಾಗಲೇ ನ್ಯಾಯಾಲಯದ ಮುಂದೆ ಹಾಜರುಪಡಿಸಿ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಅರೋಪಿಗಳ ಪೈಕಿ ಐವರ ಮೇಲೆ ಈ ಮೊದಲೇ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳಿವೆ. ಮಹಮ್ಮದ್‌ ಖಾಸಿಫ್‌ ಎಂಬಾತನೇ ಕೊಲೆಯ ಮುಖ್ಯ ರೂವಾರಿ. ಈತನ ನಿರ್ಧಾರ ಮತ್ತು ಯೋಜನೆಯಿಂದ ಈ ಕೊಲೆ ನಡೆದಿರುವುದು ದೃಢಪಟ್ಟಿದೆ'' ಎಂದು ಅವರು ಹೇಳಿದರು. 82 ವಾಹನಗಳಿಗೆ ಹಾನಿ ನಗರದಲ್ಲಿ ನಡೆದ ಎರಡು ದಿನಗಳ ಗಲಭೆ-ದೊಂಬಿಗೆ ಸಂಬಂಧಿಸಿದಂತೆ ಈವರೆಗೆ 19 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. 18 ವಾಹನಗಳು ಸುಟ್ಟ ಬಗ್ಗೆ ದೂರುಗಳು ಬಂದಿವೆ. ಆದರೆ ಒಟ್ಟಾರೆ ಎಷ್ಟು ವಾಹನಗಳು ಸುಟ್ಟಿವೆ ಎಂಬುದು ಇನ್ನೂ ಖಚಿತವಾಗಿಲ್ಲ. ಕಲ್ಲು ತೂರಾಟದಲ್ಲಿ 8 ಜನರು ಗಾಯಗೊಂಡಿದ್ದಾರೆ. ಇದರಲ್ಲಿಎರಡೂ ಕೋಮಿನವರೂ ಇದ್ದಾರೆ. ನಾಲ್ವರು ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಗಳ ಗಾಜು ಒಡೆದ ಬಗ್ಗೆ 4 ದೂರುಗಳು ಬಂದಿವೆ. ಆದರೆ ಭಾನುವಾರ ರಾತ್ರಿಯಿಂದ ಮಂಗಳವಾರದ ತನಕ ಗಲಭೆಯಲ್ಲಿಒಟ್ಟಾರೆ 82 ವಾಹನಗಳು ಹಾನಿಗೊಳಗಾಗಿವೆ. ಉದ್ವಿಗ್ನಗೊಂಡಿದ್ದ ಶಿವಮೊಗ್ಗ ನಗರದ ಬಹುತೇಕ ಭಾಗದಲ್ಲಿ ಮಂಗಳವಾರ ಶಾಂತಿ ನೆಲೆಸಿತ್ತು. ಸೂಕ್ಷ್ಮ ಪ್ರ ದೇಶಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಫೇಸ್‌ಬುಕ್‌ನಲ್ಲಿ ಬೆದರಿಕೆ 2015ರಲ್ಲಿ'ಮಂಗಳೂರು ಮುಸ್ಲಿಮ್‌ ಹೆಸರಿನ ಫೇಸ್‌ಬುಕ್‌ ಖಾತೆಯೊಂದರಲ್ಲಿ ಹರ್ಷನ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಕೊಲೆಯಾದ ನಂತರವೂ ಇಂತಹದ್ದೇ ಪ್ರಚೋದನಕಾರಿ ಪೋಸ್ಟ್‌ ವೈರಲ್‌ ಆಗಿದೆ. ಹೀಗಾಗಿ ಹತ್ಯೆಯ ಹಿಂದೆ ಪ್ರಬಲ ಮತೀಯ ಕಾರಣಗಳಿರುವುದು ಬಹುತೇಕ ಸ್ಪಷ್ಟವಾಗಿದೆ. ಹರ್ಷ ಕಳೆದ ಐದು ವರ್ಷಗಳಿಂದ ಬಜರಂಗದಳ ಕಾರ್ಯಕರ್ತನಾಗಿ ಹಿಂದುತ್ವ, ಗೋರಕ್ಷಣೆಯಲ್ಲಿಮುಂಚೂಣಿಯಲ್ಲಿದ್ದ. ಆತನಿಗೆ ಕೊಲೆ ಬೆದರಿಕೆ ಕೂಡ ಬಂದಿತ್ತು. ನಾಲ್ಕು ತಂಡಗಳಿಂದ ತನಿಖೆ ಕೊಲೆ ಪ್ರಕರಣದ ಜಾಡು ಹಿಡಿದು ಪೊಲೀಸರು ಬೆಂಗಳೂರಿನಲ್ಲೂ ಹುಡುಕಾಟ ನಡೆಸಿದ್ದಾರೆ. ತನಿಖೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ಯಶವಂತಪುರ ರೈಲ್ವೆ ನಿಲ್ದಾಣದಿಂದ ಶಿವಮೊಗ್ಗಕ್ಕೆ ದುಷ್ಕರ್ಮಿ ಗಳು ಬಂದಿರುವ ಬಗ್ಗೆಯೂ ಮಾಹಿತಿ ಸಿಕ್ಕಿದೆ. ಕೊಲೆಗೆ ವಾರದ ಮುನ್ನವೇ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ. ರಾಜ್ಯಾದ್ಯಂತ ಪ್ರತಿಭಟನೆ ಹಿಂದೂ ಸಂಘಟನೆಯ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣವನ್ನು ಸಿಬಿಐ ವಹಿಸಬೇಕು ಮತ್ತು ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಹಿಂದೂ ಪರ ಸಂಘಟನೆಗಳು ಮಂಗಳವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿವೆ. ಹಲವೆಡೆ ಬಂದ್‌ ಮಾಡಲಾಗಿತ್ತು.