ಬಿಜೆಪಿ ಸಮೀಪ ಶಿವಸೇನೆ?: ಮಹಾರಾಷ್ಟ್ರದ ರಾಜಕೀಯ ಚದುರಂಗದಾಟ ಬಲ್ಲವರ ಗುಮಾನಿ ಏನು?

ಮಹಾರಾಷ್ಟ್ರದಲ್ಲಿ ಮತ್ತೆ ಶಿವಸೇನೆ ಹಾಗೂ ಬಿಜೆಪಿ ನಡುವೆ ಮೈತ್ರಿ ಏರ್ಪಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಮೇಲ್ನೊಟಕ್ಕೆ ವಿಕಾಸ್ ಅಘಾಡಿ ಮೈತ್ರಿ ಪಕ್ಷಗಳು ಈ ಸಾಧ್ಯತೆಯನ್ನು ತಳ್ಳಿ ಹಾಕುತ್ತಿವೆ. ಆದರೆ ಮಹಾರಾಷ್ಟ್ರದ ರಾಜಕೀಯ ಚದುರಂಗದಾಟದಲ್ಲಿ ಏನು ಬೇಕಾದರೂ ಬದಲಾಗಬಹುದು ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.

ಬಿಜೆಪಿ ಸಮೀಪ ಶಿವಸೇನೆ?: ಮಹಾರಾಷ್ಟ್ರದ ರಾಜಕೀಯ ಚದುರಂಗದಾಟ ಬಲ್ಲವರ ಗುಮಾನಿ ಏನು?
Linkup
ಮುಂಬಯಿ: ಮಹಾರಾಷ್ಟ್ರದಲ್ಲಿ ಬಿಜೆಪಿಯಿಂದ ದೂರವಾಗಿದ್ದ ಶಿವಸೇನೆ ಇದೀಗ ಮತ್ತೆ ತನ್ನ ಹಳೆಯ ಗೆಳೆತನಕ್ಕೆ ಮನ್ನಣೆ ನೀಡುವ ಲಕ್ಷಣ ಗೋಚರವಾಗುತ್ತಿದೆ. ಅದರಲ್ಲೂ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಬಳಿಕ ಈ ಸಾಧ್ಯತೆ ಮತ್ತಷ್ಟು ದಟ್ಟವಾದಂತೆ ಭಾಸವಾಗುತ್ತಿದೆ. ಹೌದು, ಮಹಾರಾಷ್ಟ್ರದ ಶಿವಸೇನೆ, ಮೈತ್ರಿ ಸರ್ಕಾರದಲ್ಲಿ ಬಿರುಕು ಮೂಡುವ ಲಕ್ಷಣಗಳು ಗೋಚರವಾಗುತ್ತಿವೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂಬ ಎಂಪಿಸಿಸಿ ಅಧ್ಯಕ್ಷ ನಾನಾ ಪಟೋಲೆ ಹೇಳಿಕೆಗೆ, ಉದ್ಧವ್ ಠಾಕ್ರೆ ಗರಂ ಆಗಿರುವುದು ಈ ವಾದಕ್ಕೆ ಪುಷ್ಠಿ ನೀಡುತ್ತಿದೆ. ಆದರೆ ಮೇಲ್ನೋಟಕ್ಕೆ ಮೂರೂ ಮೈತ್ರಿ ಪಕ್ಷಗಳು ತಮ್ಮ ನಡುವೆ ಬಿರುಕು ಇದೆ ಎಂಬುದನ್ನು ಒಪ್ಪಿಕೊಳ್ಳುತ್ತಿಲ್ಲ. ಅಲ್ಲದೇ ವಿಕಾಸ್ ಅಘಾಡಿ ಸರ್ಕಾರ ಐದು ವರ್ಷ ಪೂರೈಸಲಿದೆ ಎಂದೇ ಭರವಸೆ ಕೊಡುತ್ತಿದ್ದಾರೆ. ಆದರೆ ಮೈತ್ರಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯ ಆಗಾಗ ಸ್ಪೋಟಗೊಳ್ಳುತ್ತಲೇ ಇದೆ. ಈ ಕುರಿತು ಮಾತನಾಡಿರುವ ಶಿವಸೇನೆ ನಾಯಕ ಸಂಜಯ್ ರಾವತ್, ಮೈತ್ರಿ ಸರ್ಕಾರ ಐದು ವರ್ಷಗಳ ಆಡಳಿತ ಪೂರೈಸಲು ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿರುವ ಕೆಲವರು ನಮ್ಮ ನಡುವೆ ಬಿರುಕು ಸೃಷ್ಟಿಸಲು ಪ್ರಯತ್ನಿಸಬಹುದು ಎಂದು ಬಿಜೆಪಿ ಹೆಸರು ಹೇಳದೇ ಸಂಜಯ್ ರಾವತ್ ಹರಿಹಾಯ್ದಿದ್ದಾರೆ. ಅಂದರೆ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಸಂಜಯ್ ರಾವತ್ ಪರೋಕ್ಷವಾಗಿ ಆರೋಪ ಮಾಡುತ್ತಿದ್ದಾರೆ. ಅದೆನೆ ಇದ್ದರೂ ಮಹಾರಾಷ್ಟ್ರದ ರಾಜಕೀಯ ಚದುರಂಗದಾಟ ಬಲ್ಲವರ ಪ್ರಕಾರ, ಶಿವಸೇನೆ ಮತ್ತೆ ಬಿಜೆಪಿಯೊಂದಿಗೆ ಕೈಜೋಡಿಸಿದರೆ ಅಚ್ಚರಿಯಿಲ್ಲ. ಕಾಂಗ್ರೆಸ್-ಎನ್‌ಸಿಪಿ ನಡುವೆ ಸಿಕ್ಕು ಒದ್ಧಾಡುವ ಬದಲು ಬಿಜೆಪಿ ಜೊತೆ ಸಖ್ಯ ಬೆಳೆಸಿ ಮತ್ತೆ ಹಳೆಯ ಹಿಂದುತ್ವದ ಅಜೆಂಡಾ ಹೊತ್ತು ಮುನ್ನಡೆಯಲು ಶಿವಸೇನೆ ತಯಾರಾದರೆ ಅಚ್ಚರಿಯಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.