ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡ ಅಧ್ಯಯನ ಪೀಠ ನಿರ್ಮಾಣಕ್ಕೆ ಇನ್ನೆಷ್ಟು ವರ್ಷ ಬೇಕು..?

2021ರ ಜೂನ್‌ನಲ್ಲಿ ಕೆಂಪೇಗೌಡರ 511ನೇ ಜನ್ಮ ದಿನಾಚರಣೆ ವೇಳೆ ಸ್ವತಃ ಆಗಿನ ಮುಖ್ಯಮಂತ್ರಿಗಳಾಗಿದ್ದ ಬಿ. ಎಸ್‌. ಯಡಿಯೂರಪ್ಪ ಕಾಮಗಾರಿಗೆ ಚಾಲನೆ ನೀಡಿದರು. ಆದರೆ ಈವರೆಗೂ ಯಾವುದೇ ಕಾಮಗಾರಿ ನಡೆಯಲಿಲ್ಲ.

ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡ ಅಧ್ಯಯನ ಪೀಠ ನಿರ್ಮಾಣಕ್ಕೆ ಇನ್ನೆಷ್ಟು ವರ್ಷ ಬೇಕು..?
Linkup
: ನಿರ್ಮಾತೃ ನಾಡ ಪ್ರಭು ಕೆಂಪೇಗೌಡರನ್ನು ಸಮುದಾಯ, ಸರಕಾರ, ಎಲ್ಲರೂ ಮರೆತಿದ್ದಾರೆ. ಇದಕ್ಕೆ ಉತ್ತಮ ನಿದರ್ಶನವೆಂದರೆ, ಬೆಂಗಳೂರು ವಿವಿಯ ಜ್ಞಾನ ಭಾರತಿ ಆವರಣದಲ್ಲಿ ಭೂಮಿ ಪೂಜೆ ನಡೆದು ನಾಲ್ಕು ವರ್ಷ ಕಳೆದರೂ ಕಾಮಗಾರಿ ಆರಂಭಗೊಳ್ಳದೆ ನಿರ್ಲಕ್ಷ್ಯಕ್ಕೆ ಒಳಗಾಗಿರುವ ನಾಡ ಪ್ರಭು ಅಧ್ಯಯನ ಪೀಠ ಮತ್ತು ಸಂಶೋಧನಾ ಕೇಂದ್ರವೇ ಸಾಕ್ಷಿ. ಮೂರು ಎಕರೆ ಪ್ರದೇಶದಲ್ಲಿ ಅಂದಾಜು 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ಸಂಬಂಧ 2017ರ ಸೆಪ್ಟೆಂಬರ್‌ ತಿಂಗಳಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಭೂಮಿ ಪೂಜೆ ನೆರವೇರಿಸಿದರು. ಕಾಮಗಾರಿ ಸಂಬಂಧ ಟೆಂಡರ್‌ ಪ್ರಕ್ರಿಯೆ ಕೂಡ ಮುಗಿದಿದ್ದು, ಯೋಜನೆ ರೂಪಿಸಲಾಗಿದೆ. ಕಾರ್ಯಾದೇಶ ಕೂಡ ನೀಡಲಾಗಿದೆ. ಆದರೆ ಹಣ ಮಾತ್ರ ಬಿಡುಗಡೆಯಾಗಲಿಲ್ಲ. ಕೆಲಸಗಳೂ ನಡೆಯಲಿಲ್ಲ. ಇದಾದ ಬಳಿಕ ಮತ್ತೊಮ್ಮೆ ಅಂದರೆ 2021ರ ಜೂನ್‌ನಲ್ಲಿ ಕೆಂಪೇಗೌಡರ 511ನೇ ಜನ್ಮ ದಿನಾಚರಣೆ ವೇಳೆ ಸ್ವತಃ ಆಗಿನ ಮುಖ್ಯಮಂತ್ರಿಗಳಾಗಿದ್ದ ಬಿ. ಎಸ್‌. ಯಡಿಯೂರಪ್ಪ ಕಾಮಗಾರಿಗೆ ಚಾಲನೆ ನೀಡಿದರು. ಆದರೆ ಈವರೆಗೂ ಯಾವುದೇ ಕಾಮಗಾರಿ ನಡೆಯಲಿಲ್ಲ. ವಿಪರ್ಯಾಸವೆಂದರೆ ಇದೇ ಸಮಯದಲ್ಲಿ ಭೂಮಿ ಪೂಜೆ ನೆರವೇರಿಸಿದ (ಅಂಬೇಡ್ಕರ್‌ ಎಕನಾಮಿಕ್ಸ್‌ ಸ್ಕೂಲ್‌ ಆಫ್‌ ಯೂನಿವರ್ಸಿಟಿ, ಈಶಾನ್ಯ ರಾಜ್ಯಗಳ ವಿದ್ಯಾರ್ಥಿ ನಿಲಯ, ಅಂಬೇಡ್ಕರ್‌ ಅಧ್ಯಯನ ಪೀಠ ಅಭಿವೃದ್ಧಿ ಮಾಡಲಾಗಿದೆ) ನಾನಾ ಭವನಗಳು, ಕಟ್ಟಡಗಳು, ಕೇಂದ್ರಗಳು ಈಗಾಗಲೇ ಲೋಕಾರ್ಪಣೆಗೊಂಡಿವೆ. ಹೀಗಿರುವಾಗ ಸರಕಾರಕ್ಕೆ, ಬಿಬಿಎಂಪಿಗೆ ಕೆಂಪೇಗೌಡರ ಮೇಲೇಕೆ ಈ ಪರಿಯ ಸಿಟ್ಟು ಎಂದು ಕೆಂಪೇಗೌಡರ ಅಭಿಮಾನಿ ವರ್ಗ ಪ್ರಶ್ನಿಸಿದೆ. ಭೂಮಿ ಪೂಜೆ ಮಾಡಿ ನಾಲ್ಕು ವರ್ಷ ಕಳೆದರೂ ಬಿಬಿಎಂಪಿ ಆಯುಕ್ತರಿಗೆ ಇಚ್ಛಾ ಶಕ್ತಿ ಕೊರತೆಯಿಂದ ಈ ಕಾರ್ಯ ವಿಳಂಬವಾಗಿದೆ ಎಂದು ಕೆಲವರು ಆರೋಪಿಸಿದರೆ, ಮತ್ತೆ ಕೆಲವರು ವಿವಿ ಅಧಿಕಾರಿಗಳ ಕಿತ್ತಾಟ ಕೂಡ ವಿಳಂಬ ಧೋರಣೆಗೆ ಕಾರಣವಾಗಿದೆ ಎನ್ನುತ್ತಿದ್ದಾರೆ. ಸರಕಾರ ಕೂಡ ದರ ಬಗ್ಗೆ ಕಾಳಜಿ ತೋರುತ್ತಿಲ್ಲ. ಇದಕ್ಕೆ ಕೇಂದ್ರ ಸ್ಥಾಪನೆಗೆ ವಿಶೇಷ ಆಸಕ್ತಿ ತೋರಿದ ಕಾಂಗ್ರೆಸ್‌ನ ಡಿ. ಕೆ. ಶಿವಕುಮಾರ್‌, ಬಿಜೆಪಿಯ ಮುಖಂಡರೂ, ಸಚಿವರೂ ಆಗಿರುವ ಡಾ. ಸಿ. ಎನ್‌. ಅಶ್ವತ್ಥ ನಾರಾಯಣ, ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕರೂ, ಸಚಿವರೂ ಆಗಿರುವ ಮುನಿರತ್ನ ಹೀಗೆ ಹಲವರು ಬಿಬಿಎಂಪಿಗಾಗಲಿ, ಸರಕಾರಕ್ಕಾಗಲಿ ಒತ್ತಡ ಹೇರುತ್ತಿಲ್ಲ ಎನ್ನುತ್ತಿದ್ದಾರೆ. ವಾಹನವಿಲ್ಲದೆ ಕ್ಷೇತ್ರ ಕಾರ್ಯವೂ ಇಲ್ಲ ಇದೀಗ ಅಧ್ಯಯನ ಕೇಂದ್ರಕ್ಕೆ ವಾಹನದ ವ್ಯವಸ್ಥೆಯೂ ಇಲ್ಲದ ಪರಿಣಾಮ ಕೆಂಪೇಗೌಡ ಅಧ್ಯಯನಕ್ಕೆ ಬೇಕಾದ ಶಾಸನಗಳ ಸಂಗ್ರಹ ಸೇರಿದಂತೆ ಯಾವುದೇ ಕ್ಷೇತ್ರ ಕಾರ್ಯಗಳೂ ನಡೆಯುತ್ತಿಲ್ಲ. ಇದರಿಂದಾಗಿ ಸಂಶೋಧನಾ ಪರಿಕರಗಳು, ಶಾಸನಗಳು ಕೈ ತಪ್ಪುವ ಸಾಧ್ಯತೆ ಹೆಚ್ಚಾಗಿದೆ. ಕೇಂದ್ರದಲ್ಲಿ ಏನೇನು ವಿಶೇಷತೆಗಳಿರುತ್ತವೆ ಬೃಹತ್‌ ಕಟ್ಟಡದಲ್ಲಿ ದೊಡ್ಡ ಸಭಾಂಗಣ, ಸುಸಜ್ಜಿತ ಮ್ಯೂಸಿಯಂ, ಗ್ರಂಥಾಲಯ, 20 ಅಡಿ ಎತ್ತರದ ಅಶ್ವಾರೂಢ ಪ್ರತಿಮೆ, ತರಗತಿಗಳ ಕೊಠಡಿಗಳು, ಸಂಶೋಧನಾ ಕೊಠಡಿಗಳು ಹೀಗೆ ನಾನಾ ಕಟ್ಟಡಗಳು ಬರಲಿವೆ. ವೀರಗಲ್ಲು, ಮಾಸ್ತಿಗಲ್ಲು ಸೇರಿದಂತೆ ನಾನಾ ರಾಜ್ಯಗಳಲ್ಲಿರುವ ಶಾಸನಗಳ ಸಂಗ್ರಹದ ಮ್ಯೂಸಿಯಂ ಕೂಡ ಇಲ್ಲಿ ತಲೆ ಎತ್ತಲಿದೆ. ಒಪ್ಪಂದ ನಡೆದಿದೆ ಕೆಂಪೇಗೌಡ ಅಧ್ಯಯನ ಪೀಠಕ್ಕೆ 2017-18ನೇ ಸಾಲಿನ ಪಾಲಿಕೆ ಬಜೆಟ್‌ನಲ್ಲಿ 50 ಕೋಟಿ ಅನುದಾನ ಘೋಷಣೆಯಾಯಿತು. ಕಾಮಗಾರಿಯ ಡಿಪಿಆರ್‌ ಮತ್ತು ಅಂದಾಜುಪಟ್ಟಿ ತಯಾರಿಗೆ 2017ರ ಅಕ್ಟೋಬರ್‌ನಲ್ಲಿ ಕಾರ್ಯಾದೇಶವಾಯಿತು. ಪೀಠ ಸ್ಥಾಪನೆ ಬಗ್ಗೆ ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ ಮತ್ತು ಬಿಬಿಎಂಪಿ ನಡುವೆ ಒಪ್ಪಂದವೂ ನಡೆದಿದೆ. ಇಷ್ಟೆಲ್ಲಾ ಆದರೂ ಕೂಡ ಕಾಮಗಾರಿ ವಿಳಂಬ ಯಾರಿಂದ? ಯಾಕೆ ನಡೆಯುತ್ತಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ ಎನ್ನುತ್ತಾರೆ ವಿವಿ ಸಿಬ್ಬಂದಿ.