ಬೆಂಗಳೂರು: ಕೊರೊನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಆರಂಭವಾಗಿರುವ ನೈಟ್ ಕರ್ಫ್ಯೂನ ಮೊದಲ ದಿನವಾದ ಶನಿವಾರ ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ಕಟ್ಟುನಿಟ್ಟಿನ ಜಾರಿ ಮಾಡಲಾಗಿತ್ತು.
ಪ್ರಮುಖ ರಸ್ತೆ, ಜಂಕ್ಷನ್‌ಗಳಲ್ಲಿ ಹಾಕಿದ್ದ ಪೊಲೀಸರು, ವಾಹನ ಸವಾರರನ್ನು ತಡೆದು ತಪಾಸಣೆ ನಡೆಸಿದರು. ನಗರದ ಎಲ್ಲ ಫ್ಲೈಓವರ್‌ಗಳನ್ನು ಕೂಡ ಬ್ಯಾರಿಕೇಡ್ ಹಾಕಿ ಸಂಚಾರ ಪೊಲೀಸರು ಬಂದ್ ಮಾಡಿದ್ದರು. ವಿಭಜಕ ಇರುವ ಪ್ರಮುಖ ರಸ್ತೆಗಳಲ್ಲಿ ಒಂದು ಬದಿ ವಾಹನ ಸಂಚಾರಕ್ಕೆ ಬಿಟ್ಟು, ಮತ್ತೊಂದು ಬದಿ ರಸ್ತೆ ಬಂದ್ ಮಾಡಲಾಗಿತ್ತು.
ಕಾರು, ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವವರ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸಿ ಗುರುತಿನ ಚೀಟಿಗಳನ್ನು ಪರಿಶೀಲಿಸಿದರು. ಆಟೋ, ಟ್ಯಾಕ್ಸಿ, ಕ್ಯಾಬ್ ಸಂಚಾರಕ್ಕೆ ಅವಕಾಶ ಇತ್ತು. ಆದರೂ, ವಾಹನಗಳ ಸಂಚಾರ ವಿರಳವಾಗಿತ್ತು.
ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ 8 ಗಂಟೆ ನಂತರ ನಗರದಲ್ಲಿ ವಾಹನಗಳ ಸಂಚಾರ ಹೆಚ್ಚಾಗಿತ್ತು. ನಿಗಿದಿತ ಅವಧಿಯೊಳಗೆ ಮನೆ ತಲುಪಲು ಜನ ಧಾವಿಸುತ್ತಿದ್ದರು. 9 ಗಂಟೆ ಹೊತ್ತಿಗೆ ಹೊಟೇಲ್, ಬಾರ್, ರಸ್ಟೋರೆಂಟ್, ವಾಣಿಜ್ಯ ಮಳಿಗೆಗಳು ಬಂದ್ ಆಗುತ್ತಿದ್ದವು. ಅಗತ್ಯ ವಸ್ತುಗಳ ಕಿರಾಣಿ ಮಳಿಗೆಗಳು ಕೂಡ ಬಂದ್ ಆದವು. ಮೆಡಿಕಲ್ ಶಾಪ್, ಆಸ್ಪತ್ರೆ, ಕ್ಲಿನಿಕ್‌ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದವು.
''ಬಸ್, ರೈಲು, ವಿಮಾನ ಪ್ರಯಾಣ ಮಾಡುವವರು, ಕ್ಯಾಬ್‌ಗಳು, ಓಲಾ, ಊಬರ್ ಸಂಚಾರಕ್ಕೆ ಅನುಮತಿ ಇದೆ. ಹಣ್ಣು, ತರಕಾರಿ, ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳ ಸಂಚಾರಕ್ಕೆ ಅವಕಾಶ ಇದೆ. ಖಾಲಿ ವಾಹನಗಳು ಸಂಚರಿಸುವುದಕ್ಕೂ ಅವಕಾಶ ನೀಡಲಾಗಿದೆ. ಪರಿಶೀಲನೆ ವೇಳೆ ತಮ್ಮ ಬಳಿ ಇರುವ ಪ್ರಯಾಣ ದಾಖಲೆಗಳನ್ನು ಹಾಜರುಪಡಿಸಬೇಕು. ಫುಡ್ ಹೋಂ ಡೆಲಿವರಿ, ಇ ಕಾಮರ್ಸ್ ವಾಹನಗಳ ಓಡಾಟಕ್ಕೆ ಅವಕಾಶ ಇದೆ. ಆದರೆ, ಅಂಥವರಿಗೆ ಕೆಲಸದ ನಿಮಿತ್ತ ಮಾತ್ರ ಓಡಾಟಕ್ಕೆ ಅವಕಾಶ ಇರುತ್ತದೆ. ಕೆಲಸವಿಲ್ಲದೇ ಇದ್ದರೆ 10 ಗಂಟೆಯೊಳಗೆ ಮನೆ ಸೇರಬೇಕು'' ಎಂದು ಆಯುಕ್ತರು ತಿಳಿಸಿದ್ದರು. ಹೀಗಾಗಿ, ಅಗತ್ಯ ವಸ್ತುಗಳ ವಾಹನ ಸಂಚಾರಕ್ಕೆ ಯಾವುದೇ ಅಡ್ಡಿ ಉಂಟಾಗಲಿಲ್ಲ.
ಕೇಸ್ ದಾಖಲು, ವಾಹನಗಳು ಜಪ್ತಿ ಎಚ್ಚರಿಕೆ
ಕೋವಿಡ್ ನಿಯಮ ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣೆ, ಕೋವಿಡ್ ಕಾಯಿದೆ ಅನುಸಾರ ಕೇಸ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಸುರಕ್ಷತೆಯ ದೃಷ್ಟಿಯಿಂದ ನಾಗರಿಕರು ಅನಗತ್ಯವಾಗಿ ಓಡಾಡಬಾರದು ಎಂಬ ಪೊಲೀಸ್ ಆಯುಕ್ತರ ಎಚ್ಚರಿಕೆಯ ಹಿನ್ನೆಲೆಯಲ್ಲಿ ವಾಹನಗಳ ಸಂಖ್ಯೆ ವಿರಳವಾಗಿತ್ತು.
ಮದ್ಯದ ಅಂಗಡಿಗಳ ಬಳಿ ರಷ್
ಶನಿವಾರ ವಾರಾಂತ್ಯದ ಕಾರಣ ಪಾರ್ಟಿ ಮಾಡುವವರು ಮದ್ಯದ ಅಂಗಡಿ, ಹೋಟೆಲ್‌ಗಳಲ್ಲಿ ಮುಗಿಬಿದ್ದರು. ಮನೆಗಳಿಗೆ ಪಾರ್ಸೆಲ್ ತೆಗೆದುಕೊಂಡು ಹೋಗುತ್ತಿರುವುದು ಕಂಡು ಬಂತು. ನಗರದ ಹಲವು ಮದ್ಯದ ಅಂಗಡಿಗಳ ಎದುರು ದಟ್ಟಣೆ ಕಂಡು ಬಂತು.
- ತುರ್ತು ಪರಿಸ್ಥಿತಿಗೆ ಓಡಾಡಲು ಅವಕಾಶ ಇದೆ.
- ಅನಗತ್ಯವಾಗಿ ಓಡಾಡಿದರೆ ವಾಹನ ಜಪ್ತಿ
- ಪ್ರಯಾಣಿಸುವವರು ಟಿಕೆಟ್ ಹೊಂದಿರಬೇಕು
- ಆಸ್ಪತ್ರೆಗೆ ಹೋಗುವರು ಆಸ್ಪತ್ರೆಗೆ ಸಂಬಂಧಿಸಿದ ಚೀಟಿ ಹೊಂದಿರಬೇಕು
ಅನಗತ್ಯವಾಗಿ ಓಡಾಡುವವರ ವಾಹನಗಳನ್ನು ಅಗತ್ಯತೆ ಅನುಸಾರ ಜಪ್ತಿ ಮಾಡಲಾಗುತ್ತದೆ. ರಾತ್ರಿ ಓಡಾಡುವವರಿಗೆ ಪಾಸ್ ಇರುವುದಿಲ್ಲ. ಆದರೆ, ತಮ್ಮ ಗುರುತಿನ ಚೀಟಿ, ಪ್ರಯಾಣ ದಾಖಲೆ ತೋರಿಸಬೇಕು.
ಕಮಲ್ ಪಂತ್. ಪೊಲೀಸ್ ಆಯುಕ್ತ
ಪಶ್ಚಿಮ ವಿಭಾಗದಲ್ಲಿ 53 ಕಡೆ ಬ್ಯಾರಿಕೇಡ್, ಚೆಕ್‌ಪಾಯಿಂಟ್‌ಪಶ್ಚಿಮ ವಿಭಾಗದಲ್ಲಿ ವಿಭಜಕ ಇರುವ 16 ರಸ್ತೆಗಳಲ್ಲಿ ಒಂದು ಬದಿ ಬಂದ್ ಮಾಡಲಾಗಿತ್ತು. 19 ಪ್ರಮುಖ ರಸ್ತೆಗಳು ಮತ್ತು ಒಳಭಾಗದ 26 ರಸ್ತೆಗಳನ್ನು ಬಂದ್ ಮಾಡಲಾಗಿತ್ತು. ಒಟ್ಟು 51 ಕಡೆ ಬ್ಯಾರಿಕೇಡ್ ಪಾಯಿಂಟ್ ಮತ್ತು 2 ಕಡೆ ಚೆಕ್ ಪಾಯಿಂಟ್ ಮಾಡಿ ತಾಪಸಣೆ ನಡೆಸಲಾಯಿತು.