ನಾಗಪ್ಪ ನಾಗನಾಯಕನಹಳ್ಳಿ,
ರಾಜಧಾನಿಯ ಎರಡನೇ ಅತಿದೊಡ್ಡ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಹಿಡಿದಿದ್ದ ಗ್ರಹಣ ಬಿಡಲೇ ಇಲ್ಲ. ಹೀಗಾಗಿ, ಕೋರಮಂಗಲ 100 ಅಡಿ ಮುಖ್ಯರಸ್ತೆಯಲ್ಲಿನ ಈಜಿಪುರ ಮುಖ್ಯರಸ್ತೆ-ಒಳವರ್ತುಲ ರಸ್ತೆ ಜಂಕ್ಷನ್‌ನಿಂದ ಕೇಂದ್ರೀಯ ಸದನ ಜಂಕ್ಷನ್‌ವರೆಗೆ ಕೈಗೊಂಡಿದ್ದ 2.5 ಕಿ.ಮೀ. ಉದ್ದದ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯ ಗುತ್ತಿಗೆಯನ್ನು ರದ್ದುಪಡಿಸಿ ಸರಕಾರ ಆದೇಶ ಹೊರಡಿಸಿದೆ.
ಕೋರಮಂಗಲ 100 ಅಡಿ ಮುಖ್ಯರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಮೇಲ್ಸೇತುವೆ ನಿರ್ಮಾಣ ಕಾಮಗಾರಿಯ ಗುತ್ತಿಗೆಯನ್ನು ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಕಂಪೆನಿಗೆ ನೀಡಲಾಗಿತ್ತು. ಕಾರ್ಯಾದೇಶದನ್ವಯ 2017ರ ಮೇ 4ರಂದು ಆರಂಭವಾದ ಕಾಮಗಾರಿಯು 2019ರ ನ. 4ಕ್ಕೆ ಪೂರ್ಣಗೊಳ್ಳಬೇಕಿತ್ತು. ಆದರೆ, ಕಾಮಗಾರಿ ಶುರುವಾಗಿ 4 ವರ್ಷ 9 ತಿಂಗಳು ಕಳೆದರೂ ಅರ್ಧದಷ್ಟು ಸಹ ಕೆಲಸ ಆಗಿಲ್ಲ. ಹೀಗಾಗಿ, ಸಿಂಪ್ಲೆಕ್ಸ್ ಕಂಪೆನಿಗೆ ನೀಡಿದ್ದ ಟೆಂಡರ್ ರದ್ದುಪಡಿಸಿ ನಗರಾಭಿವೃದ್ಧಿ ಇಲಾಖೆಯು ಮಾ. 3ರಂದು ಆದೇಶಿಸಿದೆ.
ಕಾಮಗಾರಿ ಪೂರ್ಣಕ್ಕೆ ವಿಧಿಸಿದ್ದ ಗಡುವನ್ನು ಹಲವು ಸಲ ವಿಸ್ತರಿಸಲಾಗಿದೆ. ಆದಾಗ್ಯೂ, ನಿರ್ದಿಷ್ಟ ಅವಧಿಯಲ್ಲಿ ಕಾಮಗಾರಿ ಅನುಷ್ಠಾನಗೊಳಿಸಲು ಗುತ್ತಿಗೆ ಸಂಸ್ಥೆಯು ವಿಫಲವಾಗಿದೆ. ಆದ ಕಾರಣ, ಸಂಸ್ಥೆ ಸಲ್ಲಿಸಿರುವ 10.16 ಕೋಟಿ ರೂ. ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಂಡು, ಗುತ್ತಿಗೆ ರದ್ದುಪಡಿಸಲು ಹಾಗೂ ನಿಯಮಾನುಸಾರ ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಪ್ರಕ್ರಿಯೆ ಕೈಗೊಳ್ಳಲು ಅನುಮೋದನೆ ಕೋರಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಜ. 13ರಂದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
ಈ ಮಧ್ಯೆ, ಕಾಮಗಾರಿ ವಿಳಂಬದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಕುರಿತು ಆದಿನಾರಾಯಣಶೆಟ್ಟಿ ಎಂಬುವವರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ವಾರದೊಳಗೆ ಗುತ್ತಿಗೆ ರದ್ದುಪಡಿಸಿ, ಬಾಕಿ ಕಾಮಗಾರಿ ಪೂರ್ಣಕ್ಕೆ ಅಗತ್ಯವಿರುವ ಕ್ರಮ ಕೈಗೊಳ್ಳಬೇಕೆಂದು ಫೆ. 17ರಂದು ತೀರ್ಪು ನೀಡಿತ್ತು. ಪಾಲಿಕೆ ಮುಖ್ಯ ಆಯುಕ್ತರ ಪ್ರಸ್ತಾವನೆ ಮತ್ತು ಹೈಕೋರ್ಟ್ ಆದೇಶವನ್ನು ಕೂಲಂಕಷವಾಗಿ ಪರಿಶೀಲಿಸಿದ ನಗರಾಭಿವೃದ್ಧಿ ಇಲಾಖೆ, ಸಿಂಪ್ಲೆಕ್ಸ್ ಕಂಪೆನಿ ಸಲ್ಲಿಸಿದ್ದ 10.16 ಕೋಟಿ ರೂ. ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಂಡು, ಗುತ್ತಿಗೆ ರದ್ದುಪಡಿಸಲು ಅನುಮೋದನೆ ನೀಡಿದೆ. ಉದ್ದೇಶಿತ ಯೋಜನೆಯ ಬಾಕಿ ಉಳಿದಿರುವ ಕಾಮಗಾರಿಯನ್ನು ಅನುಮೋದಿತ ಮೊತ್ತದ ಮಿತಿಯಲ್ಲಿಯೇ ಕೆಟಿಪಿಪಿ ಕಾಯಿದೆ ಅನ್ವಯ ಟೆಂಡರ್ ಆಹ್ವಾನಿಸಬೇಕೆಂದು ಸೂಚಿಸಿದೆ.
ಶೇ 57.17ರಷ್ಟು ಕಾಮಗಾರಿ ಬಾಕಿ!ಈಜಿಪುರ ಜಂಕ್ಷನ್‌ನಿಂದ ಕೇಂದ್ರೀಯ ಸದನ ಜಂಕ್ಷನ್‌ವರೆಗಿನ 2.5 ಕಿ.ಮೀ. ಉದ್ದದ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಹಲವು ವರ್ಷಗಳಿಂದ ನಡೆಯುತ್ತಲೇ ಇದೆ. ಒಟ್ಟು 81 ಪಿಲ್ಲರ್‌ಗಳ ಪೈಕಿ 67 ಮಾತ್ರ ನಿರ್ಮಿಸಲಾಗಿದೆ. ಕಾಂಗ್ರೆಸ್ ಸರಕಾರದಲ್ಲಿ ಶುರುವಾದ ಕಾಮಗಾರಿಯು ಸರಕಾರ ಬದಲಾದ ಬಳಿಕ ಕುಂಟುತ್ತಾ ಸಾಗಿ ಬಂದಿತು. ಸುಮಾರು ಒಂದು ವರ್ಷ ಕಾಮಗಾರಿ ಸ್ಥಗಿತವಾಗಿತ್ತು. ಕಾಮಗಾರಿಗೆ ಪಾವತಿಸಿದ ಬಿಲ್‌ನ ಮೊತ್ತವನ್ನು ಗುತ್ತಿಗೆ ಸಂಸ್ಥೆಯು ಮೇಲ್ಸೇತುವೆ ಕಾಮಗಾರಿಗೆ ಪೂರ್ಣ ಪ್ರಮಾಣದಲ್ಲಿ ಬಳಸದೆ, ಬೇರೆ ಯೋಜನೆಗಳಿಗೆ ವಿನಿಯೋಗಿಸುತ್ತಿರುವುದು ಕಂಡುಬಂದಿತು. ಈ ಹಿನ್ನೆಲೆಯಲ್ಲಿ ಎಸ್ಕೊ್ರೕ ಖಾತೆ ತೆರೆದು, ಕಾಮಗಾರಿಗೆ ಬಿಡುಗಡೆಯಾದ ಮೊತ್ತವು ಇತರೆ ಯೋಜನೆಗಳಿಗೆ ವರ್ಗಾವಣೆಯಾಗದಂತೆ ನೋಡಿಕೊಂಡರೂ ನಿರೀಕ್ಷಿತ ಪ್ರಗತಿ ಕಂಡುಬರಲಿಲ್ಲ. ಇಲ್ಲಿಯವರೆಗೆ ಕಾಮಗಾರಿಯಲ್ಲಿಶೇ 42.83ರಷ್ಟು ಪ್ರಗತಿ ಸಾಧಿಸಲಾಗಿದ್ದು, ಇನ್ನೂ ಶೇ 57.17ರಷ್ಟು ಬಾಕಿ ಇದೆ.
ಗುತ್ತಿಗೆ ಸಂಸ್ಥೆಗೆ 75 ಕೋಟಿ ರೂ. ಪಾವತಿ:
ನಿರ್ಮಾಣ ಕಾಮಗಾರಿಯನ್ನು 204 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಕಾಮಗಾರಿಯ ಗುತ್ತಿಗೆ ಸಂಸ್ಥೆಗೆ 2021ರ ಸೆಪ್ಟೆಂಬರ್‌ವರೆಗೆ 75.11 ಕೋಟಿ ರೂ. ಬಿಲ್ ಪಾವತಿಸಲಾಗಿದೆ. ಕಾಮಗಾರಿಯ ಪ್ರಗತಿಗೆ ಅನುಗುಣವಾಗಿ ಈಗಾಗಲೇ ಬಿಲ್ ಪಾವತಿಸಲಾಗಿದೆ. ಸದ್ಯ ಯಾವುದೇ ಬಿಲ್ ಬಾಕಿ ಉಳಿಸಿಕೊಂಡಿಲ್ಲ. ನಿಗದಿತ ಕಾಲಾವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸದಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಕಾಮಗಾರಿ ಪೂರ್ಣಕ್ಕೆ ಹಲವು ಬಾರಿ ಸೂಚಿಸಿದ್ದರು. ಗುತ್ತಿಗೆದಾರರಿಗೆ 2 ಸಲ ನೋಟಿಸ್ ನೀಡಿದ್ದರೂ ಕ್ರಮ ಕೈಗೊಂಡಿರಲಿಲ್ಲ.
ಕಾಮಗಾರಿ ವಿಳಂಬಕ್ಕೆ ಕಾರಣಗಳೇನು ?
* ಸೆಗ್ಮೆಂಟ್‌ಗಳ ನಿರ್ಮಾಣದಲ್ಲಿ ಶೇ. 25ರಷ್ಟು ಪ್ರಗತಿ ಸಾಧಿಸಿದ್ದು, ಅವುಗಳ ಅಳವಡಿಕೆ ಮಂದಗತಿಯಲ್ಲಿ ಸಾಗಿದೆ. 762 ಸೆಗ್ಮೆಂಟ್‌ಗಳ ಪೈಕಿ ಕೇವಲ 191 ಸೆಗ್ಮೆಂಟ್ ನಿರ್ಮಿಸಲಾಗಿದೆ. ಗುತ್ತಿಗೆದಾರರ ಕಾಸ್ಟಿಂಗ್ ಯಾರ್ಡ್‌ನಲ್ಲಿ ಸೆಗ್ಮೆಂಟ್‌ಗಳ ಸಂಗ್ರಹಕ್ಕೆ ಜಾಗದ ಕೊರತೆ ಇದೆ. ಅಲ್ಲದೆ, ಕೇವಲ 2 ಕಾಸ್ಟಿಂಗ್ ಬೆಡ್ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೆಗ್ಮೆಂಟ್ ಸಿದ್ಧಪಡಿಸಲು ಸಾಧ್ಯವಾಗಿಲ್ಲ.
* ಕಾಮಗಾರಿಯ ವಿನ್ಯಾಸ, ನಕ್ಷೆಗಳನ್ನು ಗುತ್ತಿಗೆದಾರರೇ ಸಲ್ಲಿಸಬೇಕಿತ್ತು. ಸಮಾಲೋಚಕರು ಹಾಗೂ ಪಾಲಿಕೆಯ ಎಂಜಿನಿಯರ್‌ಗಳು ಸೂಚಿಸಿರುವ ನಕ್ಷೆಗಳನ್ನು ತಿದ್ದುಪಡಿ ಮಾಡಿ ಸಲ್ಲಿಸುವಲ್ಲಿ ವಿಳಂಬ ಮಾಡಲಾಗಿದೆ.
* 2020ರ ಸೆ. 4 ಮತ್ತು ನ. 10ರಂದು ಪರಿಷ್ಕೃತ ನಕ್ಷೆ ಸಲ್ಲಿಸುವಂತೆ ಪತ್ರ ಮುಖೇನ ಗುತ್ತಿಗೆದಾರರಿಗೆ ಸೂಚಿಸಿದ್ದರೂ, ಇಲ್ಲಿವರೆಗೆ ನಕ್ಷೆಗಳನ್ನು ಅನುಮೋದನೆಗೆ ಸಲ್ಲಿಸಿಲ್ಲ. ಇದರಿಂದಾಗಿಯೂ ಕಾಮಗಾರಿ ಅನುಷ್ಠಾನದಲ್ಲಿ ವಿಳಂಬವಾಗಿದೆ.
* ಟೆಂಡರ್ ಷರತ್ತಿನಂತೆ ಲಾಂಚಿಂಗ್ ಗಿರ್ಡರ್, ಕ್ರೇನ್‌ಗಳನ್ನು ಕಾಮಗಾರಿ ಸ್ಥಳದಲ್ಲಿ ನಿಯೋಜಿಸಿಲ್ಲ. 4 ಕ್ರೇನ್‌ಗಳ ಬದಲಿಗೆ 2 ಕ್ರೇನ್ ನಿಯೋಜಿಸಲಾಗಿದೆ. ಕಾಸ್ಟಿಂಗ್ ಯಾರ್ಡ್ ಸ್ಥಳವು 12 ಸಾವಿರ ಚ.ಮೀ. ಬದಲಿಗೆ 9500 ಚ.ಮೀ. ಇದೆ.
* ಕಂಬಗಳ ಮೇಲಿನ ಕ್ಯಾಪ್‌ಗಳನ್ನು ಗುಣ ನಿಯಂತ್ರಣ ಪರೀಕ್ಷೆಗೆ ಒಳಪಡಿಸಿದಾಗ ನಕಾರಾತ್ಮಕ ಫಲಿತಾಂಶ ಬಂದಿದೆ. ಹೀಗಾಗಿ, ಕ್ಯಾಪ್ 18 ಮತ್ತು 19 ತೆರವುಗೊಳಿಸಿ, ಮರುನಿರ್ಮಿಸಲು ಸೂಚಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.
* ಮೂಲಸೌಕರ್ಯಗಳ ಸ್ಥಳಾಂತರ, ಸಂಚಾರ ಮಾರ್ಗ ಬದಲಾವಣೆಗೆ ಕ್ರಮ ಕೈಗೊಂಡು ಕಾಮಗಾರಿ ಅನುಷ್ಠಾನಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ, ಗುತ್ತಿಗೆದಾರರು ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಕಾಮಗಾರಿ ವಿಳಂಬವಾಗಿದೆ.
* ಕಾಮಗಾರಿ ವಿಳಂಬದಿಂದ ವಿಧಿಸಿದ್ದ ಗಡುವನ್ನು ದಂಡ ವಿಧಿಸಿ ಹೆಚ್ಚುವರಿಯಾಗಿ 25 ತಿಂಗಳು ವಿಸ್ತರಿಸಿದರೂ ಕೇವಲ ಶೇ 42.80ರಷ್ಟು ಮಾತ್ರ ಭೌತಿಕ ಪ್ರಗತಿ ಸಾಧಿಸಲಾಗಿದೆ.
* ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಕಾರ್ಮಿಕರೆಲ್ಲರೂ ತಮ್ಮ ಊರುಗಳಿಗೆ ವಲಸೆ ಹೋಗಿದ್ದರಿಂದ ಕಾಮಗಾರಿ ವಿಳಂಬವಾಗಿತ್ತು. ಈ ವಿಳಂಬಕ್ಕೆ ಯಾವುದೇ ದಂಡವಿಲ್ಲದೆ ಕಾಲಾವಧಿ ವಿಸ್ತರಿಸಲಾಗಿತ್ತು. ಕೋವಿಡ್ ಪ್ರಕರಣಗಳು ಕಡಿಮೆಯಾಗಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದರೂ ಕಾಮಗಾರಿ ಪ್ರಾರಂಭಿಸಿರಲಿಲ್ಲ.