![](https://vijaykarnataka.com/photo/89401188/photo-89401188.jpg)
ತಿಳಿ ಬಣ್ಣದ ಶರ್ಟು, ಪ್ಯಾಂಟು ಮುಂತಾದ ಸಾದಾ ಸೀದಾ ಲುಕ್‌ನಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುವ ನಟ ಅಚ್ಯುತ್ ಕುಮಾರ್ ಅವರು ಈಗ ‘ಫೋರ್ ವಾಲ್ಸ್ ಟು ನೈಟೀಸ್’ ಸಿನಿಮಾದಲ್ಲಿ ಕಲರ್‌ಫುಲ್ ಆಗಿ ಮಿಂಚಲಿದ್ದಾರೆ. ಇದರಲ್ಲಿ ಅವರು ಬಣ್ಣ ಬಣ್ಣದ ಕಾಸ್ಟ್ಯೂಮ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ಪೋಷಕ ನಟ ಅಚ್ಯುತ್ ಕುಮಾರ್ ಇದುವರೆಗೆ ನಿರ್ವಹಿಸದೇ ಇರುವ ಪಾತ್ರಗಳಿಲ್ಲ. ಪ್ರತಿ ಸಿನಿಮಾದಲ್ಲಿಯೂ ತಮ್ಮ ಸಹಜ ಅಭಿನಯದಿಂದ ಗಮನ ಸೆಳೆಯುವ ಅವರಿಗೆ, ಇದೇ ಕಾರಣಕ್ಕೆ ಪಕ್ಕದ ಚಿತ್ರರಂಗದಲ್ಲಿಯೂ ಬೇಡಿಕೆ ಇದೆ. ಈಗ ಅಚ್ಯುತ್ ಕುಮಾರ್ 'ಫೋರ್ ವಾಲ್ಸ್ ಟು ನೈಟೀಸ್' ಸಿನಿಮಾದಲ್ಲಿ ಪ್ರಮುಖ ಪಾತ್ರ ಅಂದರೆ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ.
ಕೌಟುಂಬಿಕ ಕಥೆಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಈ ಸಿನಿಮಾದ ಟ್ರೇಲರ್ ಎಲ್ಲರಿಗೂ ಇಷ್ಟವಾಗಿದ್ದು, ಇದರಲ್ಲಿ ಅವರ ವಿಭಿನ್ನ ಲುಕ್‌ಗಳನ್ನು ಜನರು ಇಷ್ಟಪಟ್ಟಿದ್ದಾರೆ. ಫೆಬ್ರವರಿ 11ರಂದು ಈ ಸಿನಿಮಾ ಬಿಡುಗಡೆಯಾಗಲಿದೆ. 'ಈ ಸಿನಿಮಾದಲ್ಲಿ ನನ್ನದು ನಾಯಕನ ಪಾತ್ರ ಎಂದು ನಾನು ಹೇಳುವುದಿಲ್ಲ. ಚಿತ್ರತಂಡ ನನ್ನನ್ನು ನಾಯಕ ಎನ್ನುತ್ತಿದೆ. ಇದೊಂದು ತಂದೆ ಮಕ್ಕಳ ನಡುವೆ ನಡೆಯುವ ಕಥೆ. ಇದರಲ್ಲಿ ನನಗಿರುವ ಫ್ಲ್ಯಾಶ್‌ಬ್ಯಾಕ್‌ನಲ್ಲಿ ಲವ್ ಸ್ಟೋರಿ, ಕಲರ್‌ಫುಲ್ ಕಾಸ್ಟ್ಯೂಮ್ ಎಲ್ಲವೂ ಇವೆ. ತಂದೆಯ ಪ್ರೇಮಕಥೆಯ ಜತೆಗೆ ಮಕ್ಕಳ ಪ್ರೇಮಕಥೆಯೂ ಇದೆ' ಎಂದು ಅಚ್ಯುತ್ ಕುಮಾರ್ ಹೇಳಿದ್ದಾರೆ. 'ಈ ಸಿನಿಮಾದಲ್ಲಿ ನಾನು ಹಾಕಿರುವ ಕಾಸ್ಟ್ಯೂಮ್ ತುಂಬಾ ವಿಭಿನ್ನವಾಗಿದೆ. ನಾನು ಇದೇ ಮೊದಲ ಬಾರಿಗೆ ಕಲರ್‌ಫುಲ್ ಶರ್ಟ್‌ಗಳನ್ನು ಹಾಕಿರುವುದು. ನನಗಾಗಿ ರೊಮ್ಯಾಂಟಿಕ್ ಹಾಡೊಂದು ಇದ್ದು, ಅದನ್ನು ಗಾಯಕ ವಿಜಯ್ ಪ್ರಕಾಶ್‌ರಿಂದ ಹಾಡಿಸಿದ್ದಾರೆ. ಇದೊಂದು ಕೌಟುಂಬಿಕ ಕಥೆ' ಎಂದಿದ್ದಾರೆ ಅವರು.
ಪೂರಕ ಟೈಟಲ್'ನಿರ್ದೇಶಕರು ಮೊದಲು ಬಂದು ನನಗೆ ಟೈಟಲ್ ಹೇಳಿದಾಗ, ನಾನು ಇದೇನು ಹೀಗಿದೆಯಲ್ಲಎಂದು ನಿರಾಕರಿಸಿದ್ದೆ. ಆಮೇಲೆ ಅದರ ಕಥೆ ಕೇಳಿ ಒಪ್ಪಿಕೊಂಡೆ. ಟೈಟಲ್ ಅನ್ನು ಜನರು ಅಪಾರ್ಥ ಮಾಡಿಕೊಳ್ಳಬಾರದು. ಕಥೆಗೆ ಪೂರಕವಾದ ಶೀರ್ಷಿಕೆಯದು. ನಿರ್ದೇಶಕರು ಸಹ ಅದಕ್ಕೆ ತಕ್ಕ ಸಮಜಾಯಿಷಿ ನೀಡುತ್ತಾರೆ. ಹಲವರು ಇದನ್ನು ತಮಗೆ ಕನೆಕ್ಟ್ ಮಾಡಿಕೊಳ್ಳುತ್ತಾರೆ' ಎಂದು ಅಚ್ಯುತ್ ಕುಮಾರ್ ವಿವರಿಸಿದ್ದಾರೆ. ಈ ಸಿನಿಮಾದಲ್ಲಿಅವರ ಮಕ್ಕಳಾಗಿ ಜಾನ್ವಿ ಜ್ಯೋತಿ, ರಚನಾ ದಶರಥ್, ಶ್ರೇಯಾ ಶೆಟ್ಟಿ ನಟಿಸಿದ್ದಾರೆ. ಭಾಸ್ಕರ್ ನೀನಾಸಂ, ದತ್ತಣ್ಣ, ಸುಜಯ್ ಶಾಸ್ತ್ರಿ ಸಹ ಪ್ರಮುಖ ಪಾತ್ರದಲ್ಲಿದ್ದಾರೆ.
ಕೋಟ್
ಹಲವು ಸಿನಿಮಾಗಳಲ್ಲಿ ನಾನು ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪ್ರತಿ ತಂದೆಯೂ ಬೇರೆಯದ್ದೇ ಕಥೆ ಹೇಳುತ್ತಾನೆ. ಈ ಸಿನಿಮಾದಲ್ಲಿರುವ ತಂದೆಯೂ ಬೇರೆ. ಅದೇನು ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕು. ನಿರ್ದೇಶಕರು ಮತ್ತು ಚಿತ್ರತಂಡ ಒಳ್ಳೆಯ ಪ್ರಯತ್ನ ಮಾಡಿದೆ.
-ಅಚ್ಯುತ್ ಕುಮಾರ್, ನಟ