ಪೈಲಟ್‌ ಬಣಕ್ಕೆ 3 ಸಚಿವ ಸ್ಥಾನಗಳ ಆಫರ್‌, 6ಕ್ಕಿಂತ ಕಡಿಮೆ ಒಪ್ಪಲು ಸಾಧ್ಯವಿಲ್ಲ ಎಂದ ಬೆಂಬಲಿಗರು

ವರ್ಷದ ಹಿಂದೆ ರಾಜಸ್ಥಾನ ಕಾಂಗ್ರೆಸ್‌ ಸರಕಾರದ ಪತನಕ್ಕೆ ಯತ್ನಿಸಿ ಸುಮ್ಮನಾಗಿರುವ ಸಚಿನ್‌ ಪೈಲಟ್‌, 9 ಸಚಿವ ಸ್ಥಾನಗಳ ಪೈಕಿ ಕನಿಷ್ಠ 6 ಸ್ಥಾನಗಳನ್ನಾದರೂ ತಮ್ಮ ಬಣಕ್ಕೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಪೈಲಟ್‌ ಬಣಕ್ಕೆ 3 ಸಚಿವ ಸ್ಥಾನಗಳ ಆಫರ್‌, 6ಕ್ಕಿಂತ ಕಡಿಮೆ ಒಪ್ಪಲು ಸಾಧ್ಯವಿಲ್ಲ ಎಂದ ಬೆಂಬಲಿಗರು
Linkup
ಜೈಪುರ: ರಾಜಸ್ಥಾನದಲ್ಲಿ ಗೆಹ್ಲೋಟ್‌-ಪೈಲಟ್‌ ಬಣಗಳ ನಡುವೆ ಸ್ಫೋಟಿಸಿರುವ ಪ್ರತಿಷ್ಠೆಯ ಕಾದಾಟ ಸದ್ಯಕ್ಕೆ ಅಂತ್ಯಗೊಳ್ಳುವ ಸೂಚನೆ ಕಾಣಿಸುತ್ತಿಲ್ಲ. ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳ ಪೈಕಿ ಮೂರನ್ನು ಮಾತ್ರ ಬಂಡಾಯ ಗುಂಪಿನ ನಾಯಕ ಅವರಿಗೆ ಬಿಟ್ಟುಕೊಡಲು ಸಾಧ್ಯ ಎಂದು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಹೇಳಿರುವುದಾಗಿ ತಿಳಿದು ಬಂದಿದೆ. ವರ್ಷದ ಹಿಂದೆ ಸರಕಾರದ ಪತನಕ್ಕೆ ಯತ್ನಿಸಿ ಸುಮ್ಮನಾಗಿರುವ ಪೈಲಟ್‌, ಒಂಬತ್ತು ಸಚಿವ ಸ್ಥಾನಗಳ ಪೈಕಿ ಕನಿಷ್ಠ ಆರು ಸ್ಥಾನಗಳನ್ನಾದರೂ ತಮ್ಮ ಬಣಕ್ಕೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದಕ್ಕಾಗಿಯೇ ಅವರು ಮೂರು ದಿನಗಳ ಹಿಂದೆ ದಿಲ್ಲಿಗೆ ತೆರಳಿ ವರಿಷ್ಠರ ಜತೆ ಚೌಕಾಸಿ ಮಾಡಿ ವಾಪಸಾಗಿದ್ದರು. ''ಸಂವಿಧಾನಿಕ ಮಿತಿ ಇರುವುದರಿಂದ ಸದ್ಯದ ಸ್ಥಿತಿಯಲ್ಲಿ ಒಂಬತ್ತು ಜನರನ್ನು ಪಾತ್ರವೇ ಸಂಪುಟಕ್ಕೆ ಸೇರಿಸಿಕೊಳ್ಳಲು ಸಾಧ್ಯ. ಇರುವುದರಲ್ಲಿಯೇ ಎಲ್ಲರೂ ಹಂಚಿಕೊಳ್ಳಬೇಕಿದೆ. ಸಚಿನ್‌ ಬಣ ಮಾತ್ರವಲ್ಲದೇ ಸರಕಾರವನ್ನು ಬೆಂಬಲಿಸಿದ 10 ಪಕ್ಷೇತರರನ್ನು ಕೂಡ ಸಮಾಧಾನ ಪಡಿಸಬೇಕಿದೆ. ಇದಕ್ಕಿಂತಲೂ ಹೆಚ್ಚಾಗಿ ಬಿಎಸ್ಪಿಯಿಂದ ಬಂದು ಪಕ್ಷ ಸೇರಿರುವ ಆರು ಶಾಸಕರಿಗೂ ಸಂಪುಟದಲ್ಲಿ ನ್ಯಾಯ ಒದಗಿಸಬೇಕಿದೆ. ಇದನ್ನು ಪೈಲಟ್‌ ಅರ್ಥ ಮಾಡಿಕೊಳ್ಳಬೇಕು," ಎಂದು ಗೆಹ್ಲೋಟ್‌ ಆಪ್ತರು ಸಮಜಾಯಿಷಿ ನೀಡಿದ್ದಾರೆ. "ಮೂರು ಸ್ಥಾನ ಒಪ್ಪಲು ಸಾಧ್ಯವೇ ಇಲ್ಲ. ಕೇಳಿದ್ದರ ಅರ್ಧದಷ್ಟು ಸ್ಥಾನ ಕೂಡ ನೀಡಲು ಸಿದ್ಧವಿಲ್ಲ ಎಂದರೆ ಹೇಗೆ? ವರಿಷ್ಠರು ನಮಗೆ ನೀಡಿರುವ ಭರವಸೆ ಪ್ರಕಾರ ಮುಖ್ಯಮಂತ್ರಿ ನಡೆದುಕೊಳ್ಳಬೇಕು," ಎಂದು ಪೈಲಟ್‌ ಬಣ ಒತ್ತಾಯಿಸಿದೆ. ಇದರೊಂದಿಗೆ ರಾಜಸ್ಥಾನದ ಕಾಂಗ್ರೆಸ್‌ ಪರಿಸ್ಥಿತಿ ಇನ್ನಷ್ಟು ಅಯೋಮಯಗೊಂಡಿದೆ. "ಸಚಿನ್‌ ಬಣ ಮುನಿಸಿಕೊಂಡು ಮತ್ತೊಮ್ಮೆ ಹೊರ ನಡೆದರೆ, ಈ ಬಾರಿ ಸರಕಾರ ಉಳಿಯುವುದು ಡೌಟ್‌," ಎಂದು ಮೂಲಗಳು ತಿಳಿಸಿವೆ. ಸಚಿನ್‌ ಪೈಲಟ್‌ ದಿಲ್ಲಿಯಿಂದ ಮರಳಿದ ಬೆನ್ನಲ್ಲೇ ಬಿಎಸ್ಪಿಯಿಂದ ಕಾಂಗ್ರೆಸ್‌ ಸೇರಿರುವ ಶಾಸಕರು, ''ಪೈಲಟ್‌ ನೇತೃತ್ವದಲ್ಲಿ 18 ಶಾಸಕರು ಬಂಡಾಯ ಎದ್ದಿದ್ದರಿಂದ ಪತನದ ಅಂಚಿಗೆ ತಲುಪಿದ್ದ ಸರಕಾರ ಉಳಿಸಿದವರೇ ನಾವು. ಹೀಗಾಗಿ ನಮಗೂ ಸಂಪುಟದಲ್ಲಿ ಸ್ಥಾನ ನೀಡಬೇಕು,'' ಎಂದು ಆಗ್ರಹಿಸಿದ್ದರು.