ನಮ್ಮ ಮೆಟ್ರೋ ಯೋಜನೆಯಿಂದ ಜಕ್ಕೂರು ವಾಯುನೆಲೆ ಬಂದ್ ಆಗುವ ಆತಂಕ..!

ಉದ್ದೇಶಿತ ಕಾಮಗಾರಿಯಿಂದ ಬಹುತೇಕ ಜಕ್ಕೂರು ವಾಯುನೆಲೆ ಬಂದ್‌ ಆಗಲಿದೆ ಮತ್ತು ಐತಿಹಾಸಿಕ ವಾಯುನೆಲೆ ಪ್ರದೇಶ ರಿಯಲ್‌ ಎಸ್ಟೇಟ್‌ ಉದ್ದೇಶಕ್ಕೆ ಬಳಕೆಯಾಗುವ ಸಾಧ್ಯತೆ ಇದೆ ಎಂಬುದು ಅರ್ಜಿದಾರರ ವಾದ.

ನಮ್ಮ ಮೆಟ್ರೋ ಯೋಜನೆಯಿಂದ ಜಕ್ಕೂರು ವಾಯುನೆಲೆ ಬಂದ್ ಆಗುವ ಆತಂಕ..!
Linkup
ಶ್ರೀಕಾಂತ್‌ ಹುಣಸವಾಡಿ : ಉದ್ದೇಶಿತ ಎಲಿವೇಟೆಡ್‌ ಮೆಟ್ರೋ ರೈಲು ಯೋಜನೆಯಿಂದ ಜಕ್ಕೂರು ವಾಯುನೆಲೆಗೆ ಅಡ್ಡಿಯಾಗಲಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ತನ್ನ ಸಮೀಕ್ಷಾ ವರದಿಯಲ್ಲಿ ತಿಳಿಸಿದೆ. ಅಲ್ಲದೆ, ಮೆಟ್ರೋ ಯೋಜನೆಯ ಎತ್ತರವನ್ನು ತಗ್ಗಿಸಬೇಕು, ಇಲ್ಲವೇ ರನ್‌ ವೇ ಉದ್ದ ಕಡಿತ ಮಾಡಬೇಕಾಗುತ್ತದೆ ಎಂದು ಸರಕಾರಕ್ಕೆ ಶಿಫಾರಸು ಮಾಡಿದೆ. ಜಕ್ಕೂರು ವಾಯುನೆಲೆ ಬಳಿ ಮೆಟ್ರೋ ರೈಲು ಯೋಜನೆಯನ್ನು ಪ್ರಶ್ನಿಸಿ ಬೆಂಗಳೂರಿನ ವಕೀಲ ಅಜಯ್‌ ಕುಮಾರ್‌ ಪಾಟೀಲ್‌ ಸಲ್ಲಿಸಿದ್ದ ಅರ್ಜಿ ಮನವಿ ಆಲಿಸುತ್ತಿರುವ ಸಿಜೆ ಎ.ಎಸ್‌.ಓಕ್‌ ನೇತೃತ್ವದ ವಿಭಾಗೀಯ ಪೀಠದ ಮುಂದೆ ಎಎಐ ವರದಿ ಸಲ್ಲಿಸಿದೆ. ವರದಿಯ ವಿವರಗಳೇನು?: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಕಳೆದ ಏಪ್ರಿಲ್‌ನಲ್ಲಿ ಅಬ್‌ಸ್ಟಾಕಲ್‌ ಲಿಮಿಟೇಷನ್‌ ಸರ್ಫೇಸಸ್‌ (ಒಎಲ್‌ಎಸ್‌) ಸಮೀಕ್ಷೆ ನಡೆಸಿತ್ತು. ಅದರಲ್ಲಿ ಉದ್ದೇಶಿತ ಮೆಟ್ರೋ ರೈಲಿನ ಎಲಿವೇಟೆಡ್‌ ಮಾರ್ಗದಿಂದ ಸರಕಾರಿ ವೈಮಾನಿಕ ತರಬೇತಿ ಶಾಲೆ (ಜಿಎಫ್‌ಟಿಎಸ್‌) ಇರುವ ಜಕ್ಕೂರು ವಾಯುನೆಲೆ ರನ್‌ವೇಗೆ ಧಕ್ಕೆ ಆಗಲಿದೆ ಎಂದು ಹೇಳಿದೆ. ವಾಯುನೆಲೆಗೆ ಮೆಟ್ರೊ ಮಾರ್ಗ ಅಡ್ಡಿಯಾಗಲಿದೆ ಎಂಬುದನ್ನು ಗುರುತಿಸಿ, ನಾಗರಿಕ ವಿಮಾನಯಾನ ಮಹಾನಿರ್ದೇಶಕರು () ರಾಜ್ಯ ಸರಕಾರಕ್ಕೆ ಎರಡು ಸಲಹೆಗಳನ್ನು ನೀಡಿದ್ದಾರೆ. ಒಂದು, ನಾಗರಿಕ ವಿಮಾನಯಾನ (ವೈಮಾನಿಕ ಕಾರ್ಯಾಚರಣೆ ಸುರಕ್ಷತೆಗಾಗಿ ಎತ್ತರದ ಮಿತಿ) ನಿಯಮ 2015ರ ಅನ್ವಯ ಮೆಟ್ರೋ ಕಂಬಗಳ ಎತ್ತರವನ್ನು ತಗ್ಗಿಸುವುದು, ಎರಡು ರನ್‌ವೇ ಉದ್ದವನ್ನು ಕಡಿತಗೊಳಿಸುವ ಮೂಲಕ ಇತರೆ ಬಿಕ್ಕಟ್ಟು ನಿವಾರಣಾ ಕ್ರಮ ಕೈಗೊಳ್ಳಬಹುದು. ಈ ಕುರಿತು ಈಗಾಗಲೇ 2021ರ ಮೇ 20ರಂದು ರಾಜ್ಯ ಸರಕಾರಕ್ಕೆ ಪತ್ರ ಬರೆದಿರುವ ಡಿಜಿಸಿಎ, ಎಲಿವೇಟೆಡ್‌ ರಾಷ್ಟ್ರೀಯ ಹೆದ್ದಾರಿ 2010ರಿಂದ 2015ರ ನಡುವೆ ನಿರ್ಮಾಣವಾದಾಗ, ಜಕ್ಕೂರು ವಾಯುನೆಲೆಯನ್ನು ನಾಗರಿಕ ವಿಮಾನಯಾನ ಸಚಿವಾಲಯ ತನ್ನ ಪಟ್ಟಿಯಲ್ಲಿ ಸೇರಿಸಿರಲಿಲ್ಲ. ಹಾಗಾಗಿ, ಅದನ್ನು ಏನೂ ಮಾಡಲಾಗದು, ರನ್‌ ವೇ ಉದ್ದ ಕಡಿತಗೊಳಿಸಬೇಕು ಎಂದು ಸರಕಾರಕ್ಕೆ ಸೂಚಿಸಿದೆ. ಸರಕಾರ ಕೂಡ ಮೂಲಸೌಕರ್ಯ ಯೋಜನೆ ಮತ್ತು ಜಕ್ಕೂರಿನಲ್ಲಿ ವೈಮಾನಿಕ ಚಟುವಟಿಕೆ ಎರಡನ್ನೂ ಕಾಯ್ದುಕೊಳ್ಳಲು ರನ್‌ ವೇ ಕಡಿತಕ್ಕೆ ಮುಂದಾಗಿದೆ. ಇದಕ್ಕೆ ಅರ್ಜಿದಾರರು ತೀವ್ರ ಆಕ್ಷೇಪ ಎತ್ತಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ: ಡಿಜಿಸಿಎ ವರದಿ ಮತ್ತು ರಾಜ್ಯದ ಸರಕಾರದ ಮೆಮೋಗೆ ಉತ್ತರಿಸಿರುವ ಅರ್ಜಿದಾರರ ಪರ ವಕೀಲ ಕೆ.ಎನ್‌.ಫಣೀಂದ್ರ, 'ಸರಕಾರ ಮತ್ತು ಡಿಜಿಸಿಎ ಕ್ರಮ ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವುದಕ್ಕೆ ಉದಾಹರಣೆಯಂತಿದೆ. ಹೈಕೋರ್ಟ್‌ ನಿರ್ದೇಶನದ ಹೊರತಾಗಿಯೂ ಹಲವು ಬಾರಿ ಜಕ್ಕೂರು ವಾಯುನೆಲೆಯ ಸರ್ವೆ ಕಾರ್ಯ ನಡೆಸಲು ನಿರಾಕರಿಸಿದ್ದ ಡಿಜಿಸಿಎ, ವಾಯುನೆಲೆ ಮತ್ತು ರನ್‌ ವೇ ಸಂರಕ್ಷಿಸುವ ಬದಲು ತಾನೇ ರನ್‌ ವೇ ಕಡಿತ ಮಾಡಲು ಸರಕಾರಕ್ಕೆ ಶಿಫಾರಸು ಮಾಡಿದೆ' ಎಂದು ಹೇಳಿದ್ದಾರೆ. ಅಲ್ಲದೆ, ಡಿಜಿಸಿಎ ಕ್ರಮ ಏರ್‌ಕ್ರಾಫ್ಟ್‌ ಕಾಯಿದೆ-1934ರ ಮೂಲ ಆಶಯಕ್ಕೆ ವಿರುದ್ಧವಾಗಿದೆ. ನಿಯಮದಂತೆ ವಾಯುನೆಲೆಯ ಸುತ್ತ ಯಾವುದೇ ನಿರ್ಮಾಣ ಕಾರ್ಯಕೈಗೊಳ್ಳುವಂತಿಲ್ಲ ಎಂಬುದು ಅರ್ಜಿದಾರರ ವಾದವಾಗಿದೆ. ಜೂ.18ಕ್ಕೆ ಅಂತಿಮ ವಿಚಾರಣೆ: ಗಂಭೀರ ವಿಚಾರವಾಗಿರುವುದರಿಂದ ನ್ಯಾಯಪೀಠ ಜೂ. 18ರಂದು ಅಂತಿಮ ವಿಚಾರಣೆ ಕೈಗೆತ್ತಿಕೊಂಡು, ಸಾಧ್ಯವಾದಷ್ಟು ಬೇಗ ಇತ್ಯರ್ಥಗೊಳಿಸಲಾಗುವುದೆಂದು ಹೇಳಿದೆ. 60 ಮೀ. ನಿರ್ಮಾಣ ರಹಿತ ವಲಯ: ಜಕ್ಕೂರಿನಲ್ಲಿ ಸರಕಾರಿ ವಿಮಾನ ಹಾರಾಟ ತರಬೇತಿ ಶಾಲೆಯಿದೆ. ಏರೋಡ್ರಮ್‌ನ ರನ್‌ವೇ ಸುತ್ತಮುತ್ತ 60 ಮೀ.ವರೆಗೆ ಕಾಮಗಾರಿ ನಡೆಸುವಂತಿಲ್ಲ. ಅದನ್ನು ನಿರ್ಮಾಣರಹಿತ ವಲಯವೆಂದು ಘೋಷಿಸಲಾಗಿದೆ. ಉದ್ದೇಶಿತ ಕಾಮಗಾರಿಯಿಂದ ಬಹುತೇಕ ಜಕ್ಕೂರು ವಾಯುನೆಲೆ ಬಂದ್‌ ಆಗಲಿದೆ ಮತ್ತು ಐತಿಹಾಸಿಕ ವಾಯುನೆಲೆ ಪ್ರದೇಶ ರಿಯಲ್‌ ಎಸ್ಟೇಟ್‌ ಉದ್ದೇಶಕ್ಕೆ ಬಳಕೆಯಾಗುವ ಸಾಧ್ಯತೆ ಇದೆ ಎಂಬುದು ಅರ್ಜಿದಾರರ ವಾದ. ಸದ್ಯಕ್ಕೆ ಮೆಟ್ರೊ ಕಾಮಗಾರಿ ಸ್ಥಗಿತ: ಹೈಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಕೆಯಾದ ನಂತರ ನ್ಯಾಯಾಲಯ ವಿಚಾರಣೆ ನಡೆಸಿ ಎಲ್ಲ ಅಂಶಗಳನ್ನು ಪರಿಶೀಲಿಸಿದ ಬಳಿಕ 2020ರ ಸೆ.28ರಂದು ಮೆಟ್ರೋ ಕಾಮಗಾರಿಗೆ ತಡೆ ನೀಡಿದೆ. ಹಾಗಾಗಿ, ಸದ್ಯ ಮೆಟ್ರೋ ಕಾಮಗಾರಿ ಸ್ಥಗಿತಗೊಂಡಿದೆ. ಕಾನೂನು ವ್ಯಾಜ್ಯ ಇತ್ಯರ್ಥವಾಗುವವರೆಗೂ ಕಾಮಗಾರಿ ಆರಂಭ ಅನುಮಾನವಾಗಿದೆ.