ದಿಲ್ಲಿಯಲ್ಲಿ ಮೆರವಣಿಗೆ ವೇಳೆ ಮುಸ್ಲಿಂ ವಿರೋಧಿ ಘೋಷಣೆ: ಬಿಜೆಪಿ ಮುಖಂಡ ಸೇರಿ ಆರು ಮಂದಿ ಪೊಲೀಸ್ ವಶಕ್ಕೆ

ದಿಲ್ಲಿಯ ಜಂತರ್‌ ಮಂತರ್‌ನಲ್ಲಿ ಪುರಾತನ ಕಾಲದ ಕಾನೂನುಗಳ ವಿರುದ್ಧ ನಡೆದ ಪ್ರತಿಭಟನಾ ಮೆರವಣಿಗೆ ವೇಳೆ ಮುಸ್ಲಿಂ ವಿರೋಧಿ ಘೋಷಣೆ ಕೂಗಿದ ಆರೋಪದಲ್ಲಿ ಬಿಜೆಪಿ ಮುಖಂಡ ಅಶ್ವನಿ ಉಪಾಧ್ಯಾಯ ಸೇರಿ ಆರು ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ದಿಲ್ಲಿಯಲ್ಲಿ ಮೆರವಣಿಗೆ ವೇಳೆ ಮುಸ್ಲಿಂ ವಿರೋಧಿ ಘೋಷಣೆ: ಬಿಜೆಪಿ ಮುಖಂಡ ಸೇರಿ ಆರು ಮಂದಿ ಪೊಲೀಸ್ ವಶಕ್ಕೆ
Linkup
ಹೊಸದಿಲ್ಲಿ: ದಿಲ್ಲಿಯ ಜಂತರ್‌ ಮಂತರ್‌ನಲ್ಲಿ ಸೋಮವಾರ ಆಯೋಜಿಸಿದ್ದ ಜಾಥಾದಲ್ಲಿ ವಿರೋಧಿ ಘೋಷಣೆಗಳನ್ನು ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ವಕೀಲ ಮತ್ತು ಬಿಜೆಪಿ ಮಾಜಿ ವಕ್ತಾರ ಸೇರಿದಂತೆ ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುವ ಸಾಧ್ಯತೆ ಇದೆ. ದೇಶದಲ್ಲಿ ಇನ್ನೂ ಅಸ್ತಿತ್ವದಲ್ಲಿರುವ ವಸಾಹತು ಕಾಲದ ಕಾನೂನುಗಳ ವಿರುದ್ಧ ನಡೆದ ಪ್ರತಿಭಟನಾ ಮೆರವಣಿಗೆ ವೇಳೆ ಪ್ರಚೋದನಾಕಾರಿ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಲಾಗಿದೆ ಎಂದು ಆರೋಪಿಸಲಾಗಿದೆ. ಐಪಿಸಿ ಸೆಕ್ಷನ್ 153-ಎ (ವಿಭಿನ್ನ ಗುಂಪುಗಳ ನಡುವೆ ವೈರತ್ವ ಪ್ರಚೋದಿಸುವುದು) ಅಡಿ ಎಫ್‌ಐಆರ್‌ಗಳನ್ನು ದಾಖಲಿಸಲಾಗಿತ್ತು. ಅಲ್ಲದೆ, ಅವರು ಮೆರವಣಿಗೆಗೆ ಯಾವುದೇ ಪೂರ್ವಾನುಮತಿ ಪಡೆದಿರಲಿಲ್ಲ ಹಾಗೂ ಸೆಕ್ಷನ್ 188 (ಸಾರ್ವಜನಿಕ ಸೇವಕರು ಜಾರಿಗೊಳಿಸಿದ ಆದೇಶಗಳನ್ನು ಪಾಲಿಸದೆ ಇರುವುದು) ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ನಿರ್ಲಕ್ಷಿಸುವ ಡಿಡಿಎಂಎ ಕಾಯ್ದೆಯ ಸೆಕ್ಷನ್ 51ರ ಅಡಿ ಕೂಡ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಮೆರವಣಿಗೆಯನ್ನು ಅಶ್ವನಿ ಉಪಾಧ್ಯಾಯ ಆಯೋಜಿಸಿದ್ದರು ಎನ್ನಲಾಗಿದೆ. ಈ ಕಾರ್ಯಕ್ರಮಕ್ಕೆ ಕೆಟ್ಟ ಹೆಸರು ತರುವುದಕ್ಕಾಗಿ ಕೆಲವು ಜನರು ಪ್ರಯತ್ನಿಸಿದ್ದಾರೆ. ಮಧ್ಯಾಹ್ನ 12.15ಕ್ಕೆ ಕಾರ್ಯಕ್ರಮ ಮುಗಿದಿದ್ದು, ಅಲ್ಲಿಂದ ತಾವು ತೆರಳಿದ್ದಾಗಿ ಅಶ್ವನಿ ಪೊಲೀಸರಿಗೆ ತಿಳಿಸಿದ್ದಾರೆ. ಜಂತರ್ ಮಂತರ್‌ನಲ್ಲಿ ಆಯೋಜಿಸಿದ್ದ ಮೆರವಣಿಗೆಯಲ್ಲಿ 'ಭಾರತದಲ್ಲಿ ಇರಬೇಕೆಂದರೆ ಜೈ ಶ್ರೀರಾಂ ಎಂದು ಹೇಳಲೇಬೇಕು' ಎಂದು ಕೂಗುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ವೇಳೆ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಡ ಕೂಗಿದ್ದಾರೆ ಎಂದು ಆರೋಪಿಸಲಾಗಿದೆ. ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಪೊಲೀಸರು ಹಾಜರಿರಲಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಮೆರವಣಿಗೆಗೆ ಅನುಮತಿ ನಿರಾಕರಿಸಲಾಗಿತ್ತು. ಆದರೂ ಜನರು ಗುಂಪುಗೂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.