ತೆರೆಮೇಲೆ ಬರಲಿದೆ ಕೋಟಿಗಾನಹಳ್ಳಿ ರಾಮಯ್ಯ ಬರೆದ ರಕ್ತಸಿಕ್ತ 'ಟೊಮೆಟೊ' ಕಥೆ!

ಸ್ಯಾಂಡಲ್‌ವುಡ್‌ನಲ್ಲಿಇತ್ತೀಚೆಗೆ ವಿಭಿನ್ನ ಶೈಲಿಯ ಸಿನಿಮಾಗಳು ಸಿದ್ಧವಾಗುತ್ತಿವೆ. ಆ ಸಾಲಿಗೆ ಮತ್ತೊಂದು ಸಿನಿಮಾ ಸೇರಿಕೊಳ್ಳುತ್ತಿದ್ದು, ಅದರ ಬಗೆಗಿನ ವಿವರ ಇಲ್ಲಿದೆ. ವಿಶೇಷವೆಂದರೆ, ಇದರ ಕಥೆಯನ್ನು ಕೋಟಿಗಾನಹಳ್ಳಿ ರಾಮಯ್ಯ ಬರೆದಿದ್ದಾರೆ.

ತೆರೆಮೇಲೆ ಬರಲಿದೆ ಕೋಟಿಗಾನಹಳ್ಳಿ ರಾಮಯ್ಯ ಬರೆದ ರಕ್ತಸಿಕ್ತ 'ಟೊಮೆಟೊ' ಕಥೆ!
Linkup
ಕನ್ನಡ ಸಿನಿಮಾಗಳಲ್ಲಿ ಈ ನೆಲದ ಕಥೆಗಳಿಗೆ ಬರ ಇದೆ ಎಂಬ ಮಾತನ್ನು ಹಲವರು ಹೇಳುತ್ತಲೇ ಇರುತ್ತಾರೆ. ಈಗ ಆ ಮಾತನ್ನು ಸುಳ್ಳು ಮಾಡುವಂತಹ ಸಿನಿಮಾವೊಂದು ಸೆಟ್ಟೇರುತ್ತಿದ್ದು, ಅದಕ್ಕೆ 'ದಿ ಕಲರ್‌ ಆಫ್‌ ಟೊಮೆಟೊ' ಎಂಬ ವಿಶಿಷ್ಟವಾದ ಟೈಟಲ್‌ ಇಡಲಾಗಿದೆ. ಈ ಸಿನಿಮಾದ ಕಥೆಯನ್ನು ಹಿರಿಯ ರಂಗಕರ್ಮಿ, ಕಥೆಗಾರ ಬರೆದಿದ್ದಾರೆ. ರಂಗಭೂಮಿಯಲ್ಲಿ ಹಲವು ವರ್ಷಗಳಿಂದ ಫೋಟೋಗ್ರಾಫರ್‌ ಆಗಿ ಕೆಲಸ ಮಾಡುತ್ತಿರುವ ತಾಯಿ ಲೋಕೇಶ್‌ ಎಂಬವರು ಈ ಸಿನಿಮಾದ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇದಕ್ಕೂ ಮುನ್ನ 'ರಾಜಧಾನಿ', ಪಿ. ಶೇಷಾದ್ರಿ ಜತೆ 'ಭಾರತ್‌ ಸ್ಟೋರ್ಸ್', ಭೈರಪ್ಪ ಅವರ ಕುರಿತ ಸಾಕ್ಷ್ಯಚಿತ್ರ, 'ಸಂತೆಯಲ್ಲಿ ನಿಂತ ಕಬೀರ' ಸಿನಿಮಾಗಳಿಗೆ ಕೆಲಸ ಮಾಡಿದ ಅನುಭವ ತಾಯಿ ಲೊಕೇಶ್‌ ಅವರಿಗೆ ಇದೆ. 'ದಿ ಕಲರ್‌ ಆಫ್‌ ಟೊಮೆಟೊ' ಎಂಬುದು ಮೂರು ಕಥೆಗಳ ಕೊಲ್ಯಾಜ್‌. ಕೋಟಿಗಾನಹಳ್ಳಿ ರಾಮಯ್ಯನವರು ಈ ಕಥೆಯನ್ನು ಬರೆದಿದ್ದಾರೆ. ಕೋಲಾರದಲ್ಲಿ ದೊಡ್ಡ ಟೊಮೆಟೊ ಮಾರುಕಟ್ಟೆಯಿದೆ. ಅದರ ಬ್ಯಾಕ್‌ಡ್ರಾಪ್‌ನಲ್ಲಿ ಹತ್ತರಿಂದ ಹದಿನೈದು ಪಾತ್ರಗಳ ಸುತ್ತ ನಡೆಯುವ ಕಥೆ ಇದಾಗಿದೆ. ಕನ್ನಡಕ್ಕೆ ಹೊಸ ರೀತಿಯ ಫ್ಲೇವರ್‌ನ ಸಿನಿಮಾ ಇದಾಗಿರುತ್ತದೆ. ಟೊಮೆಟೊದಲ್ಲಿ ಸಿಹಿ ಮತ್ತು ಹುಳಿ ಎರಡೂ ಇರುತ್ತವೆ. ಈ ಸಿನಿಮಾದಲ್ಲಿಯೂ ಎಲ್ಲ ಫ್ಲೇವರ್‌ ಇರುತ್ತದೆ. ಮೂರು ಕಥೆಯಲ್ಲಿ ಒಂದು ಪ್ರೇಮಕಥೆ, ಒಂದು ಭಾವನಾತ್ಮಕ ಕಥೆ, ಮತ್ತೊಂದು ಹಿಂಸಾತ್ಮಕ ಕಥೆಯಿದೆ. ಹಿಂಸಾತ್ಮಕ ಎಂದಾಕ್ಷಣ ಸಂಪೂರ್ಣ ಹಿಂಸೆಯೇ ಇರುವುದಿಲ್ಲ, ಆ ರೀತಿಯಲ್ಲಿರುತ್ತದೆ' ಎಂದಿದ್ದಾರೆ ನಿರ್ದೇಶಕ ತಾಯಿ ಲೊಕೇಶ್‌. 'ನನ್ನ ಪ್ರಕಾರ ಈ ಸಿನಿಮಾದ ಕಥೆ ನೆಲ ಮೂಲದ ಕಥೆಯನ್ನು ಹೊಂದಿದೆ. ತಮಿಳಿನ ವೆಟ್ರಿಮಾರನ್‌, ಮಾರಿ ಸೆಲ್ವರಾಜ್‌ ಮಾಡುವ ಸಿನಿಮಾಗಳು ನಮ್ಮ ಮೇಲೆ ಬಹಳಷ್ಟು ಪರಿಣಾಮ ಬೀರಿವೆ. ಅಂತಹದ್ದೇ ಒಂದು ಕಥೆಯನ್ನು ಸಿನಿಮಾ ಮಾಡಬೇಕು ಎಂದು ಹುಡುಕುವಾಗ ರಾಮಯ್ಯ ಅವರು ಒಂದು ಕಥೆ ಕೊಟ್ಟರು. ಅದಕ್ಕೆ ಇನ್ನೆರಡು ಕಥೆಗಳನ್ನು ಸೇರಿಸಿ ಈ ಸಿನಿಮಾ ಮಾಡುತ್ತಿದ್ದೇನೆ. ಮೂರು ಕಥೆಯಲ್ಲಿ ರಾಮಯ್ಯ ಅವರು ತಾತ ಮತ್ತು ಮೊಮ್ಮಗಳ ಕಥೆಯನ್ನು ಕೊಟ್ಟರು. ಮೊಮ್ಮಗಳ ಓದಿಗಾಗಿ ತಾತ ಎಷ್ಟು ಕಷ್ಟಪಡುತ್ತಾರೆ ಎಂಬ ಭಾವನಾತ್ಮಕ ಕಥೆ. ಈ ಕಥೆಗಳನ್ನು ಕೇಳಿ ನಿರ್ಮಾಪಕ ಸ್ವಾತಿ ಕುಮಾರ್‌ ಅವರು ಖುಷಿಯಿಂದ ನಿರ್ಮಾಣ ಮಾಡುತ್ತೇನೆ ಎಂದು ಹೇಳಿದ್ದಾರೆ. ಜತೆಗೆ ನನಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದಾರೆ. ಹಾಗಾಗಿ ಜನರಿಗೆ ಇಷ್ಟವಾಗುವಂತಹ ಸಿನಿಮಾವನ್ನು ಮಾಡುತ್ತೇನೆ' ಎಂದಿದ್ದಾರೆ ಲೊಕೇಶ್‌. ಈ ಸಿನಿಮಾದಲ್ಲಿ 'ಬೆಂಕಿಪಟ್ಣ' ಸಿನಿಮಾ ಖ್ಯಾತಿಯ ಪ್ರತಾಪ್‌ ನಾರಾಯಣ್‌ ನಾಯಕರಾಗಿ ನಟಿಸುತ್ತಿದ್ದಾರೆ. ಅವರ ಜತೆ ತೆಲುಗಿನ 'ಸಿನಿಮಾ ಬಂಡಿ' ಸಿನಿಮಾ ಮೂಲಕ ಗಮನ ಸೆಳೆದ ಉಮಾ, ಬಿ ಸುರೇಶ, ಸಂಪತ್‌ ಮತ್ತಿತರರು ನಟಿಸುತ್ತಿದ್ದಾರೆ. ಈ ಸಿನಿಮಾದ ಫಸ್ಟ್‌ ಲುಕ್‌ ಟೀಸರ್‌ ಬಿಡುಗಡೆಯಾಗಿದೆ. ಇಡೀ ಸಿನಿಮಾವನ್ನು ಕೋಲಾರ ಭಾಷೆಯಲ್ಲಿ ನಿರ್ಮಾಣ ಮಾಡಲು ಚಿತ್ರತಂಡ ತಯಾರಿ ನಡೆಸಿದೆ.