ತೆರಿಗೆಯ ಮೂಲಕ ಇಂಧನ ಬೆಲೆ ಹೆಚ್ಚಿಸುವುದು ಗ್ರಾಹಕರ ಸುಲಿಗೆ - ಪಿ ಚಿದಂಬರಂ ವಾಗ್ದಾಳಿ

ಪೆಟ್ರೋಲ್‌ ಬೆಲೆಯ ಮೂರನೇ ಒಂದು ಭಾಗವನ್ನು ಗ್ರಾಹಕರು ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ಪಾವತಿ ಮಾಡುತ್ತಾರೆ. ಯಾವುದೇ ಸರಕಿನ ಮೇಲೆ ಶೇ. 33ರಷ್ಟು ತೆರಿಗೆಯು ಸುಲಿಗೆಯಾಗಿದೆ ಎಂದು ಪಿ ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.

ತೆರಿಗೆಯ ಮೂಲಕ ಇಂಧನ ಬೆಲೆ ಹೆಚ್ಚಿಸುವುದು ಗ್ರಾಹಕರ ಸುಲಿಗೆ - ಪಿ ಚಿದಂಬರಂ ವಾಗ್ದಾಳಿ
Linkup
ಹೊಸದಿಲ್ಲಿ: ಕೇಂದ್ರ ಸರಕಾರ ತೆರಿಗೆ ಹೆಚ್ಚಿಸುವ ಮೂಲಕ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಮೇಲೆ ಏರಿಕೆ ಮಾಡುವುದು ಗ್ರಾಹಕರ ಸುಲಿಗೆಯಾಗಿದೆ ಎಂದು ಮಾಜಿ ಹಣಕಾಸು ಸಚಿವ ಹೇಳಿದ್ದಾರೆ. ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಪೆಟ್ರೋಲ್‌ ಬೆಲೆಯ ಮೂರನೇ ಒಂದು ಭಾಗವನ್ನು ಗ್ರಾಹಕರು ತೆರಿಗೆ ರೂಪದಲ್ಲಿ ಕೇಂದ್ರ ಸರಕಾರಕ್ಕೆ ಪಾವತಿ ಮಾಡುತ್ತಾರೆ. ಯಾವುದೇ ಸರಕಿನ ಮೇಲೆ ಶೇ. 33ರಷ್ಟು ತೆರಿಗೆಯು ಸುಲಿಗೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. "ಪೆಟ್ರೋಲ್‌ಗೆ ಲೀಟರ್‌ಗೆ 102 ರೂ. ಪಾವತಿ ಮಾಡಿದರೆ, ಇದರಲ್ಲಿ 42 ರೂ. ಕಚ್ಚಾ ತೈಲದ ಸಂಸ್ಕರಣೆಯ ಶುಲ್ಕವೂ ಸೇರಿ ತೈಲ ಕಂಪನಿಗಳಿಗೆ ಹೋಗಲಿದೆ. ಇನ್ನು 33 ರೂ. ಕೇಂದ್ರ ಸರಕಾರಕ್ಕೆ ತೆರಿಗೆ ರೂಪದಲ್ಲಿ ಹೋಗಲಿದ್ದು, ರಾಜ್ಯ ಸರಕಾರಗಳ ತೆರಿಗೆ 24 ರೂ. ಆಗಿದೆ. 4 ರೂ. ಡೀಲರ್‌ಗಳಿಗೆ ಹೋಗಲಿದೆ. 102 ರೂ.ನಲ್ಲಿ 33 ರೂ. ಅಂದರೆ ಶೇ. 33ರಷ್ಟಾಗುತ್ತದೆ. ನನ್ನ ಪ್ರಕಾರ ಇದು ಸುಲಿಗೆಯೇ ಸರಿ,” ಎಂದು ಮಾಜಿ ಹಣಕಾಸು ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಸತತವಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿಯೇ ಚಿದಂಬರಂ ಈ ಹೇಳಿಕೆ ನೀಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ದರ ಏರಿಕೆಯಾಗುತ್ತಿದ್ದು, ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ದೇಶದಲ್ಲಿ ನಿರಂತರವಾಗಿ ಹೆಚ್ಚಳವಾಗುತ್ತಿವೆ. ಶನಿವಾರದ ವೇಳೆಗೆ ಕಚ್ಚಾ ತೈಲ ದರ 85 ಡಾಲರ್‌ಗೆ ಏರಿಕೆಯಾಗಿದೆ. ಇದು ಮೂರು ವರ್ಷದಲ್ಲೇ ಗರಿಷ್ಠ ಮಟ್ಟವಾಗಿದೆ. ಜಾಗತಿಕ ಮಟ್ಟದಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಸರಕಾರಗಳು ನಿರ್ಬಂಧಗಳನ್ನು ಸಡಿಲಗೊಳಿಸುತ್ತಿವೆ. ಇದರಿಂದ ಆರ್ಥಿಕ ಚಟುವಟಿಕೆಗಳು ಹೆಚ್ಚುತ್ತಿದ್ದು, ಪೆಟ್ರೋಲ್‌, ಡೀಸೆಲ್‌ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ದರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್‌ 15ರಂದು ಶುಕ್ರವಾರ ದಿಲ್ಲಿಯಲ್ಲಿ ಪೆಟ್ರೋಲ್‌ ದರ 35 ಪೈಸೆ ಹೆಚ್ಚಳವಾಗಿದ್ದು 105.14 ರೂ.ಗೆ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಡೀಸೆಲ್‌ ಲೀಟರ್‌ಗೆ 93.87 ರೂ.ಗೆ ಮಾರಾಟವಾಗುತ್ತಿದೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರವನ್ನು ತಾನು ಕಂಡ ಅತ್ಯಂತ ದುರಾಸೆಯ ಸರ್ಕಾರ ಎಂದು ಕರೆದಿರುವ ಚಿದಂಬರಂ, ಪ್ರಗತಿಪರ ತೆರಿಗೆಗಳನ್ನು ಹೆಚ್ಚಿಸಬೇಕು ಮತ್ತು ಕೇಂದ್ರವು ತನ್ನ ವೆಚ್ಚವನ್ನು ಸಂಗ್ರಹಿಸಲು ಒಂದೇ ಆದಾಯದ ಮೂಲವನ್ನು ಅವಲಂಬಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಪ್ರತಿಗಾಮಿಯಾಗಿದೆ. ಏಕೆಂದರೆ ಶ್ರೀಮಂತರು ಮತ್ತು ಬಡವರು ಇಂಧನದ ಮೇಲೆ ಪಾವತಿಸುವ ತೆರಿಗೆಯ ಮೊತ್ತವು ಒಂದೇ ಆಗಿರುತ್ತದೆ ಎಂದು ಅವರು ವಿವರಿಸಿದ್ದಾರೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂನಂತಹ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ ಬೆಲೆಗಳು ಮತ್ತು ರೂಪಾಯಿ-ಡಾಲರ್ ವಿನಿಮಯ ದರಗಳನ್ನು ಗಣನೆಗೆ ತೆಗೆದುಕೊಂಡು ಇಂಧನ ದರವನ್ನು ಪ್ರತಿದಿನ ಪರಿಷ್ಕರಿಸುತ್ತವೆ. ಏತನ್ಮಧ್ಯೆ, ಅಮೆರಿಕ ಮತ್ತು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆಯ ಸದಸ್ಯ ರಾಷ್ಟ್ರಗಳಲ್ಲಿನ ತೈಲ ಸಂಗ್ರಹಗಳಲ್ಲಿ ತೀವ್ರ ಕುಸಿತ ಕಂಡಿದ್ದು, ಜಾಗತಿಕ ಪೂರೈಕೆಯನ್ನು ಬಿಗಿಯಾಗಿರಿಸುವ ನಿರೀಕ್ಷೆಯಿದೆ. ಅಂತಾರಾಷ್ಟ್ರೀಯ ಇಂಧನ ಸಂಸ್ಥೆ ಗುರುವಾರ ಇಂಧನ ಕೊರತೆಯು ದಿನಕ್ಕೆ 500,000 ಬ್ಯಾರೆಲ್‌ಗಳಷ್ಟು ತೈಲ ಬೇಡಿಕೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದೆ.