ಜ್ವಾಲಾಮುಖಿಯ ಉಷ್ಣಶಕ್ತಿ ಬಳಸಿ ಬಿಟ್‌ಕಾಯಿನ್‌ ಮೈನಿಂಗ್‌ ಮಾಡಿದ ಎಲ್‌ ಸಾಲ್ವಡಾರ್‌!

ಎಲ್‌ ಸಾಲ್ವೆಡಾರ್‌ ಇದೀಗ ಕ್ರಿಪ್ಟೋ ನಾಣ್ಯಗಳ ಗಣಿಗಾರಿಕೆಗೆ ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿದೆ. ಜ್ವಾಲಾಮುಖಿಯ ಉಷ್ಣಶಕ್ತಿ ಬಳಸಿಕೊಂಡು 269 ಡಾಲರ್‌ ಮೌಲ್ಯದ ಕ್ರಿಪ್ಟೋಕರೆನ್ಸಿ ಮೈನಿಂಗ್‌ ಮಾಡಲಾಗಿದೆ.

ಜ್ವಾಲಾಮುಖಿಯ ಉಷ್ಣಶಕ್ತಿ ಬಳಸಿ ಬಿಟ್‌ಕಾಯಿನ್‌ ಮೈನಿಂಗ್‌ ಮಾಡಿದ ಎಲ್‌ ಸಾಲ್ವಡಾರ್‌!
Linkup
ಹೊಸದಿಲ್ಲಿ: ಕ್ರಿಪ್ಟೋಕರೆನ್ಸಿಗಳಿಗೆ ಕಾನೂನುಬದ್ಧ ಮಾನ್ಯತೆ ನೀಡಿದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಗೆ ಪಡೆದಿರುವ ಎಲ್‌ ಸಾಲ್ವೆಡಾರ್‌ ಇದೀಗ ಕ್ರಿಪ್ಟೋ ನಾಣ್ಯಗಳ ಗಣಿಗಾರಿಕೆಗೆ ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿದೆ. ಜ್ವಾಲಾಮುಖಿಯ ಉಷ್ಣಶಕ್ತಿ ಬಳಸಿಕೊಂಡು 269 ಡಾಲರ್‌ ಮೌಲ್ಯದ ಮೈನಿಂಗ್‌ ಮಾಡಲಾಗಿದೆ. ಈ ಕುರಿತು ಸ್ವತಃ ಎಲ್‌ ಸಾಲ್ವೆಡಾರ್‌ ಅಧ್ಯಕ್ಷ ನಯೀಬ್ ಬುಕೆಲೆ ಅವರು ಟ್ವೀಟ್‌ ಮೂಲಕ ತಿಳಿಸಿದ್ದಾರೆ. ಕಳೆದ ಗುರುವಾರವೇ ಅಲ್ಲಿನ ಅಧ್ಯಕ್ಷರು 25 ಸೆಕೆಂಡ್‌ಗಳ ವಿಡಿಯೋ ಟೀಸರ್‌ ಬಿಡುಗಡೆ ಮಾಡಿದ್ದರು. ಈ ಟೀಸರ್‌ನಲ್ಲಿ ಕ್ರಿಪ್ಟೋ ನಾಣ್ಯಗಳ ಮೈನಿಂಗ್‌ ಅಲ್ಲಿನ ಸರಕಾರ ನಡೆಸಿದ್ದ ಸಿದ್ಧತೆ ಕುರಿತು ತಿಳಿಸಲಾಗಿತ್ತು. ಒಂದು ದೊಡ್ಡ ಕಂಟೈನರ್‌ಗೆ ಕ್ರಿಪ್ಟೋ ಮೈನಿಂಗ್‌ಗೆ ಬೇಕಾದ ತಂತ್ರಜ್ಞಾನವನ್ನು ಅಳವಡಿಸಲಾಗಿತ್ತು. ಹಾಗೂ ಅದರಲ್ಲಿ ವಿದ್ಯುತ್‌ ಉತ್ಪಾದಿಸಬಲ್ಲ ತಂತ್ರಜ್ಞಾನವನ್ನೂ ಅಳವಡಿಸಲಾಗಿತ್ತು. ಈ ಕಂಟೈನರ್‌ ಅನ್ನು ಜ್ವಾಲಾಮುಖಿ ಸಮೀಪದ ಒಂದು ಕಾಡಿನಲ್ಲಿ ಅಳವಡಿಸಲಾಗಿದೆ. ಈ ವಿಡಿಯೋ ವಿಶ್ವಾದ್ಯಂತ ವೈರಲ್‌ ಆಗಿದೆ. ಕೆಲವೇ ದಿನಗಳಲ್ಲಿ 2.3 ಮಿಲಿಯನ್‌ ವೀಕ್ಷಣೆಗಳಾಗಿವೆ. ಇಲ್ಲಿ ಜ್ವಾಲಾಮುಖಿಗಳ ಉಷ್ಣತೆಯನ್ನು ಬಳಸಿ ವಿದ್ಯುತ್‌ ತಯಾರಿಸಲಾಗುತ್ತದೆ. ಕಳೆದ ಜೂನ್‌ನಲ್ಲಿಯೇ ಬುಕೆಲೆ ಅವರು ವಿದ್ಯುತ್‌ ತಯಾರಿಕೆಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದ್ದರು. ಸರಕಾರಿ ಒಡೆತನದ ಜಿಯೋಥರ್ಮಲ್‌ ಎಲೆಕ್ಟ್ರಿಕ್‌ ಕಂಪನಿಗೆ ಸೂಚನೆಯನ್ನೂ ನೀಡಿದ್ದರು. ಶೇ.100 ರಷ್ಟು ಸ್ವಚ್ಛ, ನವೀಕರಿಸಬಹುದಾದ ಹಾಗೂ ಶೂನ್ಯ ಇಂಗಾಲ ಹೊರಸೂಸುವಿಕೆಯ ಇಂಧನದ ಮೂಲಕ ಕ್ರಿಪ್ಟೋ ನಾಣ್ಯಗಳ ಮೈನಿಂಗ್‌ ಮಾಡಲು ಯೋಜನೆಯನ್ನು ಸಿದ್ಧಪಡಿಸುವಂತೆಯೂ ಸೂಚಿಸಿದ್ದರು. ಬುಕೆಲೆ ಅವರ ಯೋಜನೆ ಇದೀಗ ಜಾರಿಗೆ ಬಂದಿದ್ದು, ಜ್ವಾಲಾಮುಖಿ ಶಕ್ತಿಯಿಂದಲೇ ಕ್ರಿಪ್ಟೋ ನಾಣ್ಯದ ಮೈನಿಂಗ್‌ ಸಾಧ್ಯವಾಗಿದೆ. ಜ್ವಾಲಾಮುಖಿ ಉಷ್ಣತೆ ಬಳಸಿಕೊಂಡು ಕ್ರಿಪ್ಟೋಕರೆನ್ಸಿ ತಯಾರಿಸುತ್ತಿರುವುದ ಇದೇ ಮೊದಲೇನಲ್ಲ. ಈ ಹಿಂದೆಯೇ ಐಸ್‌ಲ್ಯಾಂಡ್‌ ಈ ಪ್ರಯೋಗ ನಡೆಸಿತ್ತು. ಐಸ್‌ಲ್ಯಾಂಡ್‌ನಲ್ಲಿ ಆರಂಭದಿಂದಲೂ ಜಿಯೋಥರ್ಮಲ್‌ ವಿದ್ಯುತ್‌ ಬಳಸಿಯೇ ಕ್ರಿಪ್ಟೋನಾಣ್ಯಗಳ ಮೈನಿಂಗ್‌ ನಡೆಸಲಾಗುತ್ತಿದೆ. ಇದೀಗ ಎಲ್‌ಸಾಲ್ವೆಡಾರ್ ಕೂಡ ಈ ನೀತಿಯನ್ನೇ ಹಿಂಬಾಲಿದೆ. ಎಲ್‌ಸಾಲ್ವೆಡಾರ್‌ನಲ್ಲಿ ನಾಲ್ಕನೇ ಒಂದು ಭಾಗದಷ್ಟು ವಿದ್ಯುತ್‌ ಅನ್ನು ಜಿಯೋಥರ್ಮಲ್‌ (ಭೂಉಷ್ಣ) ಶಕ್ತಿಯಿಂದ ಪಡೆಯುತ್ತಿದೆ. ಎಲ್ ಸಾಲ್ವೆಡಾರ್‌ನ ಈ ಕ್ರಮ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದಂತಾಗಿದೆ. ಕ್ರಿಪ್ಟೋ ನಾಣ್ಯಗಳ ಮೈನಿಂಗ್‌ ಅಧಿಕ ವಿದ್ಯುತ್‌ ಬೇಕಾಗುತ್ತದೆ. ಹೀಗಾಗಿ ಕ್ರಿಪ್ಟೋ ನಾಣ್ಯಗಳನ್ನು ಮೈನಿಂಗ್‌, ಬೃಹತ್‌ ಪ್ರಮಾಣದ ಇಂಗಾಲ ಹೊರಸೂಸುವಿಕೆಗೆ ಕಾರಣವಾಗಲಿದೆ ಎಂಬ ವಾದಗಳೂ ಇವೆ. ಆದರೆ, ಇದೀಗ ಈ ಎಲ್ಲ ವಾದಗಳಿಗೂ ಉತ್ತರ ಸಿಕ್ಕಂತಾಗಿದೆ. ನವೀಕರಿಸಬಹುದಾದ ಇಂಧನ ಮೂಲಗಳನ್ನು ಬಳಸಿ ಕ್ರಿಪ್ಟೋ ನಾಣ್ಯಗಳ ಮೈನಿಂಗ್ ಮಾಡುವುದರಿಂದ ಪರಿಸರಕ್ಕೆ ಯಾವುದೇ ಹಾನಿ ಸಂಭವಿಸದು. ಎಲ್‌ ಸಾಲ್ವೆಡಾರ್‌ ರಾಷ್ಟ್ರವು ತನ್ನ ಬಿಟ್‌ಕಾಯಿನ್ ಕಾನೂನನ್ನು ಸೆಪ್ಟೆಂಬರ್ 7 ರಂದು ಜಾರಿಗೊಳಿಸಿದೆ. ಈ ಬೆನ್ನಲ್ಲೇ ತನ್ನದೇ ಆದ ಚಿವೋ (Chivo) ಹೆಸರಿನ ಅಧಿಕೃತ 'ರಾಷ್ಟ್ರೀಯ ವರ್ಚುವಲ್‌ ವ್ಯಾಲೆಟ್‌' ಅನ್ನು ಬಿಡುಗಡೆ ಮಾಡಿದೆ.