ಜೂನ್‌ 1ರಿಂದ ಚಿನ್ನಕ್ಕೆ ಹಾಲ್‌ಮಾರ್ಕ್ ಕಡ್ಡಾಯ! ತಿಳಿಯಲೇಬೇಕಾದ ಮಾಹಿತಿ ಇದು!

ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳಿಗೆ ಇದೇ ವರ್ಷ ಜೂನ್ 1 ರಿಂದ ಹಾಲ್ಮಾರ್ಕಿಂಗ್ ಕಡ್ಡಾಯವಾಗಲಿದೆ ಎಂದು ಕೇಂದ್ರ ಸರಕಾರ ಮಂಗಳವಾರ ತಿಳಿಸಿದೆ. ಚಿನ್ನದ ಪರಿಶುದ್ಧತೆ ಅಥವಾ ಗುಣಮಟ್ಟವನ್ನು ದೃಢೀಕರಿಸಲು ಹಾಲ್‌ ಮಾಕ್‌ ಅಗತ್ಯ.

ಜೂನ್‌ 1ರಿಂದ ಚಿನ್ನಕ್ಕೆ ಹಾಲ್‌ಮಾರ್ಕ್ ಕಡ್ಡಾಯ! ತಿಳಿಯಲೇಬೇಕಾದ ಮಾಹಿತಿ ಇದು!
Linkup
ನವದೆಹಲಿ: ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳಿಗೆ ಇದೇ ವರ್ಷ ಜೂನ್ 1 ರಿಂದ ಹಾಲ್ಮಾರ್ಕಿಂಗ್ ಕಡ್ಡಾಯವಾಗಲಿದೆ ಎಂದು ಕೇಂದ್ರ ಸರಕಾರ ಮಂಗಳವಾರ ತಿಳಿಸಿದೆ. 2021ರ ಆರಂಭದಿಂದಲೇ ದೇಶಾದ್ಯಂತ ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳಿಗೆ ಹಾಲ್‌ಮಾರ್ಕಿಂಗ್‌ ಕಡ್ಡಾಯಗೊಳಿಸುವುದಾಗಿ ಕೇಂದ್ರ ಸರಕಾರ 2019 ರಲ್ಲೇ ಘೋಷಿಸಿತ್ತು. ವ್ಯಾಪಾರಿಗಳು ಹಾಲ್ಮಾರ್ಕಿಂಗ್‌ಗೆ ಅಳವಡಿಸಿಕೊಳ್ಳಲು ಮತ್ತು ತಮ್ಮನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ನಲ್ಲಿ ನೋಂದಾಯಿಸಿಕೊಳ್ಳಲು ಒಂದು ವರ್ಷಕ್ಕೂ ಹೆಚ್ಚು ಸಮಯಾವಕಾಶ ನೀಡಲಾಗಿತ್ತು. ಆದರೆ, ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಆಭರಣಕಾರರು ಹೆಚ್ಚು ಸಮಯ ಕೋರಿದ್ದರಿಂದ ಜೂನ್ 1 ರವರೆಗೆ ನಾಲ್ಕು ತಿಂಗಳು ಗಡುವನ್ನು ವಿಸ್ತರಿಸಲಾಗಿದೆ. 'ಜೂನ್ 1ರಿಂದ ನಾವು ಚಿನ್ನಾಭರಣಗಳಿಗೆ ಕಡ್ಡಾಯ ಹಾಲ್ಮಾರ್ಕಿಂಗ್ ಜಾರಿಗೊಳಿಸಲು ಸಂಪೂರ್ಣವಾಗಿ ಸಿದ್ಧರಿದ್ದೇವೆ ಮತ್ತು ಪ್ರಸ್ತುತ, ದಿನಾಂಕವನ್ನು ವಿಸ್ತರಿಸುವ ಯಾವುದೇ ಪ್ರಸ್ತಾಪವನ್ನು ನಾವು ಸ್ವೀಕರಿಸಿಲ್ಲ' ಎಂದು ಬಿಐಎಸ್ ಮಹಾನಿರ್ದೇಶಕ ಪ್ರಮೋದ್ ಕುಮಾರ್ ತಿವಾರಿ ತಿಳಿಸಿದ್ದಾರೆ. ಈವರೆಗೆ 34,647 ಆಭರಣಕಾರರು ಬಿಐಎಸ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ.'ಮುಂದಿನ ಒಂದು-ಎರಡು ತಿಂಗಳಲ್ಲಿ, ಸುಮಾರು 1 ಲಕ್ಷ ಆಭರಣ ವ್ಯಾಪಾರಿಗಳ ನೋಂದಣಿಯನ್ನು ನಿರೀಕ್ಷಿಸುತ್ತೇವೆ' ಎಂದು ಅವರು ಹೇಳಿದರು. ನೋಂದಣಿ ಪ್ರಕ್ರಿಯೆಯನ್ನು ಆನ್‌ಲೈನ್ ಮತ್ತು ಸ್ವಯಂಚಾಲಿತವಾಗಿ ಮಾಡಲಾಗಿದೆ. ಕಡ್ಡಾಯ ಜಾರಿ ಹೇಗೆ? ಸರಕಾರ 14, 18 ಮತ್ತು 22 ಕ್ಯಾರಟ್‌ ಬಂಗಾರದ ಮೇಲೆ ಹಾಲ್‌ ಮಾರ್ಕ್ ಅನ್ನು ಕಡ್ಡಾಯಗೊಳಿಸಲು ಉದ್ದೇಶಿಸಿದೆ. ಈಗಾಗಲೇ ಬ್ರ್ಯಾಂಡೆಡ್‌ ಜ್ಯುವೆಲ್ಲರಿ ಮಳಿಗೆಗಳಲ್ಲಿ ಹಾಲ್‌ ಮಾರ್ಕ್ ಸಾಮಾನ್ಯವಾಗಿದೆ. ಮೂಲಗಳ ಪ್ರಕಾರ ಮೆಟ್ರೊ ನಗರಗಳಲ್ಲಿ ಮೊದಲು ಕಡ್ಡಾಯವಾಗಲಿದೆ. ನಂತರ ಮೂರು ಹಂತಗಳಲ್ಲಿ ಉಳಿದ ಕಡೆ ಕಡ್ಡಾಯವಾಗಲಿದೆ. ಸರಕಾರ 861 ಹಾಲ್‌ ಮಾರ್ಕಿಂಗ್‌ ಕೇಂದ್ರಗಳನ್ನೂ ತೆರೆಯುವ ಉದ್ದೇಶ ಹೊಂದಿದೆ. ಏನಿದು ಹಾಲ್‌ ಮಾರ್ಕ್? ಗ್ರಾಹಕ ಬಳಕೆಯ ವಸ್ತುಗಳಿಗೆ ಐಎಸ್‌ಐ, ಖಾದ್ಯ ವಸ್ತುಗಳಿಗೆ ಅಗ್‌ಮಾರ್ಕ್ ಇದ್ದಂತೆ ಚಿನ್ನಾಭರಣಗಳ ಶುದ್ಧತೆಗೆ ಹಾಲ್‌ಮಾರ್ಕ್. ಆಭರಣದಲ್ಲಿ ಬಳಸಲಾಗಿರುವ ಚಿನ್ನದ ಶುದ್ದತೆಗೆ ಇದೊಂದು ಪ್ರಮಾಣ ಪತ್ರ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಶತಮಾನಗಳಿಂದಲೂ ಹಾಲ್‌ಮಾರ್ಕ್ ಶುದ್ಧತೆಗೆ ಮಾನದಂಡವಾಗಿದೆ. ಭಾರತದಲ್ಲಿ ಇದುವರೆಗೆ ಆಭರಣ ತಯಾರಕರಿಗೆ ಹಾಲ್‌ಮಾರ್ಕ್ ಕಡ್ಡಾಯವಾಗಿಲ್ಲ. ತಮ್ಮ ಆಭರಣಗಳಿಗೆ ಹಾಲ್‌ಮಾರ್ಕ್ ಪಡೆಯುವುದು ಅವರ ಆಯ್ಕೆಗೆ ಬಿಟ್ಟ ವಿಚಾರ. 2000ದಿಂದಲೇ ಹಾಲ್‌ಮಾರ್ಕ್ ಸೌಲಭ್ಯ ಭಾರತದಲ್ಲಿಆರಂಭವಾಗಿದ್ದು, 2005 ರಿಂದ ಬೆಳ್ಳಿ ಮತ್ತಿತರ ಪ್ರಶಸ್ತ ಲೋಹಗಳ ಆಭರಣಗಳಿಗೂ ಹಾಲ್‌ಮಾರ್ಕ್ ಸೌಲಭ್ಯ ಶುರುವಾಗಿದೆ. ಗ್ರಾಹಕರಲ್ಲೂ ಹಾಲ್‌ಮಾರ್ಕ್ ಕುರಿತ ಜಾಗೃತಿ ಹೆಚ್ಚತೊಡಗಿದೆ. ಯಾಕೆ ಅಗತ್ಯ? ಚಿನ್ನದ ಪರಿಶುದ್ಧತೆ ಅಥವಾ ಗುಣಮಟ್ಟವನ್ನು ದೃಢೀಕರಿಸಲು ಹಾಲ್‌ ಮಾಕ್‌ ಅಗತ್ಯ. ಇದು ಇದ್ದರೆ ಚಿನ್ನದ ಮರು ಮಾರಾಟದ ವೇಳೆ ಗ್ರಾಹಕರಿಗೆ ಆಗಿನ ಮಾರುಕಟ್ಟೆಯಲ್ಲಿನ ದರವೇ ಸಿಗುತ್ತದೆ. ಭಾರತವು ಚಿನ್ನದ ಅತಿದೊಡ್ಡ ಆಮದುದಾರರಾಗಿದ್ದು, ಇದು ಮುಖ್ಯವಾಗಿ ಆಭರಣ ಉದ್ಯಮದ ಬೇಡಿಕೆಯನ್ನು ಪೂರೈಸುತ್ತದೆ.ಪರಿಮಾಣದಲ್ಲಿ, ದೇಶವು ವಾರ್ಷಿಕವಾಗಿ 700-800 ಟನ್ ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ.