ಹೊಸ ಲಸಿಕೆ ಕಾರ್ಯಕ್ರಮಕ್ಕೆ ಸುಮಾರು 50,000 ಕೋಟಿ ರೂ ವೆಚ್ಚ: ಹಣಕಾಸು ಸಚಿವಾಲಯ

ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ ದೇಶದ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಸುಮಾರು 50,000 ಕೋಟಿ ರೂ ವೆಚ್ಚವಾಗಲಿದೆ. ಸರ್ಕಾರದ ಬಳಿ ಇಷ್ಟು ಹಣವಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಹೊಸ ಲಸಿಕೆ ಕಾರ್ಯಕ್ರಮಕ್ಕೆ ಸುಮಾರು 50,000 ಕೋಟಿ ರೂ ವೆಚ್ಚ: ಹಣಕಾಸು ಸಚಿವಾಲಯ
Linkup
ಹೊಸದಿಲ್ಲಿ: ಲಸಿಕೆಗಳ ಕುರಿತಂತೆ ಪ್ರಧಾನಿ ಸೋಮವಾರ ಮಹತ್ವದ ಘೋಷಣೆ ಮಾಡಿದ್ದರು. 18ರಿಂದ ಮೇಲ್ಪಟ್ಟ ಎಲ್ಲರಿಗೂ ರಾಜ್ಯ ಸರ್ಕಾರಗಳೇ ನೀಡಬೇಕು ಎಂಬ ಸೂಚನೆಯನ್ನು ಹಿಂದಕ್ಕೆ ಪಡೆದುಕೊಂಡು, ಪ್ರತಿಯೊಬ್ಬರಿಗೂ ಕೇಂದ್ರದಿಂದಲೇ ಲಸಿಕೆ ನೀಡುವುದಾಗಿ ಪ್ರಧಾನಿ ಸೂಚಿಸಿದ್ದರು. ಈ ಕಾರ್ಯಕ್ರಮಕ್ಕೆ ಸುಮಾರು 50,000 ಕೋಟಿ ರೂ ವೆಚ್ಚವಾಗಲಿದೆ ಹಾಗೂ ಸರ್ಕಾರದ ಬಳಿ ಅಷ್ಟು ಹಣವಿದೆ ಎಂದು ಮಂಗಳವಾರ ತಿಳಿಸಿದೆ. 'ಸಾಕಷ್ಟು ಪ್ರಮಾಣದಲ್ಲಿ ನಿಧಿ ಇರುವುದರಿಂದ ತಕ್ಷಣವೇ ಪೂರಕ ಅನುದಾನಗಳಿಗಾಗಿ ನಾವು ಮುಂದಾಗುವ ಅಗತ್ಯವಿಲ್ಲ. ಸಂಸತ್‌ನ ಚಳಿಗಾಲದ ಅಧಿವೇಶನದ ಸಮಯದಲ್ಲಿ ನಾವು ಇದರಲ್ಲಿ ಎರಡನೆಯ ಸುತ್ತಿಗೆ ಹೋಗಬೇಕಾಗಬಹುದು. ಪ್ರಸ್ತುತ ನಮ್ಮ ಬಳಿ ಹಣವಿದೆ' ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ. ತನ್ನ ವ್ಯಾಕ್ಸಿನ್ ಅಗತ್ಯಗಳನ್ನು ಪೂರೈಸಿಕೊಳ್ಳಲು ವಿದೇಶಿ ಲಸಿಕೆಗಳ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿಲ್ಲ ಎಂದು ಸಚಿವಾಲಯ ಹೇಳಿದೆ. 'ಭಾರತ್ ಬಯೋಟೆಕ್, ಸೀರಂ ಸಂಸ್ಥೆ ಮತ್ತು ಬಯೋ-ಇ ಕಂಪೆನಿಗಳ ಸುತ್ತ ನಮ್ಮ ಖರೀದಿ ಕಾರ್ಯಕ್ರಮ ಯೋಜನೆಗಳಿವೆ. ಈ ಲಸಿಕೆ ಉತ್ಪಾದಕರಿಂದಲೇ ನಾವು ನಮ್ಮ ಜನಸಂಖ್ಯೆಗೆ ಲಸಿಕೆಗಳನ್ನು ಪೂರೈಕೆ ಮಾಡಲು ಸಾಧ್ಯವಿದೆ' ಎಂದು ಮೂಲಗಳು ತಿಳಿಸಿವೆ. ಫೈಜರ್ ಮತ್ತು ಮಾಡೆರ್ನಾ ಲಸಿಕೆ ಕಂಪೆನಿಗಳು ಭಾರತದಲ್ಲಿ ಲಸಿಕೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಾದರೂ ಕಾನೂನಿನ ರಕ್ಷಣೆ ನೀಡಬೇಕು ಹಾಗೂ ಅವುಗಳನ್ನು ಅಮೆರಿಕದ ನ್ಯಾಯಾಲಯಕ್ಕೆ ಮಾತ್ರ ಪ್ರಶ್ನಿಸಬೇಕು ಎಂಬ ವಿನಾಯಿತಿಗಾಗಿ ಬೇಡಿಕೆ ಇರಿಸಿರುವುದರಿಂದ, ಈ ಕಂಪೆನಿಗಳ ಜತೆಗಿನ ಮಾತುಕತೆಯನ್ನು ತಡೆಹಿಡಿಯಲಾಗಿದೆ. ಪ್ರಸ್ತುತ ಮಾಡೆರ್ನಾ ಕಂಪೆನಿಯು ಮುಂದಿನ ಜನವರಿವರೆಗೂ ಭಾರತಕ್ಕೆ ಪ್ರವೇಶಿಸುವ ಉದ್ದೇಶ ಹೊಂದಿಲ್ಲ ಎಂದು ಸಚಿವಾಲಯ ಹೇಳಿದೆ. ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಜತೆಗೆ ದೇಶದಲ್ಲಿ ರಷ್ಯಾದ ಸ್ಪುಟ್ನಿಕ್ ಲಸಿಕೆಯನ್ನೂ ಬಳಸಲಾಗುತ್ತಿದೆ. ಆದರೆ ಸ್ಪುಟ್ನಿಕ್ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿಲ್ಲದ ಕಾರಣ ಅದರ ಖರೀದಿಯನ್ನು ಇನ್ನೂ ಆರಂಭಿಸಿಲ್ಲ. ಕೇಂದ್ರ ಸರ್ಕಾರ ಕಳೆದ ವಾರ ಹೈದರಾಬಾದ್ ಮೂಲದ ಬಯಾಲಾಜಿಕಲ್-ಇ ಕಂಪೆನಿಯ 30 ಕೋಟಿ ಡೋಸ್ ಕೋವಿಡ್ ಲಸಿಕೆಗಾಗಿ 1500 ರೂಪಾಯಿ ಮುಂಗಡ ಹಣ ನೀಡಿತ್ತು.