ಗೋಲ್ಡ್‌ ಬಾಂಡ್‌ ಅಡಮಾನ ಸಾಲಕ್ಕೆ ಬ್ಯಾಂಕ್‌ಗಳ ನಿರಾಸಕ್ತಿ!

ರಾಷ್ಟ್ರೀಯ ಉಳಿತಾಯ ಪತ್ರ(ಎನ್‌ಎಸ್‌ಸಿ), ಕಿಸಾನ್‌ ವಿಕಾಸ್‌ ಪತ್ರಗಳನ್ನು (ಕೆವಿಪಿ) ಬ್ಯಾಂಕ್‌ಗಳಲ್ಲಿ ಅಡಮಾನ ಇಟ್ಟು ಸುಲಭವಾಗಿ ಸಾಲ ಪಡೆಯುವಂತೆ, ಸಾವರಿನ್‌ ಗೋಲ್ಡ್‌ ಬಾಂಡ್‌(ಎಸ್‌ಜಿಬಿ) ಯೋಜನೆಯಲ್ಲಿ ಸಾಲ ಸಿಗುವುದಿಲ್ಲ

ಗೋಲ್ಡ್‌ ಬಾಂಡ್‌ ಅಡಮಾನ ಸಾಲಕ್ಕೆ ಬ್ಯಾಂಕ್‌ಗಳ ನಿರಾಸಕ್ತಿ!
Linkup
ಎಸ್‌.ಜಿ. ಕುರ್ಯ ಉಡುಪಿ ರಾಷ್ಟ್ರೀಯ ಉಳಿತಾಯ ಪತ್ರ (ಎನ್‌ಎಸ್‌ಸಿ), ಕಿಸಾನ್‌ ವಿಕಾಸ್‌ ಪತ್ರಗಳನ್ನು (ಕೆವಿಪಿ) ಬ್ಯಾಂಕ್‌ಗಳಲ್ಲಿ ಅಡಮಾನ ಇಟ್ಟು ಸುಲಭವಾಗಿ ಸಾಲ ಪಡೆಯುವಂತೆ, ಸಾವರಿನ್‌ ಗೋಲ್ಡ್‌ ಬಾಂಡ್‌(ಎಸ್‌ಜಿಬಿ) ಯೋಜನೆಯಲ್ಲಿ ಸಾಲ ಸಿಗುವುದಿಲ್ಲ. ಬ್ಯಾಂಕ್‌ಗಳು ಈ ಬಗ್ಗೆ ನಿರಾಸಕ್ತಿ ವಹಿಸಿರುವುದೂ ಇದಕ್ಕೆ ಕಾರಣ ಎಂದು ಹಣಕಾಸು ತಜ್ಞರು ತಿಳಿಸಿದ್ದಾರೆ. ಭಾರತೀಯ ರಿಸರ್ವ್‌ ಬ್ಯಾಂಕ್‌ ಹೊರಡಿಸಿದ ಆದೇಶದ ಪ್ರಕಾರ ಗೋಲ್ಡ್‌ ಬಾಂಡ್‌ ಆಧಾರದಲ್ಲಿ ಸಾಲ ಪಡೆಯೋದು ಗ್ರಾಹಕನ ಹಕ್ಕಲ್ಲ. ಈ ನಿಟ್ಟಿನಲ್ಲಿ ಬ್ಯಾಂಕ್‌ಗಳೇ ನಿರ್ಧಾರ ಕೈಗೊಳ್ಳಬೇಕು. ಹೀಗಾಗಿ ಬ್ಯಾಂಕ್‌ಗಳು ಗೋಲ್ಡ್‌ ಬಾಂಡ್‌ ಕೊಡಲು ಯಾವುದೇ ಆಸಕ್ತಿ ವಹಿಸಿಲ್ಲ. ಚಿನ್ನದ ಆಮದು ಕಡಿತಕ್ಕೆ ಕೇಂದ್ರ ಸರಕಾರ 2015ರ ಅ.30ಕ್ಕೆ ಸಾವರಿನ್‌ ಗೋಲ್ಡ್‌ ಬಾಂಡ್‌ ಜಾರಿಗೆ ತಂದಿದ್ದು, ಹಣ ಹೂಡಿಕೆಯ 44ನೇ ಬಾರಿಯ ಅವಕಾಶ ಸೆ.3ಕ್ಕೆ ಕೊನೆಗೊಳ್ಳಲಿದ್ದು, ಈ ತನಕ ಒಟ್ಟು 50 ಸಾವಿರ ಕೋಟಿ ರೂ. ಹೂಡಿಕೆಯಾಗಿದೆ. ಬ್ಯಾಂಕ್‌, ಅಂಚೆ ಕಚೇರಿ, ಷೇರು ಮಾರುಕಟ್ಟೆ ಮೂಲಕ ಕನಿಷ್ಠ 1 ಗ್ರಾಂನಿಂದ ಗರಿಷ್ಠ 4 ಕೆಜಿ ಖರೀದಿಸಬಹುದು. ಗೋಲ್ಡ್‌ ಬಾಂಡ್‌ ಅವಧಿ 8 ವರ್ಷ, ವಾರ್ಷಿಕ ಶೇ. 2.5 ಬಡ್ಡಿ ಲಭ್ಯವಿದ್ದು, 5ನೇ ವರ್ಷದ ಬಳಿಕ ಮೊತ್ತ ಪೂರ್ಣ ನಗದೀಕರಣ ಅವಕಾಶವಿದೆ. ಚಿನ್ನಕ್ಕಿಂತ ಗೋಲ್ಡ್‌ ಬಾಂಡ್‌ ಮನೆಯಲ್ಲಿಟ್ಟುಕೊಳ್ಳುವುದು, ಡಿಮ್ಯಾಟ್‌ ಖಾತೆಯಲ್ಲಿ ಹೊಂದುವುದು ಸುರಕ್ಷಿತ. ಗೋಲ್ಡ್‌ ಬಾಂಡ್‌ ಸಾಲ ನೀಡಲು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಇನ್ನೂ ಸ್ಪಷ್ಟ ಮಾರ್ಗದರ್ಶಿ ಸೂತ್ರವಿಲ್ಲ. ಸಹಕಾರಿ ಬ್ಯಾಂಕ್‌, ಕೋ-ಆಪರೇಟಿವ್‌ ಸೊಸೈಟಿಗಳಲ್ಲೂ ಗೋಲ್ಡ್‌ ಬಾಂಡ್‌ ಅಡಮಾನ ಸಾಲ ಸಿಗೋದಿಲ್ಲ. ಅನ್ಯ ಸಾಲಕ್ಕೆ ಭದ್ರತೆಯಾಗಿ ಸಾವರಿನ್‌ ಗೋಲ್ಡ್‌ ಬಾಂಡ್‌ ಪಡೆದುಕೊಳ್ಳಲಾಗುತ್ತಿದೆ. ಡಿಮ್ಯಾಟ್‌ ಖಾತೆ ಹೊಂದಿದ್ದರೆ ಷೇರಿನ ಮೇಲೆ ಪಡೆಯುವ ಸಾಲದಂತೆ ಗೋಲ್ಡ್‌ ಬಾಂಡ್‌ ಮೇಲೆ ಬ್ಯಾಂಕ್‌ಗಳು ಲೀನ್‌(ಹಕ್ಕು ಗುರುತು) ಮಾಡಿಕೊಂಡು ಸಾಲ ನೀಡುತ್ತವೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ(ಎಸ್‌ಬಿಐ) ಡಿಮ್ಯಾಟ್‌ನಲ್ಲಿರುವ ಗೋಲ್ಡ್‌ ಬಾಂಡ್‌ ಮೇಲೆ ಶೇ.60ರಿಂದ 75ರಷ್ಟು ಸಾಲ ನೀಡಿದರೂ ಚಿನ್ನದ ಅಡಮಾನ ಸಾಲಕ್ಕಿಂತ ಶೇ.2 ಬಡ್ಡಿ ಅಧಿಕ ಪಡೆಯುತ್ತಿದೆ. ಬ್ಯಾಂಕ್‌ಗಳು ಚಿನ್ನದ ಮೇಲೆ ನೀಡುವ ಸಾಲದ ನಿಯಮ ಸಾವರಿನ್‌ ಗೋಲ್ಡ್‌ ಬಾಂಡ್‌ಗೆ ಅನ್ವಯವಾಗದೆನ್ನುವುದು ಕೆಲ ಬ್ಯಾಂಕ್‌ ಅಧಿಕಾರಿಗಳ ವಾದ. ಸಾಲಕ್ಕೆ ವರ್ಗಾಯಿಸಬಹುದು: ಬ್ಯಾಂಕ್‌, ಅಂಚೆ ಕಚೇರಿಯಲ್ಲಿ ಭೌತಿಕವಾಗಿ ಖರೀದಿಸಿದ ಗೋಲ್ಡ್‌ ಬಾಂಡ್‌ಗಳನ್ನು ಆನ್‌ಲೈನಲ್ಲಿ ಎಫ್‌ ಫಾರ್ಮ್‌ ಪಡೆದು ಅನ್ಯರಿಂದ ಪಡೆದ ತುರ್ತು ಸಾಲಕ್ಕೆ ಅಥವಾ ಗಿಫ್ಟ್‌ ರೂಪದಲ್ಲೂ ವರ್ಗಾಯಿಸಬಹುದು, ನಾಮಿನೇಶನ್‌ಗೂ ಅವಕಾಶವಿದೆ. ಗೋಲ್ಡ್‌ ಬಾಂಡ್‌ ಅವಧಿ ತೀರಿದ ಬಳಿಕ ಪಡೆಯುವ ಮೊತ್ತಕ್ಕೆ ಯಾವುದೇ ತೆರಿಗೆಯಿಲ್ಲ. ಗೋಲ್ಡ್‌ ಬಾಂಡ್‌ ಮೂಲ ಯೋಜನೆಯ ಮಾರ್ಗದರ್ಶಿ ಸೂತ್ರ ಪ್ರಕಾರ ಅಡಮಾನ ಸಾಲ ಪಡೆಯುವ ಅವಕಾಶವಿದೆ. ಆದರೆ ಆನ್‌ಲೈನ್‌ ಮೂಲಕ ಲೀನ್‌(ಹಕ್ಕು ಗುರುತು) ಕುರಿತು ಗೊಂದಲವಿದೆ. ಈ ನಿಟ್ಟಿನಲ್ಲಿ ಅಂಚೆ ಕಚೇರಿ ಅಧಿಕಾರಿಗಳು ಮತ್ತು ಅನ್ಯ ಬ್ಯಾಂಕ್‌ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. -ಪಿ.ಎಂ. ಪಿಂಜಾರಾ, ಮುಖ್ಯ ಪ್ರಬಂಧಕರು, ಜಿಲ್ಲಾಮಾರ್ಗದರ್ಶಿ ಕೆನರಾ ಬ್ಯಾಂಕ್‌, ಉಡುಪಿ ಎನ್‌ಎಸ್‌ಸಿ, ಕೆವಿಪಿ, ಟೈಮ್‌ ಡೆಪಾಸಿಟ್‌ ಅಡಮಾನಕ್ಕೆ ಬ್ಯಾಂಕ್‌ಗಳು ಶೇ.70ರಿಂದ 80 ಸಾಲ ನೀಡುತ್ತವೆ. ಸಾಲ ಮರಳದಿದ್ದರೆ ಅವಧಿ ತೀರಿದ ಬಳಿಕ ಬ್ಯಾಂಕ್‌ ಖಾತೆಗೆ ಅಡಮಾನ ಪತ್ರದ ಮೊತ್ತ ಜಮೆಯಾಗುತ್ತದೆ. ಗೋಲ್ಡ್‌ ಬಾಂಡ್‌ ಮೇಲೆ ಅಂಚೆ ಕಚೇರಿಯಲ್ಲಿ ಸಾಲ ನೀಡುವ ವ್ಯವಸ್ಥೆಯಿಲ್ಲ. -ನವೀನ್‌ಚಂದ್ರ, ಸೂಪರಿಂಟೆಂಡೆಂಟ್‌ ಆಫ್‌ ಪೋಸ್ಟ್‌ ಆಫೀಸ್‌, ಉಡುಪಿ ವಿಭಾಗ