ಕೋವಿಡ್ ಸಂಕಷ್ಟ: ತವರು ಜಿಲ್ಲೆ ಮಂಡ್ಯಗೆ ಸಹಾಯ ಹಸ್ತ ಚಾಚಿದ 'ರಾಜಕುಮಾರ' ನಿರ್ಮಾಪಕ ವಿಜಯ್ ಕಿರಗಂದೂರು

ಕೋವಿಡ್‌ನಿಂದಾಗಿ ಸಂಕಷ್ಟದಲ್ಲಿರುವ ತಮ್ಮ ತವರು ಜಿಲ್ಲೆ ಮಂಡ್ಯದ ಜನರಿಗೆ ನೆರವಾಗಲು ವಿಜಯ್ ಕಿರಗಂದೂರು ಮನಸ್ಸು ಮಾಡಿದ್ದಾರೆ.

ಕೋವಿಡ್ ಸಂಕಷ್ಟ: ತವರು ಜಿಲ್ಲೆ ಮಂಡ್ಯಗೆ ಸಹಾಯ ಹಸ್ತ ಚಾಚಿದ 'ರಾಜಕುಮಾರ' ನಿರ್ಮಾಪಕ ವಿಜಯ್ ಕಿರಗಂದೂರು
Linkup
ಹೊಂಬಾಳೆ ಫಿಲ್ಮ್ಸ್ ಮೂಲಕ 'ರಾಜಕುಮಾರ', 'ಕೆಜಿಎಫ್' ನಂತಹ ಸೂಪರ್ ಡ್ಯೂಪರ್ ಹಿಟ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿರುವ ನಿರ್ಮಾಪಕ ಇದೀಗ ತಮ್ಮ ತವರು ಜಿಲ್ಲೆ ಮಂಡ್ಯಗೆ ಸಹಾಯ ಹಸ್ತ ಚಾಚಲು ಮುಂದಾಗಿದ್ದಾರೆ. ಕೋವಿಡ್‌ನಿಂದಾಗಿ ಇಡೀ ದೇಶ ತತ್ತರಿಸಿದೆ. ಕರ್ನಾಟಕದಲ್ಲೂ ಕೊರೊನಾ ವೈರಸ್ ಅಬ್ಬರ ವಿಪರೀತವಾಗಿದ್ದು, ಸೋಂಕಿತರ ಚಿಕಿತ್ಸೆಗಾಗಿ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಕಾಡುತ್ತಿದೆ. ಆಕ್ಸಿಜನ್‌ಗಾಗಿ ಹಾಹಾಕಾರ ಉಂಟಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತಮ್ಮ ತವರು ಜಿಲ್ಲೆ ಮಂಡ್ಯದ ಜನರಿಗೆ ನೆರವಾಗಲು ವಿಜಯ್ ಕಿರಗಂದೂರು ಮನಸ್ಸು ಮಾಡಿದ್ದಾರೆ. ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗಾಗಿ ಮಂಡ್ಯದಲ್ಲಿ ಸುಸಜ್ಜಿತ 50 ಐಸಿಯು ಬೆಡ್ ವ್ಯವಸ್ಥೆ ಅಥವಾ 500 ಎಲ್.ಪಿ.ಎಂ ಸಾಮರ್ಥ್ಯದ ಎರಡು ಘಟಕ ಸ್ಥಾಪನೆಗೆ ನೆರವು ನೀಡಲು ವಿಜಯ್ ಕಿರಗಂದೂರು ನಿರ್ಧರಿಸಿದ್ದಾರೆ. ಈ ಕುರಿತಾಗಿ ಜಿಲ್ಲಾಧಿಕಾರಿಗೆ ವಿಜಯ್ ಕಿರಗಂದೂರು ಈ-ಮೇಲ್ ಮಾಡಿದ್ದಾರೆ. ವಿಜಯ್ ಮೂಲತಃ ಜಿಲ್ಲೆಯ ಕಿರಗಂದೂರು ಗ್ರಾಮದವರು. ಬೆಂಗಳೂರಿನಲ್ಲಿ ಹೊಂಬಾಳೆ ಸಂಸ್ಥೆ ಸ್ಥಾಪಿಸಿ ಚಿತ್ರ ನಿರ್ಮಾಣ ಕಾರ್ಯದಲ್ಲಿ ವಿಜಯ್ ಕಿರಗಂದೂರು ತೊಡಗಿದ್ದಾರೆ. ಈಗಾಗಲೇ ತಮ್ಮ ಸಂಸ್ಥೆ ಅಡಿಯಲ್ಲಿ ಕೆಲಸ ಮಾಡುವ ಎಲ್ಲ ಕುಟುಂಬಗಳಿಗೂ ಉಚಿತ ಲಸಿಕೆ ನೀಡುವುದಾಗಿ ವಿಜಯ್ ಕಿರಗಂದೂರು ಘೋಷಿಸಿದ್ದರು. ಇದೀಗ ತಮ್ಮ ತವರು ಜಿಲ್ಲೆಯ ಮೇಲಿನ ಅಭಿಮಾನದಿಂದ ಮಂಡ್ಯ ಜನರ ನೆರವಿಗೆ ನಿಂತಿದ್ದಾರೆ ವಿಜಯ್ ಕಿರಗಂದೂರು. (ಚಿತ್ರಕೃಪೆ: ವಿಜಯ್ ಕಿರಗಂದೂರು ಫೇಸ್‌ಬುಕ್ ಪ್ರೊಫೈಲ್)