ಅಂಡರ್‌ವೇರ್‌ನಲ್ಲಿ ರೈಲಿನೊಳಗೆ ಶಾಸಕನ ಓಡಾಟ: ಪ್ರಯಾಣಿಕರ ಜೊತೆ ರಂಪಾಟ!

ಬಿಹಾರದ ಗೋಪಾಲಪುರ ಕ್ಷೇತ್ರದ ಜೆಡಿಯು ಶಾಸಕ ಗೋಪಾಲ್ ಮಂಡಲ್ ಅವರು ಪಟ್ನಾದಿಂದ ದಿಲ್ಲಿಗೆ ತೆರಳುವ ರೈಲಿನಲ್ಲಿ ಒಳ ಉಡುಪಿನಲ್ಲಿ ಓಡಾಡುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಆದರೆ ಅವರು ಅದನ್ನು ಸಮರ್ಥಿಸಿಕೊಂಡಿದ್ದಾರೆ.

ಅಂಡರ್‌ವೇರ್‌ನಲ್ಲಿ ರೈಲಿನೊಳಗೆ ಶಾಸಕನ ಓಡಾಟ: ಪ್ರಯಾಣಿಕರ ಜೊತೆ ರಂಪಾಟ!
Linkup
ಪಟ್ನಾ: ಬಿಹಾರದ ಆಡಳಿತಾರೂಢ ಎನ್‌ಡಿಎ ಸರ್ಕಾರದ ಜೆಡಿಯು ಗೋಪಾಲ್ ಮಂಡಲ್, ರೈಲಿನಲ್ಲಿ ಒಳ ಉಡುಪಿನಲ್ಲಿ ಓಡಾಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಬನಿಯನ್ ಮತ್ತು ಅಂಡರ್‌ವೇರ್ ಧರಿಸಿ ಅವರು ಬೋಗಿಯ ಒಳಗೆ ಓಡಾಡಿದ್ದು, ಸಹ ಪ್ರಯಾಣಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ರೈಲಿನಲ್ಲಿ ಕೆಲ ಕಾಲ ಗೊಂದಲದ ವಾತಾವರಣ ಉಂಟಾಗಿತ್ತು. ಪಟ್ನಾದಿಂದ ನವದೆಹಲಿಗೆ ತೇಜಸ್ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಗೋಪಾಲ್ ಮಂಡಲ್ ಗುರುವಾರ ಪ್ರಯಾಣಿಸಿದ್ದರು. ಈ ವೇಳೆ ಅವರು ಒಳ ಉಡುಪಿನಲ್ಲಿಯೇ ಅಡ್ಡಾಡಿದ್ದಾರೆ. ಶಾಸಕನ ವರ್ತನೆ ಕಂಡ ಇತರೆ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಶಾಸಕ ಕೂಡ ಪ್ರತ್ಯುತ್ತರ ನೀಡಿದ್ದಾರೆ. ಇದರಿಂದ ವಾಗ್ವಾದ ಜೋರಾಗಿ ಒಂದು ಹಂತದಲ್ಲಿ ಕೈ ಕೈ ಮಿಲಾಯಿಸುವ ಸ್ಥಿತಿಯೂ ಉಂಟಾಗಿತ್ತು. ರೈಲ್ವೆ ಪೊಲೀಸ್ ಪಡೆ (ಆರ್‌ಪಿಎಫ್) ಮತ್ತು ಟಿಕೆಟ್ ತಪಾಸಣಾಕಾರರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. 'ಶಾಸಕರ ವರ್ತನೆ ಬಗ್ಗೆ ಸಹ ಪ್ರಯಾಣಿಕರು ದೂರು ನೀಡಿದ್ದರು. ಪೊಲೀಸರು ಮತ್ತು ಟೆಕೆಟ್ ತಪಾಸಣಾಕಾರರು ಎರಡೂ ಕಡೆಯವರನ್ನು ಸಮಾಧಾನಪಡಿಸಿದರು' ಎಂದು ಪೂರ್ವ ಕೇಂದ್ರ ರೈಲ್ವೆಯ ಮುಖ್ಯ ಸಂಪರ್ಕಾಧಿಕಾರಿ ರಾಜೇಶ್ ಕುಮಾರ್ ತಿಳಿಸಿದ್ದಾರೆ. ಈ ರೀತಿ ಅರೆ ಬೆತ್ತಲೆ ಉಡುಪಿನಲ್ಲಿ ಇರುವುದಕ್ಕೆ ತಮ್ಮ ಅನಾರೋಗ್ಯ ಕಾರಣ ಎಂದು ಗೋಪಾಲ್ ಮಂಡಲ್ ಸಮರ್ಥಿಸಿಕೊಂಡಿದ್ದಾರೆ. 'ನಾನು ಆಗಷ್ಟೇ ರೈಲು ಏರಿದ್ದೆ ಮತ್ತು ಹೊಟ್ಟೆಯಲ್ಲಿ ಸಮಸ್ಯೆ ಉಂಟಾಗಿತ್ತು. ತಕ್ಷಣವೇ ಶೌಚಾಲಯಕ್ಕೆ ಹೋಗಬೇಕಿದ್ದರಿಂದ ಕುರ್ತಾ ಮತ್ತು ಪೈಜಾಮಾಗಳನ್ನು ಕಳಚಿ, ಹೆಗಲ ಮೇಲೆ ಟವೆಲ್ ಹಾಕಿಕೊಂಡು ಹೊರಟಿದ್ದೆ. ಆತುರದಲ್ಲಿ ಟವೆಲ್ ಅನ್ನು ಸೊಂಟಕ್ಕೆ ಸುತ್ತಿಕೊಂಡಿರಲಿಲ್ಲ. ಹೀಗಾಗಿ ಅಂಡರ್‌ವೇರ್ ಮತ್ತು ವೆಸ್ಟ್‌ನಲ್ಲಿದ್ದೆ. ನಾನು ಸುಳ್ಳು ಹೇಳುತ್ತಿಲ್ಲ' ಎಂದು ಹೇಳಿದ್ದಾರೆ. ಬಿಳಿ ಬನಿಯನ್‌ನಲ್ಲಿರುವ ಶಾಸಕ ರೈಲಿನ ಬೋಗಿಯಲ್ಲಿ ಅಡ್ಡಾಡುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಗೋಪಾಲಪುರ ವಿಧಾನಸಭೆ ಕ್ಷೇತ್ರದ ಶಾಸಕರಾಗಿರುವ ಅವರ ವರ್ತನೆ ತೀವ್ರ ಟೀಕೆಗೆ ಗುರಿಯಾಗಿದೆ. 'ಸಹ ಪ್ರಯಾಣಿಕರು ಅತಿಯಾಗಿ ವರ್ತಿಸಿದರು. ಒಬ್ಬ ವ್ಯಕ್ತಿ ನನ್ನ ಕೈ ಹಿಡಿದು ಬೆತ್ತಲೆಯಾಗಿ ಓಡಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿದ. ನನ್ನೊಂದಿಗೆ ಜಗಳವಾಡಿದ. ನಾನು ಶೌಚಾಲಯಕ್ಕೆ ಓಡಿದ್ದೆ. ವಾಪಸ್ ಬಂದಾಗ ಮತ್ತೆ ಜಗಳವಾಯಿತು. ಈ ರೀತಿ ಉಡುಪು ಧರಿಸಿದ್ದರೆ ಮಹಿಳೆಯರಿಗೆ ಕಿರಿಕಿರಿಯಾಗುತ್ತದೆ ಎಂದು ಆಕ್ಷೇಪಿಸಿದರು. ಆದರೆ ಅಲ್ಲಿ ಮಹಿಳಾ ಪ್ರಯಾಣಿಕರೇ ಇರಲಿಲ್ಲ. ನನ್ನ ವಯಸ್ಸು 60. ಈ ವಯಸ್ಸಿನಲ್ಲಿ ನನ್ನ ಬಗ್ಗೆ ಯಾರು ಮುಜುಗರಪಟ್ಟುಕೊಳ್ಳುತ್ತಾರೆ ಎಂದು ಪ್ರಶ್ನಿಸಿದೆ. ಆದರೂ ಆತ ಜಗಳ ಮುಂದುವರಿಸಿದ್ದ. ಕೊನೆಗೆ ನಾನೇ ಕ್ಷಮೆ ಕೋರಿದೆ' ಎಂದು ಹೇಳಿದ್ದಾರೆ.