ಕಾಮಗಾರಿಗಳ ಪೂರ್ಣಕ್ಕೆ ಗಡುವು ನಿಗದಿಪಡಿಸಿದ ಬಿಬಿಎಂಪಿ: ನಾಲ್ಕೈದು ತಿಂಗಳು ರಸ್ತೆ ಅಗೆತಕ್ಕೆ ಅನುಮತಿ ನೀಡದಿರಲು ನಿರ್ಧಾರ!

ರಸ್ತೆ ಗುಂಡಿಗಳನ್ನು ಮುಚ್ಚಲು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸುವುದಾಗಿ ಸೂಚಿಸಲಾಗಿದೆ. ಅದರಂತೆ, ಈಗಾಗಲೇ ಇಬ್ಬರು ಕಾರ್ಯನಿರ್ವಾಹಕ ಎಂಜಿನಿಯರ್‌ಗಳನ್ನು ಅಮಾನತುಗೊಳಿಸಲಾಗಿದೆ. ನಾಲ್ಕು ಎಂಜಿನಿಯರ್‌ಗಳಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗಿದೆ. ಈ ಮೂಲಕ ಉಳಿದವರಿಗೆ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ. ನಗರದಲ್ಲಿ ನವೆಂಬರ್‌ ಅಂತ್ಯದವರೆಗೆ ಎಡೆಬಿಡದೆ ಸುರಿದ ಮಳೆಗೆ ಮುಚ್ಚಿದ್ದ ಗುಂಡಿಗಳೆಲ್ಲವೂ ಬಾಯ್ದೆರೆದುಕೊಂಡು ವಾಹನ ಸವಾರರ ಜೀವಕ್ಕೆ ಕಂಟಕವಾಗಿವೆ.

ಕಾಮಗಾರಿಗಳ ಪೂರ್ಣಕ್ಕೆ ಗಡುವು ನಿಗದಿಪಡಿಸಿದ ಬಿಬಿಎಂಪಿ: ನಾಲ್ಕೈದು ತಿಂಗಳು ರಸ್ತೆ ಅಗೆತಕ್ಕೆ ಅನುಮತಿ ನೀಡದಿರಲು ನಿರ್ಧಾರ!
Linkup
ನಾಗಪ್ಪ ನಾಗನಾಯಕನಹಳ್ಳಿ, ಬೆಂಗಳೂರು: ನಗರದಲ್ಲಿ ಗುಂಡಿ ಬಿದ್ದು ಅಧ್ವಾನವಾಗಿರುವ ರಸ್ತೆಗಳ ದುರಸ್ತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಟಿ ಬೀಸಿದ ಬೆನ್ನಲ್ಲೇ ವೈಟ್‌ಟಾಪಿಂಗ್‌, ಟೆಂಡರ್‌ಶ್ಯೂರ್‌, ರಾಜಕಾಲುವೆಗಳ ಅಭಿವೃದ್ಧಿ, ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗಳ ಪೂರ್ಣಕ್ಕೆ ಗಡುವು ನೀಡಿದೆ. 4-5 ತಿಂಗಳು ರಸ್ತೆ ಅಗೆತಕ್ಕೆ ಅನುಮತಿ ನೀಡದಿರಲು ತೀರ್ಮಾನಿಸಿದೆ. ಬಿಬಿಎಂಪಿ ವ್ಯಾಪ್ತಿಯ 1344.34 ಕಿ.ಮೀ. ಉದ್ದದ ಆರ್ಟೀರಿಯಲ್‌ ಮತ್ತು ಸಬ್‌ ಆರ್ಟೀರಿಯಲ್‌ ರಸ್ತೆಗಳು, 13,638.83 ಕಿ.ಮೀ. ಉದ್ದದ ವಾರ್ಡ್‌ ರಸ್ತೆಗಳಲ್ಲಿನ ಗುಂಡಿಗಳನ್ನು 15 ದಿನದಲ್ಲಿ ಮುಚ್ಚಲು ಕ್ರಮ ವಹಿಸಬೇಕು. ಹಾಗೆಯೇ, 110 ಹಳ್ಳಿಗಳ ವ್ಯಾಪ್ತಿಯಲ್ಲಿನ ರಸ್ತೆಗಳ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಪ್ರಧಾನ ಎಂಜಿನಿಯರ್‌, ವಿಶೇಷ ಆಯುಕ್ತರು (ಯೋಜನೆ) ಗುಣಮಟ್ಟ ಕಾರ್ಯಾಚರಣೆ ವಿಧಾನವನ್ನು ಸಿದ್ಧಪಡಿಸಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕು. ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಕೈಗೊಂಡು ಪೂರ್ಣಗೊಳಿಸಬೇಕು ಎಂದು ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರು ಎಲ್ಲ ವಲಯ ಆಯುಕ್ತರು, ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್‌ಗಳಿಗೆ ಆದೇಶಿಸಿದ್ದಾರೆ. ರಸ್ತೆ ಗುಂಡಿಗಳನ್ನು ಮುಚ್ಚಲು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸುವುದಾಗಿ ಸೂಚಿಸಲಾಗಿದೆ. ಅದರಂತೆ, ಈಗಾಗಲೇ ಇಬ್ಬರು ಕಾರ್ಯನಿರ್ವಾಹಕ ಎಂಜಿನಿಯರ್‌ಗಳನ್ನು ಅಮಾನತುಗೊಳಿಸಲಾಗಿದೆ. ನಾಲ್ಕು ಎಂಜಿನಿಯರ್‌ಗಳಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗಿದೆ. ಈ ಮೂಲಕ ಉಳಿದವರಿಗೆ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ. ನಗರದಲ್ಲಿ ನವೆಂಬರ್‌ ಅಂತ್ಯದವರೆಗೆ ಎಡೆಬಿಡದೆ ಸುರಿದ ಮಳೆಗೆ ಮುಚ್ಚಿದ್ದ ಗುಂಡಿಗಳೆಲ್ಲವೂ ಬಾಯ್ದೆರೆದುಕೊಂಡು ವಾಹನ ಸವಾರರ ಜೀವಕ್ಕೆ ಕಂಟಕವಾಗಿವೆ. ರಸ್ತೆ ಗುಂಡಿ ಮುಚ್ಚಲು ವಾರ್ಡ್‌ಗೆ 20 ಲಕ್ಷ ನಗರದಲ್ಲಿನ 198 ವಾರ್ಡ್‌ಗಳಲ್ಲಿ 85,568 ರಸ್ತೆಗಳಿದ್ದು, 13,638.83 ಕಿ.ಮೀ. ಉದ್ದ ಇವೆ. ಪ್ರತಿಯೊಂದು ವಾರ್ಡ್‌ಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿ, ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಸಲುವಾಗಿಯೇ ತಲಾ 20 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ. ಈಗಾಗಲೇ ಟೆಂಡರ್‌ ಕರೆದು ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿದ್ದು, ಆರಂಭಿಸಲಾಗಿದೆ. ಒಟ್ಟು 85,568 ರಸ್ತೆಗಳ ಪೈಕಿ 10,927 ರಸ್ತೆಗಳ 2586.48 ಕಿ.ಮೀ. ಮಾರ್ಗದಲ್ಲಿ ಗುಂಡಿ ಬಿದ್ದಿರುವುದನ್ನು ಗುರುತಿಸಲಾಗಿತ್ತು. ಡಿ. 31ರವರೆಗೆ 7793 ರಸ್ತೆಗಳ 1774.50 ಕಿ.ಮೀ. ಮಾರ್ಗದಲ್ಲಿ ಗುಂಡಿಗಳನ್ನು ಮುಚ್ಚಲಾಗಿದೆ. ಇನ್ನು 3134 ರಸ್ತೆಗಳ 811.99 ಕಿ.ಮೀ. ಮಾರ್ಗದಲ್ಲಿ ಗುಂಡಿ ಮುಚ್ಚುವುದು ಬಾಕಿ ಇದೆ. ಮುಖ್ಯರಸ್ತೆಗಳಲ್ಲಿ 239 ಕಿ.ಮೀ. ದುರಸ್ತಿ ಬಾಕಿ ಪಾಲಿಕೆ ವ್ಯಾಪ್ತಿಯಲ್ಲಿ 1344.84 ಕಿ.ಮೀ. ಉದ್ದದ 470 ಆರ್ಟೀರಿಯಲ್‌ ಮತ್ತು ಸಬ್‌ ಆರ್ಟೀರಿಯಲ್‌ ರಸ್ತೆಗಳಿವೆ. ಇದರಲ್ಲಿ 1109.85 ಕಿ.ಮೀ. ಉದ್ದದ 392 ರಸ್ತೆಗಳನ್ನು ಬಿಬಿಎಂಪಿಯ ರಸ್ತೆ ಮೂಲಭೂತ ಸೌಕರ್ಯ ವಿಭಾಗವು ನಿರ್ವಹಣೆ ಮಾಡುತ್ತಿದೆ. ಈ ಪೈಕಿ 870.42 ಕಿ.ಮೀ. ಉದ್ದದ 315 ರಸ್ತೆಗಳು ಗುಂಡಿ ಮುಕ್ತವಾಗಿವೆ. ಉಳಿದ 239.44 ಕಿ.ಮೀ. ಉದ್ದದ 77 ರಸ್ತೆಗಳು ಗುಂಡಿ ಬಿದ್ದು ಅಧ್ವಾನವಾಗಿವೆ. ಈ ರಸ್ತೆಗಳನ್ನು 15 ದಿನಗಳಲ್ಲಿ ದುರಸ್ತಿಪಡಿಸಲು ಗುರಿ ಹಾಕಿಕೊಳ್ಳಲಾಗಿದೆ. ಜಲಮಂಡಳಿಯಿಂದ 2845 ಕಿ.ಮೀ. ಅಗೆತಪಾಲಿಕೆಯ 110 ಹಳ್ಳಿಗಳಲ್ಲಿ ಕುಡಿಯುವ ನೀರು ಮತ್ತು ಒಳಚರಂಡಿ ಸಂಪರ್ಕಕ್ಕಾಗಿ ಜಲಮಂಡಳಿಯು 2845.61 ಕಿ.ಮೀ. ಉದ್ದದ ರಸ್ತೆಯನ್ನು ಅಗೆದು ಹಾಕಿದೆ. ಈ ರಸ್ತೆಗಳ ದುರಸ್ತಿಗಾಗಿ ಸರಕಾರ 998.32 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯು ಟೆಂಡರ್‌ ಕರೆದು ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿದೆ. ಜಲಮಂಡಳಿಯು ಕಾಮಗಾರಿ ಪೂರ್ಣಗೊಳಿಸಿರುವ ರಸ್ತೆಗಳ ದುರಸ್ತಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಇದುವರೆಗೆ 717.25 ಕಿ.ಮೀ. ಉದ್ದದ ರಸ್ತೆಗಳನ್ನು ದುರಸ್ತಿಪಡಿಸಿ, ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಮಳೆಯಿಂದ ಡಾಂಬರು ಕಿತ್ತು ಬಂದು ರಸ್ತೆ ತುಂಬೆಲ್ಲಾ ಜಲ್ಲಿಕಲ್ಲು, ದೂಳು ಹರಡಿಕೊಂಡಿದೆ. 4-5 ತಿಂಗಳವರೆಗೆ ರಸ್ತೆ ಅಗೆತಕ್ಕೆ ಅನುಮತಿ ಇಲ್ಲ ಬಿಬಿಎಂಪಿ ವ್ಯಾಪ್ತಿಯ 1344 ಕಿ.ಮೀ. ಉದ್ದದ ಆರ್ಟೀರಿಯಲ್‌, ಸಬ್‌ ಆರ್ಟೀರಿಯಲ್‌ ರಸ್ತೆಗಳು ಹಾಗೂ 13,638.83 ಕಿ.ಮೀ. ಉದ್ದದ ವಾರ್ಡ್‌ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಚುರುಕುಗೊಳಿಸಲಾಗಿದೆ. ಹೀಗಾಗಿ, ಜಲಮಂಡಳಿ, ಬೆಸ್ಕಾಂ, ಕೆಪಿಟಿಸಿಎಲ್‌ ಹಾಗೂ ಇತರೆ ಇಲಾಖೆಗಳಿಗೆ ಮುಂದಿನ 4-5 ತಿಂಗಳ ಕಾಲ ರಸ್ತೆ ಅಗೆತಕ್ಕೆ ಅನುಮತಿ ನೀಡದಂತೆ ಮುಖ್ಯ ಆಯುಕ್ತರು ಎಲ್ಲ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಎಂಜಿನಿಯರ್‌ಗಳಿಗೆ ಅಮಾನತಿನ ಶಿಕ್ಷೆರಸ್ತೆ ಗುಂಡಿ ಮುಚ್ಚುವಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದ ಗಾಂಧಿನಗರ ವಿಭಾಗದ ಇಇ ಎನ್‌.ಎಸ್‌.ರೇವಣ್ಣ ಮತ್ತು ಯಲಹಂಕ ವಿಭಾಗದ ಇಇ ಸಿ.ಎಂ.ಶಿವಕುಮಾರ್‌ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಹಾಗೆಯೇ, ಶಿವಾಜಿನಗರ ವಿಭಾಗದ ಇಇ ಇ.ರಾಮಕೃಷ್ಣಪ್ಪ, ಬ್ಯಾಟರಾಯನಪುರ ವಿಭಾಗದ ಇಇ ಮೋಹನ್‌ದಾಸ್‌, ಬೊಮ್ಮನಹಳ್ಳಿ ವಲಯದ ರಸ್ತೆ ಮೂಲಸೌಕರ್ಯ ವಿಭಾಗದ ಇಇ ಎಚ್‌.ಎಸ್‌.ಮಹದೇಶ್‌, ದಾಸರಹಳ್ಳಿ ವಿಭಾಗದ ಇಇ ಎಚ್‌.ವಿ.ಯರಪ್ಪರೆಡ್ಡಿ ಅವರಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗಿದೆ. ''ಮಳೆ ಬಿಡುವು ಕೊಟ್ಟಾಗಿನಿಂದ ಇಲ್ಲಿಯವರೆಗೆ ಶೇ 75ರಷ್ಟು ದುರಸ್ತಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಬಾಕಿ 751 ಕಿ.ಮೀ. ಉದ್ದದ ರಸ್ತೆಗಳ ದುರಸ್ತಿಯಷ್ಟೇ ಬಾಕಿ ಇದ್ದು, 15 ದಿನದಲ್ಲಿ ಪೂರ್ಣಗೊಳಿಸಲಾಗುವುದು. 110 ಹಳ್ಳಿಗಳಲ್ಲಿನ ರಸ್ತೆಗಳ ದುರಸ್ತಿ, ವೈಟ್‌ಟಾಪಿಂಗ್‌, ಟೆಂಡರ್‌ಶ್ಯೂರ್‌, ರಾಜಕಾಲುವೆಗಳ ಅಭಿವೃದ್ಧಿ ಕಾಮಗಾರಿಗಳ ಪೂರ್ಣಕ್ಕೂ ಗಡುವು ನಿಗದಿಪಡಿಸಲಾಗಿದೆ". ಗೌರವ್‌ ಗುಪ್ತ, ಮುಖ್ಯ ಆಯುಕ್ತ, ಬಿಬಿಎಂಪಿ ಕಾಮಗಾರಿಗಳ ಪೂರ್ಣಕ್ಕೆ ನೀಡಿರುವ ಗಡುವು
  • ಬಿಬಿಎಂಪಿ ವ್ಯಾಪ್ತಿಯ ಆರ್ಟೀರಿಯಲ್‌, ಸಬ್‌ ಆರ್ಟೀರಿಯಲ್‌, ವಾರ್ಡ್‌ ರಸ್ತೆಗಳಲ್ಲಿನ ಗುಂಡಿ ಮುಚ್ಚಲು 15 ದಿನ ಗಡುವು
  • ವೈಟ್‌ಟಾಪಿಂಗ್‌ ಯೋಜನೆಯಡಿಯಲ್ಲಿ ಬಾಕಿ ಇರುವ 56 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು
  • ಆರ್ಟೀರಿಯಲ್‌ ಮತ್ತು ಸಬ್‌ ಆರ್ಟೀರಿಯಲ್‌ ರಸ್ತೆಗಳಲ್ಲಿ ಅನುಮೋದನೆಗೊಂಡು ಪ್ರಗತಿಯಲ್ಲಿರುವ 183 ಕಿ.ಮೀ. ಉದ್ದದ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಪೂರ್ಣಕ್ಕೆ ಫೆಬ್ರವರಿವರೆಗೆ ಕಾಲಾವಕಾಶ
  • ಟೆಂಡರ್‌ಶ್ಯೂರ್‌ ಯೋಜನೆಯಡಿಯಲ್ಲಿ ಬಾಕಿ ಇರುವ 30 ಕಿ.ಮೀ. ಉದ್ದದ ರಸ್ತೆಗಳ ಅಭಿವೃದ್ಧಿಯನ್ನು ಮಾರ್ಚ್ ಅಂತ್ಯದೊಳಗೆ ಮುಗಿಸಬೇಕು
  • ರಾಜಕಾಲುವೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಾಕಿ ಇರುವ 30 ಕಿ.ಮೀ. ಉದ್ದದ ಕಾಮಗಾರಿಗಳನ್ನು ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳಿಸಬೇಕು
  • ನಗರದಲ್ಲಿನ ರಸ್ತೆಗಳಲ್ಲಿ ಖಾಲಿ ಇರುವ ಕಂಬಗಳಿಗೆ ಹೊಸದಾಗಿ ಬೀದಿ ದೀಪ ಅಳವಡಿಕೆ, ವಿದ್ಯುತ್‌ ಕಂಬ ಹಾಗೂ ಕೇಬಲ್‌ ಅಳವಡಿಕೆ ಕಾಮಗಾರಿ ಕೈಗೊಳ್ಳಲು ಅಲ್ಪಾವಧಿ ಟೆಂಡರ್‌ ಆಹ್ವಾನಿಸಿ ಜನವರಿ ಅಂತ್ಯದೊಳಗೆ ಅನುಷ್ಠಾನಗೊಳಿಸಬೇಕು
  • ಟಿಡಿಆರ್‌ ಮತ್ತು ಭೂಸ್ವಾಧೀನಕ್ಕೆ ಸಂಬಂಧಿಸಿದ ಕಡತ ವಿಲೇವಾರಿಯಲ್ಲಿ ವಿಳಂಬವಾಗದಂತೆ ವಿಶೇಷ ಆಯುಕ್ತರು ಗಮನ ಹರಿಸಿ, ಅಗತ್ಯ ಬದಲಾವಣೆ ತರಬೇಕು
  • ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ ಮತ್ತು ಬನ್ನೇರುಘಟ್ಟ ರಸ್ತೆಯಲ್ಲಿ ಬಿಎಂಆರ್‌ಸಿಎಲ್‌ ವತಿಯಿಂದ ಬಾಕಿ ಇರುವ ರಸ್ತೆ ಕಾಮಗಾರಿಯನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಲು ಕ್ರಮ ವಹಿಸಬೇಕು