ಜಕ್ಕೂರು ವಾಯುನೆಲೆ ಬಳಿ ಎತ್ತರಿಸಿದ ಮೆಟ್ರೋ ಮಾರ್ಗ: ಹೈಕೋರ್ಟ್‌ ಆದೇಶ

ವಾಯುನೆಲೆ ಪ್ರದೇಶದಲ್ಲಿ ಎನ್‌ಒಸಿ ನೀಡುವ ಅಧಿಕಾರ ಹೊಂದಿರುವ ಉನ್ನತ ಮಟ್ಟದ ಸಮಿತಿಗೆ ಹೊಸದಾಗಿ ಎನ್‌ಒಸಿ ಕೋರಿ ಅರ್ಜಿ ಸಲ್ಲಿಸಬೇಕು. ಆ ಸಮಿತಿ ಎನ್‌ಒಸಿ ನೀಡುವವರೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಕಾಮಗಾರಿ ಆರಂಭಿಸುವಂತಿಲ್ಲ

ಜಕ್ಕೂರು ವಾಯುನೆಲೆ ಬಳಿ ಎತ್ತರಿಸಿದ ಮೆಟ್ರೋ ಮಾರ್ಗ: ಹೈಕೋರ್ಟ್‌ ಆದೇಶ
Linkup
: ಜಕ್ಕೂರು ವಾಯುನೆಲೆಯಲ್ಲಿ ವಿಮಾನಗಳ ಕಾರ್ಯಾಚರಣೆಗೆ ಅಡ್ಡಿಯಾಗದಂತೆ ಎತ್ತರಿಸಿದ ಮಾರ್ಗ ನಿರ್ಮಾಣಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಸೂಚಿಸಿರುವಂತೆ ರಾಜ್ಯ ಸರಕಾರ ಪರಿಹಾರ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಹೈಕೋರ್ಟ್‌ ಆದೇಶಿಸಿದೆ. ಅಲ್ಲದೆ, ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆಯುವವರೆಗೆ ಬಿಎಂಆರ್‌ಸಿಎಲ್‌ ಕಾಮಗಾರಿ ಆರಂಭಿಸುವಂತಿಲ್ಲ ಎಂದು ನಿರ್ದೇಶನ ನೀಡಿದೆ. ನಗರದ ವಕೀಲ ಅಜಯ್‌ ಕುಮಾರ್‌ ಪಾಟೀಲ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮನವಿ ಅಲಿಸಿದ ಸಿಜೆ ಎ. ಎಸ್‌. ಓಕ್‌ ನೇತೃತ್ವದ ವಿಭಾಗೀಯ ಪೀಠ, ಇತ್ತೀಚೆಗೆ ಈ ಆದೇಶ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿದೆ. ಸರಕಾರ ಪರಿಹಾರ ಕ್ರಮಗಳನ್ನು ಕೈಗೊಂಡ ಬಳಿಕ ವಾಯುನೆಲೆ ಪ್ರದೇಶದಲ್ಲಿ ಎನ್‌ಒಸಿ ನೀಡುವ ಅಧಿಕಾರ ಹೊಂದಿರುವ ಉನ್ನತ ಮಟ್ಟದ ಸಮಿತಿಗೆ ಹೊಸದಾಗಿ ಎನ್‌ಒಸಿ ಕೋರಿ ಅರ್ಜಿ ಸಲ್ಲಿಸಬೇಕು. ಆ ಸಮಿತಿ ಎನ್‌ಒಸಿ ನೀಡುವವರೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಕಾಮಗಾರಿ ಆರಂಭಿಸುವಂತಿಲ್ಲ ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ. 2020ರ ಸೆಪ್ಟೆಂಬರ್‌ನಲ್ಲಿ ಹೈಕೋರ್ಟ್‌ ಮೆಟ್ರೋ ನಿರ್ಮಾಣ ಕಾಮಗಾರಿಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ನಂತರ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಬ್‌ಸ್ಟಕಲ್‌ ಲಿಮಿಟೇಷನ್‌ ಸರ್ಫೇಸ್‌ ಸಮೀಕ್ಷೆಯಲ್ಲಿ ಉದ್ದೇಶಿತ ಮೆಟ್ರೋ ಮಾರ್ಗದಿಂದ ವಾಯುನೆಲೆಯ ರನ್‌ ವೇಗೆ ಅಡ್ಡಿಯಾಗಲಿದೆ ಎಂಬ ಅಂಶ ಕಂಡು ಬಂದಿತ್ತು. ಅದನ್ನು ಪರಿಗಣಿಸಿದ ಡಿಜಿಸಿಎ, ಮಾರ್ಗದ ಎತ್ತರ ಕಡಿತ ಮಾಡಬೇಕು ಅಥವಾ ರನ್‌ ವೇ ಕಡಿತಗೊಳಿಸುವಂತೆ ಸಲಹೆ ಮಾಡಿತ್ತು. 2021ರ ಮೇ 20ರಂದು ರಾಜ್ಯ ಸರಕಾರಕ್ಕೆ ಅಡ್ಡಿ ನಿವಾರಿಸಲು ಕ್ರಮ ಕೈಗೊಂಡ ಬಗ್ಗೆ ತಿಳಿಸಲು ಸೂಚನೆ ನೀಡಿತ್ತು. ನಂತರ ರಾಜ್ಯ ಸರಕಾರ, ರನ್‌ ವೇ ಕಡಿತಗೊಳಿಸಲು ನಿರ್ಧರಿಸಿತ್ತು.