ಕಪಿಲ್‌ ದೇವ್ ಜೊತೆ ಫೋಟೋ ತೆಗೆಸಿಕೊಳ್ಳಲು ಸಾಧ್ಯವಾಗದೇ ಕಣ್ಣೀರು ಹಾಕಿದ್ದ 'ಕಿಚ್ಚ' ಸುದೀಪ್

'ಕಿಚ್ಚ' ಸುದೀಪ್ ಅವರು ಇಂದು ಸೂಪರ್ ಸ್ಟಾರ್ ಆಗಿದ್ದಾರೆ. ಅವರೊಂದಿಗೆ ಒಂದು ಫೋಟೋ ತೆಗಿಸಿಕೊಳ್ಳಲು ಅನೇಕರು ಕಾದಿರುತ್ತಾರೆ. ಆದರೆ, 36 ವರ್ಷಗಳ ಹಿಂದೆ ಕಪಿಲ್‌ ದೇವ್‌ ಜೊತೆಗೆ ಫೋಟೋ ತೆಗೆಸಿಕೊಳ್ಳಲು ಸಾಧ್ಯವಾಗದೇ 'ಕಿಚ್ಚ' ಸುದೀಪ್ ಕಣ್ಣೀರು ಹಾಕಿದ್ದರು!

ಕಪಿಲ್‌ ದೇವ್ ಜೊತೆ ಫೋಟೋ ತೆಗೆಸಿಕೊಳ್ಳಲು ಸಾಧ್ಯವಾಗದೇ ಕಣ್ಣೀರು ಹಾಕಿದ್ದ 'ಕಿಚ್ಚ' ಸುದೀಪ್
Linkup
ರಣ್‌ವೀರ್ ಸಿಂಗ್-ದೀಪಿಕಾ ಪಡುಕೋಣೆ ಅಭಿನಯದ '83' ಸಿನಿಮಾವು ಡಿ.24ರಂದು ತೆರೆಗೆ ಬರಲು ಸಜ್ಜಾಗಿದೆ. ವಿಶೇಷವೆಂದರೆ, ಈ ಸಿನಿಮಾವು 1983ರ ವಿಶ್ವಕಪ್ ಪಂದ್ಯಾವಳಿ ಕುರಿತು ಮಾಡಲಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿರುವ ಈ ಸಿನಿಮಾದ ಕನ್ನಡ ವರ್ಷನ್ ಅನ್ನು ಕಿಚ್ಚ' ಸುದೀಪ್ ಅರ್ಪಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ '83' ತಂಡ ಹಾಗೂ ಕಿಚ್ಚ ಸುದೀಪ್ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಸುದೀಪ್, ಒಂದು ಸ್ವಾರಸ್ಯಕರ ಘಟನೆಯನ್ನು ಹಂಚಿಕೊಂಡರು. 'ಕಪಿಲ್‌ ದೇವ್‌ ಜೊತೆಗೆ ಫೋಟೋ ಸಿಕ್ಕಿರಲಿಲ್ಲ ಎಂದು ನಾನು ಅತ್ತಿದ್ದೆ' ಎಂದು ಅವರು ತಿಳಿಸಿದ್ದಾರೆ. ಇದು 36 ವರ್ಷಗಳ ಹಿಂದಿನ ಘಟನೆ 'ನಾನಿನ್ನೂ ಆಗ ತುಂಬ ಚಿಕ್ಕವನು. ಕಪಿಲ್‌ ದೇವ್ ಅವರನ್ನು ನೋಡಬೇಕು ಎಂದು ತುಂಬ ಆಸೆ ಇಟ್ಟುಕೊಂಡಿದ್ದೆ. ಭಾರತ ತಂಡ ಒಮ್ಮೆ ಬೆಂಗಳೂರಿನ ವೆಸ್ಟ್‌ಎಂಡ್‌ ಹೋಟೆಲ್‌ನಲ್ಲಿ ತಂಗಿತ್ತು. ಆ ದಿನ ನಾನು ಅವರನ್ನು ನೋಡಬೇಕೆಂದು ಅಲ್ಲಿಗೆ ಹೋಗಿದ್ದೆ. ಅಲ್ಲಿ ಕಪಿಲ್ ದೇವ್ ಅವರು ಒಬ್ಬರೇ ವಾಕಿಂಗ್ ಮಾಡುತ್ತಿದ್ದರು. ಹಿಂದಿನಿಂದ ಹೋಗಿ ಅವರ ಕೋಟ್ ಎಳೆದುಬಿಟ್ಟಿದ್ದೆ. ನನ್ನ ಜೊತೆ ನನ್ನ ಅಕ್ಕ ಕೂಡ ಬಂದಿದ್ದಳು. ಕಪಿಲ್ ಅವರ ಜೊತೆ ಫೋಟೋ ತೆಗೆಸಿಕೊಳ್ಳಬೇಕಿತ್ತು. ನಮ್ಮ ಬಳಿ ಒಂದು ಸಣ್ಣ ಕ್ಯಾಮೆರಾ ಕೂಡ ಇತ್ತು. ಇನ್ನೇನು ಫೋಟೋ ತೆಗೆಯಬೇಕು ಎನ್ನುವಷ್ಟರಲ್ಲಿ ಆ ಕ್ಯಾಮೆರಾ ಕೆಲಸ ಮಾಡುತ್ತಿರಲಿಲ್ಲ. ಆ ಕ್ಷಣ ನಾನು ಅಳುವುದಕ್ಕೆ ಶುರು ಮಾಡಿದೆ. ನಂತರ ನನ್ನನ್ನು ಕಪಿಲ್ ಅವರು ಎತ್ತಿಕೊಂಡು ಸಮಾಧಾನ ಮಾಡಿದರು' ಎಂದು ಹಳೆಯ ನೆನಪನ್ನು 'ಕಿಚ್ಚ' ಸುದೀಪ್ ಹಂಚಿಕೊಂಡಿದ್ದಾರೆ. 36 ವರ್ಷಗಳ ನಂತರ ನನಸಾದ ಕನಸು ಅಂದು ಕಪಿಲ್ ದೇವ್ ಅವರ ಜೊತೆಗೆ ಸುದೀಪ್‌ಗೆ ಫೋಟೋ ತೆಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ, ಈಗ ಅದು ಸಾಧ್ಯವಾಗಿದೆ. ಪ್ರೆಸ್‌ಮೀಟ್ ವೇಳೆಯೇ ಕಿಚ್ಚ ಸುದೀಪ್ ಮತ್ತು ಕಪಿಲ್ ದೇವ್ ಒಟ್ಟಿಗೆ ನಿಂತು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಆ ಮೂಲಕ 36 ವರ್ಷಗಳ ನಂತರ ಸುದೀಪ್ ಅಂದುಕೊಂಡ ಆಸೆಯೊಂದು ಈಡೇರಿದೆ. ಕಪಿಲ್ ದೇವ್‌ ಜೊತೆ ಇರುವ ಫೋಟೋ ಹಂಚಿಕೊಂಡಿರುವ ಕಿಚ್ಚ ಸುದೀಪ್, 'ಈ ಫೋಟೋಗಾಗಿ ನಾನು 36 ವರ್ಷ ಕಾದೆ. ಥ್ಯಾಂಕ್ಯೂ ಕಪಿಲ್ ಸರ್.. ಇದನ್ನು ಸಾಧ್ಯವಾಗಿಸಿದ್ದಕ್ಕೆ. ಇದು ನಮ್ರತೆಯ ಪ್ರತಿರೂಪವಾಗಿದೆ' ಎಂದು ಬರೆದುಕೊಂಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ 'ಕಿಚ್ಚ' ಸುದೀಪ್, 'ಕನ್ನಡದಲ್ಲಿ ತೆರೆಕಾಣುತ್ತಿರುವ '83' ಸಿನಿಮಾವನ್ನು ಅರ್ಪಿಸುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಕ್ರಿಕೆಟ್ ಚರಿತ್ರೆ ಪುಟಗಳಲ್ಲಿ ಸೇರಿರುವ 1983ರಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಭಾರತ ಗೆದ್ದ ಏಕದಿನದ ವಿಶ್ವಕಪ್ ವಿಷಯ ಕುರಿತಾದ ಚಿತ್ರವಿದು. ಕ್ರಿಕೆಟ್ ಎಂಬುದು ಭಾರತಿಯರಿಗೆ ಒಂದು ಧರ್ಮವೇ ಆಗಿ ಹೋಗಿರುವಾಗ ಈ ನೈಜ ಕಥೆಯನ್ನು ತೆರೆಯ ಮೇಲೆ ತಂದಿರುವುದಕ್ಕೆ ಅಭಿನಂದನೆಗಳು. ಇದು ನಿಜಕ್ಕೂ ಬಹುನಿರೀಕ್ಷೆಯ ಚಿತ್ರ' ಎಂದು ಹೇಳಿದ್ದಾರೆ.