ಕನ್ನಡ ಚಿತ್ರರಂಗದಲ್ಲಿ ಸುಮಾರು ವರ್ಷಗಳಿಂದ ಹಾಸ್ಯನಟರಾಗಿ ಹೆಸರು ಮಾಡಿರುವ ಅವರು ನಾಯಕನಾಗಿ ಅಭಿನಯಿಸುತ್ತಿರುವ ನೂತನ ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಮೋಷನ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಬೆಂಗಳುರಿನ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ನಡೆಯಿತು.
'ಡೈನಾಮಿಕ್ ಪ್ರಿನ್ಸ್' ಅವರು ಶೀರ್ಷಿಕೆ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದರು. ಕನ್ನಡ ಚಿತ್ರರಂಗದ ಅನೇಕ ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಚಿತ್ರಕ್ಕೆ 'ಎನ್‌ಟಿಆರ್' ಎಂದು ಹೆಸರಿಡಲಾಗಿದೆ. 'ಎನ್‌ಟಿಆರ್' ಅಂದರೆ 'ನಮ್ಮ ತಾಲ್ಲೂಕಿನ ರೂಲರ್' ಎಂದು. ಭರತ್ ಗೌಡ ಮೂವೀಸ್ ಲಾಂಛನದಲ್ಲಿ ಭರತ್ ಗೌಡ ಅವರು ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಜಾಕಿ ನಿರ್ದೇಶಿಸುತ್ತಿದ್ದಾರೆ.
'ಕೆಂಪೇಗೌಡ ಅವರ ಜೊತೆ ನಾನು ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಅವರು ಈಗ 'ಎನ್‌ಟಿಆರ್' ಚಿತ್ರದ ಮೂಲಕ ನಾಯಕನಾಗುತ್ತಿದ್ದಾರೆ. ಕೆಂಪೇಗೌಡ ಅವರು ದೊಡ್ಡ ನಟರೊಬ್ಬರ ಹೆಸರಿನ ಚಿತ್ರದಲ್ಲಿ ಅವರು ಅಭಿನಯಿಸುತ್ತಿದ್ದು, ಅವರಷ್ಟೇ ಕೀರ್ತಿಶಾಲಿಯಾಗಲಿ' ಎಂದು ಪ್ರಜ್ವಲ್ ಹಾರೈಸಿದರು.
'ಮಾಗಡಿ ಕೆಂಪೇಗೌಡರು ಬೆಂಗಳೂರಿನ ನಿರ್ಮಾತೃ. ಈ ಕೆಂಪೇಗೌಡ ಸಹ ಅವರಷ್ಟೇ ಹೆಸರು ಮಾಡಲಿ' ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ ರಾ ಗೋವಿಂದು ಹಾರೈಸಿದರು. ಶ್ರೀ ವೇದಾಂತಚಾರ್ಯ ಮಂಜುನಾಥ ಸ್ವಾಮಿಗಳು ಗೋಸಾಯಿ ಮಠ. ಇವರು ಚಿತ್ರತಂಡಕ್ಕೆ ನಟರಾಜನ ಅನುಗ್ರಹವಾಗಲಿ ಎಂದು ಆಶೀರ್ವದಿಸಿದರು.
'ನನ್ನ ನಿರ್ದೇಶನದ ಎರಡನೇ ಚಿತ್ರವಿದು. ಮೊದಲ ನಿರ್ದೇಶನದ 'ಶೋಕಿವಾಲ' ಚಿತ್ರ ಬಿಡುಗಡೆಯ ಹಂತದಲ್ಲಿದೆ. ಆಗಲೇ ಈ ಚಿತ್ರ ನಿರ್ದೇಶನಕ್ಕೆ ಅವಕಾಶ ನೀಡಿದ, ನಿರ್ಮಾಪಕ ಭರತ್ ಗೌಡ ಅವರಿಗೆ ಧನ್ಯವಾದ. 'ಎನ್‌ಟಿಆರ್' ಅಂದರೆ 'ನಮ್ಮ ತಾಲ್ಲೂಕಿನ ರೂಲರ್' ಎಂದು. ಇದೊಂದು ಪಕ್ಕಾ ಹಳ್ಳಿ ಸೊಗಡಿರುವ ಮನೋರಂಜನಾ ಚಿತ್ರ. ಹಳ್ಳಿಯಲ್ಲಿ ನಡೆಯುವ ಜಾತ್ರೆ ಸುತ್ತಮುತ್ತಲಿನ ಕಥೆಯಾಗಿರುತ್ತದೆ. ಫೆಬ್ರವರಿ ಮೊದಲ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದೆ' ಎಂದ ನಿರ್ದೇಶಕ ಜಾಕಿ, ಕಲಾವಿದ ಹಾಗೂ ತಾಂತ್ರಿಕವರ್ಗದ ಪರಿಚಯ ಮಾಡಿಸಿದರು. ಚಿತ್ರೀಕರಣಕ್ಕೂ ಮುನ್ನವೇ ಆನಂದ್ ಆಡಿಯೋದವರು ಉತ್ತಮ ಮೊತ್ತಕ್ಕೆ ಆಡಿಯೋ ರೈಟ್ಸ್ ತೆಗೆದುಕೊಂಡಿರುವುದಕ್ಕೆ ನಿರ್ದೇಶಕರು ಸಂತಸಪಟ್ಟರು.
"ನನ್ಮ ಮೇಲೆ ನಂಬಿಕೆಯಿಟ್ಟು ನಾಲ್ಕೈದು ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಿಸುತ್ತಿರುವ ಭರತ್ ಗೌಡ ಅವರಿಗೆ ಧನ್ಯವಾದ ಎಂದು ಮಾತು ಆರಂಭಿಸಿದ ನಾಯಕ ಕೆಂಪೇಗೌಡ, ಇದೊಂದು ಪಕ್ಕ ಹಳ್ಳಿ ವಾತಾವರಣದ ಸಿನಿಮಾ, 'ಅಧ್ಯಕ್ಷ' , 'ಕಿರಾತಕ' ಚಿತ್ರಗಳ ಹಾಗೆ. ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಸಾಧುಕೋಕಿಲ, ರವಿಶಂಕರ್, ತಬಲನಾಣಿ, ರಾಜೇಶ್ ನಟರಂಗ ಮುಂತಾದ ಕಲಾವಿದರು ನಮ್ಮ ಸಿನಿಮಾದಲ್ಲಿ ನಟಿಸಲಿದ್ದಾರೆ. ನಾಯಕಿ ಯಾರೆಂಬುದು ಸದ್ಯದಲ್ಲೇ ತಿಳಿಯಲಿದೆ" ಎಂದರು.
ನಿರ್ಮಾಪಕ ಭರತ್ ಗೌಡ ಸಮಾರಂಭಕ್ಕೆ ಆಗಮಿಸಿದ ಎಲ್ಲಾ ಗಣ್ಯರಿಗೆ ಧನ್ಯವಾದ ತಿಳಿಸಿದರು. ನಿರ್ಮಾಪಕ ಉಮೇಶ್ ಬಣಕಾರ್, ಟಿ. ಆರ್ ಚಂದ್ರಶೇಖರ್, ಜೇಡ್ರಳ್ಳಿ ಕೃಷ್ಣಪ್ಪ, ಸಂಜಯ್ ಗೌಡ, ಡಾ.ಗಿರೀಶ್ , ಆನಂದ್ ಆಡಿಯೋ ಶ್ಯಾಮ್, ನಟ ತಬಲ ನಾಣಿ, ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್ ಹಾಗೂ ಸಂಭಾಷಣೆ ಬರೆಯುತ್ತಿರುವ ಪ್ರಶಾಂತ್ ರಾಚಪ್ಪ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದು, ತಮ್ಮ ಪ್ರೋತ್ಸಾಹಭರಿತ ಮಾತುಗಳ ಮೂಲಕ ಚಿತ್ರತಂಡಕ್ಕೆ ಶುಭಕೋರಿದರು.
ಚೇತನ್ ಕುಮಾರ್ ಬರೆದಿರುವ ಹಾಡುಗಳಿಗೆ ಶ್ರೀಧರ್ ವಿ. ಸಂಭ್ರಮ್ ಸಂಗೀತ ನೀಡುತ್ತಿದ್ದಾರೆ. ಪ್ರಶಾಂತ್ ಚಂದ್ರಶೇಖರ್ ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ, ಅರ್ಜುನ್ ಸಾಹಸ ನಿರ್ದೇಶನ, ಮೋಹನ್ ನೃತ್ಯ ನಿರ್ದೇಶನ ಹಾಗೂ ರಘು ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಕಡ್ಡಿಪುಡಿ ಚಂದ್ರು, ಮಹಾಂತೇಶ್, ದೀಪಿಕಾ, ಚಂದನ ಜಾನಕಿ, ಸುಂದರ್, ಗಣೇಶ್ ರಾವ್, ಪಲ್ಲವಿ, ಮಿಮಿಕ್ರಿ ದಯಾನಂದ್ ರಮೇಶ್ ಭಟ್, ತರಂಗ ವಿಶ್ವ ಇನ್ನು ಅನೇಕರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ.