ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಿ, ಬಲಪ್ರಯೋಗ ಸಲ್ಲದು; ಪೊಲೀಸರಿಗೆ ಕಮಲ್ ಪಂತ್ ಸೂಚನೆ

ಲಾಕ್‌ಡೌನ್ ಉಲ್ಲಂಘಿಸಿದರೆ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಿ, ಬಲಪ್ರಯೋಗ ಸಲ್ಲದು ಎಂದು ಬೆಂಗಳೂರು ನಗರ ಪೊಲೀಸರಿಗೆ ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚನೆ ನೀಡಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ.

ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಿ, ಬಲಪ್ರಯೋಗ ಸಲ್ಲದು; ಪೊಲೀಸರಿಗೆ ಕಮಲ್ ಪಂತ್ ಸೂಚನೆ
Linkup
ಬೆಂಗಳೂರು: ಸಂದರ್ಭದಲ್ಲಿ ರಸ್ತೆಗಿಳಿದವರ ಮೇಲೆ ಪೊಲೀಸರು ಲಾಠಿ ಪ್ರಯೋಗ ಮಾಡಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಕೊನೆಗೂ ಎಚ್ಚೆತ್ತುಕೊಂಡಿದ್ದಾರೆ. ಇಲಾಖಾ ಸಿಬ್ಬಂದಿಗೆ ನಗರ ಪೊಲೀಸ್ ಆಯುಕ್ತ ಸೂಚನೆ ನೀಡಿದ್ದು ಅನಗತ್ಯ ಬಲಪ್ರಯೋಗ ಮಾಡದಂತೆ ತಿಳಿಸಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಕಮಲ್ ಪಂತ್, ಒಂದು ವೇಳೆ ಸಾರ್ವಜನಿಕರು ಲಾಕ್ ಡೌನ್ ಮಾರ್ಗಸೂಚಿ ಉಲ್ಲಂಘಿಸಿದ್ದು ಕಂಡುಬಂದಲ್ಲಿ ಮಾತ್ರ ಕಾನೂನಿನ ಅಡಿಯಲ್ಲಿ ಪೊಲೀಸ್ ಸಿಬ್ಬಂದಿ ಕ್ರಮ ಕೈಗೊಳ್ಳಬೇಕು ಹೊರತು ಬೇರೆ ಯಾವುದೇ ರೀತಿಯ ಬಲಪ್ರಯೋಗ ಮಾಡಬಾರದು ಎಂಬ ಸೂಚನೆ ನೀಡಲಾಗಿದೆ ಎಂದಿದ್ದಾರೆ. ಹಾಗೂ ಜನಸಾಮಾನ್ಯರು ಮನೆಯಲ್ಲೇ ಇರಿ, ಸುರಕ್ಷಿತವಾಗಿ ಇರಿ. ಕೊರೊನ ಹರಡುವುದನ್ನು ತಡೆಯಲು ದಯವಿಟ್ಟು ಸಹಕರಿಸಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. ಲಾಕ್ ಡೌನ್ ಜಾರಿಯಾಗಿರುವ ಸಮಯದಲ್ಲಿ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಒಪ್ಪಿಗೆ ನೀಡಲಾದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸಂಚಾರ ಅವಶ್ಯವಿದ್ದಲ್ಲಿ, ಅದರ ಕುರಿತಂತೆ ಡಿಸಿಪಿ ಇಂಟಲಿಜೆನ್ಸ್, ಸಂತೋಷ್ ಬಾಬು ಅವರನ್ನು ಸಂಪರ್ಕಿಸಬಹುದು ( ಮೊಬೈಲ್ ನಂ. 9480801032, 080-22942354) ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ಜನರಿಗೆ ತಿಳಿಸಿದ್ದರೆ. ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಲಾಕ್‌ಡೌನ್ ಕಟ್ಟುನಿಟ್ಟಿನ ಜಾರಿ ಹೆಸರಿನಲ್ಲಿ ಜನಸಾಮಾನ್ಯರ ಮೇಲೆ ಲಾಠಿ ಪ್ರಹಾರ ನಡೆಸಲಾಗುತ್ತಿದೆ. ರಸ್ತೆಗಿಳಿದವರ ಮೇಲೆ ಪೊಲೀಸರು ಲಾಠಿಯಲ್ಲಿ ಹೊಡೆಯುವುದು ಹಾಗೂ ಬಸ್ಕಿ ಹೊಡೆಸುತ್ತಿದ್ದ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಕುರಿತಾಗಿ ವಿಜಯ ಕರ್ನಾಟಕ ವೆಬ್ ಕೂಡಾ ಜನರ ಅಭಿಪ್ರಾಯವನ್ನು ಪ್ರಕಟಿಸಿತ್ತು. ಇದೀಗ ಬೆಂಗಳೂರು ನಗರ ಪೊಲೀಸ್ ಸಿಬ್ಬಂದಿಗೆ ಕಮಲ್ ಪಂತ್ ಈ ಸೂಚನೆಯನ್ನು ನೀಡಿದ್ದಾರೆ. ಕಮಲ್ ಪಂತ್ ನಡೆಗೆ ಜನರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈಗಾಗಲೇ ಜನರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಜನರ ಮೇಲೆ ಲಾಠಿ ಪ್ರಹಾರ ನಡೆಸುವುದು ಸರಿಯಲ್ಲ. ಪೊಲೀಸರು ಅಮಾನವೀಯವಾಗಿ ನಡೆದುಕೊಳ್ಳುತ್ತಿರುವ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿದೆ. ಈ ನಿಟ್ಟಿನಲ್ಲಿ ಮಾನವೀಯವಾಗಿ ವರ್ತಿಸುವಂತೆ ಪೊಲೀಸರಿಗೆ ಸೂಚಿಸಿ ಎಂದು ನೆಟ್ಟಿಗರು ಮನವಿ ಮಾಡಿಕೊಂಡಿದ್ದಾರೆ.