ಒಂದೇ ಒಂದು ಮತ ಪಡೆದು ಟ್ರೋಲ್ ಆದ ತಮಿಳುನಾಡು ಬಿಜೆಪಿ ಯುವ ಮುಖಂಡ!

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ನಡೆದ ಗ್ರಾಮೀಣ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೇವಲ ಒಂದು ಮತ ಪಡೆಯುವ ಮೂಲಕ ಬಿಜೆಪಿ ಯುವ ಮುಖಂಡ ಟ್ರೋಲ್ ಆಗಿದ್ದಾರೆ.

ಒಂದೇ ಒಂದು ಮತ ಪಡೆದು ಟ್ರೋಲ್ ಆದ ತಮಿಳುನಾಡು ಬಿಜೆಪಿ ಯುವ ಮುಖಂಡ!
Linkup
ಚೆನ್ನೈ: ತಮಿಳುನಾಡಿನ ಜಿಲ್ಲೆಯ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ತಮಾಷೆಯ ವಸ್ತುವಾಗಿದೆ. ಕುರುಡಂಪಾಳಯಂ ಪಂಚಾಯತ್‌ನ ಗ್ರಾಮೀಣ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿಯೊಬ್ಬರು ಕೇವಲ ಒಂದು ಮತ ಪಡೆದಿದ್ದಾರೆ. ಆ ವ್ಯಕ್ತಿ ಯುವ ಘಟಕದ ನಾಯಕ ಎನ್ನುವುದು ಈ ಚರ್ಚೆಗೆ ಮುಖ್ಯ ಕಾರಣ. ವಾರ್ಡ್ ಕೌನ್ಸಿಲರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಯುವ ಘಟಕದ ಮುಖಂಡ ಡಿ. ಕಾರ್ತಿಕ್ ಎಂಬುವವರು ಸ್ಪರ್ಧಿಸಿದ್ದರು. ಅವರು ಬಿಜೆಪಿ ಅಭ್ಯರ್ಥಿಯಾಗಿರಲಿಲ್ಲ. ಹಾಗಿದ್ದೂ ಅವರು ಒಂದೇ ಮತ ಪಡೆದಿರುವುದನ್ನು ಮುಂದಿಟ್ಟುಕೊಂಡು ಬಿಜೆಪಿಯನ್ನು ಲೇವಡಿ ಮಾಡಲಾಗುತ್ತಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅನೇಕ ಜೋಕ್‌ಗಳು ಹರಿದಾಡುತ್ತಿವೆ. ಸಿಂಗಲ್ ವೋಟ್ ಬಿಜೆಪಿ, ಒನ್ ವೋಟ್ ಎಂಬ ಹ್ಯಾಷ್‌ ಟ್ಯಾಗ್‌ಗಳು ಮಂಗಳವಾರ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದ್ದವು. ಕಾರ್ತಿಕ್ ಅವರು ಬಿಜೆಪಿ ಅಭ್ಯರ್ಥಿಯಾಗಿರುವುದರಿಂದ ಅವರ ಮನೆಯವರೇ ಅವರಿಗೆ ಮತ ಹಾಕಿಲ್ಲ. ಕಾರ್ತಿಕ್ ಅವರು ಹಾಕಿಕೊಂಡ ಮತವಷ್ಟೇ ಅವರಿಗೆ ಸಿಕ್ಕಿದೆ. ಆದರೆ ಈ ಗೊಂದಲದ ಬಗ್ಗೆ ಕಾರ್ತಿಕ್ ಸ್ಪಷ್ಟನೆ ನೀಡಿಸಿದ್ದಾರೆ. ತಾವು ಪಂಚಾಯತ್‌ನ 9ನೇ ವಾರ್ಡ್‌ನಲ್ಲಿ ಸ್ಪರ್ಧಿಸಿದ್ದು, ಕುಟುಂಬದ ಸದಸ್ಯರು 4ನೇ ವಾರ್ಡ್‌ನಲ್ಲಿ ಮತ ಹಾಕಿದ್ದಾರೆ ಎಂದು ತಿಳಿಸಿದ್ದಾರೆ. ತಮಗೆ ಕುಟುಂಬದ ಸದಸ್ಯರೇ ಮತ ಹಾಕಿಲ್ಲ ಎಂಬ ವರದಿಗಳು ಸತ್ಯಕ್ಕೆ ದೂರವಾಗಿವೆ. ತಮ್ಮ ವಿರುದ್ಧ ಈ ರೀತಿ ಸುಳ್ಳು ಪ್ರಚಾರಗಳನ್ನು ನಡೆಸುತ್ತಿರುವವರ ವಿರುದ್ಧ ದೂರುಗಳನ್ನು ಸಲ್ಲಿಸಲಾಗುವುದು ಎಂದು ಕಾರ್ತಿಕ್ ಹೇಳಿದ್ದಾರೆ. 'ನಾನು ಕೊಯಮತ್ತೂರು (ಉತ್ತರ) ಬಿಜೆಪಿ ಯುವ ಘಟಕದ ಉಪಾಧ್ಯಕ್ಷ. ಚುನಾವಣೆಯಲ್ಲಿ ಸುಮ್ಮನೆ ಸ್ಪರ್ಧೆಗೆ ಇಳಿದಿದ್ದೆ. ಕೌಟುಂಬಿಕ ಕಾರಣಗಳಿಂದಾಗಿ ನನಗೆ ಸರಿಯಾಗಿ ಪ್ರಚಾರ ಮಾಡಲು ಸಾಧ್ಯವಾಗಿರಲಿಲ್ಲ. ನಾನು ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎನ್ನುವುದೇ ಆ ವಾರ್ಡ್‌ನ ಜನರಿಗೆ ತಿಳಿದಿರಲಿಲ್ಲ. ನನಗೆ ಒಂದು ಮತ ಸಿಕ್ಕಿದೆ. ಅದೇ ನನ್ನ ಗೆಲುವು ಎಂದು ಭಾವಿಸುತ್ತೇನೆ. ಮುಂದಿನ ಸಲ ನಾನು ವಾರ್ಡ್ ಸಂಖ್ಯೆ 4ರಲ್ಲಿ ಸ್ಪರ್ಧಿಸುತ್ತೇನೆ. ಸರಿಯಾದ ಪ್ರಚಾರ ಮಾಡಿ ಗೆಲುವು ಸಾಧಿಸುತ್ತೇನೆ. ನನ್ನ ಪಕ್ಷಕ್ಕೆ ಗೌರವ ತರುತ್ತೇನೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕುರುಡಂಪಾಳಯಂ ಪಂಚಾಯತ್ ಸುಮಾರು 1,551 ಮತದಾರರನ್ನು ಹೊಂದಿದ್ದು, ಚುನಾವಣೆಯಲ್ಲಿ 913 ಮಂದಿ ಮತ ಚಲಾಯಿಸಿದ್ದರು. ಒಟ್ಟು ಒಂಬತ್ತು ಜಿಲ್ಲೆಗಳಲ್ಲಿ ನಡೆದ ಗ್ರಾಮೀಣ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಆಡಳಿತಾರೂಢ ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳು ದಿಗ್ವಿಜಯ ಸಾಧಿಸಿವೆ. ಕಾರ್ತಿಕ್ ಅವರು ಬಿಜೆಪಿಯಲ್ಲಿ ಸ್ಥಾನ ಪಡೆದಿರುವ ಪಕ್ಷೇತರ ಅಭ್ಯರ್ಥಿ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಬಿಜೆಪಿ ಅಧ್ಯಕ್ಷ ಹೇಳಿದ್ದಾರೆ. ಅಭ್ಯರ್ಥಿಯ ಜತೆ ತಾವು ಮಾತನಾಡಿದ್ದು, ಮುಂದಿನ ಚುನಾವಣೆಯಲ್ಲಿ ಪಕ್ಷದ ಚಿಹ್ನೆಯೊಂದಿಗೆ ಸ್ಪರ್ಧಿಸಲು ಅವಕಾಶ ನೀಡುವುದಾಗಿ ಭರವಸೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಈ ಚುನಾವಣೆಯಲ್ಲಿ ಅವರು 'ಕಾರ್' ಚಿಹ್ನೆಯಲ್ಲಿ ಸ್ಪರ್ಧಿಸಿದ್ದರು.