ಉತ್ತರ ಪ್ರದೇಶದಲ್ಲಿ ಹೊಸ ಬೆಂಡೆ ಕಾಯಿ 'ಕುಂಕುಮ್‌ ಭಿಂಡಿ'ಗೆ ಭಾರಿ ಬೇಡಿಕೆ

ಉತ್ತರ ಪ್ರದೇಶದಲ್ಲಿ ಕೆಂಪು ಬಣ್ಣದ 'ಕುಂಕುಮ್‌ ಭಿಂಡಿ' ಎಂಬ ಹೊಸ ತಳಿಯ ಬೆಂಡೆಕಾಯಿಯನ್ನು ರೈತರು ಬೆಳೆಯುತ್ತಿದ್ದು, ಇದು ಪೌಷ್ಟಿಕಾಂಶಗಳನ್ನು ಹೊಂದಿರುವುದರಿಂದ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯೂ ಸೃಷ್ಟಿಯಾಗಿದೆ.

ಉತ್ತರ ಪ್ರದೇಶದಲ್ಲಿ ಹೊಸ ಬೆಂಡೆ ಕಾಯಿ 'ಕುಂಕುಮ್‌ ಭಿಂಡಿ'ಗೆ ಭಾರಿ ಬೇಡಿಕೆ
Linkup
ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ಕೆಂಪು ಬಣ್ಣದ 'ಕುಂಕುಮ್‌ ಭಿಂಡಿ' ಎಂಬ ತಳಿಯ ಬೆಂಡೆಕಾಯಿಯನ್ನು ರೈತರು ಬೆಳೆಯುತ್ತಿದ್ದು, ಇದು ಪೌಷ್ಟಿಕಾಂಶಗಳನ್ನು ಹೊಂದಿರುವುದರಿಂದ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಸೃಷ್ಟಿಸಿದೆ. ಈ ಕೊಲೆಸ್ಟ್ರಾಲ್‌ ನಿಯಂತ್ರಣಕ್ಕೆ ಸಹಕಾರಿಯಾಗಿದ್ದು, ಬೆಲೆ ಕೆ.ಜಿಗೆ 45 ರೂ.ಗಳಿಂದ 80 ರೂ. ತನಕ ಏರಿಕೆಯಾಗಿದೆ. ಸಾಮಾನ್ಯ ಬೆಂಡೆಕಾಯಿಗೆ ಪ್ರತಿ ಕೆ.ಜಿಗೆ 12 - 15 ರೂ. ಇದ್ದರೆ, ಕುಂಕುಮ್‌ ಭಿಂಡಿಗೆ 45 ರೂ.ಗಳಿಂದ 80 ರೂ. ತನಕ ಮಾರುಕಟ್ಟೆಯಲ್ಲಿ ದರ ಸಿಗುತ್ತಿದೆ. 'ಕುಂಕುಮ ಭಿಂಡಿ' ಶೇ. 94ರಷ್ಟು ಪಾಲಿಅನ್‌ಸ್ಯಾಚುರೇಟೆಡ್‌ ಕೊಬ್ಬನ್ನು ಹೊಂದಿದೆ, ಇದು ಕೆಟ್ಟ ಕೊಲೆಸ್ಟ್ರಾಲ್‌ ಮಟ್ಟವನ್ನು ನಿಯಂತ್ರಿಸುತ್ತದೆ. ಇದರೊಂದಿಗೆ, ಬೆಂಡೆಕಾಯಿಯಲ್ಲಿರುವ ಶೇ. 66 ರಷ್ಟು ಸೋಡಿಯಂ ಅಂಶವು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಶೇ. 21ರಷ್ಟಿರುವ ಕಬ್ಬಿಣದ ಅಂಶವು ರಕ್ತಹೀನತೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಮತ್ತು ಶೇ. 5ರಷ್ಟು ಇರುವ ಪ್ರೋಟೀನ್ ದೇಹದ ಚಯಾಪಚಯ ವ್ಯವಸ್ಥೆಯನ್ನು ಕ್ರಮವಾಗಿ ಇಡುತ್ತದೆ. ಇದಲ್ಲದೆ ಅಧಿಕ ರಕ್ತದೊತ್ತಡವನ್ನು ಉಪಶಮನಗೊಳಿಸಲೂ ಈ ಸಹಕಾರಿ. ಹೀಗಾಗಿ ಉತ್ತರ ಪ್ರದೇಶದ ರೈತರು ಈ ವಿಶಿಷ್ಟ ಬೆಂಡೆಕಾಯಿ ತಳಿಯ ವ್ಯವಸಾಯದಲ್ಲಿ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಹಪುರ್‌ನ ಅನ್ವರ್‌ಪುರ್‌ ರೈತ ಉಮೇಶ್‌ ಸೈನಿ ಮತ್ತು ಸೀತಾಪುರದ ರಾಂಪುರ್‌ಬೆಹ್‌ನ ರೈತ ಮುರಳಿ ಈ ಕೆಂಪು ಬಣ್ಣದ ಬೆಂಡೆಕಾಯಿ ತಳಿಯನ್ನು ಬೆಳೆಯುತ್ತಿದ್ದು, ಇದಕ್ಕೆ ಸಿಗುತ್ತಿರುವ ಬೆಲೆಯಿಂದ ಖುಷಿಯಾಗಿದ್ದಾರೆ. "ಗ್ರಾಮದ ಪ್ರತಿಯೊಬ್ಬರೂ ಈ ಋತುವಿನಲ್ಲಿ ಬೆಂಡೆಕಾಯಿ ಕೃಷಿ ಪ್ರದೇಶವನ್ನು ಹೆಚ್ಚಿಸುವ ಬಗ್ಗೆ ಯೋಚಿಸುತ್ತಿದ್ದಾರೆ," ಎಂದು ಹೇಳುತ್ತಾರೆ ಸೈನಿ. ಅಯೋಧ್ಯೆಯ ಕುಮಾರ್‌ಗಂಜ್‌ನಲ್ಲಿರುವ ಆಚಾರ್ಯ ನರೇಂದ್ರ ದೇವ್ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಬಿಜೇಂದ್ರ ಸಿಂಗ್ ಅವರ ಪ್ರಕಾರ, ಈ ಕೆಂಪು ಬೆಂಡೆಕಾಯಿ ತಳಿಯಲ್ಲಿ ಆಂಥೋಸಯಾನಿನ್‌ಗಳು ಮತ್ತು ಫೀನಾಲಿಕ್‌ಗಳಿದ್ದು, ಇದು ಅದರ ಪೌಷ್ಟಿಕಾಂಶದ ಮೌಲ್ಯವನ್ನು ಹೆಚ್ಚಿಸಿದೆಯಂತೆ. ಇದರಲ್ಲಿರುವ ಕಚ್ಚಾ ನಾರಿನ ಅಂಶ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ. ಜತೆ ಜತೆಗೆ ವಿಟಮಿನ್‌ ಬಿ ಕಾಂಪ್ಲೆಕ್ಸ್‌ ಕೂಡ ಈ ಬೆಂಡೆಕಾಯಿಯಲ್ಲಿ ಹೇರಳವಾಗಿದೆ. ಯಾವಾಗ ಬೆಳೆಯಬಹುದು? ಫೆಬ್ರವರಿಯಿಂದ ಏಪ್ರಿಲ್‌ ಎರಡನೇ ವಾರದ ತನಕ ಕುಂಕುಮ್‌ ಭಿಂಡಿ ಬೆಂಡೆಕಾಯಿಯನ್ನು ಬೆಳೆಯಬಹುದು. ನವೆಂಬರ್‌ನಲ್ಲಿ ಬಿತ್ತನೆ ಮಾಡಬಹುದು. ಆದರೆ ಡಿಸೆಂಬರ್ - ಜನವರಿ ಅವಧಿಯಲ್ಲಿ ಇದರ ಬೆಳವಣಿಗೆ ನಿಧಾನವಾಗಿರುತ್ತದೆ. ಫೆಬ್ರವರಿ ವೇಳೆಗೆ ಕಾಯಿ ಬರಲು ಆರಂಭವಾಗುತ್ತದೆ. ಜನ ಇದನ್ನು ಪೌಷ್ಟಿಕಾಂಶಯುಕ್ತ ಸೂಪರ್‌ ಫುಡ್‌ ಎಂದು ಪರಿಗಣಿಸುತ್ತಿದ್ದು, ಬೇಡಿಕೆ ವೃದ್ಧಿಸಿದೆ.