ಆನ್‌ಲೈನ್‌ನಲ್ಲಿ ಪಿಜ್ಜಾ ಆರ್ಡರ್ ಮಾಡಿ 11 ಲಕ್ಷ ರೂ ಕಳೆದುಕೊಂಡ ಮಹಿಳೆ!

ಆನ್‌ಲೈನ್‌ನಲ್ಲಿ ವಂಚಕರ ಬಲೆಗೆ ಸುಲಭವಾಗಿ ಬಿದ್ದು ಮೋಸ ಹೋಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಪಿಜ್ಜಾ ಮತ್ತು ಡ್ರೈ ಫ್ರೂಟ್ಸ್ ಆರ್ಡರ್ ಮಾಡುವ ವೇಳೆ ಹಣ ಕಳೆದುಕೊಂಡಿದ್ದ ಮಹಿಳೆಯೊಬ್ಬರು, ಅದನ್ನು ಪಡೆಯುವ ಪ್ರಯತ್ನದಲ್ಲಿ 11 ಲಕ್ಷ ರೂ ವಂಚನೆಗೆ ಒಳಗಾಗಿದ್ದಾರೆ.

ಆನ್‌ಲೈನ್‌ನಲ್ಲಿ ಪಿಜ್ಜಾ ಆರ್ಡರ್ ಮಾಡಿ 11 ಲಕ್ಷ ರೂ ಕಳೆದುಕೊಂಡ ಮಹಿಳೆ!
Linkup
ಮುಂಬಯಿ: ಆನ್‌ಲೈನ್‌ನಲ್ಲಿ ಪಿಜ್ಜಾ ಮತ್ತು ಒಣ ಹಣ್ಣುಗಳನ್ನು ಆರ್ಡರ್ ಮಾಡುವಾಗ ಕಳೆದುಕೊಂಡ ಹಣವನ್ನು ಮರಳಿ ಪಡೆಯುವ ಪ್ರಯತ್ನದ ವೇಳೆ ಹಿರಿಯ ಮಹಿಳೆಯೊಬ್ಬರ ಖಾತೆಯಿಂದ ಸೈಬರ್ ವಂಚಕರು 11 ಲಕ್ಷ ರೂ ದೋಚಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಮಹಿಳೆ ಇತ್ತೀಚೆಗೆ ಬಿಕೆಸಿ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ದೂರಿನ ಅನ್ವಯ ಸೈಬರ್ ಪೊಲೀಸರು, ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 420ರ ಅಡಿ (ವಂಚನೆ) ಮತ್ತು ಇತರೆ ಸಂಬಂಧಿತ ನಿಯಮಗಳು ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದಾರೆ. ಅಂಧೇರಿ ಉಪ ನಗರದ ನಿವಾಸಿಯಾಗಿರುವ ದೂರುದಾರ ಮಹಿಳೆಯು, ಕಳೆದ ವರ್ಷದ ಜುಲೈನಲ್ಲಿ ಪಿಜ್ಜಾ ಆರ್ಡರ್ ಮಾಡಿದ್ದರು. ಅದಕ್ಕೆ ಫೋನ್‌ನಲ್ಲಿ ಹಣ ಪಾವತಿ ಮಾಡುವಾಗ ಆಕಸ್ಮಿಕವಾಗಿ 9,999 ರೂ ಕಳೆದುಕೊಂಡಿದ್ದರು. ಹಾಗೆಯೇ ಅಕ್ಟೋಬರ್ 29ರಂದು ಅವರು ಆನ್‌ಲೈನ್‌ನಲ್ಲಿ ಡ್ರೈ ಫ್ರೂಟ್ ಆರ್ಡರ್ ಮಾಡುವ ವೇಳೆ ಮತ್ತೆ 1,496 ರೂ ಕಳೆದುಕೊಂಡಿದ್ದರು. ಈ ಎರಡೂ ಸಂದರ್ಭದಲ್ಲಿ ಕಳೆದುಕೊಂಡ ಹಣವನ್ನು ಮರಳಿ ಪಡೆಯುವುದಕ್ಕಾಗಿ ಅವರು ಗೂಗಲ್ ಮೂಲಕ ಹುಡುಕುವಾಗ ಪತ್ತೆಯಾದ ಫೋನ್ ಸಂಖ್ಯೆಯೊಂದಕ್ಕೆ ಕರೆ ಮಾಡಿದ್ದರು. ಅವರ ಫೋನ್ ಕರೆಯನ್ನು ಸ್ವೀಕರಿಸಿದ ವಂಚಕ, ಅವರ ಹಣವನ್ನು ಮರಳಿ ಪಡೆಯಲು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದ. ತಮ್ಮ ಮೊಬೈಲ್ ಫೋನ್‌ನಲ್ಲಿ ಆಪ್ ಒಂದನ್ನು ಡೌನ್‌ಲೋಡ್ ಮಾಡಿಕೊಳ್ಳಲು ಹೇಳಿದ್ದ. ಇದರಿಂದ ಆತನಿಗೆ ಆಕೆಯ ಮೊಬೈಲ್ ಅನ್ನು ಕುಳಿತಲ್ಲಿಯೇ ನೋಡಲು ಸಾಧ್ಯವಾಗಿತ್ತು. ಆ ಆಪ್ ಬಳಸಿಕೊಂಡ ದುಷ್ಕರ್ಮಿ, ಮಹಿಳೆಯ ಫೋನ್‌ನ ಎಲ್ಲ ವಿವರಗಳನ್ನು ಪಡೆದುಕೊಂಡು ಅವರ ಬ್ಯಾಂಕ್ ಖಾತೆ ಮಾಹಿತಿ ಹಾಗೂ ಪಾಸ್‌ವರ್ಡ್‌ಗಳನ್ನೂ ಅವರಿಗೆ ಅರಿವಿಲ್ಲದಂತೆ ಪಡೆದುಕೊಂಡಿದ್ದ. ನವೆಂಬರ್ 14 ರಿಂದ ಡಿಸೆಂಬರ್ 1ರ ನಡುವೆ ಮಹಿಳೆಯ ಬ್ಯಾಂಕ್ ಖಾತೆಯಿಂದ ಆತ 11.78 ಲಕ್ಷ ರೂ ಎಗರಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತನ್ನ ಎಲ್ಲ ಉಳಿತಾಯಗಳನ್ನೂ ಕಳೆದುಕೊಂಡಿರುವುದು ಅರಿವಿಗೆ ಬಂದ ಬಳಿಕ ಮಹಿಳೆ, ಪೊಲೀಸರನ್ನು ಸಂಪರ್ಕಿಸಿದ್ದಾರೆ. ಒಟ್ಟು ಮೂರು ಬಾರಿ ಮಹಿಳೆ ಮೋಸ ಹೋಗಿದ್ದು, ಎಲ್ಲ ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ. ವಂಚಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.