ಆಕ್ಸಿಜನ್ ಪೂರೈಕೆಯಲ್ಲಿ ವಿಳಂಬ: ಐಸಿಯುದಲ್ಲಿದ್ದ 11 ಕೋವಿಡ್ ರೋಗಿಗಳ ಸಾವು

ಆಕ್ಸಿಜನ್ ಸಿಲಿಂಡರ್‌ಗಳ ಮರುಪೂರಣದಲ್ಲಿ ತಡವಾಗಿದ್ದ ಹಿನ್ನೆಲೆಯಲ್ಲಿ ಐಸಿಯುದಲ್ಲಿದ್ದ 11 ರೋಗಿಗಳು ಉಸಿರಾಡಲು ಸಾಧ್ಯವಾಗದೆ ಮೃತಪಟ್ಟ ದಾರುಣ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿನ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ಸಂಭವಿಸಿದೆ.

ಆಕ್ಸಿಜನ್ ಪೂರೈಕೆಯಲ್ಲಿ ವಿಳಂಬ: ಐಸಿಯುದಲ್ಲಿದ್ದ 11 ಕೋವಿಡ್ ರೋಗಿಗಳ ಸಾವು
Linkup
ಹೈದರಾಬಾದ್: ಆಮ್ಲಜನಕದ ಪೂರೈಕೆ ವ್ಯತ್ಯಯದಿಂದಾಗಿ, ಐಸಿಯುದಲ್ಲಿದ್ದ 11 ಕೋವಿಡ್ ರೋಗಿಗಳು ಮೃತಪಟ್ಟ ಮತ್ತೊಂದು ದುರಂತ ಆಂಧ್ರಪ್ರದೇಶದ ತಿರುಪತಿಯ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ನಡೆದಿದೆ. ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಉಸಿರಾಟದ ಸಮಸ್ಯೆಗೆ ಒಳಗಾಗುತ್ತಿರುವ ರೋಗಿಗಳಿಗೆ ಅತ್ಯಂತ ಮುಖ್ಯವಾಗಿರುವ ವೈದ್ಯಕೀಯ ಕೊರತೆ ಅನೇಕ ಸಾವುಗಳಿಗೆ ಕಾರಣವಾಗುತ್ತಿದೆ. ತಿರುಪತಿಯ ರುಯಿಯಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದೆ ಪರದಾಡುತ್ತಿರುವ ರೋಗಿಗಳ ಜೀವ ಉಳಿಸಲು ವೈದ್ಯಕೀಯ ಸಿಬ್ಬಂದಿ ಪ್ರಯತ್ನಿಸುವ ಸಂದರ್ಭದ ತಳಮಳ, ಉದ್ವೇಗವನ್ನು ಸೆರೆಹಿಡಿದಿರುವ ದೃಶ್ಯಗಳು ಹೃದಯಕಲಕುವಂತಿವೆ. ಆಕ್ಸಿಜನ್ ಪೂರೈಕೆಯಲ್ಲಿ ಸುಮಾರು 45 ನಿಮಿಷಗಳ ಕಾಲ ವ್ಯತ್ಯಯವಾಗಿತ್ತು ಎಂದು ರೋಗಿಗಳ ಕುಟುಂಬದವರು ಆರೋಪಿಸಿದ್ದಾರೆ. 'ಆಕ್ಸಿಜನ್ ಸಿಲಿಂಡರ್ ಮರುಪೂರಣದ ವೇಳೆ ಐದು ನಿಮಿಷ ವಿಳಂಬವಾಗಿತ್ತು. ಇದರಿಂದ ಆಕ್ಸಿಜನ್ ಪೂರೈಕೆಯಲ್ಲಿನ ಒತ್ತಡ ಕಡಿಮೆಯಾಗಿ ಸಾವುಗಳು ಸಂಭವಿಸಲು ಕಾರಣವಾಗಿದೆ' ಎಂದು ಚಿತ್ತೂರು ಜಿಲ್ಲಾಧಿಕಾರಿ ಎಂ. ಹರಿ ನಾರಾಯಣನ್ ಹೇಳಿದ್ದಾರೆ. 'ಆಕ್ಸಿಜನ್ ಪೂರೈಕೆಯನ್ನು ಐದು ನಿಮಿಷದೊಳಗೆ ಸರಿಪಡಿಸಲಾಯಿತು. ಈಗ ಪ್ರತಿಯೊಂದೂ ಸರಾಗವಾಗಿ ನಡೆಯುತ್ತಿದೆ. ಈಗ ನಾವು ಬೃಹತ್ ಪ್ರಮಾಣದ ಸಿಲಿಂಡರ್‌ಗಳನ್ನು ಪಡೆದುಕೊಂಡಿದ್ದೇವೆ. ಹೀಗಾಗಿ ಇನ್ನು ಮುಂದೆ ಚಿಂತಿಸುವ ಅಗತ್ಯವಿಲ್ಲ. ವೈದ್ಯಕೀಯ ಸಿಬ್ಬಂದಿಯುತ ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದರಿಂದ ಸಂಭವಿಸಬಹುದಾಗಿದ್ದ ಭಾರಿ ದುರಂತ ತಪ್ಪಿದೆ' ಎಂದು ಅವರು ತಿಳಿಸಿದ್ದಾರೆ. ತಮಿಳುನಾಡಿನಿಂದ ಆಕ್ಸಿಜನ್ ಸಿಲಿಂಡರ್‌ಗಳು ಆಗಮಿಸುವುದು ಈ ಸಮಸ್ಯೆಗೆ ಕಾರಣವಾಗಿದೆ. ಆಸ್ಪತ್ರೆಗೆ ಸುಮಾರು 1000 ರೋಗಿಗಳು ದಾಖಲಾಗಿದ್ದು, 700 ಮಂದಿ ಐಸಿಯು ಹಾಗೂ ಆಕ್ಸಿಜನ್ ಬೆಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರೋಗಿಗಳಿಗೆ ನೆರವಾಗಲು ಕೂಡಲೇ 30 ವೈದ್ಯರು ಐಸಿಯು ಒಳಗೆ ಧಾವಿಸಿದ್ದರು ಎಂದು ಹೇಳಿದ್ದಾರೆ.