![](https://vijaykarnataka.com/photo/80981419/photo-80981419.jpg)
ಹೈದರಾಬಾದ್: ಎರಡು ವರ್ಷ ಎಂಟು ತಿಂಗಳ ಮಗುವೊಂದು ಧೀರತೆಯಿಂದ ಅಪರೂಪದ ಖಾಯಿಲೆ ವಿರುದ್ಧ ಹೋರಾಡುತ್ತಿದೆ. ಮುಖದಲ್ಲಿ ಮುಗ್ಧ ನಗು ಬೀರುತ್ತಿರುವ ಈ ಮಗುವಿಗೆ ನಡೆಯಲು ಸಾಧ್ಯವಿಲ್ಲ, ನಡೆಯುವುದು ಬಿಡಿ ಸರಿಯಾಗಿ ಎದ್ದು ನಿಲ್ಲಲೂ ಆಗುತ್ತಿಲ್ಲ. ಪೋಷಕರು ಮಗುವಿಗಾಗಿ ಸಾಕಷ್ಟು ಹಣ ವ್ಯಯಿಸಿದರು ಸರಿಯಾಗುತ್ತಿಲ್ಲ. ಹೀಗಾಗಿ ಕುಟುಂಬಸ್ಥರು ಇದೀಗ ಕಣ್ಣೀರಿನಲ್ಲಿ ಜೀವನ ಕಳೆಯುತ್ತಿದ್ದಾರೆ.
ಹೌದು, ಹೈದರಾಬಾದ್ನ ಲಿಂಗಂಪಳ್ಳಿಯ ನಿವಾಸಿ ಅಯಾನ್ಶ್ ಬೆನ್ನು ಮೂಳೆಯ ಸ್ನಾಯು ಕ್ಷೀಣತೆ () ಯಿಂದ ಬಳಲುತ್ತಿದ್ದಾನೆ. ಇದೊಂದು ಅಪರೂಪದ ರೋಗವಾಗಿದ್ದು ಔಷಧಕ್ಕಾಗಿ 16 ಕೋಟಿ ವೆಚ್ಚವಾಗಲಿದೆ. ಅಯಾನ್ಶ್ ತಂದೆ ಯೋಗೇಶ್ ಗುಪ್ತಾ ಹಾಗೂ ತಾಯಿ ರೂಪ ಗುಪ್ತಾ ಕೂಡ ಮಗುವನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಅತ್ಯಂತ ಅಪರೂಪದ ರೋಗವಾಗಿರುವ ಬೆನ್ನು ಮೂಳೆಯ ಸ್ನಾಯು ಕ್ಷೀಣತೆ ಅಯಾನ್ಶ್ಗೆ ಬಂದಿರುವ ಬಗ್ಗೆ ವೈದ್ಯರುಗಳು ಕೂಡ ಶಾಕ್ ಆಗಿದ್ದಾರೆ.
ಅಲ್ಲದೆ ಇಲ್ಲಿ ಚಿಕಿತ್ಸೆ ನೀಡುವ ಭರವಸೆಯನ್ನು ನೀಡಿದ್ದಾರೆ. ಆದರೆ ಇದಕ್ಕೆ ಬೇಕಾದ ಔಷಧಗಳನ್ನು ಅಮೆರಿಕದಿಂದ ತರಬೇಕಿದೆ. ಇನ್ನು ಈ ಔಷಧಗಳಿಗೆ ಒಟ್ಟು 16 ಕೋಟಿ ವೆಚ್ಚವಾಗಲಿದೆ. ಹೀಗಾಗಿ ಅಯಾನ್ಶ್ ಪೋಷಕರು ದಂಗುಬಡಿದಂತೆ ಆಗಿದ್ದಾರೆ. ಹೇಗಾದರೂ ಮಗುವನ್ನು ಉಳಿಸಿಕೊಳ್ಳಲು ಮುಂದಾಗಿರುವ ಪೋಷಕರು ಈಗಾಗಲೇ ಕೇವಲ 10 ದಿನದಲ್ಲಿ 1.4 ಕೋಟಿ ಹಣ ಹೊಂದಿಸುವಲ್ಲಿ ಸಫಲರಾಗಿದ್ದಾರೆ.
ಇನ್ನು ಹಣದ ಅವಶ್ಯಕತೆ ಇದ್ದು ಸರಕಾರ, ಎನ್ಜಿಒ, ದಾನಿಗಳ ನೆರವಿಗೆ ಕೈ ಚಾಚಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಂದೆ ಯೋಗೇಶ್ ಗುಪ್ತಾ, ಅಯಾನ್ಶ್ಗೆ ಸುಮಾರು ಎಂಟು ತಿಂಗಳುಗಳಿದ್ದಾಗ ಅವನಿಗೆ ತೆವಳಲು ಆಗುತ್ತಿರಲಿಲ್ಲ, ಇನ್ನು ಕುಳಿತುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ನಮಗೆ ಏನೋ ಸಮಸ್ಯೆ ಇದೆ ಎಂದುಕೊಂಡು ವೈದ್ಯರ ಬಳಿ ತೆರಳಿ ಅವರಿಗೆ ಮಾಹಿತಿ ನೀಡಿದೆವು. ಆಗ ಶಿಶುವೈದ್ಯರು ವರ್ಷದ ನಂತರ ನಿಧಾನವಾಗಿ ಸರಿಯಾಗಲಿದೆ ಎಂದು ತಿಳಿಸಿದ್ದರು.
ಇನ್ನು ಒಂಬತ್ತು ತಿಂಗಳಲ್ಲಿ ಯಾವುದೇ ಬದಲಾವಣೆ ಕಂಡು ಬರದೇ ಇದ್ದಾಗ, ನರ ವೈದ್ಯರನ್ನು ಭೇಟಿ ಮಾಡಿದೆವು. ಆಗ ಅವರು ಎಸ್ಎಂಎ ಇರುವುದನ್ನು ಖಚಿತಪಡಿಸದರು. ಅಲ್ಲದೆ ಅದರ ಚಿಕಿತ್ಸೆ ಎಷ್ಟು ಹಣ ಖರ್ಚು ಆಗಲಿದೆ ಎಂಬುವುದನ್ನು ಹೇಳಿದ್ದರು ಎಂದು ಯೋಗೇಶ್ ತಿಳಿಸಿದ್ದಾರೆ.
ಏನಿದು ಎಸ್ಎಂಎ ರೋಗ?
ಈ ಆರೋಗ್ಯ ಸಮಸ್ಯೆ ನರಕೋಶಗಳ ಸಂಪೂರ್ಣ ಸ್ಥಗಿತಕ್ಕೆ ಕಾರಣವಾಗುವ ಮೂಲಕ ಸ್ನಾಯುವಿನ ಚಲನೆಯ ಮೇಲೆ ಸಂಪೂರ್ಣ ನಿಯಂತ್ರಣ ಕಳೆದುಕೊಳ್ಳುವಂತೆ ಮಾಡುತ್ತದೆ.
ಇತ್ತೀಚೆಗೆ ಪ್ರಧಾನಿ ಮೋದಿಯಿಂದ ಮಾನವೀಯತೆ!
ಎಸ್ಎಂಎ ರೋಗದಿಂದ ಬಳಲುತ್ತಿರುವ ಮುಂಬೈನ ಟೀರಾ ಕಾಮತ್ ಮೇಲೆ ಪ್ರಧಾನಿ ಮೋದಿ ಮಾನವೀಯತೆ ತೋರಿದ್ದರು. ಎಸ್ಎಂಎ ಸಮಸ್ಯೆಗೆ ಚಿಕಿತ್ಸೆ ನೀಡಲು ಝೊಲ್ಗೆನ್ಸ್ಮಾ ಮತ್ತು ಇತರ ಔಷಧಗಳನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಶೇ. 23 ರಷ್ಟು ಆಮದು ಸುಂಕ ಮತ್ತು ಶೇ. 12 ಜಿಎಸ್ಟಿ ₹ 6 ಕೋಟಿ ಸೇರಿ ಒಟ್ಟು ವೆಚ್ಚ ₹16 ಕೋಟಿ ಆಗುತ್ತದೆ. ಈ 6 ಕೋಟಿ ಜಿಎಸ್ಟಿಯನ್ನು ಪ್ರಧಾನಿ ಮೋದಿ ಕಡಿತಗೊಳಿಸಿದ್ದರು. ಇದೀಗ ಇವರಿಗೂ ನೆರವಾದರೆ ದೊಡ್ಡ ಸಹಾಯ ಮಾಡಿದಂತೆ ಆಗಲಿದೆ.