ಅಂಬರೀಶ್ ಜನ್ಮದಿನೋತ್ಸವ: ಅಭಿಮಾನಿಗಳ ಮನದಲ್ಲಿ ಮಂಡ್ಯದ ಗಂಡು 'ಅಮರ'

ಇವತ್ತು ರೆಬೆಲ್ ಸ್ಟಾರ್ ಅಂಬರೀಶ್ ಅವರ 69ನೇ ಜನ್ಮದಿನ. ಅಂಬರೀಶ್ ಜನ್ಮದಿನವಾದ ಇಂದು ಅಭಿಮಾನಿಗಳು ಅವರ ಸ್ಮರಣೆ ಮಾಡುತ್ತಿದ್ದಾರೆ.

ಅಂಬರೀಶ್ ಜನ್ಮದಿನೋತ್ಸವ: ಅಭಿಮಾನಿಗಳ ಮನದಲ್ಲಿ ಮಂಡ್ಯದ ಗಂಡು 'ಅಮರ'
Linkup
ರೆಬೆಲ್ ಸ್ಟಾರ್, ಮಂಡ್ಯದ ಗಂಡು, ಆಂಗ್ರಿ ಯಂಗ್ ಮ್ಯಾನ್ ಅಂತೆಲ್ಲಾ ಅಭಿಮಾನಿಗಳಿಂದ ಪ್ರೀತಿಯಿಂದ ಕರೆಯಿಸಿಕೊಳ್ಳುತ್ತಿದ್ದ ನಟ ಅಂಬರೀಶ್. ತೆರೆಮೇಲೆ ಮಾತ್ರವಲ್ಲ ನಿಜ ಜೀವನದಲ್ಲೂ ಅನೇಕರಿಗೆ ಸಹಾಯ ಮಾಡಿದ್ದ ಅಂಬರೀಶ್, ಕಲಿಯುಗದ ಕರ್ಣ, ಹೃದಯ ಶ್ರೀಮಂತ ನಟ ಅಂತಲೇ ಜನರ ಮನದಲ್ಲಿ ಅಚ್ಚಾಗಿದ್ದರು. ಇಂತಿಪ್ಪ ಅವರ ಜನ್ಮದಿನೋತ್ಸವ ಇವತ್ತು..! ಮೇ 29, 2021... 'ನಮ್ಮೂರ ಹಮ್ಮೀರ' ಅಂಬರೀಶ್ ಇಂದು ನಮ್ಮೊಂದಿಗೆ ಇದ್ದಿದ್ದರೆ 69ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ, ದುರಾದೃಷ್ಟವಶಾತ್ ಅಂಬರೀಶ್ ಇವತ್ತು ನಮ್ಮೊಂದಿಗೆ ಇಲ್ಲ. ದೈಹಿಕವಾಗಿ ಅಂಬರೀಶ್ ನಮ್ಮೆಲ್ಲರೊಂದಿಗೆ ಇರದಿದ್ದರೂ, ಅಭಿಮಾನಿಗಳ ಮನಸ್ಸಿನಲ್ಲಿ ಅಮರನಾಥ್ ಎಂದೆಂದಿಗೂ ಅಮರ. ಅಂಬರೀಶ್ ಜನ್ಮದಿನವಾದ ಇಂದು ಅಭಿಮಾನಿಗಳು ಅವರ ಸ್ಮರಣೆ ಮಾಡುತ್ತಿದ್ದಾರೆ. ಅಂಬರೀಶ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಉತ್ಸವ ರೀತಿ ಆಚರಿಸುತ್ತಿದ್ದರು. ಪ್ರತಿ ವರ್ಷ ಅಂಬರೀಶ್ ಅವರ ಜನ್ಮದಿನದಂದು, ಅವರ ನಿವಾಸ ಮುಂದೆ ನೂರಾರು ಮಂದಿ ಜಮಾಯಿಸುತ್ತಿದ್ದರು. ನೆಚ್ಚಿನ ನಟ ಅಂಬರೀಶ್‌ಗೆ ಶುಭ ಕೋರಲು ಬೇರೆ ಬೇರೆ ಊರುಗಳಿಂದ ಅಭಿಮಾನಿಗಳು ಧಾವಿಸುತ್ತಿದ್ದರು. ವಿಧವಿಧವಾದ ಕೇಕ್‌ಗಳನ್ನು ತರುತ್ತಿದ್ದರು. ಜನ್ಮದಿನವನ್ನು ಅಭಿಮಾನಿಗಳಿಗೆ ಮೀಸಲಿಟ್ಟು, ಇಡೀ ದಿನ ಅವರುಗಳೊಂದಿಗೆ ಅಂಬರೀಶ್ ಕಾಲ ಕಳೆಯುತ್ತಿದ್ದರು. ಆದ್ರೀಗ, ಅಭಿಮಾನಿಗಳ ಅಚ್ಚುಮೆಚ್ಚಿನ ಅಂಬರೀಶ್ ಇನ್ನಿಲ್ಲ. ಅಂಬರೀಶ್ ಇಹಲೋಕ ತ್ಯಜಿಸಿದ ಬಳಿಕ, ಅವರ ಪುಣ್ಯಭೂಮಿಯಲ್ಲಿ ಜನ್ಮದಿನೋತ್ಸವದ ಆಚರಣೆ ನಡೆಯುತ್ತಿತ್ತು. ಈ ಬಾರಿ ಲಾಕ್‌ಡೌನ್ ಇರುವ ಕಾರಣ ಕುಟುಂಬಸ್ಥರು ಸರಳವಾಗಿ ಪೂಜೆ ಸಲ್ಲಿಸಿ, ಅಂಬರೀಶ್‌ಗೆ ನಮನ ಸಲ್ಲಿಸಿದ್ದಾರೆ. ಮೇ 29, 1952.. ಅಂಬರೀಶ್ ಹುಟ್ಟಿದ ದಿನ. ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆಯಲ್ಲಿ ಮಳವಳ್ಳಿ ಹುಚ್ಚೇಗೌಡ ಮತ್ತು ಪದ್ಮಮ್ಮ ದಂಪತಿಯ ಆರನೇ ಪುತ್ರನಾಗಿ ಜನಿಸಿದವರು ಅಂಬರೀಶ್. ಮಂಡ್ಯ ಮತ್ತು ಮೈಸೂರಿನಲ್ಲೇ ವಿದ್ಯಾಭ್ಯಾಸ ಮಾಡಿದ ಅಂಬರೀಶ್, 'ನಾಗರಹಾವು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. 80ರ ದಶಕದಲ್ಲಿ ಆಂಗ್ರಿ ಯಂಗ್ ಮ್ಯಾನ್ ಪಾತ್ರಗಳನ್ನು ಮಾಡಿ ಅಪಾರ ಅಭಿಮಾನಿ ಬಳಗವನ್ನು ಅಂಬರೀಶ್ ಪಡೆದರು. ವೃತ್ತಿ ಜೀವನದಲ್ಲಿ ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ, ರಾಜಕಾರಣಕ್ಕೆ ಅಂಬರೀಶ್ ಧುಮುಕಿದರು. ರಾಜಕೀಯದಲ್ಲೂ ಸಂಚಲನ ಮೂಡಿಸಿ ಕೇಂದ್ರ ಸಚಿವ, ರಾಜ್ಯ ಸಚಿವನಾಗಿ ಅಂಬರೀಶ್ ಕಾರ್ಯ ನಿರ್ವಹಿಸಿದರು. ಅಭಿಮಾನಿಗಳ ಪಾಲಿಗೆ 'ಗುಣವಂತ'ನಾಗಿದ್ದ ಅಂಬರೀಶ್, ರಾಜ್ಯ ಪ್ರಶಸ್ತಿ, ಫಿಲ್ಮ್ ಫೇರ್ ಪ್ರಶಸ್ತಿ, ಎನ್.ಟಿ.ಆರ್ ನ್ಯಾಷನಲ್ ಅವಾರ್ಡ್, ನಂದಿ ಅವಾರ್ಡ್, ಡಾ.ವಿಷ್ಣುವರ್ಧನ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 24 ನವೆಂಬರ್ 2018ರಂದು ಅಂಬರೀಶ್ ಬಾರದ ಲೋಕಕ್ಕೆ ಪಯಣಿಸಿದರು.