ಅಫ್ಘಾನಿಸ್ತಾನದಲ್ಲಿ ಭಾರತ ನಿರ್ಮಿಸಿದ ಆಸ್ತಿಗಳ ಮೇಲೆ ದಾಳಿ: ತಾಲಿಬಾನ್‌ಗೆ ಐಎಸ್‌ಐ ಸೂಚನೆ

ಅಫ್ಘಾನಿಸ್ತಾನದಲ್ಲಿ ಭಾರತವು ಕಳೆದ ಕೆಲವು ವರ್ಷಗಳಿಂದ ನಿರ್ಮಿಸಿರುವ ಆಸ್ತಿಗಳನ್ನು ನಾಶಪಡಿಸುವಂತೆ ತಾಲಿಬಾನ್‌ಗೆ ಪಾಕಿಸ್ತಾನದ ಐಎಸ್‌ಐ ಸೂಚನೆ ನೀಡಿದೆ ಎಂದು ವರದಿಯಾಗಿದೆ.

ಅಫ್ಘಾನಿಸ್ತಾನದಲ್ಲಿ ಭಾರತ ನಿರ್ಮಿಸಿದ ಆಸ್ತಿಗಳ ಮೇಲೆ ದಾಳಿ: ತಾಲಿಬಾನ್‌ಗೆ ಐಎಸ್‌ಐ ಸೂಚನೆ
Linkup
ಹೊಸದಿಲ್ಲಿ: ಅಫ್ಘಾನಿಸ್ತಾನದಲ್ಲಿ ಭಾರತವು ಕಳೆದ ಕೆಲವು ವರ್ಷಗಳಿಂದ ನಿರ್ಮಿಸಿರುವ ಕಟ್ಟಡಗಳು, ಆಸ್ತಿಗಳನ್ನು ಗುರಿಯಾಗಿರಿಸಿ ದಾಳಿಗಳನ್ನು ನಡೆಸುವಂತೆ ತಾಲಿಬಾನ್‌ಗೆ ಪಾಕಿಸ್ತಾನದ ಐಎಸ್ಐ ಸೂಚನೆ ನೀಡಿದೆ ಎಂದು ವರದಿಯಾಗಿದೆ. ಜತೆಗೆ ಪಾಕಿಸ್ತಾನದಿಂದಲೂ ಕೆಲವು ಉಗ್ರರನ್ನು ಈ ಕಾರ್ಯಕ್ಕೆ ಕಳುಹಿಸಲಾಗಿದೆ. ನೆಲೆಯಲ್ಲಿರುವ ನಿರ್ಮಿತ ಆಸ್ತಿಗಳನ್ನು ಗುರಿಯಾಗಿಸುವಂತೆ ಹಾಗೂ ಅಲ್ಲಿ ಭಾರತ ನಡೆಸಿರುವ ಯಾವುದೇ ಒಳ್ಳೆಯ ಕೆಲಸದ ಕುರುಹುಗಳಿದ್ದರೆ ಅವುಗಳನ್ನು ತೆಗೆದುಹಾಕುವಂತೆ ಮತ್ತು ತಾಲಿಬಾನ್ ಉಗ್ರರಿಗೆ ಸೂಚಿಸಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ. ಕಳೆದ ಎರಡು ದಶಕಗಳಲ್ಲಿ ಅಫ್ಘಾನಿಸ್ತಾನದಲ್ಲಿ ಭಾರತ ಸರಕಾರ 3 ಬಿಲಿಯನ್‌ಗೂ ಅಧಿಕ ಮೊತ್ತವನ್ನು ಹೂಡಿಕೆ ಮಾಡಿದ್ದು, ದೆಲರಾಮ್ ಮತ್ತು ಜರಾಂಜ್ ಸಲ್ಮಾ ಅಣೆಕಟ್ಟಿನ ನಡುವೆ 218 ಕಿಮೀ ಉದ್ದದ ರಸ್ತೆ ನಿರ್ಮಿಸಿದೆ. 2015ರಲ್ಲಿ ಆಫ್ಘನ್ ಸಂಸತ್ ಕಟ್ಟಡವನ್ನು ಉದ್ಘಾಟಿಸಲಾಗಿತ್ತು. ಇದು ಅಫ್ಘಾನಿಸ್ತಾನದಲ್ಲಿ ಭಾರತದ ಅತಿ ದೊಡ್ಡ ಕೊಡುಗೆಯಾಗಿದೆ. ಅಫ್ಘಾನಿಸ್ತಾನದ ಅಶ್ರಫ್ ಘನಿ ನೇತೃತ್ವದ ಸರಕಾರದ ವಿರುದ್ಧದ ತಾಲಿಬಾನ್ ಹೋರಾಟಕ್ಕೆ ಬೆಂಬಲ ನೀಡಲು ಸುಮಾರು 10,000 ಪಾಕಿಸ್ತಾನಿ ಉಗ್ರರನ್ನು ಕಳುಹಿಸಲಾಗಿದೆ. ಕೆಲವು ದಿನಗಳ ಹಿಂದಷ್ಟೇ ಭಾರತವು ಕಂದಹಾರ್‌ನಲ್ಲಿನ ರಾಯಭಾರ ಕಚೇರಿಯ ಎಲ್ಲ ಸಿಬ್ಬಂದಿಯನ್ನೂ ವಿಶೇಷ ವಿಮಾನದಲ್ಲಿ ವಾಪಸ್ ಕರೆಸಿಕೊಂಡಿತ್ತು. ಅಮೆರಿಕದ ಪಡೆಗಳು ಮರಳಿದ ಬೆನ್ನಲ್ಲೇ ತಾಲಿಬಾನ್ ಹಿಡಿತ ಹೆಚ್ಚುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಭಾರತ ಈ ನಿರ್ಧಾರ ತೆಗೆದುಕೊಂಡಿತ್ತು.