
ಹೊಸದಿಲ್ಲಿ: ಎರಡನೆಯ ಅಲೆಯು ಭೀಕರವಾಗಿ ಹರಡುತ್ತಿದ್ದ ಸಂದರ್ಭದಲ್ಲಿ ಬಹು ಅಗತ್ಯದ ಕೋವಿಡ್ ಔಷಧಗಳನ್ನು ಸಂಗ್ರಹಿಸಿಟ್ಟ ಮತ್ತು ಅಕ್ರಮವಾಗಿ ಹಂಚಿಕೆ ಮಾಡಿದ ಆರೋಪದಲ್ಲಿ ಪ್ರತಿಷ್ಠಾನ ಹಾಗೂ ಶಾಸಕರಾದ ಇಮ್ರಾನ್ ಹುಸೇನ್ ಮತ್ತು ಪ್ರವೀಣ್ ಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ದಿಲ್ಲಿಯ ನಿಯಂತ್ರಣ ಇಲಾಖೆ, ಹೈಕೋರ್ಟ್‌ಗೆ ತಿಳಿಸಿದೆ.
ತನಿಖಾ ತಂಡ ನಡೆಸಿದ ವಿಚಾರಣೆಗಳ ಆಧಾರದಲ್ಲಿ ಗೌತಮ್ ಗಂಭೀರ್ ಪ್ರತಿಷ್ಠಾನ, ಅದರ ಟ್ರಸ್ಟಿಗಳು ಮತ್ತು ಸಿಇಒ ವಿರುದ್ಧ ಜುಲೈ 8ರಂದು, ಔಷಧ ಮತ್ತು ಸೌಂದರ್ಯರ್ವರ್ಧಕ ಕಾಯ್ದೆ, 1940ರ ಸೆಕ್ಷನ್ 18 (ಸಿ) ಮತ್ತು ಸೆಕ್ಷನ್ 27 (ಬಿ) (ii) ಅಡಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಇಲಾಖೆ ವರದಿ ಹೇಳಿದೆ.
ಸೆಕ್ಷನ್ 18 (ಸಿ) ಪರವಾನಗಿ ಇಲ್ಲದೆ ಔಷಧಗಳ ಉತ್ಪಾದನೆ, ಮಾರಾಟ ಮತ್ತು ಹಂಚಿಕೆಯನ್ನು ನಿಷೇಧಿಸಿದ್ದರೆ, ಸೆಕ್ಷನ್ 27 (ಬಿ) (ii) ಅಧಿಕೃತ ಪರವಾನಗಿ ಇಲ್ಲದೆ ಔಷಧಗಳ ಮಾರಾಟ, ಹಂಚಿಕೆಯನ್ನು ನಿರ್ಬಂಧಿಸುತ್ತದೆ. ಇದು ಮೂರು ವರ್ಷಕ್ಕೆ ಕಡಿಮೆ ಇಲ್ಲದಂತೆ ಜೈಲು ಮತ್ತು ದಂಡದ ಶಿಕ್ಷೆಗೆ ಅರ್ಹವಾಗಿದೆ.
ಪ್ರವೀಣ್ ಕುಮಾರ್ ವಿರುದ್ಧ ಕೂಡ ಇದೇ ರೀತಿಯ ಪ್ರಕರಣಗಳನ್ನು ದಾಖಲಿಸಲಾಗಿದೆ. ಇಮ್ರಾನ್ ಹುಸೇನ್ ಅವರು ಕಾನೂನುಗಳ ಅಡಿಯಲ್ಲಿ ಸೂಕ್ತ ಪರವಾನಗಿ ಇಲ್ಲದೆ ವೈದ್ಯಕೀಯ ಆಕ್ಸಿಜನ್‌ಗಳನ್ನು ಸಂಗ್ರಹಿಸಿದ ಮತ್ತು ಹಂಚಿಕೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ.
ಮಾಜಿ ಕ್ರಿಕೆಟಿಗ ಮತ್ತು ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರಿಗೆ ಸೇರಿದ ಪ್ರತಿಷ್ಠಾನವು ವೈದ್ಯಕೀಯ ಶಿಬಿರ ಆಯೋಜಿಸಲು ವೈದ್ಯಕೀಯ ಆಕ್ಸಿಜನ್, ಕೋವಿಡ್ 19 ಔಷಧಗಳು, ಫೇವಿಪಿರಾವಿರ್ ಮಾತ್ರೆಗಳನ್ನು ನೀಡಿದ್ದ ಔಷಧ ಡೀಲರ್‌ಗಳು ಹಾಗೂ ಮಾರಾಟಗಾರರನ್ನು ಕೂಡ ಕೂಡ ಕಾನೂನಿನ ಅಡಿಯಲ್ಲಿ ಹತ್ತು ದಿನ ಅಮಾನತುಗೊಳಿಸಲಾಗಿತ್ತು ಎಂದು ಇಲಾಖೆ ವಿವರಿಸಿದೆ.