ಚೆನ್ನೈ: ತಮಿಳುನಾಡಿನ ತಂಜಾವೂರ್‌ನಲ್ಲಿ 17 ವರ್ಷದ ಶಾಲಾ ಬಾಲಕಿಯ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. 2 ನಿಮಿಷ 24 ಸೆಕೆಂಡ್ ಉದ್ದದ ಹೊಸ ವಿಡಿಯೋ ಬಹಿರಂಗವಾಗಿದೆ. ಇದರಲ್ಲಿ ಆಕೆ, ತನ್ನ ಅಂಕಗಳು ಕಡಿಮೆಯಾಗಬಹುದು ಎಂಬ ಭಯದೊಂದಿಗೆ ವಿಷ ಸೇವಿಸಿರುವುದಾಗಿ ಹೇಳಿರುವುದು ಕೇಳಿಸಿದೆ. ಈ ಹಿಂದಿನ ವಿಡಿಯೋದಲ್ಲಿ ಬಾಲಕಿ, ನೀಡಿದ್ದ ಕಿರುಕುಳ ಮತ್ತು ಕ್ರೈಸ್ತ ಧರ್ಮಕ್ಕೆ ಮಾಡುವಂತೆ ಬಲವಂತ ಮಾಡಿದ್ದರಿಂದ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಗಿ ಹೇಳಿಕೊಂಡಿದ್ದಳು.
ತಂಜಾವೂರ್‌ನ ಮೈಕಲ್‌ಪಟ್ಟಿಯಲ್ಲಿನ ಸೆಕ್ರೆಡ್ ಹಾರ್ಟ್ಸ್ ಹೈಯರ್ ಸೆಕೆಂಡರಿ ಶಾಲೆಯ ವಸತಿ ಶಾಲೆಯಲ್ಲಿ ಇದ್ದ ಲಾವಣ್ಯ, ಜನವರಿ 19ರಂದು ಮೃತಪಟ್ಟಿದ್ದಳು. ತನಗೆ ಹಾಗೂ ತನ್ನ ಕುಟುಂಬಕ್ಕೆ ಮತಾಂತರವಾಗುವಂತೆ ಶಾಲೆಯ ಸನ್ಯಾಸಿನಿಯೊಬ್ಬರು ಬಲವಂತ ಮಾಡಿದ್ದಾಗಿ ಲಾವಣ್ಯ ಹೇಳುವುದು ವಿಡಿಯೋ ಒಂದರಲ್ಲಿ ದಾಖಲಾಗಿತ್ತು. ಈ ವಿಡಿಯೋ ಚಿತ್ರೀಕರಿಸಿದ್ದ ಮೊಬೈಲ್ ಫೋನ್ ಅನ್ನು ಪೊಲೀಸರ ವಶಕ್ಕೆ ಒಪ್ಪಿಸಿ, ವಿಧಿ ವಿಜ್ಞಾನ ವಿಶ್ಲೇಷಣೆಗೆ ನೀಡಲಾಗಿತ್ತು. ಈ ವಿಡಿಯೋ ಚಿತ್ರೀಕರಿಸಿದ್ದ ವ್ಯಕ್ತಿ ಮುತ್ತುವೇಲ್, ವಿಶ್ವ ಹಿಂದೂ ಪರಿಷತ್‌ನ ಅರಿಯಲೂರ್ ಜಿಲ್ಲೆಯ ಕಾರ್ಯದರ್ಶಿಯಾಗಿದ್ದಾನೆ ಎನ್ನುವುದು ಗೊತ್ತಾಗಿದೆ.
ಲಾವಣ್ಯ ಸಾವು ರಾಷ್ಟ್ರಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಆಕೆಯನ್ನು ಬಲವಂತವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಪ್ರಯತ್ನಿಸಲಾಗಿದೆ ಎನ್ನುವುದು ವಿಡಿಯೋ ಒಂದರಲ್ಲಿ ದಾಖಲಾಗಿತ್ತು. ಆದರೆ ಹೊಸ ವಿಡಿಯೋದಲ್ಲಿ ಲಾವಣ್ಯ ಮತಾಂತರ ಕುರಿತಂತೆ ಯಾವುದೇ ಹೇಳಿಕೆ ನೀಡಿಲ್ಲ. ಅಲ್ಲದೆ, ಸಾಯುವ ಮುನ್ನ ಪೊಲೀಸರ ಎದುರು ದಾಖಲಿಸಿದ ಹೇಳಿಕೆಗಳಲ್ಲಿಯೂ ಮತಾಂತರದ ಬಗ್ಗೆ ಉಲ್ಲೇಖಿಸಿಲ್ಲ. ಮತಾಂತರ ಕುರಿತು ಆಕೆ ನೀಡಿದ್ದ ಹೇಳಿಕೆಯ ವಿಡಿಯೋ ನೈಜವೇ ಅಥವಾ ತಿರುಚಿದ್ದೇ ಎಂದು ತಿಳಿಯಲು ತನಿಖಾಧಿಕಾರಿಗಳು ಮೊಬೈಲ್ ಫೋನ್ ಅನ್ನು ಪರಿಶೀಲಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಕೆಲವು ದಿನಗಳ ಹಿಂದೆ ಸೂಚನೆ ನೀಡಿತ್ತು.
ಹೊಸದಾಗಿ ಬಿಡುಗಡೆಯಾಗಿರುವ ವಿಡಿಯೋದಲ್ಲಿ ಬಾಲಕಿ, ಹಾಸ್ಟೆಲ್‌ನಲ್ಲಿನ ಸಿಸ್ಟರ್, ವಾರ್ಡನ್ ಸಗಾಯ ಮೇರಿ ಎಂಬಾಕೆ ತನ್ನ ಓದಿನ ಜತೆಗೆ ಅಲ್ಲಿನ ಕೆಲಸಗಳನ್ನು ಕೂಡ ಮಾಡಿಸುತ್ತಿದ್ದಳು ಎಂದು ಆರೋಪಿಸಿದ್ದಾಳೆ. ಇದು ತನ್ನ ಅಂಕಗಳು ಕಡಿಮೆಯಾಗಲು ಕಾರಣ ಎಂದು ಹೇಳಿಕೊಂಡಿದ್ದಾಳೆ. ತನಗೆ ಲೆಕ್ಕದ ಕೆಲಸಗಳು ಸರಿಯಾಗಿ ಅರ್ಥ ಆಗುತ್ತಿರಲಿಲ್ಲ. ಆದರೆ ವಾರ್ಡನ್ ಅದಕ್ಕೆ ಕಿವಿಗೊಡುತ್ತಿರಲಿಲ್ಲ. ಆ ಕೆಲಸ ಮಾಡುವಂತೆ ಬಲವಂತ ಮಾಡುತ್ತಿದ್ದಳು ಎಂದು ದೂರಿರುವುದು ದಾಖಲಾಗಿದೆ.
'ಎಲ್ಲರೂ ಏಳುವ ಸಮಯದಲ್ಲಿ ನಾನು ಗೇಟ್ ತೆರೆದು, ಮೋಟರ್ ಸ್ವಿಚ್ ಹಾಕಬೇಕಿತ್ತು. ಪ್ರತಿಯೊಬ್ಬರೂ ತಿಂಡಿ ತಿಂದ ಬಳಿಕ, ಮೋಟರ್ ಸರಿಯಾಗಿ ಓಡುತ್ತಿದೆಯೇ ಎಂದು ಪರಿಶೀಲಿಸಬೇಕಿತ್ತು. ವಾರ್ಡನ್ ನನಗೆ ಎಲ್ಲ ಕೆಲಸಗಳನ್ನೂ ನೀಡುತ್ತಿದ್ದರು' ಎಂದು ಲಾವಣ್ಯ ಹೇಳಿದ್ದಾಳೆ.
ವಿಎಚ್‌ಪಿ ಮುಖಂಡ ಮುತ್ತುವೇಲ್ ಜನವರಿ 17ರಂದು ಆಸ್ಪತ್ರೆಗೆ ತೆರಳಿ ತನ್ನ ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿರುವ ನಾಲ್ಕು ವಿಡಿಯೋಗಳಲ್ಲಿ ಎರಡು ವಿಡಿಯೋಗಳು ಸೋರಿಕೆಯಾಗಿವೆ. ತನ್ನ ಅಂಕಗಳು ಕಡಿಮೆಯಾಗುತ್ತಿರುವ ಬಗ್ಗೆ ಆಕೆ ತಿಳಿಸಿದ ಎರಡನೇ ವಿಡಿಯೋವನ್ನು ಮುತ್ತುವೇಲ್ ಡಿಲೀಟ್ ಮಾಡಿದ್ದಾನೆ ಎನ್ನಲಾಗಿದೆ. ಆದರೆ ಆ ವಿಡಿಯೋ ಬೇರೊಬ್ಬ ವ್ಯಕ್ತಿಯಿಂದ ಫಾರ್ವರ್ಡ್ ಆಗಿದ್ದರಿಂದ, ಅವನ ಫೋನ್‌ನಲ್ಲಿದ್ದ ವಿಡಿಯೋವನ್ನು ತನಿಖಾಧಿಕಾರಿಗಳು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ನಾಲ್ಕು ವಿಡಿಯೋಗಳ ಪೈಕಿ ಒಂದು ವಿಡಿಯೋದಲ್ಲಿ ಮತಾಂತರ ಪ್ರಯತ್ನದ ಬಗ್ಗೆ ಉಲ್ಲೇಖಿಸಲಾಗಿದೆ. ಮೊದಲ ವಿಡಿಯೋದಲ್ಲಿ ಆಕೆಯ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಲಾಗಿದೆ. ಮೂರನೇ ವಿಡಿಯೋದಲ್ಲಿ ಬಲವಂತದ ಮತಾಂತರದ ಕುರಿತು ಹೇಳಲಾಗಿದೆ. ನಾಲ್ಕನೇ ವಿಡಿಯೋದಲ್ಲಿ ಮಲತಾಯಿಯ ಬಗ್ಗೆ ಆಕೆ ಮಾತನಾಡಿದ್ದಾಳೆ. ಮಲತಾಯಿಯ ಕಿರುಕುಳದ ಬಗ್ಗೆ ಎರಡು ವರ್ಷಗಳ ಹಿಂದೆ ಲಾವಣ್ಯ, ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ್ದಳು.
'ಎರಡು ವರ್ಷಗಳ ಹಿಂದೆ ನನಗೆ ಮತ್ತು ನನ್ನ ಪೋಷಕರಿಗೆ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಅವರು ಸೂಚಿಸಿದ್ದರು. ನನ್ನ ಶಿಕ್ಷಣದ ಹೊಣೆಯನ್ನು ಅವರು ನೋಡಿಕೊಳ್ಳುವುದಾಗಿ ತಿಳಿಸಿದ್ದರು' ಎಂದು ಆಕೆ ಹೇಳಿದ್ದಾಳೆ. ಕ್ರೈಸ್ತ ಧರ್ಮಕ್ಕೆ ಮತಾಂತರವಾಗದ ಕಾರಣದಿಂದ ತನಗೆ ಕಿರುಕುಳ ನೀಡಲಾಗುತ್ತಿರಬಹುದು ಎಂದು ಹೇಳುವುದು ವಿಡಿಯೋದಲ್ಲಿ ಸೆರೆಯಾಗಿತ್ತು. ಹೀಗಾಗಿ ಲಾವಣ್ಯ ಸಾವಿನ ಪ್ರಕರಣವನ್ನು ಮತಾಂತರ ಆಯಾಮದಲ್ಲಿಯೂ ತನಿಖೆಗೆ ಒಳಪಡಿಸಲಾಗುತ್ತಿದೆ.
ಸೋರಿಕೆಯಾದ ಹೊಸ ವಿಡಿಯೋದಲ್ಲಿ ಮುತ್ತುವೇಲ್, ಕುಂಕುಮ ಇರಿಸದಂತೆ ಬಲವಂತ ಮಾಡಿದ್ದರೇ? ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಆಕೆ ಇಲ್ಲ ಎಂದು ನಿರಾಕರಿಸಿದ್ದಾಳೆ. ಈ ಅಂಶವನ್ನು ಮುಂದಿಟ್ಟುಕೊಂಡು ಪೊಲೀಸರು ಮತಾಂತರ ಆರೋಪ ನಿಜವೇ ಅಥವಾ ತಿರುಚಿರುವುದೇ ಎಂದು ತಿಳಿಯಲು ಮುಂದಾಗಿದ್ದಾರೆ.