28 ವೈದ್ಯರು ನಿರ್ಮಾಣ ಮಾಡಿರುವ ನರರೋಗ ತಜ್ಞ ನಿರ್ದೇಶನ ಮಾಡಿರುವ ‘ಪ್ರೇಮಂ ಪೂಜ್ಯಂ’ ಪ್ರದರ್ಶನ ಇಂದಿನಿಂದ ಆರಂಭ!

ಪ್ರೇಮ್‌ ನಟನೆಯ 25ನೇ ಚಿತ್ರ ‘ಪ್ರೇಮಂ ಪೂಜ್ಯಂ’ ಇಂದು ದೇಶ-ವಿದೇಶಗಳಲ್ಲಿ ತೆರೆಕಾಣುತ್ತಿದೆ. ಈ ಚಿತ್ರದ ನಿರ್ಮಾಣ, ನಿರ್ದೇಶನ ಮಾಡಿರುವವರೆಲ್ಲರೂ ವೈದ್ಯರು ಎನ್ನುವುದು ವಿಶೇಷ.

28 ವೈದ್ಯರು ನಿರ್ಮಾಣ ಮಾಡಿರುವ ನರರೋಗ ತಜ್ಞ ನಿರ್ದೇಶನ ಮಾಡಿರುವ ‘ಪ್ರೇಮಂ ಪೂಜ್ಯಂ’ ಪ್ರದರ್ಶನ ಇಂದಿನಿಂದ ಆರಂಭ!
Linkup
ಪದ್ಮಾ ಶಿವಮೊಗ್ಗ ಪ್ರೇಮ್‌ ನಟನೆಯ 25ನೇ ಚಿತ್ರ ‘ಪ್ರೇಮಂ ಪೂಜ್ಯಂ’ ಇಂದು ದೇಶ-ವಿದೇಶಗಳಲ್ಲಿ ತೆರೆಕಾಣುತ್ತಿದೆ. ಈ ಚಿತ್ರದ ನಿರ್ಮಾಣ, ನಿರ್ದೇಶನ ಮಾಡಿರುವವರೆಲ್ಲರೂ ವೈದ್ಯರು ಎನ್ನುವುದು ವಿಶೇಷ. ಕನ್ನಡ ಚಿತ್ರರಂಗದಲ್ಲಿ ಹಲವು ಕಾರಣಗಳಿಗೆ ಪ್ರೇಮ್‌ ನಟನೆಯ ‘ಪ್ರೇಮಂ ಪೂಜ್ಯಂ’ ಚಿತ್ರ ವಿಶೇಷ ಎನ್ನಿಸಿಕೊಳ್ಳಲಿದೆ. ನರರೋಗ ತಜ್ಞರಾದ ಡಾ. ರಾಘವೇಂದ್ರ ನಿರ್ದೇಶನದ ಮೊದಲ ಚಿತ್ರ ಇದಾಗಿದ್ದು, ವೈದ್ಯಕೀಯ ಕ್ಷೇತ್ರದ 28 ತಜ್ಞ ವೈದ್ಯರು ಮೊದಲ ಬಾರಿಗೆ ಚಿತ್ರ ನಿರ್ಮಾಣ ಮಾಡಿದ್ದಾರೆ. ಡಾ. ರಾಜ್‌ಕುಮಾರ್‌ ಜಾನಕಿರಾಮನ್‌, ಡಾ. ರಕ್ಷಿತ್‌ ಕೆದಂಬಾಡಿ, ಡಾ. ರಾಘವೇಂದ್ರ ಎಸ್‌. ಮತ್ತು ಮನೋಜ್‌ ಕೃಷ್ಣನ್‌ ಸೇರಿದಂತೆ ಭಾರತ ಮತ್ತು ವಿದೇಶಗಳಲ್ಲಿರುವ ವೈದ್ಯರು ಈ ಚಿತ್ರವನ್ನು ಕೆದಂಬಾಡಿ ಕ್ರಿಯೇಷನ್‌ ಬ್ಯಾನರ್‌ನಡಿ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಬೃಂದಾ ಆಚಾರ್ಯ ಮತ್ತು ಐಂದ್ರಿತಾ ರೇ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಯುನೀಕ್‌ ಆದ ಲವ್‌ ಸ್ಟೋರಿ ಇದೆ ಎಂದಿದ್ದಾರೆ ಡಾ. ರಕ್ಷಿತ್‌ ಕೆದಂಬಾಡಿ. ‘ಡಾ. ರಾಘವೇಂದ್ರ ಅವರಿಗೆ ಇರುವ ಸಿನಿಮಾ ಪ್ಯಾಷನ್‌, ಸಿನಿಮಾ ಕಥೆ ಕೇಳಿ ನಾವೆಲ್ಲಾ ಸ್ನೇಹಿತರು ಚಿತ್ರ ನಿರ್ಮಾಣ ಮಾಡಲು ನಿರ್ಧರಿಸಿದೆವು. ಸಿನಿಮಾದ ಸಬ್ಜೆಕ್ಟ್ ಬಹಳ ವಿಶಿಷ್ಟವಾಗಿದೆ. ಇತ್ತೀಚೆಗೆ ಈ ರೀತಿಯ ಕಾನ್ಸೆಪ್ಟ್‌ನ ಸಿನಿಮಾ ಬಂದಿಲ್ಲ. ಸ್ಕ್ರೀನ್‌ಪ್ಲೇ, ಛಾಯಾಗ್ರಹಣ, ಡೈಲಾಗ್‌, ನಟನೆ ಎಲ್ಲವೂ ಬಹಳ ಚೆನ್ನಾಗಿ ಮೂಡಿಬಂದಿದೆ. ನಮಗೆ ತೃಪ್ತಿ ಇದೆ. ಜನರಿಗೂ ಇಷ್ಟ ಆಗುತ್ತೆ ಎಂಬ ನಂಬಿಕೆ ನಮಗಿದೆ’ ಎಂದಿದ್ದಾರೆ ಡಾ. ರಕ್ಷಿತ್‌. ಚಿತ್ರದಲ್ಲಿ ಲವ್‌ ಸ್ಟೋರಿ ಇದೆ. ಕರ್ನಾಟಕದಾದ್ಯಂತ 350 ಚಿತ್ರಮಂದಿರಗಳಲ್ಲಿ ಮಾತ್ರವಲ್ಲದೆ, ರಾಜ್ಯದ ಹೊರಗೂ ತೆರೆಕಾಣುತ್ತಿದೆ ಎಂದಿದ್ದಾರೆ ನಿರ್ದೇಶಕ ಡಾ.ರಾಘವೇಂದ್ರ. ‘ಕೊಚ್ಚಿ, ಮುಂಬೈ, ಜೈಪುರ್‌, ಚೆನ್ನೈ, ಹೈದರಾಬಾದ್‌, ಗುಜರಾತ್‌, ದುಬೈ, ಯುಎಸ್‌ಐ, ನೆದರ್‌ಲ್ಯಾಂಡ್‌ ಮತ್ತಿತರ ದೇಶಗಳಲ್ಲೂ ಸಿನಿಮಾ ರಿಲೀಸ್‌ ಮಾಡುತ್ತಿದ್ದೇವೆ. ವಿದೇಶಗಳಲ್ಲಿ ಕನ್ನಡ ಒಕ್ಕೂಟಗಳು ಸಿನಿಮಾ ರಿಲೀಸ್‌ ಮಾಡಲು ಸಪೋರ್ಟ್‌ ಮಾಡುತ್ತಿದ್ದಾರೆ. ಎಲ್ಲಾ ಕಡೆಯಿಂದ ಸಿನಿಮಾಗೆ ಬೇಡಿಕೆ ಬಂದಿರುವುದು ಖುಷಿ ತಂದಿದೆ. ಇಡೀ ತಂಡ ಮೂರು ವರ್ಷ ಬಹಳ ಕಷ್ಟಪಟ್ಟು ಮಾಡಿದ ಸಿನಿಮಾ. ವೈದ್ಯರೆಲ್ಲರೂ ಸೇರಿದ ಮಾಡಿದ ಸಿನಿಮಾ ಇದು. ಪ್ರೇಕ್ಷಕರಿಗೂ ಇಷ್ಟ ಆಗುತ್ತೆ ಎಂದುಕೊಂಡಿದ್ದೇವೆ’ ಎಂದಿದ್ದಾರೆ ಡಾ. ರಾಘವೇಂದ್ರ. ಸಿನಿಮಾದಲ್ಲಿ 12 ಹಾಡುಗಳಿರುವುದು ಇನ್ನೊಂದು ವಿಶೇಷ. ಟೈಟಲ್‌ ಸಾಂಗ್‌ ಸೇರಿದಂತೆ ಹಾಡುಗಳೆಲ್ಲ ಸೂಪರ್‌ ಹಿಟ್‌ ಆಗಿವೆ. ಹರಿಹರನ್‌, ಅರ್ಮಾನ್‌ ಮಲ್ಲಿಕ್‌, ವಿಜಯ್‌ ಪ್ರಕಾಶ್‌, ಸೋನು ನಿಗಮ್‌, ಮಲೆಯಾಳಂ ಸಿಂಗರ್‌ ಶಹಬಾಜ್‌ ಅಮನ್‌, ವಿಹಾನ್‌ ಆರ್ಯ, ಅನುರಾಧಾ ಭಟ್‌, ಡಾ.ಸಂದೀಪ್‌, ಸಾಧುಕೋಕಿಲಾ, ಮೋಹಿತ್‌ ಚೌಹಾಣ್‌, ಡಾ. ಸ್ಮೃತಿ ಮತ್ತು ನಿರ್ದೇಶಕ ಡಾ. ರಾಘವೇಂದ್ರ ಹಾಡುಗಳನ್ನು ಹಾಡಿದ್ದಾರೆ. ಚಿತ್ರಕ್ಕೆ ನವೀನ್‌ ಛಾಯಾಗ್ರಹಣವಿದ್ದು, ಮಾ. ಆನಂದ್‌, ಸಾಧುಕೋಕಿಲಾ, ಅನು ಪ್ರಭಾಕರ್‌, ಅವಿನಾಶ್‌, ಮಾಳವಿಕಾ, ನಾಗಾಭರಣ ಮತ್ತು ಸುಮನ್‌ ಇತರ ಪಾತ್ರಗಳಲ್ಲಿ ನಟಿಸಿದ್ದಾರೆ. ‘ವಿಭಿನ್ನವಾದ ಕಥೆ ಈ ಸಿನಿಮಾದಲ್ಲಿದೆ. ಪ್ರೇಕ್ಷಕರು ಬೇರೆ ಸಿನಿಮಾಗಳಲ್ಲಿಇದನ್ನು ನೋಡಿರಲು ಸಾಧ್ಯವಿಲ್ಲ. ರೊಮಾನ್ಸ್‌, ಕಾಮಿಡಿ, ಎಮೋಷನ್ಸ್‌ ಎಲ್ಲವೂ ಇವೆ. ಪ್ರೇಕ್ಷಕರನ್ನು ಜಂಜಾಟದಿಂದ ಬೇರೆಯದೇ ಲೋಕಕ್ಕೆ ಕರೆದೊಯ್ಯಲಿದೆ’ ಎಂದಿದ್ದಾರೆ ನಿರ್ಮಾಪಕ ಡಾ. ರಕ್ಷಿತ್‌ ಕೆದಂಬಾಡಿ ‘ಕೊರೊನಾದಿಂದ ಜನ ಕಷ್ಟಪಟ್ಟಿದ್ದಾರೆ, ಮನಸ್ಸು ರಿಲ್ಯಾಕ್ಸ್‌ ಆಗಬೇಕಿದೆ. ಇದಕ್ಕೆ ‘ಪ್ರೇಮಂ ಪೂಜ್ಯಂ’ ಸಿನಿಮಾ ಬೆಸ್ಟ್‌ ಎನ್ನುತ್ತೇನೆ. ಇದು ಮಾಮೂಲಿ ಕಮರ್ಷಿಯಲ್‌ ಸಿನಿಮಾ ಅಲ್ಲ. ಹೊಸತನ ಇದೆ. ಸ್ನೇಹಿತರಾದ ರಾಘವೇಂದ್ರ ಸಿನಿಮಾವನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ. ಅವರು ನಿರ್ದೇಶನ ಮಾಡಲು ಹೆಚ್ಚು ಹೆಚ್ಚು ಅರ್ಹರಾಗಿದ್ದಾರೆ. ಜನರಿಗೆ ಒಳ್ಳೆಯ ಮನರಂಜನೆ ಸಿನಿಮಾದಲ್ಲಿದೆ’ ಎಂದು ನಿರ್ಮಾಪಕ ಡಾ.ರಾಜ್‌ಕುಮಾರ್ ತಿಳಿಸಿದ್ದಾರೆ.