![](https://vijaykarnataka.com/photo/87232745/photo-87232745.jpg)
ಬೆಂಗಳೂರು: ದೇಶದಲ್ಲಿ ಸಮುದಾಯದ 22 ಕೋಟಿ ಜನರಿದ್ದಾರೆ. ಹೀಗಿರುವಾಗ ದೇಶದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರು ಹೇಗಾಗುತ್ತಾರೆ? ಎಂದು ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಪ್ರಶ್ನಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಗಳಿಕೆಗಾಗಿ ಮುಸ್ಲಿಮರ ಓಲೈಕೆ ನಡೆಯುತ್ತಿಲ್ಲ. ಮುಸ್ಲಿಮರು ಬಹುಸಂಖ್ಯೆಯಲ್ಲಿದ್ದಾರೆ ಎಂದು ಹೇಳಿದರು.
ಮುಸ್ಲಿಮರ ಕೈ ಹಿಡಿಯಲು ಯಾವುದೇ ಪಕ್ಷ ಬೇಕಿಲ್ಲ. ಸಂವಿಧಾನ ಒಂದೇ ಸಾಕು. ನಮ್ಮದು ಜಾತ್ಯತೀತ ದೇಶ. ಮುಸ್ಲಿಮರು ಜಾತ್ಯತೀತ ಪಕ್ಷಗಳ ಜತೆಯೇ ಇರುತ್ತಾರೆ. ಹೀಗಾಗಿಯೇ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದು, ಬಿಜೆಪಿ ಕೂಡ ಜಾತ್ಯತೀತವಾದರೆ ಆ ಪಕ್ಷದ ಜತೆಯೂ ಗುರುತಿಸಿಕೊಳ್ಳುತ್ತಾರೆ ಎಂದು ಹೇಳಿದರು.
ಸಿ.ಎಂ. ಇಬ್ರಾಹಿಂ ಪಕ್ಷ ತೊರೆಯುವ ವಿಚಾರಕ್ಕೆ ಪ್ರತಿಕ್ರಿಯಿಸಿ, ''ಅವರು ಹಿರಿಯ ನಾಯಕ. ಅವರನ್ನು ಪರಿಷತ್ನಲ್ಲಿ ಪ್ರತಿಪಕ್ಷ ನಾಯಕರನ್ನಾಗಿ ಮಾಡಬೇಕೋ, ಬೇಡವೋ ಎಂಬ ಬಗ್ಗೆ ಸಮುದಾಯದ ಬಣ್ಣ ಕೊಡುವುದು ಬೇಡ. ನನಗೆ ಅಧಿಕಾರ ನೀಡಿದ್ದು ಪಕ್ಷ. ಅವರಿಗೂ ಕಾಂಗ್ರೆಸ್ ಪಕ್ಷ ಅಧಿಕಾರ ನೀಡಿದೆ. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದಾಗ ಸಚಿವ ಸ್ಥಾನ ನೀಡಲಾಗಿತ್ತು. ಗುಂಡೂರಾವ್ ಸರಕಾರದಲ್ಲಿ ಸಚಿವರಾಗಿದ್ದರು,'' ಎಂದು ಹೇಳಿದರು.
ಪಿಸುಮಾತು: ಉಗ್ರಪ್ಪ ಉತ್ತರ ಓದಿಲ್ಲ ಸಲೀಂ ಹಾಗೂ ವಿ.ಎಸ್. ಉಗ್ರಪ್ಪ ಅವರ ಪಿಸುಮಾತಿಗೆ ಶಿಸ್ತು ಸಮಿತಿ ನೀಡಿದ್ದ ನೋಟಿಸ್ಗೆ ಇಬ್ಬರೂ ಉತ್ತರ ನೀಡಿದ್ದಾರೆ. ನಾನು ಇನ್ನೂ ಅವರ ಉತ್ತರ ನೋಡಿಲ್ಲ. ಶಿಸ್ತು ಸಮಿತಿಯ ಸಭೆಯಲ್ಲಿ ಅವರ ಉತ್ತರ ನೋಡುತ್ತೇವೆ. ಸಲೀಂ ಮಾತನಾಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕೇಳಿಸಿತ್ತು. ಹಾಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಉಗ್ರಪ್ಪನವರ ಮಾತು ಸ್ಪಷ್ಟವಾಗಿ ಕೇಳಿಸಿಲ್ಲ. ಅವರು ಸಲೀಂ ಮಾತಿಗೆ ನಕ್ಕಿರುವುದು ಕಾಣಿಸಿತ್ತು. ಕೆಪಿಸಿಸಿ ಅಧ್ಯಕ್ಷರನ್ನು ನಾವೇ ನೇಮಕ ಮಾಡಿರುವುದು ಎಂದು ಅವರು ಹೇಳಿದ್ದಾರೆ. ಅದೇನು ದೊಡ್ಡ ತಪ್ಪು ಅಲ್ಲ ಎಂದು ತಿಳಿಸಿದರು.
ಜಾಫರ್ ಷರೀಫ್ ಅವರ ಮೊಮ್ಮಗ ಸೋಲಲು ಸಿದ್ದರಾಮಯ್ಯ ಕಾರಣ ಎಂಬ ಕುಮಾರಸ್ವಾಮಿ ಆರೋಪಕ್ಕೆ, ''ಕುಮಾರಸ್ವಾಮಿಯವರ ಹೇಳಿಕೆಯಲ್ಲಿ ಎಲ್ಲವೂ ಸತ್ಯವಲ್ಲ. ಹಾಗಾದರೆ ಜಾಫರ್ ಷರೀಫ್ ಮೊಮ್ಮಗನಿಗೆ ಅವರೇ ಜೆಡಿಎಸ್ನಿಂದ ನಿಲ್ಲಿಸಿ ಗೆಲ್ಲಿಸಬೇಕಿತ್ತು. ಯಾಕೆ ಹಾಗೆ ಮಾಡಲಿಲ್ಲ? ಹೀಗೆ ಮಾತನಾಡುತ್ತಾ ಹೋದರೆ ನಾವು ಸಾಕಷ್ಟು ಮಾತನಾಡಬಹುದು'' ಎಂದರು.