1 ಕೋಟಿ ಡೋಸ್‌ ಸ್ಪುಟ್ನಿಕ್‌ ಲಸಿಕೆ ಪೂರೈಕೆಗೆ ಬಿಡ್‌ ಸ್ವೀಕರಿಸಿದ ಮುಂಬಯಿ ಪಾಲಿಕೆ

ಕೊರೊನಾದ ಮೂರನೇ ಅಲೆಗೂ ಮುನ್ನ ಎಲ್ಲರಿಗೂ ಲಸಿಕೆ ನೀಡುವ ಬೃಹತ್‌ ಯೋಜನೆಯನ್ನು ಬೃಹನ್ಮುಂಬಯಿ ಮಹಾನಗರ ಪಾಲಿಕೆ ರೂಪಿಸಿದ್ದು, ಇದಕ್ಕಾಗಿ ನೇರವಾಗಿ ಲಸಿಕೆಯನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿದೆ.

1 ಕೋಟಿ ಡೋಸ್‌ ಸ್ಪುಟ್ನಿಕ್‌ ಲಸಿಕೆ ಪೂರೈಕೆಗೆ ಬಿಡ್‌ ಸ್ವೀಕರಿಸಿದ ಮುಂಬಯಿ ಪಾಲಿಕೆ
Linkup
ಮುಂಬಯಿ: 1 ಕೋಟಿ ಡೋಸ್‌ ಲಸಿಕೆ ಆಮದು ಮಾಡಿಕೊಳ್ಳಲು ಬಿಡ್‌ ಆಹ್ವಾನಿಸಿದ್ದ ಬೃಹನ್ ಮಹಾನಗರ ಪಾಲಿಕೆ (ಬಿಎಂಸಿ), ಮೂರು ಸಂಸ್ಥೆಗಳಿಂದ ಬಿಡ್‌ ಸ್ವೀಕರಿಸಿದೆ. ಎರಡು ಸಂಸ್ಥೆಗಳಿಂದ ಸ್ಪುಟ್ನಿಕ್‌ ಲಸಿಕೆ ಪೂರೈಕೆಗೆ ಬಿಡ್‌ ಸಲ್ಲಿಕೆಯಾಗಿದೆ. ಕೇವಲ 2 ತಿಂಗಳ ಅಂತರದಲ್ಲಿ ಪಾಲಿಕೆ ವ್ಯಾಪ್ತಿಯ ಎಲ್ಲಾ ನಿವಾಸಿಗಳಿಗೂ ಲಸಿಕೆ ನೀಡುವುದು ಬಿಎಂಸಿಯ ಬೃಹತ್‌ ಯೋಜನೆಯಾಗಿದ್ದು, ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ. ಈ ಅಭಿಯಾನಕ್ಕಾಗಿ 700 ಕೋಟಿ ರೂ. ಖರ್ಚಿನ ಅಂದಾಜು ಮಾಡಲಾಗಿದೆ. ವೇಗವಾಗಿ ಲಸಿಕೆ ನೀಡುವುದರಿಂದ ಮೂರನೇ ಅಲೆಯನ್ನು ತಡೆಯಬಹುದು ಎಂದು ಪಾಲಿಕೆ ಆಯುಕ್ತ ಇಕ್ಬಾಲ್‌ ಸಿಂಗ್‌ ಚಾಹಲ್‌ ಹೇಳಿದ್ದಾರೆ. ತಾತ್ಕಾಲಿಕ ಆಸ್ಪತ್ರೆಗಳನ್ನು ನಿರ್ವಹಿಸಲು ಬಿಎಂಸಿಗೆ 800 ಕೋಟಿ ರೂ.ಗಿಂತ ಹೆಚ್ಚು ಖರ್ಚಾಗುತ್ತಿದೆ. ಕೊರೊನಾದ ಮೊದಲೆರಡು ಅಲೆಯ ವೇಳೆ ಮುಂಬಯಿ ಸೋಂಕಿನ ಕೇಂದ್ರವಾಗಿ ಕುಖ್ಯಾತವಾಗಿತ್ತು. ಆದರೆ ಎರಡನೇ ಅಲೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ಸುಪ್ರೀಂ ಕೋರ್ಟ್‌ನಿಂದಲೇ ಭೇಷ್‌ ಅನಿಸಿಕೊಂಡಿತ್ತು. ಇದೀಗ ಮೂರನೇ ಅಲೆಗೂ ಮುನ್ನ ಎಲ್ಲರಿಗೂ ಲಸಿಕೆ ನೀಡುವ ಬೃಹತ್‌ ಯೋಜನೆ ರೂಪಿಸಿದೆ. ಇದಕ್ಕಾಗಿ ಲಸಿಕೆಯನ್ನು ನೇರವಾಗಿ ಆಮದು ಮಾಡಿಕೊಳ್ಳಲು ನಿರ್ಧರಿಸಿದೆ. ಈ ರೀತಿ ಲಸಿಕೆ ಆಮದು ಮಾಡಿಕೊಳ್ಳಲು ನಿರ್ಧರಿಸಿದ ದೇಶದ ಮೊದಲ ನಗರ ಮುಂಬಯಿ ಆಗಿದೆ. ನಾವು 1.5 ಕೋಟಿ ಲಸಿಕೆ ಡೋಸ್‌ಗಳನ್ನು ಸ್ವೀಕರಿಸುತ್ತಿದ್ದಂತೆ, ನಾನು 60 ದಿನಗಳಲ್ಲಿ ಇಡೀ ನಗರಕ್ಕೆ ಲಸಿಕೆ ನೀಡುವ ಯೋಜನೆ ರೂಪಿಸಲಿದ್ದೇನೆ. ಈ ರೀತಿ ಮಾಡುವುದರಿಂದ ನಾವು ಖಂಡಿತವಾಗಿಯೂ 3ನೇ ಅಲೆಯನ್ನು ತಡೆಯಬಹುದು ಎಂದು ಚಾಹಲ್‌ ಹೇಳಿದ್ದಾರೆ. ಒಟ್ಟು ಮೂರು ಕಂಪನಿಗಳು ಬಿಡ್‌ ಸಲ್ಲಿಸಿದ್ದು, ಲಂಡನ್‌ ಮೂಲದ ಟಲಿಸಿನ್‌ ಇಂಟರ್‌ನ್ಯಾಷನಲ್‌ ಲಿ. ಹಾಗೂ ಹೈದರಾಬಾದ್‌ ಮೂಲದ ಎರಡು ಕಂಪನಿಗಳು ಇವಾಗಿವೆ. ಹೈದರಾಬಾದ್‌ ಮೂಲದ ಕಂಪನಿಗಳು ಸ್ಪುಟ್ನಿಕ್‌ ಮಾರ್ಕೆಟಿಂಗ್‌ ಮಾಡುವ ದಿ ರಷ್ಯನ್‌ ಡೈರೆಕ್ಟ್‌ ಇನ್ವೆಸ್ಟ್‌ಮೆಂಟ್‌ ಫಂಡ್‌ನ ನೇರ ಡೀಲರ್‌ಗಳು ಎಂದು ಚಾಹಲ್‌ ವಿವರ ನೀಡಿದ್ದಾರೆ. 18-45 ವರ್ಷದವರಿಗೆ ಲಸಿಕೆ ನೀಡಲು ನಗರದಲ್ಲಿ 1 ಕೋಟಿ ಡೋಸ್‌ ಲಸಿಕೆ ಬೇಕಾಗಿದೆ. ಜತೆಗೆ 18-45 ವರ್ಷದವರಿಗೆ 50 ಲಕ್ಷ ಡೋಸ್‌ ಲಸಿಕೆ ಬೇಕಾಗಿದೆ. ಮೇ 18ರಂದೇ ಮುಕ್ತಾಯಗೊಳ್ಳಬೇಕಿದ್ದ ಆಮದು ಟೆಂಡರ್‌ನ್ನು ಮೇ 25ರವರೆಗೆ ವಿಸ್ತರಣೆ ಮಾಡಲಾಗಿದೆ. ಅಂದು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಈಗ ಬಿಡ್‌ ಸಲ್ಲಿಸಿದವರಲ್ಲದೆ ಜಾಗತಿಕ ಬೃಹತ್‌ ಲಸಿಕೆ ಉತ್ಪಾದಕರಾದ ಫೈಜರ್‌, ಮಾಡೆರ್ನಾ, ಜಾನ್ಸನ್‌ & ಜಾನ್ಸನ್‌, ಸೀರಂ ಇನ್ಸ್‌ಟ್ಯೂಟ್‌ ಮತ್ತು ಭಾರತ್‌ ಬಯೋಟೆಕ್‌ನಿಂದಲೂ ಬಿಡ್‌ ಆಹ್ವಾನಿಸಲಾಗಿದೆ. ಸದ್ಯ ಮುಂಬಯಿನಲ್ಲಿ ಪಾಸಿಟಿವಿ ದರ ಶೇ. 5ರಷ್ಟು ಇದ್ದು, ತಿಂಗಳ ಅಂತ್ಯಕ್ಕೆ ಇದು ಶೇ. 2ಕ್ಕೆ ಇಳಿಕೆಯಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.