ಚೆನ್ನೈ: ತಮಿಳುನಾಡಿನ ಕುಡ್ಡಲೋರ್ ಲೋಕಸಭೆ ಕ್ಷೇತ್ರದ ಟಿಆರ್ವಿಎಸ್ ರಮೇಶ್ ಮಾಲೀಕತ್ವದ ಗೇರು ಬೀಜದ ಸಂಸ್ಕರಣಾ ಘಟಕದಲ್ಲಿ 57 ವರ್ಷದ ದಿನಗೂಲಿ ಕಾರ್ಮಿಕ ಗೋವಿಂದರಸು ಸಾವಿನ ಪ್ರಕರಣ ಭಾರಿ ವಿವಾದ ಕೆರಳಿಸಿದೆ. ಸೆ. 19ರಂದು ಕನಿಷ್ಠ ಎರಡು ಸುತ್ತಿನ ಚಿತ್ರಹಿಂಸೆಗೆ ಒಳಗಾದ ಬಳಿಕ ಗೋವಿಂದರಸನು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ಪೊಲೀಸರಿಂದ ಈ ಪ್ರಕರಣವನ್ನು ಸಿಬಿ-ಸಿಐಡಿಗೆ ವರ್ಗಾಯಿಸಿದ ಬಳಿಕ, ಕುಡ್ಡಲೋರ್ ಸಮೀಪದ ಪನ್ರುತಿಯಲ್ಲಿರುವ ರಮೇಶ್ ಅವರ ಘಟಕದ ಐವರು ಕೆಲಸಗಾರರನ್ನು ಅಕ್ಟೋಬರ್ 9ರಂದು ಬಂಧಿಸಲಾಗಿತ್ತು. ಸಂಸದ ರಮೇಶ್ ಸೋಮವಾರ ಪೊಲೀಸರಿಗೆ ಶರಣಾಗಿದ್ದರು. ಕುಡ್ಡಲೋರ್ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅವರನ್ನು ಬುಧವಾರ ಒಂದು ದಿನದ ಮಟ್ಟಿಗೆ ತನಿಖಾ ಸಂಸ್ಥೆಯ ವಶಕ್ಕೆ ಒಪ್ಪಿಸಿದೆ.
ಗೋವಿಂದರಸು ಅವರಿಗೆ ಚಿತ್ರಹಿಂಸೆ ನೀಡುವ ಸಂದರ್ಭದಲ್ಲಿ ರಮೇಶ್ ಅವರು ಸ್ಥಳದಲ್ಲಿ ಇದ್ದರು ಎಂಬುದಕ್ಕೆ ಪುರಾವೆಗಳು ಸಿಕ್ಕಿದ್ದರಿಂದ ಹಾಗೂ ಅವರ ವಿಚಾರಣೆ ವೇಳೆ ದೊರೆತ ಅಂಶಗಳ ಆಧಾರದಲ್ಲಿ ಬಂಧಿಸಲಾಗಿದೆ ಎಂದು ಸಿಬಿ-ಸಿಐಡಿ ತಿಳಿಸಿದೆ.
ಸಂಸ್ಕರಣಾ ಘಟಕದಿಂದ ಗೋಡಂಬಿಗಳನ್ನು ಕದ್ದುಕೊಂಡು ಮನೆಗೆ ಹೋಗುತ್ತಿದ್ದ ವೇಳೆ ಗೋವಿಂದರಸು ಅವರನ್ನು ಭದ್ರತಾ ಸಿಬ್ಬಂದಿ ಹಿಡಿದಿದ್ದರು ಎಂದು ಆರೋಪಿಗಳು ತಿಳಿಸಿದ್ದಾರೆ. ಆದರೆ ಈ ಆರೋಪವನ್ನು ನಿರಾಕರಿಸಿರುವ ಮೃತ ವ್ಯಕ್ತಿಯ ಮಗ, ಏಳು ವರ್ಷಗಳಿಂದ ಅಲ್ಲಿ ಕೆಲಸ ಮಾಡುತ್ತಿದ್ದರೂ ವೇತನ ಹೆಚ್ಚಳ ಮಾಡದ ವಿಚಾರಕ್ಕೆ ಸಂಬಂಧಿಸಿದಂತೆ ರಮೇಶ್ ಅವರ ಉದ್ಯೋಗಿಗಳೊಂದಿಗೆ ತಂದೆಗೆ ಮನಸ್ತಾಪ ಉಂಟಾಗಿತ್ತು ಎಂದು ಆರೋಪಿಸಿದ್ದಾರೆ.
ಚೆನ್ನೈನಲ್ಲಿ ವಾಸಿಸುತ್ತಿರುವ ಗೋವಿಂದರಸು ಅವರ 36 ವರ್ಷದ ಮಗ ಸೆಂಥಿಲ್ ಲಾರಿ ಚಾಲಕನಾಗಿದ್ದಾರೆ. ರಮೇಶ್ ಮಾಲೀಕತ್ವದ ಟಿಆರ್ವಿ ಗಾಯತ್ರಿ ಕ್ಯಾಶ್ಯೂಸ್ನಲ್ಲಿ ತಂದೆ ಕೆಲಸ ಮಾಡುತ್ತಿದ್ದರು. ದಿನಕ್ಕೆ 300 ರೂಪಾಯಿ ಸಂಬಳ ಕೊಡುತ್ತಿದ್ದರು. ಕೆಲವೊಮ್ಮೆ ಭಾನುವಾರವೂ ಕೆಲಸ ಇರುತ್ತಿತ್ತು. ಆ ಕಾರ್ಖಾನೆಯಿಂದ ಯಾರೂ ಏನನ್ನೂ ಕದಿಯಲು ಸಾಧ್ಯವೇ ಇಲ್ಲ. ಪ್ರತಿ ಮೂಲೆಯಲ್ಲೂ ಸಿಸಿಟಿವಿ ಕ್ಯಾಮೆರಾಗಳಿವೆ. ಕೆಲಸಗಾರರು ಫ್ಯಾಕ್ಟರಿ ಒಳಗೆ ಪ್ರವೇಶಿಸುವ ಮುನ್ನ ತಮ್ಮ ಊಟದ ಡಬ್ಬಿಗಳನ್ನೂ ಭದ್ರತಾ ದ್ವಾರದಲ್ಲಿಯೇ ಇರಿಸಬೇಕು. ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಿ, ಸತ್ಯ ಹೊರಬೀಳಲಿದೆ ಎಂದು ಅವರು ಹೇಳಿದ್ದಾರೆ.
ಸೆ. 20ರ ರಾತ್ರಿ 2.25ರ ಸುಮಾರಿಗೆ ತಂದೆಯ ಮೊಬೈಲ್ನಿಂದ ಕರೆ ಬಂದಿತ್ತು. ಕರೆ ಮಾಡಿದವರು ತಮ್ಮನ್ನು ಸಂಸದರ ಖಾಸಗಿ ಸಹಾಯಕ ನಟರಾಜನ್ ಎಂದು ಪರಿಚಯಿಸಿಕೊಂಡಿದ್ದರು. ನನ್ನ ತಂದೆ ವಿಷ ಸೇವಿಸಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದರು ಎಂದು ಸೆಂಥಿಲ್ ತಿಳಿಸಿದ್ದಾರೆ.
ಸಿಬಿ-ಸಿಐಡಿ ಶನಿವಾರ ಬಂಧಿಸಿದ ಐವರು ಆರೋಪಿಗಳಲ್ಲಿ ನಟರಾಜನ್ ಸೇರಿದ್ದಾರೆ. ಫ್ಯಾಕ್ಟರಿ ಮ್ಯಾನೇಜರ್ ಕಂಡವೇಲ್, ಹಿರಿಯ ಉದ್ಯೋಗಿಗಳಾದ ಎಂ ಅಲ್ಲಾ ಪಿಚೈ, ಕೆ ವಿನೋದ್ ಮತ್ತು ಸುಂದರರಾಜನ್ ಇತರೆ ಬಂಧಿತರು.
ತಮ್ಮ ಮನವಿಯಂತೆ ಕೂಡಲೇ ಆಸ್ಪತ್ರೆಗೆ ತೆರಳಿದ ಸಂಬಂಧಿಕರು, ತಂದೆಗೆ ಹೊಡೆದು ಚಿತ್ರ ಹಿಂಸೆ ನೀಡಿ ಸಾಯಿಸಲಾಗಿದೆ. ಅದು ಆತ್ಮಹತ್ಯೆಯ ಸಾವಲ್ಲ ಎಂದು ತಿಳಿಸಿದರು. ಅವರು ದೇಹದ ಚಿತ್ರಗಳನ್ನು ತೆಗೆದು ನನಗೆ ಕಳುಹಿಸಿದ್ದರು. ರಮೇಶ್ ಅವರ ಜನರು ಆಸ್ಪತ್ರೆಯಲ್ಲೇ ಇದ್ದರು. ಆತ್ಮಹತ್ಯೆ ಬಗ್ಗೆ ಅವರನ್ನು ಪ್ರಶ್ನಿಸಿದಾಗ ಸಂಬಂಧಿಕರ ಜತೆ ಸಣ್ಣ ಜಗಳವನ್ನೂ ಮಾಡಿದ್ದರು. ಬಳಿಕ ಎರಡು ಕಾರುಗಳಲ್ಲಿ ಪರಾರಿಯಾಗಿದ್ದರು ಎಂದು ಸೆಂಥಿಲ್ ಆರೋಪಿಸಿದ್ದಾರೆ.
ತಮ್ಮ ಸಂಬಂಧಿಕರು ಆಸ್ಪತ್ರೆಗೆ ತೆರಳಿದಾಗ ಗೋವಿಂದರಸು ಅವರ ಟಿವಿಎಸ್ ಸ್ಕೂಟರ್ ಅಲ್ಲಿತ್ತು. ಅದರ ಕೀ ಇರಲಿಲ್ಲ. ಆದರೆ ಬಳಿಕ ಸ್ಕೂಟರ್ ಕೂಡ ನಾಪತ್ತೆಯಾಗಿದೆ. ಅದನ್ನು ಯಾರು ತಂದರು ಮತ್ತು ಎಲ್ಲಿಗೆ ತೆಗೆದುಕೊಂಡು ಹೋದರನ್ನು ಎನ್ನುವುದು ಗೊತ್ತಿಲ್ಲ ಎಂದು ಹೇಳಿದ್ದಾರೆ.
ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ತೀವ್ರವಾಗಿ ಗಾಯಗೊಂಡಿದ್ದ ಗೋವಿಂದರಸು ಅವರನ್ನು ರಮೇಶ್ ಅವರ ಕೆಲಸಗಾರರು ಕಡಂಪುಲಿಯೂರ್ ಪೊಲೀಸ್ ಠಾಣೆಗೆ ಕರೆತಂದರು. ಕಳವು ಮಾಡುವಾಗ ಸಿಕ್ಕಿಬಿದ್ದಿದ್ದಾಗಿ ಹೇಳಿದ್ದರು. ಅವರ ಗಾಯಗಳನ್ನು ಕಂಡ ಅಧಿಕಾರಿಗಳು ಒಳಗೆ ತರಲು ಅವಕಾಶ ನೀಡಲಿಲ್ಲ. ಅವರನ್ನು ಆಸ್ಪತ್ರೆಗೆ ಸಾಗಿಸುವಂತೆ ಸೂಚಿಸಿದ್ದರು. ವಾಸ್ತವವಾಗಿ ಪೊಲೀಸರೇ ಅವರನ್ನು ಆಸ್ಪತ್ರೆಗೆ ಸಾಗಿಸಬೇಕಿತ್ತೇ ವಿನಾ ಅವರಿಗೆ ಚಿತ್ರ ಹಿಂಸೆ ನೀಡಿದವರಿಗೆ ಹೇಳಬಾರದಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.