ವಿದೇಶಿ ಹೂಡಿಕೆದಾರರ ಖಾತೆ ಸ್ಥಗಿತ ವರದಿ ಬೆನ್ನಲ್ಲೇ ಅದಾನಿಗೆ 44,000 ಕೋಟಿ ರೂ. ನಷ್ಟ!

ಅದಾನಿ ಕಂಪನಿಗಳಲ್ಲಿ ಭಾರಿ ಹಣ ಹೂಡಿದ್ದ 3 ವಿದೇಶಿ ಹೂಡಿಕೆ ನಿಧಿಗಳನ್ನು ಎನ್‌ಎಸ್‌ಡಿಎಲ್‌ ಸ್ಥಗಿತಗೊಳಿಸಿದೆ ಎಂಬ ಮಾಧ್ಯಮ ಮರದಿಗಳ ಬೆನ್ನಲ್ಲೇ ಗ್ರೂಪ್‌ನ ಷೇರುಗಳು ನೆಲಕಚ್ಚಿದ್ದು ಒಂದೇ ದಿನ 44,000 ಕೋಟಿ ರೂ. ನಷ್ಟ ಅನುಭವಿಸಿವೆ.

ವಿದೇಶಿ ಹೂಡಿಕೆದಾರರ ಖಾತೆ ಸ್ಥಗಿತ ವರದಿ ಬೆನ್ನಲ್ಲೇ ಅದಾನಿಗೆ 44,000 ಕೋಟಿ ರೂ. ನಷ್ಟ!
Linkup
ಹೊಸದಿಲ್ಲಿ: ಉದ್ಯಮಿ ಒಡೆತನದ ಅದಾನಿ ಸಮೂಹ ಸಂಸ್ಥೆಗಳ ಷೇರುಗಳು ಸೋಮವಾರ ಭಾರಿ ಕುಸಿತ ದಾಖಲಿಸಿದ್ದು, ಕಂಪನಿ ಕನಿಷ್ಠ 6 ಶತಕೋಟಿ ಡಾಲರ್‌ (ಅಂದಾಜು 44,000 ಕೋಟಿ ರೂ.) ನಷ್ಟ ಅನುಭವಿಸಿವೆ. ಅದಾನಿ ಕಂಪನಿಗಳಲ್ಲಿ ಭಾರಿ ಹಣ ಹೂಡಿದ್ದ ಮೂರು ವಿದೇಶಿ ಹೂಡಿಕೆ ನಿಧಿಗಳನ್ನು (ನ್ಯಾಷನಲ್‌ ಸೆಕ್ಯೂರಿಟೀಸ್‌ ಡೆಪಾಸಿಟರಿ ಲಿ.) ಸ್ಥಗಿತಗೊಳಿಸಿದೆ ಎಂದು ಮಾಧ್ಯಮಗಳು ಮರದಿ ಮಾಡಿದ್ದವು. ಇದೊಂದು ಸುಳ್ಳು ಸುದ್ದಿ ಎಂದು ಅದಾನಿ ಕಂಪನಿ ಸ್ಪಷ್ಟನೆ ನೀಡಿತ್ತು. ಹೀಗಿದ್ದೂ ಕಂಪನಿಯ ಷೇರುಗಳು ಕಂಡು ಕೇಳರಿಯದ ಕುಸಿತ ಕಂಡಿವೆ. ಅದಾನಿ ಸಮೂಹದ ಮಾತೃ ಸಂಸ್ಥೆ ಅದಾನಿ ಎಂಟರ್‌ಪ್ರೈಸಸ್‌ ಷೇರುಗಳಂತೂ ಒಂದು ಹಂತದಲ್ಲಿ ಶೇ. 25ರಷ್ಟು ಕುಸಿತ ಕಂಡಿತ್ತು. ಈ ಮೂಲಕ ದಶಕದಲ್ಲೇ ಮಹಾ ಕುಸಿತಕ್ಕೆ ಸಾಕ್ಷಿಯಾಗಿತ್ತು. ನಂತರ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡು ಕುಸಿತ ಶೇ. 6.3ಕ್ಕೆ ಇಳಿಕೆಯಾಯಿತು. ಮೂರು ಹೂಡಿಕೆ ನಿಧಿಗಳನ್ನು ಎನ್‌ಎಸ್‌ಡಿಎಲ್‌ ಸ್ಥಗಿತಗೊಳಿಸಿದೆ ಎಂದು ಮೊದಲಿಗೆ ವಿಜಯ ಕರ್ನಾಟಕ ಸೋದರ ಸಂಸ್ಥೆ 'ಎಕನಾಮಿಕ್‌ ಟೈಮ್ಸ್‌' ಸೋಮವಾರ ವರದಿ ಮಾಡಿತ್ತು. ಬೆನ್ನಿಗೆ ಉಳಿದ ಮಾಧ್ಯಮಗಳೂ ಈ ಸುದ್ದಿಯ ಬೆನ್ನಿಗೆ ಬಿದ್ದಿದ್ದವು. ಆದರೆ ವರದಿಯನ್ನು ನಿರಾಕರಿಸಿದ್ದು, "ಈ ವರದಿಗಳು ಸ್ಪಷ್ಟವಾಗಿ ತಪ್ಪಾಗಿವೆ ಮತ್ತು ಹೂಡಿಕೆ ಸಮುದಾಯವನ್ನು ಉದ್ದೇಶಪೂರ್ವಕವಾಗಿ ದಾರಿ ತಪ್ಪಿಸಲು ಇದನ್ನು ಮಾಡಲಾಗಿದೆ,” ಎಂದು ಆರೋಪಿಸಿದೆ. ಹೀಗಿದ್ದೂ ಎನ್‌ಎಸ್‌ಡಿಎಲ್‌ ವೆಬ್‌ಸೈಟ್‌ ಮಾತ್ರ, ಮೇ 31 ರಂದು ಅಲ್ಬುಲಾ ಇನ್ವೆಸ್ಟ್‌ಮೆಂಟ್‌ ಫಂಡ್‌, ಕ್ರೆಸ್ಟ ಫಂಡ್‌ ಮತ್ತು ಎಪಿಎಂಎಸ್‌ ಇನ್ವೆಸ್ಟ್‌ಮಂಡ್‌ ಫಂಡ್‌ಗಳನ್ನು ಸ್ಥಗಿತಗೊಳಿಸಿದ್ದಾಗಿ ಹೇಳುತ್ತಿದೆ. ಸೋಮವಾರ ಅದಾನಿ ಪೋರ್ಟ್ಸ್‌ ಷೇರುಗಳು ಶೇ. 8.5ರಷ್ಟು ಕುಸಿತ ಕಂಡಿವೆ. ಒಂದು ಹಂತದಲ್ಲಿ ಇದು ಶೇ. 19ರಷ್ಟು ಇಳಿಕೆ ದಾಖಲಿಸಿತ್ತು. ಇನ್ನು ಅದಾನಿ ಗ್ರೀನ್‌ ಎನರ್ಜಿ ಭಾರಿ ಕುಸಿತ ಕಂಡರೂ ನಂತರ ಚೇತರಿಕೆ ಕಂಡು ಅಲ್ಪ ಇಳಿಕೆ (ಶೇ. 4.13)ಯೊಂದಿಗೆ ದಿನದ ವಹಿವಾಟು ಮುಗಿಸಿತು. ಅದಾನಿ ಟೋಟಲ್‌ ಗ್ಯಾಸ್‌, ಅದಾನಿ ಟ್ರಾನ್ಸ್‌ಮಿಷನ್‌ ಹಾಗೂ ಅದಾನಿ ಪವರ್‌ ಷೇರುಗಳು ಶೇ. 5ರಷ್ಟು ಕುಸಿತ ದಾಖಲಿಸಿದವು.