'ಮೆಹುಲ್ ಚೋಕ್ಸಿ ಗರ್ಲ್‌ಫ್ರೆಂಡ್ ಜತೆ ಡೊಮಿನಿಕಾಕ್ಕೆ ರೊಮ್ಯಾಂಟಿಕ್ ಟ್ರಿಪ್ ಹೋಗಿದ್ದಾಗ ಸಿಕ್ಕಿಬಿದ್ದಿದ್ದು': ಆಂಟಿಗುವಾ ಪ್ರಧಾನಿ ಹೇಳಿಕೆ

ಡೊಮಿನಿಕಾದಲ್ಲಿ ಸಿಕ್ಕಿಬಿದ್ದಿರುವ ಆಭರಣ ವ್ಯಾಪಾರಿ ಮೆಹುಲ್ ಚೋಕ್ಸಿ, ತನ್ನ ಗರ್ಲ್‌ಫ್ರೆಂಡ್ ಜತೆ ರೊಮ್ಯಾಂಟಿಕ್ ಟ್ರಿಪ್ ಹೋಗಿರಬಹುದು ಎಂದು ಆಂಟಿಗುವಾ ಪ್ರಧಾನಿ ಹೇಳಿಕೆ ನೀಡಿದ್ದಾರೆ.

'ಮೆಹುಲ್ ಚೋಕ್ಸಿ ಗರ್ಲ್‌ಫ್ರೆಂಡ್ ಜತೆ ಡೊಮಿನಿಕಾಕ್ಕೆ ರೊಮ್ಯಾಂಟಿಕ್ ಟ್ರಿಪ್ ಹೋಗಿದ್ದಾಗ ಸಿಕ್ಕಿಬಿದ್ದಿದ್ದು': ಆಂಟಿಗುವಾ ಪ್ರಧಾನಿ ಹೇಳಿಕೆ
Linkup
ಹೊಸದಿಲ್ಲಿ: ಭಾರತಕ್ಕೆ ಬೇಕಿರುವ ದೇಶಭ್ರಷ್ಟ ಆರ್ಥಿಕ ಅಪರಾಧಿ ಇದ್ದಕ್ಕಿದ್ದಂತೆ ಆಂಟಿಗುವಾದಿಂದ ಡೊಮಿನಿಕಾಕ್ಕೆ ಪಲಾಯನ ಮಾಡಿದ್ದು ಇನ್ನೂ ನಿಗೂಢವಾಗಿದೆ. ಪ್ರತಿದಿನವೂ ಆತನ ಪರಾರಿಯ ಕಥನಕ್ಕೆ ಹೊಸ ತಿರುವು ಸಿಗುತ್ತಿದೆ. ಮೆಹುಲ್ ಚೋಕ್ಸಿಯ ಬಗ್ಗೆ ಪ್ರಧಾನಿ ಗ್ಯಾಸ್ಟನ್ ಬ್ರೌನೆ ಕುತೂಹಲಕಾರಿ ಸಂಗತಿಯೊಂದನ್ನು ತೆರೆದಿಟ್ಟಿದ್ದಾರೆ. ಚೋಕ್ಸಿ 'ರೊಮ್ಯಾಂಟಿಕ್ ಪ್ರವಾಸ'ಕ್ಕಾಗಿ ಡೊಮಿನಿಕಾಕ್ಕೆ ತನ್ನ ಪ್ರೇಯಸಿಯನ್ನು ಕರೆದೊಯ್ದಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. mehul ಕೆರೆಬಿಯನ್ ರಾಷ್ಟ್ರ ಆಂಟಿಗುವಾದಲ್ಲಿದ್ದ ಚೋಕ್ಸಿಯನ್ನು ಭಾರತಕ್ಕೆ ಗಡಿಪಾರು ಮಾಡುವ ಪ್ರಕ್ರಿಯೆಗಳು ನಡೆಯುತ್ತಿದ್ದವು. ಈ ನಡುವೆ ಆತ ಡೊಮಿನಿಕಾಕ್ಕೆ ಪಲಾಯನ ಮಾಡಿ, ಅಲ್ಲಿಂದ ಕ್ಯೂಬಾಕ್ಕೆ ಪರಾರಿಯಾಗಲು ಮುಂದಾಗಿದ್ದ ಎನ್ನಲಾಗಿದೆ. ಕ್ಯೂಬಾದೊಂದಿಗೆ ಗಡಿಪಾರು ಒಪ್ಪಂದ ಹೊಂದಿಲ್ಲದ ಕಾರಣ ಕ್ಯೂಬಾಕ್ಕೆ ತೆರಳಿದ್ದರೆ ಆತನನ್ನು ಕರೆತರುವುದು ಇನ್ನಷ್ಟು ಕಷ್ಟವಾಗುತ್ತಿತ್ತು. ಆದರೆ ಚೋಕ್ಸಿ ಡೊಮಿನಿಕಾದಲ್ಲಿ ಬಂಧನಕ್ಕೆ ಒಳಗಾದ ಬಳಿಕ ಆತನ ವಕೀಲರು, ಆಂಟಿಗುವಾದಿಂದ ಆತನನ್ನು ಅಪಹರಿಸಿ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಆಂಟಿಗುವಾ ಮತ್ತು ಬಾರ್ಬುಡಾದ ಜಾಲಿ ಹಾರ್ಬರ್‌ನಿಂದ ಆಂಟಿಗುವಾ ಹಾಗೂ ಭಾರತದವರಂತೆ ಕಾಣಿಸುವ ಪೊಲೀಸರು ಚೋಕ್ಸಿಯನ್ನು ಅಪಹರಿಸಿದ್ದರು ಎಂಬುದಾಗಿ ಅವರು ಆರೋಪ ಮಾಡಿದ್ದಾರೆ. ಡೊಮಿನಿಕಾದ ವಶದಲ್ಲಿರುವ ಚೋಕ್ಸಿಯದ್ದು ಎನ್ನಲಾದ ಫೋಟೊವೊಂದು ಬಿಡುಗಡೆಯಾಗಿದ್ದು, ಅದರಲ್ಲಿ ಆತನ ಕಣ್ಣು ಊದಿಕೊಂಡಿರುವುದು ಹಾಗೂ ಕೈಗಳಲ್ಲಿ ಗಾಯದ ಗುರುತು ಇರುವುದು ಕಾಣಿಸಿದೆ. ಈ ಮಧ್ಯೆ, ಭಾರತದಿಂದ ಖಾಸಗಿ ಜೆಟ್ ಒಂದು ತೆರಳಿದ್ದು, ಚೋಕ್ಸಿಯ ಗಡಿಪಾರಿಗೆ ಸಂಬಂಧಿಸಿದ ದಾಖಲೆಗಳನ್ನು ತಂದಿದೆ ಎಂದು ಆಂಟಿಗುವಾ ಪ್ರಧಾನಿ ಬ್ರೌನೆ ತಿಳಿಸಿದ್ದಾರೆ. ಈ ಬಗ್ಗೆ ಭಾರತೀಯ ಅಧಿಕಾರಿಗಳಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಈಗ ಆಂಟಿಗುವಾ ಪ್ರಧಾನಿ ಚೋಕ್ಸಿಯ ಗರ್ಲ್‌ಫ್ರೆಂಡ್ ಕುರಿತು ಮಾತನಾಡಿರುವುದು ಇದರ ನಿಗೂಢತೆಯನ್ನು ಮತ್ತಷ್ಟು ಹೆಚ್ಚಿಸಿದೆ.