ಬೆಂಗಳೂರು ಮಳೆ: ಮದುವೆಗೆಂದು ಹೋದ 150 ಮಂದಿ ರಾತ್ರಿಯಿಡೀ ಅಂಡರ್‌ಪಾಸ್ ಅಡಿ ಪರದಾಟ

ಬೆಂಗಳೂರಿನ ಅನೇಕ ಭಾಗಗಳಲ್ಲಿ ಭಾನುವಾರ ರಾತ್ರಿ ನಡೆದ ಭಾರಿ ಮಳೆಯಿಂದ ಸಾಕಷ್ಟು ಅನಾಹುತಗಳು ಸಂಭವಿಸಿವೆ. ಯಲಹಂಕ ಸಮೀಪದ ರೈಲ್ವೆ ಅಂಡರ್‌ಪಾಸ್‌ನಲ್ಲಿ ಮಳೆ ನೀರು ತುಂಬಿ ಮೂರು ಬಸ್‌ಗಳಲ್ಲಿದ್ದ ಪ್ರಯಾಣಿಕರು ಹಲವು ಗಂಟೆಗಳ ಕಾಲ ಸಿಲುಕಿದ್ದಾರೆ.

ಬೆಂಗಳೂರು ಮಳೆ: ಮದುವೆಗೆಂದು ಹೋದ 150 ಮಂದಿ ರಾತ್ರಿಯಿಡೀ ಅಂಡರ್‌ಪಾಸ್ ಅಡಿ ಪರದಾಟ
Linkup
ಬೆಂಗಳೂರು: ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ಬೆಂಗಳೂರಿನ ಜನತೆ ತತ್ತರಿಸಿದ್ದಾರೆ. ಮನೆಗಳು ಮತ್ತು ರಸ್ತೆಗಳು ನೀರಿನಿಂದ ಆವೃತವಾಗಿದ್ದವು. ಯಲಹಂಕದಲ್ಲಿ ರೈಲ್ವೆ ಅಂಡರ್ ಪಾಸ್‌ನಲ್ಲಿ ಮೂರು ಬಸ್‌ಗಳು ಸಿಲುಕಿದ ಪರಿಣಾಮ ಸುಮಾರು 150 ಪ್ರಯಾಣಿಕರು ಕೆಲವು ಗಂಟೆಗಳ ಕಾಲ ಪರದಾಡಿದರು. ಧಾರಾಕಾರ ಮಳೆಯಿಂದಾಗಿ ಅಲ್ಲಾಳಸಂದ್ರ ಕೆರೆಯು ಉಕ್ಕಿ ಹರಿದಿತ್ತು. ಇದರಿಂದ ಅಂಡರ್‌ಪಾಸ್‌ನಲ್ಲಿ ಏಕಾಏಕಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಹೀಗಾಗಿ ಮದುವೆ ಸಮಾರಂಭ ಮುಗಿಸಿ ಮರಳುತ್ತಿದ್ದ ಬಿಎಂಟಿಸಿಯ ಮೂರು ಬಸ್‌ಗಳು ಅಲ್ಲಿಯೇ ಸಿಲುಕಿಕೊಂಡಿವೆ. 'ದೇವನಹಳ್ಳಿ ಸಮೀಪದಲ್ಲಿ ಮದುವೆಯಲ್ಲಿ ಭಾಗವಹಿಸಲು ನಾವು ಸುಮಾರು 150 ಮಂದಿ ಮೂರು ಬಿಎಂಟಿಸಿ ಬಸ್‌ಗಳನ್ನು ಬಾಡಿಗೆಗೆ ತೆಗೆದುಕೊಂಡು ತೆರಳಿದ್ದೆವು. ರಾತ್ರಿ 10.30ರ ಸುಮಾರಿಗೆ ದೇವನಹಳ್ಳಿಯಿಂದ ಹೊರಟಿದ್ದೆವು. 11.30ರ ವೇಳೆಗೆ ತಲುಪಿದಾಗ ಅಂಡರ್‌ಪಾಸ್‌ನಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿತ್ತು' ಎಂದು ಬಸ್‌ನಲ್ಲಿ ಪ್ರಯಾಣಿಸಿದ್ದ ಬಿ. ಸರೋಜಮ್ಮ ತಿಳಿಸಿದ್ದಾರೆ. ಬಸ್‌ಗಳು ನೀರಿನಲ್ಲಿ ಸಿಲುಕಿಕೊಂಡಿದ್ದರಿಂದ ಪ್ರಯಾಣಿಕರೆಲ್ಲ ಇಳಿದು ನೀರಿನ ಮಟ್ಟ ಕಡಿಮೆಯಾಗಲು ಕಾದರು. ನಮಗೆ ತಪ್ಪಿಸಿಕೊಳ್ಳಲು ಅವಕಾಶವೇ ಇರಲಿಲ್ಲ. ನಮ್ಮ ಜತೆ ಕೆಲವು ಮಕ್ಕಳೂ ಇದ್ದರು. ಮನೆಗೆ ಮರಳುವಾಗ ಇಂತಹ ಸ್ಥಿತಿ ಉಂಟಾಗುತ್ತದೆ ಎಂದು ಕನಸಿನಲ್ಲಿಯೂ ಯೋಚಿಸಿರಲಿಲ್ಲ. ಬೆಳಗಿನ ಜಾವ 4 ಗಂಟೆಯವರೆಗೂ ನಾವು ಅಲ್ಲಿಯೇ ಇದ್ದೆವು. ಕೊನೆಗೂ ಕೊಂಚ ನೀರು ಇಳಿಕೆಯಾದ ಬಳಿಕ ಅದೇ ಬಸ್‌ಗಳಲ್ಲಿ ಅಲ್ಲಿಂದ ತೆರಳಿದೆವು. ಇನ್ನು ಕೆಲವರು ಬೇರೆ ವಾಹನಗಳನ್ನು ಹಿಡಿದು ನಗರಕ್ಕೆ ತೆರಳಿದರು ಎಂದು ಅವರು ವಿವರಿಸಿದ್ದಾರೆ. ನೀರಿನಲ್ಲಿ ಭಾಗಶಃ ಮುಳುಗಿದ ಮೂರು ಬಿಎಂಟಿಸಿ ಬಸ್‌ಗಳ ಚಿತ್ರ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. 'ಅಂಡರ್‌ಪಾಸ್‌ನಲ್ಲಿ ಎಷ್ಟು ನೀರು ಇದೆ ಎಂದು ಅಂದಾಜಿಸುವಲ್ಲಿ ಬಸ್ ಚಾಲಕರು ವಿಫಲರಾದರು. ಅಂಡರ್ ಪಾಸ್‌ನಲ್ಲಿ ಹೆಚ್ಚು ನೀರು ಇಲ್ಲ. ತಾವು ಸುಲಭವಾಗಿ ತೆರಳಬಹುದು ಎಂದು ಅವರು ಆಲೋಚಿಸಿದ್ದರು. ಅದೃಷ್ಟವಶಾತ್ ಅಲ್ಲಿ ಯಾವುದೇ ಅನಾಹುತ ಸಂಭವಿಸಲಿಲ್ಲ. ಎಂಜಿನ್ ಆಯಿಲ್ ನೀರಿನೊಂದಿಗೆ ಮಿಶ್ರಣವಾಗಿದ್ದರಿಂದ ಒಂದು ಬಸ್‌ನ ಎಂಜಿನ್‌ಗೆ ಹಾನಿಯಾಗಿದೆ. ಇದರ ವೆಚ್ಚವನ್ನು ನಾವು ಚಾಲನಿಂದಲೇ ವಸೂಲಿ ಮಾಡಬಹುದು. ಇತರೆ ಬಸ್‌ಗಳಲ್ಲಿ ಯಾವುದೇ ಸಮಸ್ಯೆ ಉಂಟಾಗಲಿಲ್ಲ. ನಾವು ತನಿಖೆ ನಡೆಸುತ್ತಿದ್ದೇವೆ ಮತ್ತು ಅದರ ವರದಿ ಆಧಾರದಲ್ಲಿ ನಾವು ಕ್ರಮ ತೆಗೆದುಕೊಳ್ಳುತ್ತೇವೆ' ಎಂದು ಬಿಎಂಟಿಸಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾನುವಾರ ಸುರಿದ ಮಳೆಗೆ ಯಲಹಂಕದಲ್ಲಿರುವ ಕೆರೆಗಳು ಭರ್ತಿಯಾಗಿ ಸಮೀಪದ ಪ್ರದೇಶಗಳಿಗೆ ನೀರು ನುಗ್ಗಿದೆ. ಮನೆಗಳು, ಅಪಾರ್ಟ್‌ಮೆಂಟ್‌ಗಳ ಒಳಗೆ ನೀರು ನುಗ್ಗಿದೆ. ರಸ್ತೆಗಳು ಕೂಡ ನೀರಿನಿಂದ ಆವೃತವಾಗಿದ್ದರಿಂದ ಗಂಟೆಗಟ್ಟಲೆ ವಾಹನಗಳು ಮಧ್ಯದಲ್ಲಿ ಸಿಲುಕಿಕೊಂಡಿದ್ದವು.