ಬೆಂಗಳೂರಲ್ಲಿ ಮತ್ತೆ ಅಗ್ನಿ ಅವಘಡ, ಔಷಧ ಕಾರ್ಖಾನೆ ಬಾಯ್ಲರ್‌ ಸ್ಫೋಟಿಸಿ ಮೂವರಿಗೆ ಗಾಯ

ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅನಾಹುತ ಸಂಭವಿಸಿದ್ದು, ಅತ್ತಿಬೆಲೆ ಕೈಗಾರಿಕೆ ಪ್ರದೇಶದ ಔಷಧ ತಯಾರಿಕೆ ಕಾರ್ಖಾನೆಯಲ್ಲಿ ಬಾಯ್ಲರ್‌ ಸಿಲಿಂಡರ್‌ ಸ್ಫೋಟಗೊಂಡು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.

ಬೆಂಗಳೂರಲ್ಲಿ ಮತ್ತೆ ಅಗ್ನಿ ಅವಘಡ, ಔಷಧ ಕಾರ್ಖಾನೆ ಬಾಯ್ಲರ್‌ ಸ್ಫೋಟಿಸಿ ಮೂವರಿಗೆ ಗಾಯ
Linkup
/ ಆನೇಕಲ್‌: ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅನಾಹುತ ಸಂಭವಿಸಿದೆ. ಕೈಗಾರಿಕೆ ಪ್ರದೇಶದ ಔಷಧ ತಯಾರಿಕೆ ಕಾರ್ಖಾನೆಯಲ್ಲಿ ಶುಕ್ರವಾರ ಬಾಯ್ಲರ್‌ ಸಿಲಿಂಡರ್‌ ಸ್ಫೋಟಗೊಂಡು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಸ್ಸಾಂ ಮೂಲದ ಸೂರ್ಯನಾಥ್‌ (27), ಜ್ಞಾನವೇಲು (22), ಮುನೇಗೌಡ (30) ಗಂಭೀರ ಗಾಯಗೊಂಡಿದ್ದಾರೆ. ಲೇಕ್‌ ಕೆಮಿಕಲ್‌ ಫ್ಯಾಕ್ಟರಿಯ ಬ್ಲಾಕ್‌ - 1 ರಲ್ಲಿ ಶುಕ್ರವಾರ ಮಧ್ಯಾಹ್ನ 12.30ರ ಸುಮಾರಿಗೆ ಭಾರಿ ಸ್ಫೋಟ ಸಂಭವಿಸಿತು. ಶಬ್ದದಿಂದ ಬೆದರಿದ ನೌಕರರು ದಿಕ್ಕಾಪಾಲಾಗಿ ಓಡಿ ಕಾರ್ಖಾನೆಯಿಂದ ಹೊರ ಬಂದರು. ಸ್ಫೋಟದ ಬೆನ್ನಲ್ಲೇ ಭಾರಿ ಹೊಗೆ ಕಾಣಿಸಿಕೊಂಡಿತು. ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಕೈಗೊಂಡರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಗಾಳಿ ಹೆಚ್ಚಾಗಿದ್ದರಿಂದ ಬೆಂಕಿ ನಿಯಂತ್ರಣಕ್ಕೆ ತರಲು ಸಿಬ್ಬಂದಿ ಹರಸಾಹಸಪಟ್ಟರು. ಬೆಂಕಿ ಅಕ್ಕಪಕ್ಕದ ಕಾರ್ಖಾನೆಗಳಿಗೂ ಹರಡುವ ಆತಂಕವಿತ್ತು. ಎರಡು ಗಂಟೆ ನಿರಂತರ ಕಾರ್ಯಾಚರಣೆ ಬಳಿಕ ಬೆಂಕಿ ಹತೋಟಿಗೆ ಬಂತು. ಕಾರ್ಖಾನೆಯಲ್ಲಿ 70 ಜನ ಉದ್ಯೋಗಿಗಳು ಮೂರು ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಊಟದ ಸಮಯವಾದ್ದರಿಂದ ಕೆಲವರು ಅನಾಹುತ ನಡೆದ ಸ್ಥಳದಲ್ಲಿರಲಿಲ್ಲ. ಹೀಗಾಗಿ ಮೂವರು ಮಾತ್ರ ಗಾಯಗೊಂಡಿದ್ದಾರೆ. ಕಾರ್ಖಾನೆ ಸೀಲ್‌ಡೌನ್‌ ಘಟನೆ ನಡೆದ ಬಳಿಕ ಆನೇಕಲ್‌ ತಹಸೀಲ್ದಾರ್‌ ದಿನೇಶ್‌ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದು, ತಾತ್ಕಾಲಿಕವಾಗಿ ಸೀಲ್‌ಡೌನ್‌ ಮಾಡಲು ಆದೇಶಿಸಿದ್ದಾರೆ. "ಮಾಲಿನ್ಯ ನಿಯಂತ್ರಣ ಮಂಡಳಿ, ಔಷಧ ನಿಯಂತ್ರಣ ಇಲಾಖೆ, ಅಗ್ನಿಶಾಮಕ ಇಲಾಖೆಯಿಂದ ಪ್ರಮಾಣಪತ್ರ ಪಡೆದ ಬಳಿಕ ಕಾರ್ಯಾಚರಣೆ ನಡೆಸಬಹುದು," ಎಂದು ತಹಸೀಲ್ದಾರ್‌ ದಿನೇಶ್‌ 'ವಿಜಯ ಕರ್ನಾಟಕ'ಕ್ಕೆ ತಿಳಿಸಿದ್ದಾರೆ. ವಾರದಲ್ಲಿ ಮೂರನೇ ಘಟನೆ ಬೆಂಗಳೂರಿನಲ್ಲಿ ಒಂದಾದ ಮೇಲೊಂದರಂತೆ ಅಗ್ನಿ ಅನಾಹುತಗಳು ನಡೆಯುತ್ತಿವೆ. ಅತ್ತಿಬೆಲೆ ಕಾರ್ಖಾನೆ ದುರಂತ ಇದೇ ವಾರದಲ್ಲಿ ನಡೆದ ಮೂರನೇ ಘಟನೆಯಾಗಿದೆ. ನ್ಯೂ ತರಗುಪೇಟೆಯಲ್ಲಿ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಟಾಕಿ ಗುರುವಾರ ಸಿಡಿದು ಮೂವರು ಮೃತಪಟ್ಟಿದ್ದಾರೆ. ದೇವರ ಚಿಕ್ಕನಹಳ್ಳಿಯಲ್ಲಿ ಮಂಗಳವಾರ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅನಾಹುತ ಸಂಭವಿಸಿ ಇಬ್ಬರು ಸಜೀವ ದಹನವಾಗಿದ್ದರು. ಇದೀಗ ಆನೇಕಲ್‌ ಘಟನೆ ನಡೆದಿದೆ. ಅತೀ ಶಾಖದಿಂದ ಅನಾಹುತ ಶಂಕೆ ಬಾಯ್ಲರ್‌ ತಾಪಮಾನ ಅತಿಯಾಗಿ ಹೆಚ್ಚಿಸಿದ್ದರಿಂದ ಸ್ಫೋಟಗೊಂಡಿದೆ ಎಂದು ಶಂಕಿಸಲಾಗಿದೆ. ಮಾಲಿನ್ಯದ ಆರೋಪ ಲೇಕ್‌ ಕೆಮಿಕಲ್‌ ಫ್ಯಾಕ್ಟರಿ ಅತ್ತಿಬೆಲೆಯ ಕೈಗಾರಿಕೆ ಪ್ರದೇಶದ ಅಂಚಿನಲ್ಲಿದೆ. ಜನವಸತಿ ಪ್ರದೇಶದ ಸಮೀಪದಲ್ಲೇ ಇದೆ. ಕಾರ್ಖಾನೆಯಿಂದ ಮಾಲಿನ್ಯ ಉಂಟಾಗುತ್ತಿದೆ ಎಂಬ ದೂರು ಮೊದಲಿನಿಂದಲೂ ಇದೆ. ಇದೀಗ ಅಗ್ನಿ ಅನಾಹುತ ಸಂಭವಿಸಿರುವುದು ಸುರಕ್ಷತೆ ಕುರಿತು ಕೂಡ ಆತಂಕ ಮೂಡಿದೆ. 500 ಅಡಿ ದೂರ ಹಾರಿದ ಮುಚ್ಚಳ ಬಾಯ್ಲರ್‌ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಬಾಯ್ಲರ್‌ ಮೇಲ್ಭಾಗ ಅಳವಡಿಸಿದ್ದ ಚಾವಣಿ ಹಾರಿ ಹೋಗಿದೆ. ಬಾಯ್ಲರ್‌ ಮುಚ್ಚಳ 500 ಮೀಟರ್‌ ದೂರದಲ್ಲಿ ಮತ್ತೊಂದು ಕಂಪನಿ ಆವರಣಕ್ಕೆ ಹೋಗಿ ಬಿದ್ದಿದೆ.